ಮಹಾಯುತಿಯಲ್ಲಿ ಬಿಕ್ಕಟ್ಟು | ಶಿವಸೇನೆ ಸಚಿವರ ಹೇಳಿಕೆ: ಎನ್‌ಸಿಪಿ ಬೆದರಿಕೆ

ʻಕ್ಯಾಬಿನೆಟ್ ಸಭೆಗಳಲ್ಲಿ ಎನ್‌ಸಿಪಿ ಸಚಿವರ ಪಕ್ಕ ಕುಳಿತುಕೊಳ್ಳುತ್ತೇನೆ. ಆದರೆ, ಹೊರಗೆ ಬಂದ ತಕ್ಷಣ ವಾಂತಿ ಮಾಡಿಕೊಳ್ಳಬೇಕು ಅನ್ನಿಸುತ್ತದೆ,ʼ ಎಂದು ಶಿವಸೇನಾ (ಶಿಂಧೆ) ನಾಯಕ ಮತ್ತು ಮಹಾರಾಷ್ಟ್ರದ ಆರೋಗ್ಯ ಸಚಿವ ತಾನಾಜಿ ಸಾವಂತ್ ಹೇಳಿಕೆ ನೀಡಿದ್ದರು. ಇದಕ್ಕೆ ಎನ್ಸಿಪಿಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ;

Update: 2024-08-30 11:57 GMT

ಶಿವಸೇನಾ (ಶಿಂಧೆ) ನಾಯಕ ಮತ್ತು ಮಹಾರಾಷ್ಟ್ರದ ಆರೋಗ್ಯ ಸಚಿವ ತಾನಾಜಿ ಸಾವಂತ್ ಅವರನ್ನು ಪಕ್ಷದಿಂದ ವಜಾಗೊಳಿಸದಿದ್ದರೆ ಸಂಪುಟದಿಂದ ಹೊರಬರುವುದಾಗಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬೆದರಿಕೆ ಹಾಕಿದೆ. ಇದರಿಂದ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟಕ್ಕೆ ಹೊಸ ವಿಪತ್ತು ಎದುರಾಗಿದೆ. 

ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಾವಂತ್, ʻನಾನೊಬ್ಬ ಹಾರ್ಡ್‌ಕೋರ್ ಶಿವಸೈನಿಕ ಮತ್ತು ಎನ್‌ಸಿಪಿ ನಾಯಕರೊಂದಿಗೆ ಎಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಕ್ಯಾಬಿನೆಟ್ ಸಭೆಗಳಲ್ಲಿ ಎನ್‌ಸಿಪಿ ಸಚಿವರ ಪಕ್ಕ ಕುಳಿತುಕೊಳ್ಳುತ್ತೇನೆ. ಆದರೆ, ಹೊರಗೆ ಬಂದ ತಕ್ಷಣ ವಾಂತಿ ಮಾಡಿಕೊಳ್ಳಬೇಕು ಅನ್ನಿಸುತ್ತದೆ,ʼ ಎಂದು ಸಾವಂತ್ ಹೇಳಿಕೆ ನೀಡಿದ್ದರು. 

ʻಒಂದೋ ಅವರು ಅಥವಾ ಎನ್‌ಸಿಪಿ ಇರಬೇಕು. ಅವರನ್ನು ವಜಾಗೊಳಿಸದಿದ್ದರೆ ಮಹಾಯುತಿ ಸಚಿವ ಸಂಪುಟದಿಂದ ಹೊರಬರಬೇಕು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಜಿತ್ ಪವಾರ್ ಮತ್ತು ಎಲ್ಲಾ ಹಿರಿಯ ನಾಯಕರನ್ನು ಕ್ಯಾಬಿನೆಟ್ ತೊರೆಯುವಂತೆ ನಾನು ವಿನಂತಿಸುತ್ತೇನೆ,ʼ ಎಂದು ಎನ್‌ಸಿಪಿ ವಕ್ತಾರ ಉಮೇಶ್ ಪಾಟೀಲ್ ಶುಕ್ರವಾರ ಹೇಳಿದ್ದಾರೆ. ಸಾವಂತ್ ಅವರನ್ನು ವಜಾಗೊಳಿಸುವವರೆಗೂ ಯಾವುದೇ ಕ್ಯಾಬಿನೆಟ್ ಸಭೆಗೆ ಹಾಜರಾಗದಂತೆ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರನ್ನು ಒತ್ತಾಯಿಸಿದ್ದಾರೆ. 

