ರಾಹುಲ್ ಹೇಳಿಕೆಗೆ ವಿರೋಧ: ಹಿಂದುಗಳನ್ನು 'ಹಿಂಸಾತ್ಮಕ' ಎಂದು ಕರೆಯುವುದು ಗಂಭೀರ ವಿಚಾರ- ಮೋದಿ
ಸಂವಿಧಾನ ಮತ್ತು ಭಾರತದ ಮೂಲಭೂತ ಕಲ್ಪನೆಯ ಮೇಲೆ ಬಿಜೆಪಿ ವ್ಯವಸ್ಥಿತ ದಾಳಿ ನಡೆಸುತ್ತಿದೆ. ಬಿಜೆಪಿ ಪ್ರಸ್ತಾಪಿಸಿದ ವಿಚಾರಗಳನ್ನು ಲಕ್ಷಾಂತರ ಜನರು ವಿರೋಧಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.
ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ʻತಮ್ಮನ್ನು ತಾವು ಹಿಂದುಗಳು ಎಂದು ಕರೆದುಕೊಳ್ಳುವವರು ಹಿಂಸಾಚಾರ ಮತ್ತು ದ್ವೇಷ ದಲ್ಲಿ ಹಗಲಿರುಳು ನಿರತರಾಗಿದ್ದಾರೆ ಎಂದು ಬಿಜೆಪಿ ವಿರುದ್ಧ ಸೋಮವಾರ (ಜುಲೈ 1) ಲೋಕಸಭೆಯಲ್ಲಿ ವಾಗ್ದಾಳಿ ನಡೆಸಿದರು. ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರಿಂದ ಭಾರಿ ಪ್ರತಿರೋಧ ವ್ಯಕ್ತವಾಯಿತು. ʻಇಡೀ ಹಿಂದೂ ಸಮಾಜವನ್ನು ಹಿಂಸಾತ್ಮಕ ಎಂದು ಕರೆಯುವುದು ಗಂಭೀರ ವಿಷಯʼ ಎಂದು ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದರು.
ʻಆದರೆ, ನಾನು ಭಾರತೀಯ ಜನತಾ ಪಕ್ಷದ ಬಗ್ಗೆ ಮಾತನಾಡುತ್ತಿದ್ಧೇನೆ,ʼ ಎಂದು ರಾಹುಲ್ ತಿರುಗೇಟು ನೀಡಿದರು. ʻಬಿಜೆಪಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅಥವಾ ಮೋದಿ, ಇಡೀ ಹಿಂದೂ ಸಮಾಜವಲ್ಲ,ʼ ಎಂದು ಹೇಳಿದರು.
ಈಶ್ವರನ ಚಿತ್ರವನ್ನು ಪ್ರದರ್ಶಿಸಿದ ರಾಹುಲ್, ಶಿವನ ಸಂದೇಶವು ನಿರ್ಭಯತೆ ಮತ್ತು ಅಹಿಂಸೆ ಬಗ್ಗೆ ಹೇಳುತ್ತದೆ ಎಂದರು. ಈ ಸಂಬಂಧ ಇತರ ಧರ್ಮಗಳ ಬೋಧನೆಗಳನ್ನು ಸಹ ಉಲ್ಲೇಖಿಸಿದರು.
ಆದರೆ, ಬಿಜೆಪಿ ಎಲ್ಲ ಹಿಂದುಗಳನ್ನು ಪ್ರತಿನಿಧಿಸುವುದಿಲ್ಲಎಂಬ ಅವರ ಮಾತು ಮತ್ತು ವಿವಿಧ ಧರ್ಮಗಳ ಸಾರದ ಉಲ್ಲೇಖ ಆಡಳಿತ ಪಕ್ಷವನ್ನು ಕೆರಳಿಸಿತು.
ಕ್ಷಮೆಯಾಚಿಸುವಂತೆ ಕೋರಿದ ಶಾ: ತಮ್ಮನ್ನು ಹಿಂದುಗಳೆಂದು ಗುರುತಿಸಿಕೊಳ್ಳಲು ಹೆಮ್ಮೆ ಪಡುವ ಕೋಟ್ಯಂತರ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಕ್ಷಮೆ ಕೇಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಒತ್ತಾಯಿಸಿದರು.
