ಸತ್ಯಜಿತ್‌ ರೇಯ ʼಪಥೇರ್‌ ಪಾಂಚಾಲಿʼ ಸಿನಿಮಾದ ʼದುರ್ಗಾʼ ನಿಧನ

ಲೇಖಕ ಬಿಭೂತಿಭೂಷಣ್ ಬಂಡೊಪಾಧ್ಯಾಯ ಅವರ ಕಾದಂಬರಿ ಆಧರಿಸಿದ ʼಪಥೇರ್ ಪಾಂಚಾಲಿʼ ಚಿತ್ರದಲ್ಲಿ ದುರ್ಗಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಉಮಾ ದಾಸ್‌ಗುಪ್ತಾ ತಮ್ಮ14 ನೇ ವಯಸ್ಸಿನಲ್ಲಿ ಕಲಾ ಪ್ರೇಕ್ಷಕರ ಮನಗೆದ್ದಿದ್ದರು.;

Update: 2024-11-18 13:56 GMT
Uma Dasgupta, Durga of Satyajit Ray’s ‘Pather Panchali’, dies at 84

ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಸತ್ಯಜಿತ್‌ ರೇ ಅವರ ವಿಶ್ವವಿಖ್ಯಾತಿ ಪಡೆದ ಸಿನಿಮಾ ʼಪಥೇರ್‌ ಪಾಂಚಾಲಿʼಯಲ್ಲಿ ದುರ್ಗಾ ಪಾತ್ರ ಮಾಡಿದ್ದ ಕಲಾವಿದೆ ಉಮಾ ದಾಸ್‌ಗುಪ್ತಾ (84) ಸೋಮವಾರ (ನವೆಂಬರ್‌ 18) ನಿಧನ ಹೊಂದಿದ್ದಾರೆ. ದೀರ್ಘ ಕಾಲದ ಅಸೌಖ್ಯದ ಕಾರಣಕ್ಕೆ ಕೋಲ್ಕೊತಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.



ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾದ ನಟಿ ಹಲವಾರು ವರ್ಷಗಳಿಂದ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದರು ಎಂದು ಅವರ ಪುತ್ರಿ ಹೇಳಿದ್ದಾರೆ.

ಲೇಖಕ ಬಿಭೂತಿಭೂಷಣ್ ಬಂಡೊಪಾಧ್ಯಾಯ ಅವರ ಕಾದಂಬರಿ ಆಧರಿಸಿದ ʼಪಥೇರ್ ಪಾಂಚಾಲಿʼ ಚಿತ್ರದಲ್ಲಿ ದುರ್ಗಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಉಮಾ ದಾಸ್‌ಗುಪ್ತಾ ತಮ್ಮ14 ನೇ ವಯಸ್ಸಿನಲ್ಲಿ ಕಲಾ ಪ್ರೇಕ್ಷಕರ ಮನಗೆದ್ದಿದ್ದರು. ಮಳೆಯಲ್ಲಿ ಒದ್ದೆಯಾಗುವುದು ಮತ್ತು ತನ್ನ ಪುಟ್ಟ ಸಹೋದರ ʼಅಪುʼ ಜತೆ ತೋಟದಲ್ಲಿ ಮಾವಿನಹಣ್ಣುಗಳನ್ನು ಆಯ್ದುಕೊಳ್ಳುವುದು ಸೇರಿದಂತೆ ಕೆಲವು ದೃಶ್ಯಗಳ ಮೂಲಕ ವಿಶ್ವಾದ್ಯಂತ ಪ್ರೇಕ್ಷಕರ ಹೃದಯ ಗೆದ್ದಿದ್ದರು.

ಶಾಲಾ ಕಾರ್ಯಕ್ರಮವೊಂದರಲ್ಲಿ ಉಮಾ ದಾಸ್‌ಗುಪ್ತಾ ನೀಡಿದ್ದ ಪ್ರದರ್ಶನವನ್ನು ನೋಡಿದ್ದ ಸತ್ಯಜಿತ್‌ ರೇ ಅವರು ತಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಶಾಲೆ ಹಾಗೂ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಅವರನ್ನು ಸಿನಿಮಾ ರಂಗಕ್ಕೆ ಪರಿಚಯ ಮಾಡಿದ್ದರು.

ದೇಶ ವಿದೇಶಗಳಿಂದ ತಮ್ಮ ಪಾತ್ರಕ್ಕೆ ಮೆಚ್ಚುಗೆ ಗಳಿಸಿದ್ದ ಹೊರತಾಗಿಯೂ ಉಮಾ ದಾಸ್‌ಗುಪ್ತಾ ಅವರು ʼಪಥೇರ್‌ ಪಾಂಚಾಲಿʼ ಬಳಿಕ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಅವರು ತಮ್ಮ ಖಾಸಗಿ ಜೀವನವನ್ನು ಮುಂದುವರಿಸಿದ್ದರು. ಉಮಾ ದಾಸ್‌ಗುಪ್ತಾ ಅವರು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು.

