ರೈತರ ಪ್ರತಿಭಟನೆ | ಪಂಜಾಬ್-ಹರಿಯಾಣ ಗಡಿ ಮುಚ್ಚಿದ ಕೇಂದ್ರ ಸರ್ಕಾರ
ಕೇಂದ್ರವು ಸೋಮವಾರ ರೈತರನ್ನು ಚರ್ಚೆಗೆ ಆಹ್ವಾನಿಸಿದೆ ; ರೈತರು ಮಂಗಳವಾರ ದಿಲ್ಲಿ ಚಲೋ ನಡೆಸಲಿದ್ದಾರೆ;
ಫೆಬ್ರವರಿ 13 ರಂದು ರೈತರ ಯೋಜಿತ 'ದೆಹಲಿ ಚಲೋ' ಮೆರವಣಿಗೆಯ ನಿರೀಕ್ಷೆಯಲ್ಲಿ, ಹರಿಯಾಣದ ಅಧಿಕಾರಿಗಳು ಪಂಜಾಬ್ನ ಗಡಿಯನ್ನು ಮುಚ್ಚಿದ್ದಾರೆ. ಮೆರವಣಿಗೆ ಸಾಗದಂತೆ ತಡೆಯಲು ಜಿಂದ್ ಮತ್ತು ಫತೇಹಾಬಾದ್ ಜಿಲ್ಲೆಗಳ ಗಡಿಗಳಲ್ಲಿ ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಶಾಂತಿ ಭಂಗವಾಗುವ ನಿರೀಕ್ಷೆಯಲ್ಲಿ ಹರಿಯಾಣ ಸರ್ಕಾರವು ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಸೇರಿದಂತೆ ಏಳು ಜಿಲ್ಲೆಗಳಲಿ ಫೆಬ್ರವರಿ 11 ರಿಂದ 13 ರವರೆಗೆ ಮೊಬೈಲ್ ಇಂಟರ್ನೆಟ್ ಮತ್ತು ಎಸ್ ಎಂ ಎಸ್ ಸೇವೆಗಳನ್ನು ಸ್ಥಗಿತಗೊಳಿಸಿದೆ.
ಹರಿಯಾಣ ಪೊಲೀಸರನ್ನು ಬೆಂಬಲಿಸಲು ಐವತ್ತು ಕಂಪನಿಗಳ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಹರಿಯಾಣ ಪೊಲೀಸ್ ಮುಖ್ಯಸ್ಥ ಶತ್ರುಜೀತ್ ಕಪೂರ್ ಅವರು ಕಠಿಣ ಎಚ್ಚರಿಕೆ ನೀಡಿದ್ದು, ಶಾಂತಿ ಕದಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಸಂಪೂರ್ಣ ಶಾಂತಿಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಫೆ.13ರಂದು ಸಭೆ
ಮೂರು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಅರ್ಜುನ್ ಮುಂಡಾ ಮತ್ತು ನಿತ್ಯಾನಂದ ರೈ ಫೆಬ್ರವರಿ 8 ರಂದು ರೈತರ ಪ್ರತಿನಿಧಿಗಳನ್ನು ಭೇಟಿಯಾದರು.
ಪಂಧೇರ್ ಪ್ರಕಾರ, ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಪ್ರತಿನಿಧಿಗಳೊಂದಿಗೆ ಚರ್ಚಿಸಲು ಮೂವರು ಕೇಂದ್ರ ಸಚಿವರು ಫೆಬ್ರವರಿ 12 ರಂದು ಚಂಡೀಗಢಕ್ಕೆ ಬರಲಿದ್ದಾರೆ. ಈ ಸಭೆಯು ಸೆಕ್ಟರ್ 26 ರಲ್ಲಿನ ಮಹಾತ್ಮ ಗಾಂಧಿ ಸ್ಟೇಟ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ನಲ್ಲಿ ನಡೆಯಲಿದೆ.
ಚಂಡೀಗಢದಲ್ಲಿ ನಡೆಯಲಿರುವ ಮಾತುಕತೆಗೆ ಹಾಜರಾಗುವಂತೆ ಆಹ್ವಾನ ನೀಡಿದ ಪತ್ರವನ್ನು ಪಂಧೇರ್ ಹಂಚಿಕೊಂಡಿದ್ದಾರೆ. ಸಭೆಯನ್ನು ಆಯೋಜಿಸಲು ರೈತ ಮುಖಂಡರೊಂದಿಗೆ ಸಹಕರಿಸಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಸಹ ಭಾಗವಹಿಸಿದರು.
