ಭಾರತ-ಚೀನಾ ಉನ್ನತ ಮಟ್ಟದ ಮಾತುಕತೆ: ಲಡಾಖ್ ಗಡಿಯಲ್ಲಿ ಶಾಂತಿ ಕಾಪಾಡಲು ಒತ್ತು

ಉಭಯ ರಾಷ್ಟ್ರಗಳು ಹಂತ ಹಂತವಾಗಿ ವಿವಾದ ಇತ್ಯರ್ಥಕ್ಕೆ ರಾಜತಾಂತ್ರಿಕ ಮತ್ತು ಸೈನಿಕ ಮಟ್ಟದ ಯಾಂತ್ರಿಕ ವ್ಯವಸ್ಥೆ ಬಳಸಿ ಚರ್ಚೆ ಮುಂದುವರಿಸಲು ಒಪ್ಪಿಕೊಂಡಿವೆ.

Update: 2025-10-29 08:07 GMT

ಭಾರತ ಮತ್ತು ಚೀನಾದ ಸೇನೆಯು "ಪ್ರಮುಖ ಒಮ್ಮತ"ಕ್ಕೆ ತಲುಪಿತು, ಎರಡೂ ಕಡೆಯವರು ಮುಂದುವರಿಯಲು ಒಪ್ಪಿಕೊಂಡರು.

Click the Play button to listen to article

ಲಡಾಖ್ ಗಡಿಯಲ್ಲಿ ಶಾಂತಿ ಹಾಗೂ ಸ್ಥಿರತೆ ಕಾಯ್ದುಕೊಳ್ಳುವ ಸಲುವಾಗಿ ಬುಧವಾರ ಭಾರತ-ಚೀನಾ ಸೇನಾ ಅಧಿಕಾರಿಗಳ ಉನ್ನತ ಮಟ್ಟದ ಮಾತುಕತೆ ನಡೆಯಿತು. ಉಭಯ ರಾಷ್ಟ್ರಗಳು ಹಂತ ಹಂತವಾಗಿ ವಿವಾದ ಇತ್ಯರ್ಥಕ್ಕೆ ರಾಜತಾಂತ್ರಿಕ ಮತ್ತು ಸೈನಿಕ ಮಟ್ಟದ ಯಾಂತ್ರಿಕ ವ್ಯವಸ್ಥೆ ಬಳಸಿಕೊಳ್ಳಲು ಪರಸ್ಪರ ಒಪ್ಪಿಕೊಂಡಿವೆ ಎಂದು ಚೀನಾ ರಕ್ಷಣಾ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಅ.25ರಂದು ಭಾರತದ ಭಾಗದಲ್ಲಿರುವ ಮಲ್ಡೋ-ಚುಶುಲ್ ಕೇಂದ್ರದಲ್ಲಿ 23ನೇ ಹಂತದ ಕಾರ್ಪ್ಸ್ ಕಮಾಂಡರ್‌ ಮಟ್ಟದ ಚರ್ಚೆ ನಡೆದಿತ್ತು. ಚರ್ಚೆಯ ವೇಳೆ ಪಶ್ಚಿಮ ಭಾಗದ ಚೀನಾ-ಭಾರತ ಗಡಿ ನಿರ್ವಹಣೆಯ ಕುರಿತು ಉಭಯ ಕಡೆಯವರು ಸಕ್ರಿಯ ಹಾಗೂ ಆಳವಾದ ಸಂವಾದ ನಡೆಸಿದ್ದವು ಎಂದು ಹೇಳಿದೆ. ಆದರೆ, ಈ ಮಾತುಕತೆ ಕುರಿತು ಭಾರತೀಯ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿರಲಿಲ್ಲ.

ಸಂವಾದ ಮುಂದುವರಿಸಲು ಒಪ್ಪಂದ

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ  ಜಿನ್‌ಪಿಂಗ್ ಮಾರ್ಗದರ್ಶನದಲ್ಲಿ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಹಾಗೂ ಸೈನಿಕ ಮಟ್ಟದ ಸಂವಾದ ಮುಂದುವರಿಸಲು ಒಪ್ಪಿಕೊಂಡಿವೆ. ಉಭಯ ಪಕ್ಷಗಳು ಗಡಿಯಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು ನಾಯಕರ ಮಹತ್ವದ ಒಪ್ಪಂದದ ಅನುಸರಣೆಯಂತೆ ಸಂವಾದ ಹಾಗೂ ಸಂವಹನ ಮುಂದುವರಿಸಲು ಒಪ್ಪಿಕೊಂಡಿವೆ ಎಂದು ಚೀನಾ ರಕ್ಷಣಾ ಸಚಿವಾಲಯ ಹೇಳಿದೆ.

ಗಲ್ವಾನ್ ಘಟನೆ ನಂತರದ ಬದಲಾವಣೆ

2020ರಲ್ಲಿ ಗಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಗಡಿಯಲ್ಲಿ ತೀವ್ರ ಸಂಘರ್ಷವಾಗಿತ್ತು. ಎರಡೂ ಕಡೆಯ ಸೈನಿಕರ ಜೀವಹಾನಿಯಾಗಿತ್ತು. ಇದರಿಂದ ದ್ವಿಪಕ್ಷೀಯ ಸಂಬಂಧಗಳು ಹದಗೆಟ್ಟಿದ್ದವು. ಆದರೆ, 2024ರಲ್ಲಿ ಕಝಾನ್‌ನಲ್ಲಿ ನಡೆದ 16ನೇ ಬ್ರಿಕ್ಸ್ ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭೇಟಿಯಾದ ಬಳಿಕ ದ್ವಿಪಕ್ಷೀಯ ಸಂಬಂಧಗಳಿಗೆ ಮರುಜೀವ ಬಂದಿತ್ತು. ಆಗಸ್ಟ್‌ನಲ್ಲಿ ಉಭಯ ರಾಷ್ಟ್ರಗಳು ಗಡಿ ವಿಷಯದ ಕುರಿತು 24ನೇ ಹಂತದ ವಿಶೇಷ ಪ್ರತಿನಿಧಿಗಳ ಸಂವಾದ ನಡೆಸಿ, ಪ್ರಮುಖ ಒಪ್ಪಂದಗಳಿಗೆ ಬಂದಿದ್ದವು.

“ವರ್ಕಿಂಗ್ ಮೆಕ್ಯಾನಿಸಂ ಫಾರ್ ಕನ್ಸಲ್ಟೇಶನ್ ಅಂಡ್ ಕೋಆರ್ಡಿನೇಶನ್ ಆನ್ ಇಂಡಿಯಾ-ಚೀನಾ ಬಾರ್ಡರ್ ಅಫೇರ್ಸ್” (WMCC) ಅಡಿ ಕಾರ್ಯದಳ ರಚನೆ ಸೇರಿದಂತೆ ಗಡಿ ನಿರ್ವಹಣೆ ಬಲಪಡಿಸುವ ಕ್ರಮಗಳೂ ಸೇರಿದ್ದವು.  

Tags:    

Similar News