ಟಾಲಿವುಡ್‌ನ ಅಲ್ಲು ಕುಟುಂಬದಲ್ಲಿ ಶೋಕ: ನಟ ಅಲ್ಲು ಅರ್ಜುನ್ ಅಜ್ಜಿ ಕನಕರತ್ನಂ ನಿಧನ

ಅಲ್ಲು ಕನಕರತ್ನಂ ಅವರು, ತೆಲುಗು ಚಿತ್ರರಂಗದ ದಂತಕಥೆ, ಖ್ಯಾತ ಹಾಸ್ಯನಟ ಮತ್ತು ಪದ್ಮಶ್ರೀ ಪುರಸ್ಕೃತ ದಿವಂಗತ ಅಲ್ಲು ರಾಮಲಿಂಗಯ್ಯ ಅವರ ಧರ್ಮಪತ್ನಿಯಾಗಿದ್ದರು. ತೆಲುಗು ಚಿತ್ರರಂಗಕ್ಕೆ ಅಲ್ಲು ರಾಮಲಿಂಗಯ್ಯ ಅವರು ನೀಡಿದ ಕೊಡುಗೆ ಅಪಾರವಾಗಿದೆ.;

Update: 2025-08-30 12:52 GMT

ಅಜ್ಜಿ ಕನಕರತ್ನಂ ಹಾಗೂ ಅಲ್ಲು ಅರ್ಜುನ್‌

ತೆಲುಗು ಚಿತ್ರರಂಗದ ಪ್ರತಿಷ್ಠಿತ 'ಅಲ್ಲು' ಕುಟುಂಬದ ಹಿರಿಯ ಸದಸ್ಯೆ, 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ಅವರ ಅಜ್ಜಿ ಮತ್ತು ಹಿರಿಯ ನಿರ್ಮಾಪಕ ಅಲ್ಲು ಅರವಿಂದ್ ಅವರ ತಾಯಿ, ಶ್ರೀಮತಿ ಅಲ್ಲು ಕನಕರತ್ನಂ (94) ಅವರು ಶನಿವಾರ ಮುಂಜಾನೆ ನಿಧನಹೊಂದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ದೃಢಪಡಿಸಿವೆ.

ಅಲ್ಲು ಕನಕರತ್ನಂ ಅವರು, ತೆಲುಗು ಚಿತ್ರರಂಗದ ದಂತಕಥೆ, ಖ್ಯಾತ ಹಾಸ್ಯನಟ ಮತ್ತು ಪದ್ಮಶ್ರೀ ಪುರಸ್ಕೃತ ದಿವಂಗತ ಅಲ್ಲು ರಾಮಲಿಂಗಯ್ಯ ಅವರ ಧರ್ಮಪತ್ನಿಯಾಗಿದ್ದರು. ತೆಲುಗು ಚಿತ್ರರಂಗಕ್ಕೆ ಅಲ್ಲು ರಾಮಲಿಂಗಯ್ಯ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಯಶಸ್ಸಿನ ಹಿಂದೆ ಕನಕರತ್ನಂ ಅವರು ಕುಟುಂಬದ ದೊಡ್ಡ ಶಕ್ತಿಯಾಗಿ ನಿಂತಿದ್ದರು. ತೆರೆಮರೆಯಲ್ಲೇ ಇದ್ದರೂ, ಅಲ್ಲು ಕುಟುಂಬದ ಏಳಿಗೆಯನ್ನು ಅತ್ಯಂತ ಸಮೀಪದಿಂದ ಕಂಡ, ಕುಟುಂಬದ ಸಂಪ್ರದಾಯ ಮತ್ತು ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದ್ದ ಅವರು, ಎಲ್ಲರಿಗೂ ಸ್ಫೂರ್ತಿಯಾಗಿದ್ದರು ಎಂದು ಅವರ ಕುಟುಂಬದ ಸದಸ್ಯರು ಸ್ಮರಿಸಿಕೊಂಡಿದ್ದಾರೆ.