ತುರ್ತು ಪರಿಸ್ಥಿತಿ ಮತ್ತು 1984 ರ ಸಿಖ್ ವಿರೋಧಿ ದಂಗೆಗಳನ್ನು ಉಲ್ಲೇಖಿಸಿದ ಶಾ, ಕಾಂಗ್ರೆಸ್ ದೇಶದಲ್ಲಿ ಭಯೋತ್ಪಾದನೆ ಹರಡಿದ್ದು, ಅಹಿಂಸೆ ಬಗ್ಗೆ ಮಾತನಾಡಲು ಅವರಿಗೆ ಯಾವುದೇ ಹಕ್ಕಿಲ್ಲ ಎಂದು ಹೇಳಿದರು.
ಎಲ್ಲ ಧರ್ಮಗಳು ಧೈರ್ಯದ ಬಗ್ಗೆ ಮಾತನಾಡುತ್ತವೆ. ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳು ನಿರ್ಭಯತೆಯ ಮಹತ್ವವನ್ನು ಒತ್ತಿಹೇಳುತ್ತವೆ ಎಂದು ರಾಹುಲ್ ಹೇಳಿದರು.
ಸಂವಿಧಾನದ ಮೇಲಿನ ದಾಳಿ: ಬಿಜೆಪಿ ಸಂವಿಧಾನ ಮತ್ತು ಭಾರತದ ಮೂಲಭೂತ ಕಲ್ಪನೆಯ ಮೇಲೆ ವ್ಯವಸ್ಥಿತ ದಾಳಿ ನಡೆಸುತ್ತಿದೆ. ಆಡಳಿತ ಪಕ್ಷದ ಆಲೋಚನೆಗಳನ್ನು ಲಕ್ಷಾಂತರ ಜನರು ವಿರೋಧಿಸಿದ್ದಾರೆ,ʼ ಎಂದು ಹೇಳಿದರು.
ʻಪ್ರಧಾನಿ ಮೋದಿಯವರ ಆದೇಶದ ಮೇರೆಗೆ ನನ್ನ ಮೇಲೆ ದಾಳಿ ಮಾಡಲಾಗಿದೆ. 20 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ, ಮನೆಯನ್ನು ಕಿತ್ತುಕೊಳ್ಳಲಾಗಿದೆ ಮತ್ತು ಇಡಿ 55 ಗಂಟೆ ವಿಚಾರಣೆ ನಡೆಸಿತು. ಈ ಸವಾಲುಗಳ ನಡುವೆಯೂ ಸಂವಿಧಾನವನ್ನು ರಕ್ಷಿಸುವ ಸಾಮೂಹಿಕ ಪ್ರಯತ್ನದ ಬಗ್ಗೆ ಹೆಮ್ಮೆ ಪಡುತ್ತೇನೆ. ನನ್ನ ನಂತರ ಬಿಜೆಪಿಯವರು ಈಗ ‘ಜೈ ಸಂವಿಧಾನ್’ ಎಂದು ಹೇಳುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ವಿರೋಧ ಪಕ್ಷದಲ್ಲಿರುವುದಕ್ಕೆ ಸಂತೋಷ: ವಿರೋಧ ಪಕ್ಷದಲ್ಲಿ ಇರುವುದಕ್ಕೆ ಸಂತೋಷ ಮತ್ತು ಹೆಮ್ಮೆ ಇದೆ. ನಮಗೆ ಅಧಿಕಾರಕ್ಕಿಂತ ಮಿಗಿಲಾದದ್ದು ಇದೆ, ಅದು ಸತ್ಯ ಎಂದರು.
ವಿರೋಧ ಪಕ್ಷದ ನಾಯಕರಾಗಿ ತಮ್ಮ ಮೊದಲ ಭಾಷಣದಲ್ಲಿ ರಾಹುಲ್, ಈಶ್ವರನ ಚಿತ್ರವನ್ನು ತೋರಿಸಿದರು. ಸದನದಲ್ಲಿ ಫಲಕಗಳನ್ನು ಪ್ರದರ್ಶಿಸಲು ನಿಯಮಗಳು ಅನುಮತಿಸುವುದಿಲ್ಲ ಎಂದು ಸ್ಪೀಕರ್ ಓಂ ಬಿರ್ಲಾ ಅವರು ಹೇಳಿದರು.
ಹಿಂದೂ, ಇಸ್ಲಾಂ ಮತ್ತು ಸಿಖ್ ಧರ್ಮ ಸೇರಿದಂತೆ ಎಲ್ಲಾ ಧರ್ಮಗಳು ಧೈರ್ಯ ಮತ್ತು ನಿರ್ಭಯತೆಯ ಮಹತ್ವವನ್ನು ಒತ್ತಿಹೇಳುತ್ತವೆ ಎಂದು ಅವರು ಪುನರುಚ್ಚರಿಸಿದರು.