Rahul Gandhi: ಮಾನನಷ್ಟ ಪ್ರಕರಣ: ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್‌ನಿಂದ ಸಮಾಧಾನ
Rahul Gandhi:2018ರಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂಬ ಆರೋಪದ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸದಂತೆ ಕೋರ್ಟ್ ಆದೇಶ ನೀಡಿದೆ.;
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಲೋಕಸಭೆಯಲ್ಲಿ ಪ್ರತಿಪಕ್ಷಗಳ ನಾಯಕ ರಾಹುಲ್ ಗಾಂಧಿ ವಿರುದ್ಧ ಜಾರ್ಖಂಡ್ ನ್ಯಾಯಾಲಯದಲ್ಲಿ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಹೀಗಾಗಿ ಕಾಂಗ್ರೆಸ್ ನಾಯಕನಿಗೆ ಅಲ್ಪ ಪ್ರಮಾಣದ ಸಮಾಧಾನ ದೊರಕಿದೆ. ರಾಹುಲ್ ಗಾಂಧಿ 2018ರಲ್ಲಿ ಹೇಳಿಕೆ ನೀಡಿದ್ದರು ಹಾಗೂ ಆ ವೇಳೆ ಅಮಿತ್ ಶಾ ಬಿಜೆಪಿ ಅಧ್ಯಕ್ಷರಾಗಿದ್ದರು.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ನ್ಯಾಯಪೀಠವು ಜಾರ್ಖಂಡ್ ಸರ್ಕಾರ ಮತ್ತು ದೂರುದಾರ ಬಿಜೆಪಿ ನಾಯಕ ನವೀನ್ ಝಾ ಅವರಿಗೆ ನೋಟಿಸ್ ಕೊಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವಾರಗಳಲ್ಲಿ ತಮ್ಮ ಉತ್ತರಗಳನ್ನು ಸಲ್ಲಿಸುವಂತೆ ಅವರಿಗೆ ಸೂಚಿಸಲಾಗಿದೆ. ಆರು ವಾರಗಳ ಬಳಿಕ ಮತ್ತೆ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ.
ಜಾರ್ಖಂಡ್‌ನ ಚೈಬಾಸಾದ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯುತ್ತಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಮಧ್ಯಂತರ ಆದೇಶವನ್ನು ಹೊರಡಿಸಿದೆ.
ಈ ಪ್ರಕರಣದಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯವು ರಾಹುಲ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಈ ಪ್ರಕರಣವನ್ನು ರದ್ದುಗೊಳಿಸುವಂತೆ ರಾಹುಲ್ ಗಾಂಧಿ ಜಾರ್ಖಂಡ್ ಹೈಕೋರ್ಟ್ ಅನ್ನು ಕೋರಿದ್ದರು, ಆ ನ್ಯಾಯಾಲಯ ಮಧ್ಯಪ್ರವೇಶ ಮಾಡಲು ನಿರಾಕರಿಸಿತ್ತು.
ರಾಹುಲ್ ಗಾಂಧಿ ಅವರನ್ನು ಪ್ರತಿನಿಧಿಸುವ ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಾಡಿ, ಹೇಳಿಕೆಯಿಂದ ನಷ್ಟವಾದ ವ್ಯಕ್ತಿ ಮಾತ್ರ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಬಹುದು ಎಂದು ಹಿಂದಿನ ಪ್ರಕರಣವನ್ನು ಉಲ್ಲೇಖಿಸಿದರು. ಮೂರನೇ ವ್ಯಕ್ತಿ ದೂರು ದಾಖಲಿಸುವಂತಿಲ್ಲ ಎಂದು ಹೇಳಿದರು.