ವಿವಿಧ ನಾಯಕರಿಂದ ಆಟದ ತಂತ್ರಗಳನ್ನು ಕಲಿತಿದ್ದೇನೆ: ಸೂರ್ಯಕುಮಾರ್
ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ಶನಿವಾರ ಆರಂಭವಾಗಲಿರುವ ಆತಿಥೇಯ ತಂಡದ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯು ಸೂರ್ಯಕುಮಾರ್ ಯಾದವ್ ಅವರ ಮೊದಲ ನಿಯೋಜನೆಯಾಗಿದೆ.;
ʻತಂಡದ ನಾಯಕ ಆಗಿರದಿದ್ದರೂ, ಮೈದಾನದಲ್ಲಿ ತಂಡ ಮುನ್ನಡೆಸುವುದನ್ನು ಆನಂದಿಸಿದ್ದೇನೆ. ವಿವಿಧ ನಾಯಕರಿಂದ ಆಟದ ಹಲವು ತಂತ್ರಗಳನ್ನು ಕಲಿತಿದ್ದೇನೆ,ʼ ಎಂದು ಭಾರತದ ನೂತನ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಶುಕ್ರವಾರ ಹೇಳಿದರು.
ರೋಹಿತ್ ಶರ್ಮಾ ಅವರ ನಿವೃತ್ತಿ ನಂತರ ಸೂರ್ಯ ಅವರನ್ನು ಕಳೆದ ವಾರ ಭಾರತದ ಟಿ 20 ನಾಯಕರನ್ನಾಗಿ ನೇಮಿಸಲಾಗಿದೆ.
ಆತಿಥೇಯ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಶನಿವಾರ ಪಲ್ಲೆಕೆಲೆಯಲ್ಲಿ ಆರಂಭವಾಗಲಿದೆ. ಈ ಹಿಂದೆ ಅವರು ಏಳು ಟಿ20 ಪಂದ್ಯಗಳಲ್ಲಿ ಭಾರತದ ನಾಯಕರಾಗಿದ್ದರು; ಐದರಲ್ಲಿ ಗೆಲುವು ಮತ್ತು ಎರಡರಲ್ಲಿ ಸೋತರು.
ʻಬೇರೆ ಬೇರೆ ನಾಯಕರಿಂದ ಬಹಳಷ್ಟು ವಿಷಯ ಕಲಿತಿದ್ದೇನೆ. ಇದು ಉತ್ತಮ ಭಾವನೆ ಮತ್ತು ದೊಡ್ಡ ಜವಾಬ್ದಾರಿ,ʼ ಎಂದು ಮಧ್ಯಮ ಕ್ರಮಾಂಕದ ಬ್ಯಾಟರ್ ಬಿಸಿಸಿಐ ಜಾಲತಾಣಕ್ಕೆ ತಿಳಿಸಿದ್ದಾರೆ.
ಸೂರ್ಯಕುಮಾರ್ ಮತ್ತು ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಒಟ್ಟಾಗಿ ಭಾರತೀಯ ಕ್ರಿಕೆಟ್ಟಿನ ಹೊಸ ಯುಗವನ್ನು ಪ್ರಾರಂಭಿಸಲು ಸಜ್ಜಾಗಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ದಿನಗಳಿಂದಲೂ ಸೂರ್ಯಕುಮಾರ್ ಮತ್ತು ಗಂಭೀರ್ 2014ರಿಂದ ಒಟ್ಟಿಗೆ ಆಡಿದ್ದು, ಬಲವಾದ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ. ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ವಿನೂತನ ಹೊಡೆತಗಳಿಗೆ ಹೆಸರುವಾಸಿಯಾದ ಸೂರ್ಯಕುಮಾರ್, ʻಗಂಭೀರ್ ಅವರೊಂದಿಗಿನ ಸಂಬಂಧವು ವಿಶೇಷ ಮತ್ತು ಬಲವಾದದ್ದು,ʼ ಎಂದು ಹೇಳಿದರು.
