ಯಾವುದೇ ಯಾಗ, ಪ್ರಾಣಿ ಬಲಿ ನಡೆದಿಲ್ಲ: ಡಿಕೆಶಿ ಆರೋಪ ತಳ್ಳಿ ಹಾಕಿದ ಕೇರಳ ಸರ್ಕಾರ
ಶತ್ರು ಭೈರವಿಯಂಥ ಯಾವುದೇ ಯಾಗ ನಡೆದಿಲ್ಲ, ಪ್ರಾಣಿ ಬಲಿ ನೀಡಲಾಗಿಲ್ಲ ಎಂದು ಕೇರಳ ಸರ್ಕಾರ ಸ್ಪಷ್ಟನೆ ನೀಡಿದೆ.;
ʼನನ್ನ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಮ್ಮ ಸರ್ಕಾರದ ವಿರುದ್ಧ ಕೇರಳದಲ್ಲಿ ಶತ್ರು ಭೈರವಿ ಯಾಗ ನಡೆದಿದೆʼ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಸಂಬಂಧಿಸಿದಂತೆ ಕೇರಳ ಸರ್ಕಾರ ತನಿಖೆ ನಡೆಸಿದ್ದು, ಅಂಥ ಯಾವುದೇ ಯಾಗ ನಡೆದಿಲ್ಲ, ಪ್ರಾಣಿ ಬಲಿ ನೀಡಲಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಕೇರಳ ರಾಜ್ಯ ಗುಪ್ತಚರ ಹಾಗೂ ಪೊಲೀಸ್ ಇಲಾಖೆ ಈ ಕುರಿತು ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಲಾಗಿದೆ. ಕೇರಳ ರಾಜ್ಯದ ಕಣ್ಣೂರು, ತಳಿಪರಂಬ ಭಾಗದಲ್ಲಿ ಈ ಕುರಿತು ಪೊಲೀಸರು ತನಿಖೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ವಿಶೇಷ ತನಿಖಾ ತಂಡ, ತನಿಖೆಯ ಸಮಗ್ರ ಮಾಹಿತಿ ಒಳಗೊಂಡ ವರದಿಯನ್ನು ಕೇರಳ ಡಿಜಿಪಿಗೆ ಸಲ್ಲಿಸಿದೆ.
ತಳಿಪರಂಬ, ರಾಜರಾಜೇಶ್ವರಂ ಹಾಗೂ ಕಣ್ಣೂರು ಸುತ್ತಮುತ್ತ ಪ್ರದೇಶದಲ್ಲಿ ತನಿಖೆ ನಡೆಸಿದ ಕೇರಳ ಟೀಂ, ಅಂಥ ಯಾವುದೇ ಪ್ರಾಣಿ ಬಲಿ ಯಾಗ ನಡೆದಿಲ್ಲ ಎಂದು ಕೇರಳ ಡಿಜಿಪಿಗೆ ವರದಿ ಸಲ್ಲಿಸಿದೆ. ಈ ನಡುವೆ ಕರ್ನಾಟಕ ಪೊಲೀಸ್ ವಿಶೇಷ ತಂಡದಿಂದಲೂ ಗುಪ್ತವಾಗಿ ಮಾಹಿತಿ ಸಂಗ್ರಹ ನಡೆದಿದೆ. ಆದರೆ ಯಾರ ತನಿಖೆಯಲ್ಲೂ ಯಾಗದ ಕುರಿತು ಸುಳಿವು ದೊರೆತಿಲ್ಲ.
ದೇವಸ್ಥಾನ ಆಡಳಿತ ಮಂಡಳಿ ಸ್ಪಷ್ಟನೆ
"ದೇವಸ್ವಂ ಬೋರ್ಡ್ ಅಧೀನದಲ್ಲಿರುವ ಯಾವುದೇ ದೇವಾಲಯಗಳಲ್ಲಿ ಪ್ರಾಣಿ ಬಲಿಯನ್ನು ಒಳಗೊಂಡ ಯಾವುದೇ ಪೂಜೆ ಅಥವಾ ನೈವೇದ್ಯಗಳು ನಡೆದಿಲ್ಲ. ಕೇರಳದ ಮಲಬಾರ್ ದೇವಸ್ವಂ ಬೋರ್ಡ್ ಅಧೀನದಲ್ಲಿರುವ ರಾಜರಾಜೇಶ್ವರಂ ದೇವಸ್ಥಾನದ ಹೆಸರಿನ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಅಸತ್ಯ ಮತ್ತು ದುರದೃಷ್ಟಕರ” ಎಂದು ಅಧಿಕೃತ ಪತ್ರಿಕಾ ಹೇಳಿಕೆ ಮೂಲಕ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಡಿಕೆಶಿ ಆರೋಪ ಏನು?
"ಕೇರಳದಲ್ಲಿ ನನ್ನ ಮುಖ್ಯಮಂತ್ರಿಗಳ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾಗ ಮಾಡಲಾಗುತ್ತಿದೆ. ಕೇರಳದ ರಾಜರಾಜೇಶ್ವರಿ ದೇವಾಲಯದ ಆಸುಪಾಸಿನ ನಿರ್ಜನ ಪ್ರದೇಶದಲ್ಲಿ ಶತ್ರು ಸಂಹಾರ ಉದ್ದೇಶದ ʼರಾಜಕಂಟಕʼ, ʼಮಾರಣ ಮೋಹನ ಸ್ತಂಭನʼ ಯಾಗ ಪ್ರಯೋಗ ನಡೆಸಲಾಗುತ್ತಿದೆ. ಯಾರು ಈ ಯಾಗ ಮಾಡಿಸುತ್ತಿದ್ದಾರೆ ಎಂಬ ವಿವರವನ್ನು ಈ ಯಾಗದಲ್ಲಿ ಪಾಲ್ಗೊಂಡವರೇ ನಮಗೆ ತಿಳಿಸಿದ್ದಾರೆ. ಅಘೋರಿಗಳ ಮೂಲಕ ಈ ಯಾಗ ನಡೆಯುತ್ತಿದೆ. ಇದಕ್ಕಾಗಿ ಪಂಚ ಬಲಿ ನೀಡಲಾಗುತ್ತಿದ್ದು, ಕೆಂಪು ಬಣ್ಣದ 21 ಮೇಕೆ, 3 ಎಮ್ಮೆ, ಕಪ್ಪು ಬಣ್ಣದ 21 ಕುರಿ ಹಾಗೂ 5 ಹಂದಿಗಳ ಬಲಿ ಮೂಲಕ ಈ ಮಾಂತ್ರಿಕಯಾಗ ನಡೆಯುತ್ತಿದೆ. ಅವರ ಪ್ರಯತ್ನ ಅವರು ಮಾಡಲಿ, ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವರವರ ನಂಬಿಕೆ ಅವರದು. ಹೀಗಾಗಿ ಇಂತಹ ಪ್ರಯತ್ನ ಮಾಡುತ್ತಾರೆʼʼ ಎಂದು ಡಿಕೆಶಿ ಆರೋಪಿಸಿದ್ದರು.