ಭಾವಿ ಪತಿಯ ಕೊಂದ ಶುಭಾ ಸೇರಿದಂತೆ ನಾಲ್ವರಿಗೆ 'ಹೊಸ ಜೀವನದ' ಅವಕಾಶ ನೀಡಿದ ಸುಪ್ರೀಂ ಕೋರ್ಟ್; ಇದು ಅಪರೂಪದ ತೀರ್ಪು
ಇದು ಕರ್ನಾಟಕವನ್ನು ದಶಕಗಳ ಹಿಂದೆ ತಲ್ಲಣಗೊಳಿಸಿದ್ದ ಪ್ರಕರಣ. 2003ರಲ್ಲಿ ಶುಭಾ ಶಂಕರ್ ತನ್ನ ಭಾವಿ ಪತಿ ಗಿರೀಶ್‌ನನ್ನು ತನ್ನ ಗೆಳೆಯ ಅರುಣ್ ಮತ್ತು ಇತರ ಇಬ್ಬರ ಸಹಾಯದಿಂದ ಕೊಲೆ ಮಾಡಿದ್ದಳು.;
ಭಾರತೀಯ ನ್ಯಾಯವ್ಯವಸ್ಥೆಯಲ್ಲಿ ಅಪರೂಪದ ತೀರ್ಪೊಂದನ್ನು ಸೋಮವಾರ ಸುಪ್ರೀಂ ಕೋರ್ಟ್ ನೀಡಿದೆ. ತನ್ನ ಭಾವಿ ಪತಿಯ ಕೊಲೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿದ್ದ ಬೆಂಗಳೂರಿನ ಶುಭಾ ಶಂಕರ್, ಆಕೆಯ ಗೆಳೆಯ ಅರುಣ್ ಹಾಗೂ ಇತರ ಇಬ್ಬರಾದ ದಿನಕರನ್ ಮತ್ತು ವೆಂಕಟೇಶ್ ಅವರ ಜೀವಾವಧಿ ಶಿಕ್ಷೆಗೆ ಸೋಮವಾರ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಇದೇ ವೇಳೆ, ಕರ್ನಾಟಕ ಹೈಕೋರ್ಟ್ ಈ ಹಂತಕರಿಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿರುವ ಸರ್ವೋಚ್ಚ ನ್ಯಾಯಾಲಯ, ಅವರ ಬಂಧನಕ್ಕೆ ತಡೆಯೊಡ್ಡಿ, ಕರ್ನಾಟಕದ ರಾಜ್ಯಪಾಲರಿಂದ ಕ್ಷಮಾದಾನ ಪಡೆಯಲು ಈ ನಾಲ್ವರಿಗೂ ಎಂಟು ವಾರಗಳ ಕಾಲಾವಕಾಶ ನೀಡಿದೆ. ಈ ಪ್ರಕರಣವನ್ನು "ಬಂಡಾಯದ ನಿರ್ಧಾರ" ಮತ್ತು "ಪ್ರಣಯದ ಭ್ರಮೆ" ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದು ಕರ್ನಾಟಕವನ್ನು ದಶಕಗಳ ಹಿಂದೆ ತಲ್ಲಣಗೊಳಿಸಿದ್ದ ಪ್ರಕರಣ. 2003ರಲ್ಲಿ ಶುಭಾ ಶಂಕರ್ ತನ್ನ ಭಾವಿ ಪತಿ ಗಿರೀಶ್‌ನನ್ನು ತನ್ನ ಗೆಳೆಯ ಅರುಣ್ ಮತ್ತು ಇತರ ಇಬ್ಬರ ಸಹಾಯದಿಂದ ಕೊಲೆ ಮಾಡಿದ್ದಳು. ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ನಡೆದಿದ್ದ ಈ ಹತ್ಯೆ ಪ್ರಕರಣ ವರ್ಷಗಟ್ಟಲೆ ಚರ್ಚೆಯಾಗುವಂತೆ ಮಾಡಿತ್ತು. ವಿಚಾರಣಾ ನ್ಯಾಯಾಲಯ ಸೇರಿದಂತೆ ಹೈಕೋರ್ಟ್ ತನಕ ಈ ಪ್ರಕರಣದಲ್ಲಿ ಆರೋಪಿಗಳನ್ನು ದೋಷಿಗಳೆಂದು ಪ್ರಕಟಿಸಲಾಗಿದೆ. ಇದೀಗ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆದು ಅಪರೂಪದ ತೀರ್ಪು ಪ್ರಕಟಗೊಂಡಿದೆ.
ಈ ಪ್ರಕರಣವನ್ನು ಮಾನವೀಯ ದೃಷ್ಟಿಕೋನದಿಂದ ನೋಡಿದ ಸುಪ್ರೀಂ ಕೋರ್ಟ್, ಆರೋಪಿಗಳಲ್ಲಿ ಹೆಚ್ಚಿನವರು ಘಟನೆ ನಡೆದಾಗ ಯುವಕರಾಗಿದ್ದರು ಎಂದು ಅಭಿಪ್ರಾಯಪಟ್ಟಿದೆ. ಅಂದು ಮಹಿಳೆಯ ಮೇಲೆ ಅವರ ಕುಟುಂಬ ವಿವಾಹದ ಒತ್ತಡ ಹೇರದಿದ್ದರೆ ನಿರಪರಾಧಿ ಯುವಕನೊಬ್ಬನ ಜೀವ ಉಳಿಯುತ್ತಿತ್ತು ಎಂದು ಅಭಿಪ್ರಾಯಪಟ್ಟಿದೆ. .
