ಸಂಭಾಲ್‌ನಲ್ಲಿ ಮಸೀದಿ ಸಮೀಕ್ಷೆ ವೇಳೆ ಕಲ್ಲುತೂರಾಟ; 10 ಮಂದಿ ಬಂಧನ
ಕಳೆದ ಮಂಗಳವಾರ ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ಜಾಮಾ ಮಸೀದಿಯನ್ನು ಸಮೀಕ್ಷೆ ಮಾಡಲಾಗಿತ್ತು. ಹೀಗಾಗಿ ಕಳೆದ ಕೆಲವು ದಿನಗಳಿಂದ ಸಂಭಾಲ್‌ನಲ್ಲಿ ಉದ್ವಿಗ್ನತೆ ಉಂಟಾಗಿತ್ತು.;
ಪ್ರಾಚೀನ ಹಿಂದೂ ದೇವಾಲಯದ ಸ್ಥಳವೆಂದು ಹೇಳಲಾಗುವ ಮೊಘಲ್ ಯುಗದ ಮಸೀದಿಯೊಂದರ ಎರಡನೇ ಹಂತದ ಸಮೀಕ್ಷೆಯ ವೇಳೆ ಗಲಾಟೆ ನಡೆದಿದ್ದು ಅಧಿಕಾರಿಗಳ ಮೇಳೆ ಕಲ್ಲು ತೂರಾಟ ನಡೆಸಿದ ಘಟನೆ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದಿದೆ. ಗಲಭೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ರವಿವಾರ ಸ್ಥಳೀಯರಿಂದ ಅಶ್ರುವಾಯು ಸಿಡಿಸಿ ಅವರನ್ನು ಚದುರಿಸಿದ್ದಾರೆ.
ಹಿಂಸಾಚಾರದ ಹಿನ್ನೆಲೆಯಲ್ಲಿ ಹತ್ತು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ತನಿಖೆ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಕೆಲವರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕೆಲವು ಮೋಟಾರ್ ಸೈಕಲ್ ಗಳಿಗೆ ಬೆಂಕಿ ಹಚ್ಚಲು ಸಹ ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮಂಗಳವಾರ ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ಜಾಮಾ ಮಸೀದಿಯನ್ನು ಸಮೀಕ್ಷೆ ಮಾಡಲಾಗಿತ್ತು. ಹೀಗಾಗಿ ಕಳೆದ ಕೆಲವು ದಿನಗಳಿಂದ ಸಂಭಾಲ್‌ನಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಸ್ಥಳೀಯ ಆಡಳಿತದ ಪ್ರಕಾರ, ವಿವಾದಿತ ಸ್ಥಳದ ಬಗ್ಗೆ ನ್ಯಾಯಾಲಯದ ಆದೇಶದ ಪರಿಶೀಲನೆಯ ಭಾಗವಾಗಿ "ಅಡ್ವೊಕೇಟ್ ಕಮಿಷನರ್" ನಡೆಸಿದ ಎರಡನೇ ಸಮೀಕ್ಷೆಯು ಬೆಳಿಗ್ಗೆ 7 ಗಂಟೆ ಸುಮಾರಿಗೆ ಪ್ರಾರಂಭವಾಯಿತು. ಈ ವೇಳೆ ಜನರು ಜಮಾಯಿಸಿದ್ದರು.
"ಗುಂಪಿನಲ್ಲಿದ್ದ ಕೆಲವು ದುಷ್ಕರ್ಮಿಗಳು ಪೊಲೀಸ್ ತಂಡದ ಮೇಲೆ ಕಲ್ಲು ತೂರಾಟ ನಡೆಸಿದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಸಣ್ಣ ಬಲ ಮತ್ತು ಅಶ್ರುವಾಯು ಬಳಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಕುಮಾರ್ ವಿಷ್ಣೋಯ್ ತಿಳಿಸಿದ್ದಾರೆ.
ಕಲ್ಲು ತೂರಾಟದಲ್ಲಿ ತೊಡಗಿರುವವರನ್ನು ಮತ್ತು ಅವರನ್ನು ಪ್ರಚೋದಿಸಿದವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
"ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಆದರೆ ಪರಿಸ್ಥಿತಿ ಈಗ ಶಾಂತಿಯುತವಾಗಿದೆ ಮತ್ತು ಸಮೀಕ್ಷೆ ನಡೆಯುತ್ತಿದೆ" ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪೆಸಿಯಾ ಹೇಳಿದ್ದಾರೆ. "ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಸುಮಾರು 10 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರನ್ನು ವಿಚಾರಣೆ ನಡೆಸಲಾಗುತ್ತಿದೆ" ಎಂದು ಅವರು ಹೇಳಿದರು.
ಸಂಭಾಲ್‌ನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ ಪ್ರಶಾಂತ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
"ನಾವು ಎಲ್ಲವನ್ನೂ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಎಲ್ಲಾ ಪೊಲೀಸ್ ಮತ್ತು ನಾಗರಿಕ ಆಡಳಿತದ ಅಧಿಕಾರಿಗಳು ಸ್ಥಳದಲ್ಲೇ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಅವರು ಆ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಸಮಾಜ ವಿರೋಧಿ ಶಕ್ತಿಗಳನ್ನು ಶೀಘ್ರದಲ್ಲೇ ಗುರುತಿಸಲಾಗುವುದು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ತಿಳಿಸಿದ್ದಾರೆ.
