ಸಬರಮತಿ ರಿಪೋರ್ಟ್ ಸಿನಿಮಾಕ್ಕೆ ಗುಜರಾತ್‌ನಲ್ಲಿ ತೆರಿಗೆ ವಿನಾಯಿತಿ; ಇದು 5ನೇ ರಾಜ್ಯ
2022ರ ಗೋಧ್ರಾ ರೈಲು ಸುಟ್ಟ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ನಿರ್ಮಿಸಿದ ಸಬರಮತಿ ರಿಪೋರ್ಟ್ ಸಿನಿಮಾ ನೋಡಿದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ತೆರಿಗೆ ವಿನಾಯಿತಿ ಪ್ರಕಟಿಸಿದ್ದಾರೆ.;
ಹಿಂದಿ ಸಿನಿಮಾ ʼದ ಸಬರಮತಿ ರಿಪೋರ್ಟ್ʼಗೆ ಪ್ರದರ್ಶನಕ್ಕೆ ತೆರಿಗೆ ವಿನಾಯಿತಿ ನೀಡಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಈ ಚಲನಚಿತ್ರವು 2002ರಲ್ಲಿ ಗೋಧ್ರಾದಲ್ಲಿ ರೈಲಿಗೆ ಬೆಂಕಿ ಇಟ್ಟು ಸುಟ್ಟ ಪ್ರಕರಣದ ಘಟನೆಯನ್ನು ಆಧರಿಸಿದೆ. ಕಳೆದ ವಾರ ಬೆಳ್ಳಿ ತೆರೆಗೆ ಬಿಡುಗಡೆಗೊಂಡ ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದ ಐದನೇ ರಾಜ್ಯ ಗುಜರಾತ್. ವಿಕ್ರಾಂತ್ ಮಾಸೆ ಈ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.
ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರು ಬುಧವಾರ ರಾತ್ರಿ ಚಲನಚಿತ್ರವನ್ನು ವೀಕ್ಷಿಸಿದ ಬಳಿಕ ಈ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಎಂ ಭೂಪೇಂದ್ರ ಪಟೇಲ್ ಜತೆ ಸಿನಿಮಾದ ನಿರ್ದೇಶಕಿ ಏಕ್ತಾ ಕಪೂರ್, ಬಾಲಿವುಡ್ ಹಿರಿಯ ನಟ ಜಿತೇಂದ್ರ, ನಟಿ ರಿದ್ಧಿ ದೋಗ್ರಾ ಮತ್ತು ಗುಜರಾತ್ ಗೃಹ ಸಚಿವ ಹರ್ಷ ಸಾಂಗ್ವಿ ಕೂಡ ಸಿನಿಮಾ ವೀಕ್ಷಿಸಿದ್ದಾರೆ.
ಮುಖ್ಯಮಂತ್ರಿಗಳು ಸಿನಿಮಾವನ್ನು ಹೊಗಳಿದ್ದಾರೆ ಹಾಗೂ ಅದಕ್ಕೆ ತೆರಿಗೆ ವಿನಾಯಿತಿ ನೀಡಲು ನಿರ್ಧರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಜರಾತ್ ಸರ್ಕಾರ ಸಬರಮತಿ ರಿಪೋರ್ಟ್‌ಗೆ ತೆರಿಗೆ ವಿನಾಯಿತಿ ಕೊಟ್ಟಿರುವ ಐದನೇ ರಾಜ್ಯವಾಗಿದೆ. ಚತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ್, ಹರಿಯಾಣ ಇದಕ್ಕಿಂತ ಮೊದಲೇ ವಿನಾಯಿತಿ ಕೊಟ್ಟಿವೆ.
ಸಿನಿಮಾದಲ್ಲಿ 2002ರ ಗೋಧ್ರಾ ಹತ್ಯಾಕಾಂಡದ ಕತೆಯಿದೆ. ಫೆಬ್ರವರಿ 27ರಂದು ಆರ್‌ಎಸ್‌ಎಸ್ ಕರ ಸೇವಕರಿಂದ ತುಂಬಿಕೊಂಡಿದ್ದ ಸಬರಮತಿ ಎಕ್ಸ್‌ಪ್ರೆಸ್ ರೈಲಿಗೆ ಗೋಧ್ರಾ ನಿಲ್ದಾಣದಲ್ಲಿ ಬೆಂಕಿ ಹಚ್ಚಲಾಗಿತ್ತು. ಹಲವಾರು ಕರಸೇವಕರು ಘಟನೆಯಲ್ಲಿ ಮೃತಪಟ್ಟಿದ್ದರು. ಇದು ಆ ರಾಜ್ಯಾದ್ಯಂತ ಕೋಮು ಜ್ವಾಲೆಯನ್ನು ಎಬ್ಬಿಸಿತ್ತು.
ಸಬರಮತಿ ರಿಪೋರ್ಟ್ ಸಿನಿಮಾವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕೂಡ ಈ ಹಿಂದೆ ಸಿನಿಮಾದ ಬಗ್ಗೆ ಅಭಿನಂದನೆ ಸಲ್ಲಿಸಿದ್ದರು.