Swati Maliwal | ದ್ರೌಪದಿ ವಸ್ತ್ರಾಪಹರಣದ ಚಿತ್ರ ಪೋಸ್ಟ್‌ ಮಾಡಿ ಕೇಜ್ರಿವಾಲ್‌ ಸೋಲಿಗೆ ಪ್ರತಿಕ್ರಿಯಿಸಿದ ಸ್ವಾತಿ ಮಾಲಿವಾಲ್‌

Swati Maliwal: ಆಮ್ ಆದ್ಮಿ ಪಕ್ಷ (AAP) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ್ವೇಶ್‌ ವರ್ಮಾ ವಿರುದ್ಧ ಸೋಲನುಭವಿಸಿದ ಬೆನ್ನಲ್ಲೇ, ಆಪ್ ಸಂಸದೆ ಸ್ವಾತಿ ಮಾಲಿವಾಲ್ ಅವರ ಸೋಶಿಯಲ್‌ ಮೀಡಿಯಾ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ.;

Update: 2025-02-08 10:26 GMT
ಸ್ವಾತಿ ಮಾಲಿವಾಲ್‌ (ಸಂಗ್ರಹ ಚಿತ್ರ)

ನವ ದೆಹಲಿ ಕ್ಷೇತ್ರದಿಂದ ಆಪ್‌ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಸೋತ ತಕ್ಷಣ ರಾಜ್ಯ ಸಭೆ ಸದಸ್ಯೆ ಹಾಗೂ ಡೆಲ್ಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಾಲಿವಾಲ್‌ (Swati Maliwal) ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಒಂದನ್ನು ಮಾಡಿದ್ದಾರೆ. ಯಾರನ್ನೂ ಉದ್ದೇಶಿಸದ ಈ ಪೋಸ್ಟ್‌ನಲ್ಲಿ ಅವರು ಮಹಾಭಾರತದ ದ್ರೌಪದಿ ವಸ್ತ್ರಾಪಹರಣದ ಚಿತ್ರ ಹಾಕಿದ್ದಾರೆ.

ಆಪ್‌ನಲ್ಲಿ ಸಕ್ರಿಯರಾಗಿದ್ದ ಸ್ವಾತಿ ಮಾಲಿವಾಲ್ ಮತ್ತು ಪಕ್ಷದ ನಡುವಿನ ಸಂಬಂಧ 2024ರ ಮೇ ತಿಂಗಳಿಂದ ಹಾಳಾಗಿತ್ತು. ಅವರು ಆಪ್ ಮುಖ್ಯಸ್ಥ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರ ವಿರುದ್ಧ ದೌರ್ಜನ್ಯ ಕೇಸ್‌ ದಾಖಲಿಸಿದ್ದಲ್ಲಿಗೆ ಬಿಗಡಾಯಿಸಿತ್ತು. ದೆಹಲಿ ಮುಖ್ಯಮಂತ್ರಿ ನಿವಾಸದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದರು. ಹೀಗಾಗಿ ಅವರು ಪೋಸ್ಟ್‌ ಮಾಡಿರುವ ಚಿತ್ರ ಆ ಘಟನೆಗೆ ಪ್ರತಿಕ್ರಿಯೆ ಎಂದು ವಿಶ್ಲೇಷಿಸಲಾಗಿದೆ.

ರಾವಣನ ಉಲ್ಲೇಖ

ಮತ್ತೊಂದು ಪೋಸ್ಟ್‌ನಲ್ಲಿ ಮಾಲಿವಾಲ್, “ಅಹಂಕಾರ ಶಕ್ತಿಶಾಲಿ ರಾವಣನನ್ನು ಕೂಡ ಉಳಿಸಿರಲಿಲ್ಲ” ಎಂದು ಬರೆದಿದ್ದಾರೆ.

ರಾಜ್ಯಸಭಾ ಸಂಸದೆಯಾಗಿ, ಮಾಲಿವಾಲ್ ಆಪ್ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದರು. 2024ರ ಅಕ್ಟೋಬರ್‌ನಲ್ಲಿ ಹರಿಯಾಣ ವಿಧಾನಸಭಾ ಚುನಾವಣೆ ವೇಳೆ ಅವರು, ಕೇಜ್ರಿವಾಲ್ ಇಂಡಿಯಾ ಬ್ಲಾಕ್‌ಗೆ ವಂಚನೆ ಮಾಡುತ್ತಿದ್ದಾರೆ ಆರೋಪಿಸಿದ್ದರು. ಕಾಂಗ್ರೆಸ್ ವಿರುದ್ಧವೇ ಕೇಜ್ರಿವಾಲ್ ಪ್ರಚಾರ ಮಾಡಿದ್ದು ಪ್ರತಿಪಕ್ಷಗಳ ಮತ ವಿಭಜನೆಗೆ ಕಾರಣವಾಯಿತು ಎಂದು ದೂರಿದ್ದರು.