ಕಲ್ಲು ತೂರಾಟದ ವಿಡಿಯೊ ವೈರಲ್
ಸಂಭಾಲ್‌ನಲ್ಲಿ ಸಮೀಕ್ಷೆ ನಡೆದ ಸ್ಥಳದ ಬಳಿ ಯುವಕರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುತ್ತಿರುವ ವೀಡಿಯೊಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ.
ಈ ಪ್ರಕರಣದಲ್ಲಿ ಅರ್ಜಿದಾರರಾಗಿರುವ ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್, ಮಸೀದಿಯ ಸಮೀಕ್ಷೆಗಾಗಿ "ಅಡ್ವೊಕೇಟ್ ಕಮಿಷನ್" ರಚಿಸಲು ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ (ಹಿರಿಯ ವಿಭಾಗ) ಆದೇಶಿಸಿದೆ ಎಂದು ಹೇಳಿದ್ದರು.
ವಿಡಿಯೋಗ್ರಫಿ ಮತ್ತು ಛಾಯಾಗ್ರಹಣ ಸಮೀಕ್ಷೆ ನಡೆಸಿದ ನಂತರ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ ಎಂದು ಅವರು ಹೇಳಿದರು. ಮಸೀದಿಗೆ ಸಂಬಂಧಿಸಿದ ಅರ್ಜಿಯಲ್ಲಿ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳು, ಮಸೀದಿ ಸಮಿತಿ ಮತ್ತು ಸಂಭಾಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಕಕ್ಷಿದಾರರನ್ನಾಗಿ ಮಾಡಲಾಗಿದೆ ಎಂದು ಜೈನ್ ಕಳೆದ ಮಂಗಳವಾರ ಹೇಳಿದ್ದರು.
ಜ್ಞಾನವಾಪಿ ಮಸೀದಿ-ಕಾಶಿ ವಿಶ್ವನಾಥ ದೇವಾಲಯ ವಿವಾದ ಸೇರಿದಂತೆ ಪೂಜಾ ಸ್ಥಳಗಳಿಗೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ವಿಷ್ಣು ಶಂಕರ್ ಜೈನ್ ಮತ್ತು ಅವರ ತಂದೆ ಹರಿಶಂಕರ್ ಜೈನ್ ಹಿಂದೂ ಮುಖಂಡರನ್ನು ಪ್ರತಿನಿಧಿಸಿದ್ದಾರೆ. ಹಿಂದೂ ಕಡೆಯ ಸ್ಥಳೀಯ ವಕೀಲ ಗೋಪಾಲ್ ಶರ್ಮಾ ಅವರು ಶುಕ್ರವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, "ಬಾಬರ್‌ನಾಮಾ" ಮತ್ತು "ಐನ್-ಎ-ಅಕ್ಬರಿ" ಈಗ ಜಾಮಾ ಮಸೀದಿ ಇರುವ ಸ್ಥಳದಲ್ಲಿ ಹರಿಹರ ದೇವಾಲಯವಿತ್ತು ಎಂದು ವಾದಿಸಿದ್ದಾರೆ .
1529 ರಲ್ಲಿ ಮೊಘಲ್ ಚಕ್ರವರ್ತಿ ಬಾಬರ್ ಈ ದೇವಾಲಯವನ್ನು ನೆಲಸಮಗೊಳಿಸಿದ್ದ ಎಂದು ಅವರು ಹೇಳಿದ್ದಾರೆ.
ಸಮಾಜವಾದಿ ಪಕ್ಷದ (ಎಸ್ಪಿ) ಸಂಸದ ಜಿಯಾ ಉರ್ ರೆಹಮಾನ್ ಬಾರ್ಕ್ ಈ ಬೆಳವಣಿಗೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. "ಸಂಭಾಲ್‌ನ ಜಾಮಾ ಮಸೀದಿ ಐತಿಹಾಸಿಕ ಮತ್ತು ಬಹಳ ಹಳೆಯದು. 1947ರಿಂದ ಯಾವುದೇ ಸ್ಥಿತಿಯಲ್ಲಿರುವ ಧಾರ್ಮಿಕ ಸ್ಥಳಗಳು ತಮ್ಮ ಸ್ಥಳದಲ್ಲಿಯೇ ಇರುತ್ತವೆ ಎಂದು ಸುಪ್ರೀಂ ಕೋರ್ಟ್ 1991ರಲ್ಲಿ ಆದೇಶ ನೀಡಿತ್ತು,ʼʼ ಎಂದು ಹೇಳಿದ್ದಾರೆ
ಈ ಪ್ರಕರಣದ ಮುಂದಿನ ವಿಚಾರಣೆ ಜನವರಿ 29 ರಂದು ನಡೆಯಲಿದೆ.