ಪ್ರಾರ್ಥನಾ ಸ್ಥಳಗಳ ಸಮೀಕ್ಷೆ; ಮುಂದಿನ ಆದೇಶದವರೆಗೆ ಹೊಸ ದಾವೆಗಳ ನೋಂದಣಿಗೆ ಸುಪ್ರೀಂ ತಡೆ

ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.;

Update: 2024-12-12 11:51 GMT
ಸುಪ್ರೀಂ ಕೋರ್ಟ್​​

ಪ್ರಾರ್ಥನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ, 1991ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಯಾವುದೇ ಹೊಸ ಪ್ರಕರಣಗಳನ್ನು ನೋಂದಾಯಿಸಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಗುರುವಾರ (ಡಿಸೆಂಬರ್ 12) ಆದೇಶಿಸಿದೆ. ಪ್ರಾರ್ಥನಾ ಸ್ಥಳವನ್ನು ಮರಳಿ ಪಡೆಯಲು ಅಥವಾ ಅದರ ಸ್ವರೂಪ ಬದಲಾಯಿಸಲು ಮೊಕದ್ದಮೆ ಹೂಡುವುದನ್ನು ನಿಷೇಧಿಸುವ 1991ರ ಕಾನೂನಿನ ಕೆಲವು ನಿಬಂಧನೆಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ.

"ವಿಷಯ ಈ ನ್ಯಾಯಾಲಯದಲ್ಲಿದೆ. ನಾವು ಪ್ರಕರಣವನ್ನು ಆಲಿಸಿ ವಿಲೇವಾರಿ ಮಾಡುವವರೆಗೆ ಯಾವುದೇ ಮೊಕದ್ದಮೆಗಳನ್ನು ದಾಖಲಿಸಲು ಸಾಧ್ಯವಿಲ್ಲ," ಎಂದು ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ಅರ್ಜಿದಾರರ ವಾದವೇನು?

ಅರ್ಜಿದಾರರಲ್ಲಿ ಒಬ್ಬರಾದ ಅಶ್ವಿನಿ ಉಪಾಧ್ಯಾಯ ಅವರು ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ, 1991 ರ ಸೆಕ್ಷನ್ 2, 3 ಮತ್ತು 4 ತೆಗೆದುಹಾಕಬೇಕು ಎಂದು ಮನವಿ ಮಾಡಿದ್ದರು. ಈ ಸೆಕ್ಷನ್​, ಯಾವುದೇ ವ್ಯಕ್ತಿಯ ಅಥವಾ ಧಾರ್ಮಿಕ ಗುಂಪಿನ ಪೂಜಾ ಸ್ಥಳವನ್ನು ಮರಳಿ ಪಡೆಯುವ ನ್ಯಾಯಾಂಗ ಪರಿಹಾರದ ಹಕ್ಕು ಕಸಿದುಕೊಳ್ಳುತ್ತವೆ ಎಂದು ಅವರು ವಾದಿಸಿದ್ದರು.

ಸಿಪಿಐಎಂನ ಮಹಾರಾಷ್ಟ್ರ ಶಾಸಕ ಜಿತೇಂದ್ರ ಸತೀಶ್ ಅವಾದ್ ಅವರು ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಬಾಕಿ ಇರುವ ಹಲವಾರು ಅರ್ಜಿಗಳ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಈ ಕಾನೂನು ಸಾರ್ವಜನಿಕ ಸುವ್ಯವಸ್ಥೆ, ಭ್ರಾತೃತ್ವ, ಏಕತೆ ಮತ್ತು ರಾಷ್ಟ್ರದ ಜಾತ್ಯತೀತತೆ ರಕ್ಷಿಸುತ್ತದೆ ಎಂದು ಅವರು ವಾದಿಸಿದ್ದಾರೆ.

