Uniform Civil Code: ಉತ್ತರಾಖಂಡದಲ್ಲಿ ಇಂದಿನಿಂದ ಏಕರೂಪ ನಾಗರಿಕ ಸಂಹಿತೆ ಜಾರಿ

Uniform Civil Code : ಕಾಯ್ದೆಯ ನಿಯಮಗಳ ಅನುಮೋದನೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ತರಬೇತಿ ಸೇರಿದಂತೆ ಯುಸಿಸಿ ಜಾರಿಗೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.;

Update: 2025-01-27 06:19 GMT

ಉತ್ತರಾಖಂಡ ಸರ್ಕಾರವು ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿ ಮಾಡಿದೆ. ಈ ಕಾಯ್ದೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಯುಸಿಸಿ ಅನುಷ್ಠಾನದಿಂದ ಜಾತಿ, ಧರ್ಮ, ಲಿಂಗ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡುವ ವೈಯಕ್ತಿಕ ನಾಗರಿಕ ವಿಷಯಗಳಿಗೆ ಸಂಬಂಧಿಸಿದ ಎಲ್ಲ ಕಾನೂನುಗಳಲ್ಲಿ ಏಕರೂಪಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.

ಕಾಯ್ದೆಯ ನಿಯಮಗಳ ಅನುಮೋದನೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ತರಬೇತಿ ಸೇರಿದಂತೆ ಯುಸಿಸಿ ಜಾರಿಗೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

‘ರಾಜ್ಯದ ನಾಗರಿಕರೇ 2025ರ ಜನವರಿ 27ರಿಂದ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಬರಲಿದೆ. ಈ ಕಾನೂನು ಜಾರಿಗೆ ತರುತ್ತಿರುವ ಸ್ವತಂತ್ರ ಭಾರತದ ಮೊದಲ ರಾಜ್ಯವಾಗಿದೆ. ಯುಸಿಸಿ ಕಾರ್ಯಗತಗೊಳಿಸಲು ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಕಾಯ್ದೆಯ ನಿಯಮಗಳ ಅನುಮೋದನೆ ಮತ್ತು ಸಂಬಂಧಿತ ಅಧಿಕಾರಿಗಳ ತರಬೇತಿ ಪೂರ್ಣಗೊಳಿಸಲಾಗಿದೆ. ಈ ಕಾಯ್ದೆ ಸಮಾಜದಲ್ಲಿ ಏಕರೂಪತೆಯನ್ನು ತರುತ್ತದೆ ಮತ್ತು ಸಮಾನ ಹಕ್ಕುಗಳನ್ನು ಖಚಿತಪಡಿಸುತ್ತದೆ. ಏಕರೂಪ ನಾಗರಿಕ ಸಂಹಿತೆಯ ಅಡಿಯಲ್ಲಿ ದೇಶವನ್ನು ಅಭಿವೃದ್ಧಿ ಹೊಂದಿದ, ಸಂಘಟಿತ, ಸಾಮರಸ್ಯ ಮತ್ತು ಸ್ವಾವಲಂಬಿ ರಾಷ್ಟ್ರವನ್ನಾಗಿ ಮಾಡಲು ಪ್ರಧಾನಿ ಮೋದಿ ಮಾಡುತ್ತಿರುವ ಶ್ರಮಕ್ಕೆ ಇದು ಕೊಡುಗೆಯಾಗಿದೆ. ಜಾತಿ, ಧರ್ಮ, ಲಿಂಗ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯ ಮಾಡುವ ವೈಯಕ್ತಿಕ ನಾಗರಿಕ ವಿಷಯಗಳಿಗೆ ಸಂಬಂಧಿಸಿದ ಎಲ್ಲ ಕಾನೂನುಗಳಲ್ಲಿ ಏಕರೂಪತೆಯನ್ನು ತರುತ್ತದೆ’ಎಂದು ಧಾಮಿ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಶನಿವಾರ ಈ ಬಗ್ಗೆ ಮಾತನಾಡಿದ್ದ ಸಿಎಂ ಧಾಮಿ, ಭಾರತೀಯ ಜನತಾ ಪಕ್ಷ 2022ರ ವಿಧಾನಸಭೆ ಚುನಾವಣೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿದೆ ಎಂದು ಹೇಳಿದ್ದಾರೆ.

ಸಂವಿಧಾನದ 44ನೇ ವಿಧಿಯನ್ನು ಉಲ್ಲೇಖಿಸಿದ್ದ ಅವರು, ಆ ವಿಧಿಯು ದೇಶದಾದ್ಯಂತ ನಾಗರಿಕರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸುತ್ತದೆ ಎಂದಿದ್ದರು.

Tags:    

Similar News