ಸಭೆಯ ನಂತರ, ಎರಡನೇ ಸುತ್ತಿನ ಚರ್ಚೆಯನ್ನು ಶೀಘ್ರದಲ್ಲೇ ಆಯೋಜಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ ಎಂದು ರೈತ ಮುಖಂಡರು ಹೇಳಿದರು.
2020 ರಲ್ಲಿ, ಪಂಜಾಬ್ ಮತ್ತು ಅಂಬಾಲಾದ ಹತ್ತಿರದ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ರೈತರು ಶಂಭು ಗಡಿಯಲ್ಲಿ ಜಮಾಯಿಸಿದರು ಮತ್ತು ದೆಹಲಿಯತ್ತ ಮೆರವಣಿಗೆ ಮಾಡಲು ಪೊಲೀಸ್ ಅಡೆತಡೆಗಳನ್ನು ಮುರಿದರು.
ಮುಖ್ಯವಾಗಿ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ರೈತರು ದೆಹಲಿಯ ಗಡಿ ಬಿಂದುಗಳಾದ ಸಿಂಘು, ಟಿಕ್ರಿ ಮತ್ತು ಗಾಜಿಪುರದಲ್ಲಿ -- ಈಗ ರದ್ದಾದ ಮೂರು ಕೃಷಿ ಕಾನೂನುಗಳ ವಿರುದ್ಧ ವರ್ಷಪೂರ್ತಿ ಪ್ರತಿಭಟನೆ ನಡೆಸಿದರು.
ಸೆಕ್ಷನ್ 144 ವಿಧಿಸಲಾಗಿದೆ
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಶಾಂತಿ ಕಾಪಾಡಲು ದೆಹಲಿ ಪೊಲೀಸರು ಉತ್ತರ ಪ್ರದೇಶದ ಗಡಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಕೆಲವು ರೈತ ಗುಂಪುಗಳು ತಮ್ಮ ಬೇಡಿಕೆಗಳ ಬಗ್ಗೆ ಮಾತನಾಡಲು ಫೆಬ್ರವರಿ 13 ರಂದು ದೆಹಲಿಗೆ ಬರಲು ಬಯಸುತ್ತಾರೆ ಮತ್ತು ಅವರು ತಮಗೆ ಬೇಕಾದುದನ್ನು ಪಡೆಯುವವರೆಗೆ ಗಡಿಯಲ್ಲಿ ಉಳಿಯಬಹುದು ಎಂದು ಅವರು ಹೇಳಿದರು.
ದೆಹಲಿ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿ ಮತ್ತು ಈಶಾನ್ಯ ಜಿಲ್ಲೆಯ ಹತ್ತಿರದ ಪ್ರದೇಶಗಳಲ್ಲಿ ಜನರು ಸೇರುವಂತಿಲ್ಲ ಎಂದು ನಿಯಮ ಹೇಳುತ್ತದೆ. ಅಲ್ಲದೆ, ಉತ್ತರ ಪ್ರದೇಶದಿಂದ ಪ್ರತಿಭಟನಾಕಾರರನ್ನು ಕರೆದೊಯ್ಯುವ ಟ್ರ್ಯಾಕ್ಟರ್ಗಳು, ಟ್ರಕ್ಗಳು ಮತ್ತು ಬಸ್ಗಳಂತಹ ವಾಹನಗಳನ್ನು ದೆಹಲಿಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಪ್ರತಿಭಟನಾಕಾರರು ದೆಹಲಿಗೆ ಬರದಂತೆ ತಡೆಯಲು ಈಶಾನ್ಯ ಜಿಲ್ಲೆಯ ಪೊಲೀಸರು ಎಲ್ಲ ಕ್ರಮಗಳನ್ನು ಕೈಗೊಂಡಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ
(ಸುದ್ದಿ ಸಂಸ್ಥೆಗಳ ವರದಿಗಳನ್ನು ಆಧರಿಸಿದ ಸಂಗ್ರಹಿತ ಬರಹ)