ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಭೀಕರ ದುರಂತ, ಟ್ರ್ಯಾಕ್ಟರ್ ಕೆರೆಗೆ ಉರುಳಿ 11 ಮಂದಿ ಜಲಸಮಾಧಿ

ದುರ್ಗಾ ವಿಗ್ರಹಗಳು ಮತ್ತು ಭಕ್ತರನ್ನು ಹೊತ್ತಿದ್ದ ಟ್ರ್ಯಾಕ್ಟರ್-ಟ್ರಾಲಿ, ವಿಸರ್ಜನೆ ವೇಳೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿಬಿದ್ದಿದೆ ಎಂದು ಜಿಲ್ಲಾಧಿಕಾರಿ ರಿಷವ್ ಗುಪ್ತಾ ತಿಳಿಸಿದ್ದಾರೆ.

Update: 2025-10-03 04:44 GMT
Click the Play button to listen to article

ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಟ್ರ್ಯಾಕ್ಟರ್-ಟ್ರಾಲಿ ಕೆರೆಗೆ ಉರುಳಿಬಿದ್ದ ಪರಿಣಾಮ ಏಳು ಬಾಲಕಿಯರು ಸೇರಿದಂತೆ ಹನ್ನೊಂದು ಮಂದಿ ಜಲಸಮಾಧಿಯಾಗಿದ್ದಾರೆ. ಈ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮೋಹನ್ ಯಾದವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಆರ್ಥಿಕ ನೆರವು ಘೋಷಿಸಿದ್ದಾರೆ.

ಖಾಂಡ್ವಾ ಜಿಲ್ಲೆಯ ಪಂಧಾನಾ ಪ್ರದೇಶದಲ್ಲಿ ಗುರುವಾರ ವಿಜಯದಶಮಿಯಂದು ಈ ದುರ್ಘಟನೆ ಸಂಭವಿಸಿದೆ. ದುರ್ಗಾ ವಿಗ್ರಹಗಳು ಮತ್ತು ಭಕ್ತರನ್ನು ಹೊತ್ತಿದ್ದ ಟ್ರ್ಯಾಕ್ಟರ್-ಟ್ರಾಲಿ, ವಿಸರ್ಜನೆ ವೇಳೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿಬಿದ್ದಿದೆ ಎಂದು ಜಿಲ್ಲಾಧಿಕಾರಿ ರಿಷವ್ ಗುಪ್ತಾ ತಿಳಿಸಿದ್ದಾರೆ.

"ಕೆರೆಯ ಆಳದ ಬಗ್ಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದರೂ, ಅತಿಯಾದ ಉತ್ಸಾಹದಿಂದ ಟ್ರ್ಯಾಕ್ಟರ್ ಅನ್ನು ಮತ್ತಷ್ಟು ಮುಂದೆ ಚಲಾಯಿಸಿದ್ದರಿಂದ ಅದು ಪಲ್ಟಿಯಾಗಿ ಮುಳುಗಿದೆ. ಪೊಲೀಸರು, ಆಡಳಿತ, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ಗೃಹ ರಕ್ಷಕ ದಳ ಮತ್ತು ಸ್ಥಳೀಯ ಮುಳುಗು ತಜ್ಞರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಕೆರೆಯಿಂದ 11 ಮೃತದೇಹಗಳನ್ನು ಹೊರತೆಗೆಯಲಾಗಿದೆ," ಎಂದು ಅವರು ಮಾಹಿತಿ ನೀಡಿದ್ದಾರೆ.

ಮೃತಪಟ್ಟವರಲ್ಲಿ ಏಳು ಬಾಲಕಿಯರು ಸೇರಿದ್ದಾರೆ. ಸುಮಾರು 10 ರಿಂದ 12 ಭಕ್ತರನ್ನು ರಕ್ಷಿಸಲಾಗಿದ್ದು, ಅವರಲ್ಲಿ ಮೂವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಖಾಂಡ್ವಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ರೈ ಹೇಳಿದ್ದಾರೆ. ಮೃತರನ್ನು ಆರತಿ (18), ಊರ್ಮಿಳಾ (16), ಶರ್ಮಿಳಾ (15), ಕಿರಣ್ (16), ಪಟ್ಲಿ (25), ಸಂಗೀತ (16), ಚಂದಾ (8), ದಿನೇಶ್ (13), ಗಣೇಶ್ (20), ರೇವ್ ಸಿಂಗ್ (13) ಮತ್ತು ಆಯುಷ್ (9) ಎಂದು ಗುರುತಿಸಲಾಗಿದೆ.

ಪರಿಹಾರ ಘೋಷಣೆ

ಪ್ರಧಾನಿ ನರೇಂದ್ರ ಮೋದಿ ಅವರು X (ಟ್ವಿಟರ್) ಮೂಲಕ ಸಂತಾಪ ಸೂಚಿಸಿದ್ದು, "ಈ ದುರಂತದಿಂದ ತೀವ್ರ ದುಃಖವಾಗಿದೆ. ಮೃತರ ಕುಟುಂಬಗಳಿಗೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ 50,000 ರೂಪಾಯಿ ಪರಿಹಾರ ನೀಡಲಾಗುವುದು," ಎಂದು ಘೋಷಿಸಿದ್ದಾರೆ.

ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಕೂಡ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರವನ್ನು ಪ್ರಕಟಿಸಿದ್ದಾರೆ. 

Tags:    

Similar News