ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ

2005ರಲ್ಲಿ ಕಾಲ್ಚೆಂಡಾಟಕ್ಕೆ ಪದಾರ್ಪಣೆ ಮಾಡಿದ ಛೆಟ್ರಿ, 94 ಗೋಲು ಗಳಿಸಿದ್ದು ದೇಶದ ಸಾರ್ವಕಾಲಿಕ ಟಾಪ್ ಸ್ಕೋರರ್ ಮತ್ತು ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ. ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ನಂತರ ಗೋಳು ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

Update: 2024-05-16 08:24 GMT
Click the Play button to listen to article

ಭಾರತೀಯ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿಯನ್ನು ಪ್ರಕಟಿಸಿದ್ದಾರೆ. 

ಜೂನ್ 6 ರಂದು ಕೋಲ್ಕತ್ತಾದಲ್ಲಿ ಕುವೈತ್ ವಿರುದ್ಧ ನಡೆಯಲಿರುವ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯ ಅವರ ಕೊನೆಯ ಪಂದ್ಯವಾಗಿರಲಿದ್ದು,ಎರಡು ದಶಕಗಳ ಅದ್ಭುತ ವೃತ್ತಿಜೀವನಕ್ಕೆ ತೆರೆ ಬಿದ್ದಿದೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋ ಮೂಲಕ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. 

ಭಾರತವು ಎ ಗುಂಪಿನಲ್ಲಿ ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಕತಾರ್‌ ಅಗ್ರಸ್ಥಾನದಲ್ಲಿದೆ. ಮಾರ್ಚ್‌ನಲ್ಲಿ ತಮ್ಮ 150 ನೇ ಪಂದ್ಯ ಆಡಿದ್ದ ಅವರು, ಗುವಾಹಟಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಗೋಲು ಗಳಿಸಿದ್ದರು. ಆದರೆ,ಆ ಪಂದ್ಯದಲ್ಲಿ ಭಾರತ 1-2 ಅಂತರದಲ್ಲಿ ಸೋಲು ಅನುಭವಿಸಿತು. 

2005 ರಲ್ಲಿ ಪದಾರ್ಪಣೆ: 2005ರಲ್ಲಿ ಕಾಲ್ಚೆಂಡಾಟಕ್ಕೆ ಪದಾರ್ಪಣೆ ಮಾಡಿದ ಛೆಟ್ರಿ, 94 ಗೋಲು ಗಳಿಸಿದ್ದು ದೇಶದ ಸಾರ್ವಕಾಲಿಕ ಟಾಪ್ ಸ್ಕೋರರ್ ಮತ್ತು ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ. ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ನಂತರ ಗೋಳು ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 

2005 ರಲ್ಲಿ ಪಾಕಿಸ್ತಾನದ ವಿರುದ್ಧದ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಡಿದರು. ಅದನ್ನು ಜೀವನದ ಅತ್ಯುತ್ತಮ ಕ್ಷಣವೆಂದು ಹೇಳುತ್ತಾರೆ. ʻನಾನು ಎಂದಿಗೂ ಮರೆಯದ ದಿನ ಅದು. ಆ ದಿನವನ್ನು ಆಗಾಗ ನೆನಪಿಸಿಕೊಳ್ಳುತ್ತೇನೆ. ಪಂದ್ಯದ ಹಿಂದಿನ ದಿನ ಬೆಳಗ್ಗೆ ಸುಖಿ ಸರ್ (ರಾಷ್ಟ್ರೀಯ ತಂಡದ ಕೋಚ್ ಸುಖ್ವಿಂದರ್ ಸಿಂಗ್) ಬಂದು, ನೀವು ಇಂದು ಆಡಲಿದ್ದೀರಿ ಎಂದು ಹೇಳಿದರು. ನಾನು ನನ್ನ ಜರ್ಸಿಯನ್ನು ತೆಗೆದುಕೊಂಡು, ಅದರ ಮೇಲೆ ಸ್ವಲ್ಪ ಸುಗಂಧ ದ್ರವ್ಯವನ್ನು ಸಿಂಪಡಿಸಿದೆ. ಏಕೆ ಎಂದು ಗೊತ್ತಿಲ್ಲ. 80ನೇ ನಿಮಿಷದಲ್ಲಿ ಚೊಚ್ಚಲ ಗೋಲು ಹೊಡೆದೆ. ಆ ದಿನ ನನ್ನ ಕ್ರೀಡಾ ಪ್ರಯಾಣದ ಅತ್ಯುತ್ತಮ ದಿನಗಳಲ್ಲಿ ಒಂದುʼ ಎಂದು ಸ್ಮರಿಸಿಕೊಂಡರು. 

ಭಾರತೀಯ ಫುಟ್‌ಬಾಲ್‌ನ ಭವಿಷ್ಯ ಕುರಿತು ಮಾತನಾಡಿ,ʻ ದೇಶ ಮುಂದಿನ 9 ಆಟಗಾರರನ್ನು ಹುಡುಕುವ ಸಮಯ ಬಂದಿದೆ. ಈಗಿರುವ ಆಟಗಾರರಲ್ಲಿ ಯಾರೂ ತಮ್ಮ ಕ್ಲಬ್‌ಗಳಿಗೆ ಮುಖ್ಯ ಸ್ಟ್ರೈಕರ್ ಆಗಿ ಆಡುತ್ತಿಲ್ಲ. ಹೀಗಾಗಿ ತಂಡದಲ್ಲಿ ಭಾರಿ ಕೊರತೆಯಿದೆ,ʼ ಎಂದರು.