ಕ್ಷಮೆ ಸ್ವೀಕರಿಸುವುದಿಲ್ಲ-ಎನ್‌ಸಿಪಿ: ಸಾವಂತ್ ಅವರನ್ನು ವಜಾಗೊಳಿಸುವವರೆಗೆ ನಮ್ಮ ಸಚಿವರು ಸಂಪುಟ ಸಭೆಗಳನ್ನು ಬಹಿಷ್ಕರಿಸ ಬೇಕು. ಸಾವಂತ್ ಅವರ ಕ್ಷಮೆಯಾಚನೆ ಅಥವಾ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂಬ ವಿವರಣೆಯನ್ನು ನಾವು ಸ್ವೀಕರಿಸುವುದಿಲ್ಲ.ಅವರನ್ನು ತಕ್ಷಣ ಹೊರಹಾಕಬೇಕೆಂದು ಬಯಸುತ್ತೇವೆ,ʼ ಎಂದು ಹೇಳಿದರು. 

ʻಎನ್‌ಸಿಪಿ ಅಧಿಕಾರಕ್ಕಾಗಿ ಹತಾಶವಾಗಿಲ್ಲ ಮತ್ತು ಇಂತಹ ಅವಹೇಳನಕಾರಿ ಹೇಳಿಕೆ ನೀಡುವ ಸಚಿವರೊಂದಿಗೆ ಕೆಲಸ ಮಾಡಲು ಸಿದ್ಧವಿಲ್ಲ. ಸಾವಂತ್‌ ಮಹಾಯುತಿ ಸಚಿವ ಸಂಪುಟದಲ್ಲಿರಲು ಅರ್ಹರಲ್ಲ. ಅವರನ್ನು ತಕ್ಷಣವೇ ವಜಾಗೊಳಿಸಬೇಕು,ʼ ಎಂದು ಪಾಟೀಲ್ ಹೇಳಿದರು. 

ಎನ್‌ಸಿಪಿ ವಿಧಾನಪರಿಷತ್ ಸದಸ್ಯ ಅಮೋಲ್ ಮಿಟ್ಕರಿ,ʻಸಾವಂತ್ ಅವರ ಹೇಳಿಕೆ ಖಂಡನಾರ್ಹ. ಮೈತ್ರಿಯನ್ನು ಉಳಿಸಿಕೊಳ್ಳುವುದು ಅವರ ಪಕ್ಷದ ಜವಾಬ್ದಾರಿ. ಈ ಹಿಂದೆಯೂ ಸಾವಂತ್ ಎನ್‌ಸಿಪಿಗೆ ನೋವುಂಟು ಮಾಡುವ ಟೀಕೆ ಮಾಡಿದ್ದಾರೆ. ಅವರ ವಾಕರಿಕೆಗೆ ಚಿಕಿತ್ಸೆ ನೀಡಲು ಮುಖ್ಯಮಂತ್ರಿಗೆ ಮಾತ್ರ ಸಾಧ್ಯ,ʼ ಎಂದು ಹೇಳಿದರು.

ಮಹಾಯುತಿಗೆ ಅಜಿತ್ ಹೊರೆ?: ಮಹಾಯುತಿ ಮೈತ್ರಿಯಿಂದ ಹೊರಹೋಗುವಂತೆ ಮಾಡಲು ಅಜಿತ್ ಪವಾರ್ ಅವರನ್ನು ಉದ್ದೇಶಪೂರ್ವಕವಾಗಿ ಬದಿಗೆ ತಳ್ಳಲಾಗುತ್ತಿದೆ ಎಂಬ ದೂರು ಕೇಳಿಬರುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಅಜಿತ್ ಅವರ ಪಕ್ಷ ಕೇವಲ ಒಂದು ಸ್ಥಾನವನ್ನು ಗೆಲುವು ಸಾಧಿಸಿತು.  ಮಹಾಯುತಿ ಉತ್ತಮ ಸಾಧನೆ ಮಾಡದ ಕಾರಣದಿಂದ ಅಜಿತ್ ಹೆಚ್ಚಿನ ಒತ್ತಡದಲ್ಲಿದ್ದಾರೆ. ಚುನಾವಣೆಯಲ್ಲಿ ಮೈತ್ರಿಕೂಟದ ಕಳಪೆ ಪ್ರದರ್ಶನಕ್ಕೆ ಎನ್‌ಸಿಪಿಯನ್ನು ಆರ್‌ಎಸ್‌ಎಸ್‌ ದೂಷಿಸಿದೆ.