"ಕುಟುಂಬದ ಒತ್ತಾಯವು ಆ ಯುವತಿಯ ಧ್ವನಿಯನ್ನು ಅಡಗಿಸಿತು, ಇದು ಆಕೆಯ ಮನಸ್ಸಿನಲ್ಲಿ ತೀವ್ರ ಗೊಂದಲ ಸೃಷ್ಟಿಸಿತು. ಅಲ್ಲಿಗೆ ಮಾನಸಿಕ ಬಂಡಾಯ ಮತ್ತು ಪ್ರಣಯದ ಭಾವನೆಗಳ ಬೆರೆತವು. ಅದು ಒಬ್ಬ ನಿರಪರಾಧಿ ಯುವಕನ ದಾರುಣ ಕೊಲೆಗೆ ಕಾರಣವಾಯಿತು. ಜೊತೆಗೆ ಇತರ ಮೂವರ ಜೀವನವನ್ನೂ ನಾಶಪಡಿಸಿತು," ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
ರಾಜ್ಯಪಾಲರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಲು ಎಂಟು ವಾರಗಳ ಕಾಲಾವಕಾಶ
ಕೋರ್ಟ್ ಈ ಪ್ರಕರಣವನ್ನು ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯದ ಕುಸಿತದ ದೃಷ್ಟಿಕೋನದಿಂದ ಪರಿಗಣಿಸಿ, ಆರೋಪಿಗಳಿಗೆ "ಹೊಸ ಜೀವನದ' ಅವಕಾಶ ನೀಡಲು ಬಯಸಿದೆ. ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಂವಿಧಾನದ 161ನೇ ವಿಧಿಯಡಿ ಕ್ಷಮಾದಾನಕ್ಕಾಗಿ ಅರ್ಜಿ ಸಲ್ಲಿಸಲು ಎಂಟು ವಾರಗಳ ಕಾಲಾವಕಾಶ ನೀಡಿದೆ.
"ಆರೋಪಿಗಳು ಭಾರತ ಸಂವಿಧಾನದ 161ನೇ ವಿಧಿಯಡಿ ಕ್ಷಮಾದಾನಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುತ್ತೇವೆ. ರಾಜ್ಯಪಾಲರು ಈ ಪ್ರಕರಣದ ಸಂದರ್ಭಗಳನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳುವರೆಂದು ನಾವು ಭಾವಿಸುತ್ತೇವೆ," ಎಂದು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ಭವಿಷ್ಯದ ಆಶಾಭಾವ
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಅರವಿಂದ್ ಕುಮಾರ್ ಅವರ ಈ ತೀರ್ಪು ಹಲವು ಮಹತ್ವದ ಅಂಶಗಳನ್ನು ಒಳಗೊಂಡಿದೆ. "ಕುಟುಂಬವು ಯುವತಿಯ ಮಾನಸಿಕ ಸ್ಥಿತಿ ಸಹಾನುಭೂತಿಯಿಂದ ಅರ್ಥೈಸಿದ್ದರೆ ಈ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಆದರೆ, ಆಕೆಯ ಕೃತ್ಯವನ್ನು ಸಮರ್ಥಿಸಲಾಗದು, ಏಕೆಂದರೆ ಇದರಿಂದ ಒಬ್ಬ ನಿರಪರಾಧಿ ಯುವಕನ ಜೀವ ಹೋಯಿತು," ಎಂದು ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಿದೆ.
2003ರಲ್ಲಿ ಘಟನೆ ಸಂಭವಿಸಿದಾಗಿನಿಂದ ದಶಕಗಳು ಕಳೆದಿವೆ. ಆಗ ಯೌವನದ ಉತ್ಸಾಹದಲ್ಲಿ ಈ ಕೃತ್ಯವನ್ನು ಎಸಗಿದ ಆರೋಪಿಗಳು ಈಗ ಮಧ್ಯವಯಸ್ಸಿಗೆ ತಲುಪಿದ್ದಾರೆ. ಆರೋಪಿಗಳಲ್ಲಿ ಇಬ್ಬರು ಯುವಕರಾಗಿದ್ದರು, ಶುಭಾ ಶಂಕರ್ ಕೂಡ ಯೌವನದ ಆರಂಭದಲ್ಲಿದ್ದಳು. ಇನ್ನೊಬ್ಬ ಆರೋಪಿ 28 ವರ್ಷದ ವಿವಾಹಿತನಾಗಿದ್ದು ಆ ವೇಳೆ ಒಂದು ಮಗುವಿನ ತಂದೆಯಾಗಿದ್ದ.
ಕೋರ್ಟ್ ಆರೋಪಿಗಳ ಜೈಲಿನ ವರ್ತನೆಯನ್ನು ತೀರ್ಪಿನ ವೇಳೆ ಉಲ್ಲೇಖಿಸಿದೆ. "ಅವರ ವರ್ತನೆಯಲ್ಲಿ ಯಾವುದೇ ಪ್ರತಿರೋಧಗಳು ಇಲ್ಲ. ಅವರು ಜನ್ಮತಃ ಅಪರಾಧಿಗಳಲ್ಲ, ಆದರೆ ತಪ್ಪು ತೀರ್ಮಾನ ಮತ್ತು ಅಪಾಯಕಾರಿ ಸಾಹಸದಿಂದ ಈ ಘೋರ ಅಪರಾಧಕ್ಕೆ ಒಳಗಾದರು," ಎಂದು ತಿಳಿಸಿದೆ. ಇದೇ ವೇಳೆ, ಶುಭಾ ಶಂಕರ್ ವಿರುದ್ಧದ ಸಾಕ್ಷ್ಯ ನಾಶದ ಆರೋಪದಡಿ (ಸೆಕ್ಷನ್ 201) ಪ್ರತ್ಯೇಕ ಶಿಕ್ಷೆಯನ್ನು ಸಹ ಕೋರ್ಟ್ ಎತ್ತಿಹಿಡಿದಿದೆ.