"ನಾವು ಇತಿಹಾಸವನ್ನು ಓದಿದರೆ ಗೊತ್ತಾಗುತ್ತದೆ. ಎಲ್ಲಿ ಮಹಿಳೆಗೆ ಅನ್ಯಾಯವಾಗುತ್ತದೋ, ದೇವರು ಅದಕ್ಕೆ ಶಿಕ್ಷೆ ನೀಡಿಯೇ ನೀಡುತ್ತಾನೆ. ಕಲುಷಿತ ನೀರು, ಗಾಳಿ ಮಾಲಿನ್ಯ ಮತ್ತು ಕೆಟ್ಟ ರಸ್ತೆಗಳ ಸ್ಥಿತಿಯಿಂದ ಕೇಜ್ರಿವಾಲ್ ಸೋತಿದ್ದಾರೆ. ಆಪ್, ಜನರಿಗೆ ಸುಳ್ಳು ಹೇಳಿ ಯಾಮಾರಿಸಬಹುದು ಎಂದು ಎಂದುಕೊಂಡಿತ್ತು. ಜನರು ಅದನ್ನು ನಂಬಲಿಲ್ಲ. ಜನರಿಗೆ ತಾವು ಹೇಳಿದ ಹಾಗೆ ಕೆಲಸ ನಡೆಯಬೇಕಾಗಿತ್ತು. ನಾನು ಬಿಜೆಪಿಯನ್ನು ಅಭಿನಂದಿಸುತ್ತೇನೆ. ಜನರು ಉತ್ತಮ ಆಶಯದೊಂದಿಗೆ ಅವರನ್ನು ಆಯ್ಕೆ ಮಾಡಿದ್ದಾರೆ,ʼʼ ಎಂದು ಮಾಲಿವಾಲ್‌ ಸುದ್ದಿ ಸಂಸ್ಥೆಗಳಿಗೆ ಪ್ರತಿಕ್ರಿಯಿಸುತ್ತಾ ಹೇಳಿದ್ದಾರೆ.

ಕೇಜ್ರಿವಾಲ್‌ ಮನೆ ಮುಂದೆ ಕಸ ಸುರಿದಿದ್ದ ಮಾಲಿವಾಸ್‌

ಮಾಲಿವಾಲ್ ಅವರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ದೆಹಲಿಯ ವಿಕಾಸ್‌ಪುರಿಯಲ್ಲಿ ಕಸದ ಸಮಸ್ಯೆ ಪರಿಹಾರವಾಗಿಲ್ಲ ಎಂದು ಆರೋಪಿಸಿ ಅವರು ಕೇಜ್ರಿವಾಲ್ ನಿವಾಸದ ಮುಂದೆ ಕಸ ಚೆಲ್ಲಿ ಪ್ರತಿಭಟನೆ ನಡೆಸಿದ್ದರು. ಆ ಬಗ್ಗೆ ಪೊಲೀಸರು ಕ್ರಮ ಕೈಗೊಂಡಿದ್ದರು.

ಮಾಲಿವಾಲ್ ಮತ್ತು ಅವರ ಬೆಂಬಲಿಗರು ವಿಕಾಸ್‌ಪುರಿಯ ರಸ್ತೆಗಳಲ್ಲಿದ್ದ ಕಸವನ್ನು ಮೂರು ಟ್ರಕ್‌ಗಳಲ್ಲಿ ಸಂಗ್ರಹಿಸಿ, ಕೇಜ್ರಿವಾಲ್ ಅವರ ಫಿರೋಜ್ ಶಾ ರಸ್ತೆಯ ನಿವಾಸದ ಎದುರು ಸುರಿದಿದ್ದರು. ಈ ವೇಳೆ ಪೊಲೀಸರ ಜತೆ ಘರ್ಷಣೆ ಸಂಭವಿಸಿತ್ತು.

ಇದೇ ವೇಳೆ, ಮಾಲಿವಾಲ್ ತಮ್ಮೊಂದಿಗೆ ಯಮುನಾ ನದಿಯ ನೀರನ್ನೂ ತಂದಿದ್ದರು. ಕೇಜ್ರಿವಾಲ್ ಈ ನೀರಿನಲ್ಲಿ ಸ್ನಾನ ಮಾಡಲಿ ಎಂದು ಸವಾಲು ಹಾಕಿದ್ದರು. ದೆಹಲಿಯ ಜನರು ಮಾಲಿನ್ಯಭರಿತ ನದಿ ನೀರನ್ನು ಬಳಸುತ್ತಿದ್ದಾರೆ. ಕೇಜ್ರಿವಾಲ್ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. 

Tags:    

Similar News