ಜ್ಞಾನವಾಪಿ, ಶಾಹಿ ಈದ್ಗಾ ಮಸೀದಿಗಳು

ಮುಸ್ಲಿಂ ಸಮುದಾಯದ ಪರ ಕೋರ್ಟ್​ಗೆ ಹಾಜರಾದವರ ಕಡೆಯವರು 1991ರ ಕಾನೂನನ್ನು ಉಲ್ಲೇಖಿಸಿ, ಅಂತಹ ಮೊಕದ್ದಮೆಗಳನ್ನು ನೋಂದಾಯಿಸಿಕೊಳ್ಳಬಾರದು ಎಂದು ವಾದಿಸಿದ್ದಾರೆ.

1991 ರ ಕಾನೂನಿನ ವಿರುದ್ಧ ಮಾಜಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ ಅರ್ಜಿಗಳು ಸೇರಿದಂತೆ ಆರು ಅರ್ಜಿಗಳು ಸುಪ್ರೀಂ ಕೋರ್ಟ್​ ಮುಂದಿದೆ.

ವಾರಣಾಸಿಯ ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿಯ ಮೇಲೆ ಹಿಂದೂಗಳು ಹಕ್ಕು ಸಾಧಿಸಲು ಅವಕಾಶ ಮಾಡಿಕೊಡಬಹುದಾದ ಕೆಲವು ಸೆಕ್ಷನ್​ಗಳನ್ನು ಸುಪ್ರೀಂ ಪರಿಶೀಲಿಸಬೇಕು ಎಂದು ಸುಬ್ರಮಣಿಯನ್​ ಸ್ವಾಮಿ ಬಯಸಿದ್ದಾರೆ. ಅಶ್ವಿನಿ ಉಪಾಧ್ಯಾಯ ಅವರು ಇಡೀ ಕಾನೂನು ಅಸಂವಿಧಾನಿಕ ಎಂದು ಹೇಳಿದ್ದಾರೆ.

ಕಾನೂನಿನ ನಿಬಂಧನೆಗಳು

ರಾಮ ಜನ್ಮಭೂಮಿ-ಬಾಬರಿ ಮಸೀದಿ ಶೀರ್ಷಿಕೆ ಪ್ರಕರಣದಲ್ಲಿ ಐದು ನ್ಯಾಯಾಧೀಶರ ಸಂವಿಧಾನ ಪೀಠದ ತೀರ್ಪನ್ನು ಜಮಿಯತ್ ಉಲೇಮಾ-ಇ-ಹಿಂದ್ ಉಲ್ಲೇಖಿಸಿತ್ತು. ಈ ಪ್ರಕರಣದಲ್ಲಿ ನ್ಯಾಯಪೀಠ ಕಾಯ್ದೆಯನ್ನು ಬದಿಗಿಡಲು ಸಾಧ್ಯವಿಲ್ಲ ಎಂದು ಹೇಳಿತ್ತು.

ಕಾನೂನಿನ ಕೆಲವು ನಿಬಂಧನೆಗಳ ಸಿಂಧುತ್ವ ಪ್ರಶ್ನಿಸಿ ಉಪಾಧ್ಯಾಯ ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್ ಮಾರ್ಚ್ 12, 2022 ರಂದು ಕೇಂದ್ರದ ಪ್ರತಿಕ್ರಿಯೆಯನ್ನು ಕೋರಿತ್ತು

1991ರ ಕಾನೂನು ಯಾವುದೇ ಪೂಜಾ ಸ್ಥಳದ ಬದಲಾವಣೆಯನ್ನು ನಿಷೇಧಿಸುತ್ತದೆ ಮತ್ತು ಆಗಸ್ಟ್ 15, 1947 ರಂದು ಅಸ್ತಿತ್ವದಲ್ಲಿದ್ದ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಗುಣಲಕ್ಷಣವನ್ನು ಕಾಪಾಡಿಕೊಳ್ಳಲು ಅವಕಾಶ ನೀಡುತ್ತದೆ.

ಅಯೋಧ್ಯೆಯ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ಕೇವಲ ಒಂದು ವಿನಾಯಿತಿ ನೀಡಿತ್ತು..

Tags:    

Similar News