ಸಿಂಧುದುರ್ಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಉರುಳಿದ್ದಕ್ಕೆ ಅಜಿತ್ ಅವರು ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಿದರು. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅವರ ಪಕ್ಷ ರಾಜ್ಯಾದ್ಯಂತ ಮೌನ ಪ್ರತಿಭಟನೆಯನ್ನೂ ನಡೆಸಿತು. ಅಲ್ಲದೆ, ಪ್ರತಿಮೆ ಕುಸಿದ ಸ್ಥಳಕ್ಕೆ ಅಜಿತ್ ಭೇಟಿ ನೀಡಿದ್ದರು.‌ 

ಮೈತ್ರಿಯಿಂದ ಹೊರಹಾಕಿ: ಅಜಿತ್ ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಸಾವಂತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಅಜಿತ್ ಅವರನ್ನು ಮಹಾಯುತಿಯಿಂದ ಹೊರಹಾಕಲು ಬಿಜೆಪಿಗೆ ಇದು ಸಮಯ. ಅಜಿತ್ ಪವಾರ್ ಅವರು ಎಚ್ಚರ ಗೊಳ್ಳುವ ಸಮಯ ಬಂದಿದೆ,ʼ ಎಂದು ಹೇಳಿದೆ.

ಎನ್‌ಸಿಪಿ (ಎಸ್‌ಪಿ) ವಕ್ತಾರ ಕ್ಲೈಡ್ ಕ್ರಾಸ್ಟೊ,ʻ ಸಾವಂತ್ ಅವರ ಹೇಳಿಕೆಯು ಮಹಾಯುತಿಗೆ ಎನ್‌ಸಿಪಿ ಅಗತ್ಯವಿಲ್ಲ ಎಂಬುದನ್ನು ತೋರಿಸುತ್ತದೆ. ಆರ್‌ಎಸ್‌ಎಸ್‌ನ ಮುಖವಾಣಿ ಕೂಡ ಅಜಿತ್ ಪವಾರ್ ಜೊತೆ ಬಿಜೆಪಿ ಏಕೆ ಮೈತ್ರಿ ಮಾಡಿಕೊಂಡಿದೆ ಎಂದು ಪ್ರಶ್ನಿಸಿತ್ತು. ಬಿಜೆಪಿ ಕಾರಕರ್ತರೂ ಇದೇ ಪ್ರಶ್ನೆ ಕೇಳುತ್ತಿದ್ದಾರೆ,ʼ ಎಂದರು. 

ಸ್ವಾಭಿಮಾನ ಕಳೆದುಕೊಂಡಿದ್ದಾರೆ: ತಾಪಸೆ- ಎನ್‌ಸಿಪಿ (ಎಸ್‌ಪಿ) ವಕ್ತಾರ ಮಹೇಶ್ ತಾಪಸೆ, ʻಅಜಿತ್ ಪವಾರ್ ಅವರು ಸ್ವಾಭಿಮಾನ ಕಳೆದುಕೊಂಡಿದ್ದಾರೆ ಮತ್ತು ಎನ್‌ಸಿಪಿ ಜೊತೆ‌ ಮೈತ್ರಿ ಬಗ್ಗೆ ಶಿಂಧೆ ನೇತೃತ್ವದ ಸೇನೆಯ ಶ್ರೇಣಿಯಲ್ಲಿ ಅಸಮಾಧಾನ ಬೆಳೆಯುತ್ತಿದೆ,ʼ ಎಂದು ಹೇಳಿದ್ದಾರೆ. 

ʻಹಿಂದೆ ಎನ್‌ಸಿಪಿಯಲ್ಲಿ ಅಪಾರ ಗೌರವ ಹೊಂದಿದ್ದ ಅಜಿತ್ ದಾದಾ, ಅಧಿಕಾರಕ್ಕಾಗಿ ಸ್ವಾಭಿಮಾನವನ್ನು ಮಾರಿಕೊಳ್ಳುತ್ತಾರೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಪ್ರಸ್ತುತ ಪರಿಸ್ಥಿತಿ ಗಮನಿಸಿದರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎನ್‌ಸಿಪಿ 25 ಸ್ಥಾನ ಕೂಡ ಗಳಿಸದೆ ಇರಬಹುದು. ಈ ಹತಾಶೆಯೇ ಇಂತಹ ಅವಮಾನಕರ ಹೇಳಿಕೆಗೆ ಕಾರಣವಾಗಿದೆ ,ʼ ಎಂದು ತಾಪಸೆ ಹೇಳಿದ್ದಾರೆ.

Tags:    

Similar News