ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ ಹಿಂಸಾಚಾರ, ಇಬ್ಬರ ಸಾವು, 110ಕ್ಕೂ ಹೆಚ್ಚು ಜನರ ಬಂಧನ

ಮುರ್ಶಿದಾಬಾದ್ ಜಿಲ್ಲೆಯ ಉಮರ್‌ಪುರ್‌ನಲ್ಲಿ ಮಂಗಳವಾರ (ಏಪ್ರಿಲ್ 8) ಆರಂಭವಾದ ಪ್ರತಿಭಟನೆಯು ರಾಷ್ಟ್ರೀಯ ಹೆದ್ದಾರಿ 12ನ್ನು ಬಂದ್ ಮಾಡುವ ಮೂಲಕ ತೀವ್ರಗೊಂಡಿತು. ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿದ್ದು, ರೈಲ್ವೆ ನಿಲ್ದಾಣಗಳನ್ನು ಧ್ವಂಸಗೊಳಿಸಿದ್ದಾರೆ.;

Update: 2025-04-12 12:32 GMT
ಪ್ರತಿಭಟನಾಕಾರರ ದಾಳಿಗೆ ಸುಟ್ಟುಹೋಗಿರುವ ವಾಹನವನ್ನು ತೋರಿಸುತ್ತಿರುವ ಮಾಲೀಕರು.

ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆ 2025 ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಶುಕ್ರವಾರ (ಏಪ್ರಿಲ್ 11ರಂದು) ಹಿಂಸಾತ್ಮಕ ರೂಪ ಪಡೆದಿದ್ದು, ಗಲಭೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ದೊಂಬಿಗೆ ಸಾರ್ವಜನಿಕ ಆಸ್ತಿಗೆ ಹಾನಿಯಾಗಿದ್ದು, ಈ ಸಂಬಂಧ ಪೊಲೀಸರು 110ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಜಂಗಿಪುರದ ಸುತಿ ಮತ್ತು ಸಂಸೇರ್‌ಗಂಜ್ ಪ್ರದೇಶಗಳಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ.

ಮುರ್ಶಿದಾಬಾದ್ ಜಿಲ್ಲೆಯ ಉಮರ್‌ಪುರ್‌ನಲ್ಲಿ ಮಂಗಳವಾರ (ಏಪ್ರಿಲ್ 8) ಆರಂಭವಾದ ಪ್ರತಿಭಟನೆಯು ರಾಷ್ಟ್ರೀಯ ಹೆದ್ದಾರಿ 12ನ್ನು ಬಂದ್ ಮಾಡುವ ಮೂಲಕ ತೀವ್ರಗೊಂಡಿತು. ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿದ್ದು, ರೈಲ್ವೆ ನಿಲ್ದಾಣಗಳನ್ನು ಧ್ವಂಸಗೊಳಿಸಿದ್ದಾರೆ. ಒಂದು ವಾಹನ ಸಂಪೂರ್ಣವಾಗಿ ಭಸ್ಮವಾಗಿದ್ದು, ಕೆಲವು ಪೊಲೀಸ್ ವಾಹನಗಳಿಗೂ ಹಾನಿಯಾಗಿದೆ. ಈ ವೇಳೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ನಾಲ್ಕು ಪೊಲೀಸ್ ಸಿಬ್ಬಂದಿ ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ. ಈ ಗಲಭೆಯಿಂದಾಗಿ ಎರಡು ರೈಲು ಸೇವೆಗಳನ್ನು ಐದು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ.

ಪರಿಸ್ಥಿತಿ ಶಾಂತಗೊಳಿಸಲು ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ತಪ್ಪು ಮಾಹಿತಿಯ ಹರಡುವಿಕೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ.

ಪ್ರತಿಭಟನೆಗೆ ಕಾರಣವೇನು? 

ವಕ್ಫ್ (ತಿದ್ದುಪಡಿ) ಕಾಯ್ದೆ 2025, ವಕ್ಫ್ ಆಸ್ತಿಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಜಾರಿಗೊಳಿಸಿದೆ. ಈ ಕಾಯ್ದೆಯು ದಾಖಲೆಗಳ ನಿರ್ವಹಣೆ, ವಿವಾದಗಳ ಪರಿಹಾರ ಮತ್ತು ವಕ್ಫ್ ಆಸ್ತಿಗಳ ಮೇಲಿನ ಮೇಲ್ವಿಚಾರಣೆಗೆ ಸಂಬಂಧಿಸಿದ ಬದಲಾವಣೆಗಳನ್ನು ಒಳಗೊಂಡಿದೆ. ಆದರೆ, ಈ ಕಾಯ್ದೆಯು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ಎಂಬುದು ವಿರೋಧಿಗಳ ಆರೋಪ. ಕೋಲ್ಕತ್ತಾ, ಅಹಮದಾಬಾದ್, ಚೆನ್ನೈ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.

ಪಶ್ಚಿಮ ಬಂಗಾಳದಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಕಾಯ್ದೆ ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಘೋಷಿಸಿದ್ದಾರೆ. "ನಾನು ಯಾವಾಗಲೂ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುತ್ತೇನೆ, ಈ ಕಾಯ್ದೆಯಿಂದ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ" ಎಂದು ಅವರು ಭರವಸೆ ನೀಡಿದ್ದಾರೆ.

ರಾಜಕೀಯ ಪ್ರತಿಕ್ರಿಯೆಗಳು

ಈ ಹಿಂಸಾಚಾರವನ್ನು ರಾಜಕೀಯವಾಗಿಯೂ ತೀವ್ರವಾಗಿ ಖಂಡಿಸಲಾಗಿದೆ. ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಇದು ಮಮತಾ ಬ್ಯಾನರ್ಜಿ ಅವರ ಓಲೈಕೆ ರಾಜಕಾರಣದ ಪರಿಣಾಮ" ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ತೃಣಮೂಲ ಕಾಂಗ್ರೆಸ್‌ನ ನಾಯಕರು, ಕೇಂದ್ರ ಸರ್ಕಾರದ ಕಾಯ್ದೆಯೇ ಈ ಗಲಭೆಗೆ ಕಾರಣ ಎಂದು ದೂಷಿಸಿದ್ದಾರೆ.

ಜನರ ಪ್ರತಿಕ್ರಿಯೆ

ಕೋಲ್ಕತ್ತಾದ ಅಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಶುಕ್ರವಾರ ಈ ಕಾಯ್ದೆಯ ವಿರುದ್ಧ ರ್ಯಾಲಿ ನಡೆಸಿದ್ದು, ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಇದೇ ರೀತಿ, ಸಿಲಿಗುರಿಯ ಮುಸ್ಲಿಂ ಸಂಘಟನೆಯೊಂದು ಕೇಂದ್ರ ಸರ್ಕಾರವನ್ನು ಕಾಯ್ದೆಯನ್ನು ರದ್ದುಗೊಳಿಸುವಂತೆ ಕೋರಿದೆ. ರಾಜ್ಯದ ಇತರ ಭಾಗಗಳಾದ ಹೂಗ್ಲಿಯ ಚಂಪ್‌ದಾನಿಯಲ್ಲಿಯೂ ಇಂತಹ ಪ್ರತಿಭಟನೆಗಳು ವರದಿಯಾಗಿವೆ. 

Tags:    

Similar News