ʻ2014 ರಲ್ಲಿ ನಾನು ಕೆಕೆಆರ್ ನಲ್ಲಿ ಅವರ ನಾಯಕತ್ವದಲ್ಲಿ ಆಡಿದ್ದೇನೆ. ಅಲ್ಲಿಂದ ನನಗೆ ಅವಕಾಶಗಳು ಬರಲಾರಂಭಿದವು. ಇಬ್ಬರ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ. ಅವರಿಗೆ (ಗಂಭೀರ್) ನಾನು ಹೇಗೆ ಕೆಲಸ ಮಾಡುತ್ತೇನೆ, ಅಭ್ಯಾಸಕ್ಕೆ ಬಂದಾಗ ನನ್ನ ಮನಸ್ಥಿತಿ ಏನು ಎಂದು ನನಗೆ ತಿಳಿದಿದೆ. ಅವರು ಕೋಚ್ ಆಗಿ ಹೇಗೆ ಕೆಲಸ ಮಾಡುತ್ತಾರೆ ಎಂದು ನನಗೆ ತಿಳಿದಿದೆ. ಇದು ನಮ್ಮಲ್ಲಿರುವ ಸುಂದರವಾದ ಸಂಬಂಧ. ಅದು ಹೇಗೆ ಮುಂದುವರಿಯುತ್ತದೆ ಎಂಬುದನ್ನು ನೋಡಲು ಉತ್ಸುಕನಾಗಿದ್ದೇನೆ,ʼ ಎಂದು ಹೇಳಿದರು.
ಮೈದಾನದಲ್ಲಿ ತಂಡವನ್ನು ಮುನ್ನಡೆಸುವಾಗ ವಿನಮ್ರರಾಗಿ ಉಳಿಯಲು ಬಯಸುತ್ತಾರೆ. ಏಕೆಂದರೆ, ಅವರಿಗೆ ಕ್ರಿಕೆಟ್ ಒಂದು ಕ್ರೀಡೆ; ಜೀವನವಲ್ಲ.
ʻಈ ಕ್ರೀಡೆಯಿಂದ ನಾನು ಕಲಿತಿರುವ ಅತ್ಯಂತ ಮುಖ್ಯವಾದ ವಿಷಯ ಎಂದರೆ ನೀವು ಭಾರಿ ಸಾಧನೆ ಮಾಡಿದ ನಂತರ ಅಥವಾ ವಿಫಲವಾದ ಬಳಿಕ ಎಷ್ಟು ವಿನಮ್ರರಾಗಿದ್ದೀರಿ ಎಂಬುದು. ನೀವು ಅಂಕಣದಲ್ಲಿ ಏನನ್ನಾದರೂ ಸಾಧಿಸಿದಾಗ, ಅದನ್ನು ಅಲ್ಲೇ ಬಿಡಬೇಕು ಎಂಬುದನ್ನು ನಾನು ಕಲಿತಿದ್ದೇನೆ,ʼ ಎಂದು ಅವರು ಹೇಳಿದರು.
ʻಆಟ ನಿಮ್ಮ ಜೀವನವಲ್ಲ; ಜೀವನದ ಒಂದು ಭಾಗ. ನೀವು ಉತ್ತಮವಾಗಿ ಆಡುತ್ತಿರುವಾಗ ಮೇಲುಗೈ ಸಾಧಿಸಿರುತ್ತೀರಿ; ವಿಫಲರಾದಾಗ ಕೆಳ ಹಂತದಲ್ಲಿ ಇರುತ್ತೀರಿ. ಇದು ಕ್ರೀಡಾಪಟುವಾಗಿ ನಾನು ಕಲಿತ ಪಾಠ. ಇದು ನನ್ನ ಜೀವನದಲ್ಲಿ ಸಮತೋಲವನ್ನು ಸೃಷ್ಟಿಸಲು ನನಗೆ ಸಹಾ ಯ ಮಾಡುತ್ತಿದೆ. ನೀವು ಒಳ್ಳೆಯ ವ್ಯಕ್ತಿಯಾಗಿದ್ದರೆ, ಎಲ್ಲವೂ ಚೆನ್ನಾಗಿ ನಡೆಯುತ್ತದೆ,ʼ ಎಂದು ಹೇಳಿದರು.