19 ವರ್ಷಗಳ ಪ್ರಯಾಣ: ಇತ್ತೀಚಿನ ದಿನಗಳಲ್ಲಿ ತಾವು ಕ್ರೀಡಾ ಪ್ರಯಾಣದ ಅಂತ್ಯದಲ್ಲಿದ್ದೇನೆ ಎಂಬ ಭಾವನೆ ಬರುತ್ತಿತ್ತು ಎಂದು ಛೆಟ್ರಿ ಹೇಳಿದರು. ʻಕಳೆದ 19 ವರ್ಷಗಳು ಕರ್ತವ್ಯ, ಒತ್ತಡ ಮತ್ತು ಅಪಾರ ಸಂತೋಷದ ಮಿಶ್ರಣವಾಗಿತ್ತು. ನಾನು ನನ್ನ ಬಗ್ಗೆ ಎಂದಿಗೂ ಯೋಚಿಸಲಿಲ್ಲ. ದೇಶಕ್ಕಾಗಿ ನಾನು ಹಲವು ಪಂದ್ಯಗಳನ್ನು ಆಡಿದ್ದು, ಒಳ್ಳೆಯದು ಅಥವಾ ಕೆಟ್ಟದು, ಎರಡೂ ಆಗಿದೆʼ ಎಂದು ಹೇಳಿದರು. ʻಇದು ನನ್ನ ಕೊನೆಯ ಪಂದ್ಯ ಎಂದಾಗ ಕುಟುಂಬದ ಸದಸ್ಯರು ವಿಭಿನ್ನವಾಗಿ ಪ್ರತಿಕ್ರಿಯಿಸಿದರು. ನನ್ನ ತಂದೆ ನಿರಾಳವಾದರು. ಆದರೆ, ತಾಯಿ ಮತ್ತು ನನ್ನ ಹೆಂಡತಿ ಅಳಲು ಪ್ರಾರಂಭಿಸಿದರು. ತಾವು ಏಕೆ ಅಳುತ್ತಿದ್ದೇವೆ ಎಂದು ಅವರು ಹೇಳಲಿಲ್ಲ. ನಾನು ಸುಸ್ತಾಗಿದ್ದೇನೆ ಎಂದಲ್ಲʼ ಎಂದು ಹೇಳಿದರು.

ಹಲವು ಸಾಧನೆಗಳು: ಛೆಟ್ರಿ ನೆಹರು ಕಪ್ (2007, 2009, 2012) ಮತ್ತು ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (ಎಸ್‌ಎಎಫ್‌ಎಫ್‌) ಚಾಂಪಿಯನ್‌ಶಿಪ್ (2011, 2015, 2021) ಗೆಲುವು ಹಾಗೂ 2008 ರ ಎಎಫ್‌ಸಿ ಚಾಲೆಂಜ್ ಕಪ್ ಗೆಲುವಿನಲ್ಲಿಯೂ ಪಾತ್ರ ವಹಿಸಿದ್ದರು. 2002 ರಲ್ಲಿ ಮೋಹನ್ ಬಗಾನ್‌ ಕ್ಲಬ್‌ಗೆ ಪದಾರ್ಪಣೆ ಮಾಡಿದ ಸಿಕಂದರಾಬಾದ್ ಮೂಲದ ಫುಟ್‌ಬಾಲ್ ಆಟಗಾರ, 2010 ರಲ್ಲಿ ಅಮೆರಿಕದ ಕಾನ್ಸಾಸ್ ಸಿಟಿ ವಿಜರ್ಡ್ಸ್‌ ಮತ್ತು 2012ರಲ್ಲಿ ಪೋರ್ಚುಗೀಸ್ ಫುಟ್‌ಬಾಲ್ ಲೀಗ್‌ನಲ್ಲಿ ಸ್ಪೋರ್ಟಿಂಗ್ ಸಿಪಿ ತಂಡಕ್ಕೆ ಆಡಿದ್ದಾರೆ. 

ಈಸ್ಟ್ ಬೆಂಗಾಲ್ (2008-2009), ಡೆಂಪೊ (2009-2010), ಮತ್ತು ಇಂಡಿಯನ್ ಸೂಪರ್ ಲೀಗ್ ತಂಡಗಳಾದ ಮುಂಬೈ ಸಿಟಿ ಎಫ್‌ಸಿ (2015-2016) ಮತ್ತು ಬೆಂಗಳೂರು ಎಫ್‌ಸಿಯಂತಹ ಪ್ರಮುಖ ಭಾರತೀಯ ಕ್ಲಬ್‌ಗಳನ್ನು ಪ್ರತಿನಿಧಿಸಿದ್ದಾರೆ. ಬೆಂಗಳೂರು ಎಫ್‌ಸಿಯಲ್ಲಿ ಹೆಚ್ಚು ಯಶಸ್ಸು ಗಳಿಸಿದ್ದಾರೆ. 2016 ರಲ್ಲಿ ಎಎಫ್‌ಸಿ ಕಪ್ ಫೈನಲ್‌ಗೆ ಬೆಂಗಳೂರು ಎಫ್‌ಸಿಯನ್ನು ಮುನ್ನಡೆಸಿದರು.

ಏಳು ಬಾರಿ ಎಐಎಫ್‌ಎಫ್‌ ವರ್ಷದ ಆಟಗಾರ ಪ್ರಶಸ್ತಿ ವಿಜೇತರಾದ ಅವರನ್ನು ಗುವಾಹಟಿಯಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಸನ್ಮಾನಿಸಲಾಯಿತು.

Tags:    

Similar News