ಉಮಾ ಅವರನ್ನು ಸ್ಮರಿಸಿದ ಸತ್ಯಜಿತ್‌ ರೇ ಪುತ್ರ ಸಂದೀಪ್‌

ಉಮಾ ಅವರು ಚಿಕ್ಕವಯಸ್ಸಿನಲ್ಲಿಯೇ ಅತ್ಯುತ್ತಮ ನಟನಾ ಕೌಶಲ ಹೊಂದಿದ್ದರು ಎಂದು ಸತ್ಯಜಿತ್‌ ರೇ ಅವರ ಪುತ್ರ ಸಂದಿಪ್‌ ರೇ ಅವರು ಹೇಳಿದ್ದಾರೆ. ಉಮಾ ಅವರು ಕ್ಯಾಮೆರಾ ಮುಂದೆ ಅತ್ಯಂತ ಸಹಜವಾಗಿ ನಟನೆ ಮಾಡುತ್ತಿದ್ದರು ಎಂಬುವ ಸಂಗತಿಯನ್ನು ತಮ್ಮ ತಂದೆಯವರು ಆಗಾಗ ಹೇಳುತ್ತಿದ್ದರು ಎಂದು ಸಂದೀಪ್‌ ಸುದ್ದಿ ಸಂಸ್ಥೆಗಳ ಜತೆ ಮಾತನಾಡುತ್ತಾ ಹೇಳಿದ್ದಾರೆ.

ನನ್ನ ತಂದೆಯವರು ಉಮಾ ಅವರ ಬಗ್ಗೆ ಪದೇ ಪದೆ ಹೇಳುತ್ತಿದ್ದರು. ಚಿತ್ರೀಕರಣದ ವೇಳೆ ಅಭ್ಯಾಸ ನಡೆಸುವಾಗ ಉಮಾ ಅವರು, ತಾವು ಹೇಳುತ್ತಿದ್ದ ಪ್ರತಿ ಅಂಶವನ್ನೂ ಚಾಚೂ ತಪ್ಪದೇ ಕೇಳಿಕೊಳ್ಳುತ್ತಿದ್ದರು. ಕ್ಯಾಮೆರಾ ರೋಲ್‌ ಆದಾಗ ಅದನ್ನು ಅದೇ ರೀತಿ ಮಾಡುತ್ತಿದ್ದರು. ಮತ್ತೊಂದು ಬಾರಿಗೆ ಅವರಿಗೆ ಹೇಳಿಕೊಡುವ ಅವಶ್ಯಕತೆಯೇ ಇರಲಿಲ್ಲ. ಉಮಾ ಅವರು ತಮ್ಮ ಪಾತ್ರವನ್ನು ನೀರಿನಿಂದ ಮೀನು ಹೊರಗೆ ತೆಗೆದ ರೀತಿಯಲ್ಲಿ ಮುಗಿಸುತ್ತಿದ್ದರು ಎಂದು ತಂದೆ ವಿವರಿಸುತ್ತಿದ್ದರು ಎಂಬುದಾಗಿ ಸಂದೀಪ್‌ ಸ್ಮರಿಸಿಕೊಂಡಿದ್ದಾರೆ .

1954-55 ರಲ್ಲಿ ʼಪಥೇರ್‌ ಪಾಂಚಾಲಿʼ ಸಿನಿಮಾ ಚಿತ್ರೀಕರಣವಾಗಿತ್ತು. ಹೀಗಾಗಿ ಚಿಕ್ಕ ಬಾಲಕನಾಗಿದ್ದ ಸಂದೀಪ್‌ ಅವರಿಗೆ ಉಮಾ ದಾಸ್‌ಗುಪ್ತಾ ಯಾವ ರೀತಿ ನಟಿಸುತ್ತಿದ್ದರು ಎಂಬುದು ಜ್ಞಾಪಕ ಇಲ್ಲ. ಅದಾದ ಬಳಿಕ ಅವರು ಸಾಕಷ್ಟು ಬಾರಿ ಕಾರ್ಯಕ್ರಮಗಳಲ್ಲಿ ಮಾತ್ರ ಭೇಟಿಯಾಗಿದ್ದರು.

ʼಪಥೇರ್‌ ಪಾಂಚಾಲಿʼ ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ನಾನು ಅವರನ್ನು ಕೊನೇ ಬಾರಿ ಭೇಟಿಯಾಗಿದ್ದೆ. ಅದು ಸಾಕಷ್ಟು ವರ್ಷಗಳ ಹಿಂದೆ. ಆದರೆ, ಅವರು ಯಾಕೆ ಸಿನಿಮಾದಲ್ಲಿ ಮುಂದುವರಿಯಲಿಲ್ಲ ಎಂಬುದು ನನಗೆ ಗೊತ್ತಿಲ್ಲ ಎಂಬುದಾಗಿ ಸಂದೀಪ್‌ ನುಡಿದಿದ್ದಾರೆ.

Tags:    

Similar News