ಅಜ್ಜಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ಮುಂಬೈನಲ್ಲಿ ನಿರ್ದೇಶಕ ಅಟ್ಲಿ ಅವರ ಚಿತ್ರದ ಶೂಟಿಂಗ್‌ನಲ್ಲಿದ್ದ ಅಲ್ಲು ಅರ್ಜುನ್, ತಕ್ಷಣವೇ ಚಿತ್ರೀಕರಣವನ್ನು ರದ್ದುಗೊಳಿಸಿ ಹೈದರಾಬಾದ್‌ಗೆ ಧಾವಿಸಿದ್ದಾರೆ. ತಮ್ಮ ಅಜ್ಜಿಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ಅಲ್ಲು ಅರ್ಜುನ್, ತೀವ್ರ ದುಃಖದಲ್ಲಿದ್ದರು.

ಮೈಸೂರಿನಲ್ಲಿ ತಮ್ಮ 'ಪೆದ್ದಿ' ಚಿತ್ರದ ಬೃಹತ್ ಹಾಡಿನ ಚಿತ್ರೀಕರಣದಲ್ಲಿದ್ದ ನಟ ರಾಮ್ ಚರಣ್ ಕೂಡ ಶೂಟಿಂಗ್ ಸ್ಥಗಿತಗೊಳಿಸಿ, ಕುಟುಂಬದೊಂದಿಗೆ ಈ ದುಃಖದ ಸಮಯದಲ್ಲಿ ಭಾಗಿಯಾಗಲುಹೈದರಾಬಾದ್‌ಗೆ ಮರಳಿದ್ದಾರೆ.

ಆಂಧ್ರ ಪ್ರದೇಶ ಡಿಸಿಎಂ ಹಾಗೂ ನಟ ಪವನ್‌ ಕಲ್ಯಾಣ್‌ ಮತ್ತು ನಾಗಬಾಬು ಅವರು ವಿಶಾಖಪಟ್ಟಣದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಪಾಲ್ಗೊಂಡಿರುವುದರಿಂದ ಭಾನುವಾರ ಹೈದಾರಬಾದ್‌ಗೆ ತೆರಳಿ ಕುಟುಂಬಕ್ಕೆ ಸಾಂತ್ವಾನ ಹೇಳಲಿದ್ದಾರೆ.

ಅಜ್ಜಿ ಕನಕರತ್ನಂ ಅವರಿಗೆ ನಟ ಅಲ್ಲು ಅರ್ಜುನ್‌ ಎಂದರೆ ಬಹಳ ಪ್ರೀತಿ. ಪುಷ್ಪ-2 ಸಿನಿಮಾದ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರು ಅಲ್ಲು ಅರ್ಜುನ್‌ನನ್ನು ಬಂಧಿಸಿದ್ದಾಗ ಅಜ್ಜಿ ಕನಕರತ್ನಂ ಭಾವುಕರಾಗಿದ್ದರು.  

ಚಿತ್ರರಂಗದ ಗಣ್ಯರ ಭೇಟಿ

ಅಲ್ಲು ಕನಕರತ್ನಂ ಅವರ ಅಂತಿಮ ದರ್ಶನಕ್ಕಾಗಿ ಅವರ ಪಾರ್ಥಿವ ಶರೀರವನ್ನು ಅಲ್ಲು ಅರವಿಂದ್ ಅವರ ನಿವಾಸದಲ್ಲಿ ಇರಿಸಲಾಗಿದ್ದು, ಚಿತ್ರರಂಗದ ಗಣ್ಯರು, ಕುಟುಂಬದ ಆಪ್ತರು ಮತ್ತು ಹಿತೈಷಿಗಳು ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಅವರ ಅಂತ್ಯಕ್ರಿಯೆ ಶನಿವಾರ ಸಂಜೆ ಕೋಕಾಪೇಟ್‌ನಲ್ಲಿ ನಡೆಯಲಿವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜ್ನೆವಾ, ನಿರ್ದೇಶಕ ತ್ರಿವಿಕ್ರಮ್ ಸೇರಿದಂತೆ ತೆಲುಗು ಚಿತ್ರರಂಗದ ಹಲವು ಗಣ್ಯರು ಅಲ್ಲು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅಲ್ಲು ಕನಕರತ್ನಂ ಅವರ ನಿಧನವು ಅಲ್ಲು ಮತ್ತು ಕೊನಿದೆಲಾ ಕುಟುಂಬಗಳಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿದೆ.

Tags:    

Similar News