ಕನ್ನಡ ಸಂಸ್ಕೃತಿ-ಸಾಹಿತ್ಯಕ್ಕೆ ಬೇಕಿದೆ ಸಾಂಸ್ಕೃತಿಕ ಗ್ಯಾರಂಟಿ

ಸಾಂಸ್ಕೃತಿಕ ಅಕಾಡೆಮಿ ಹಾಗೂ ನಾಲ್ಕು ಪ್ರಾಧಿಕಾರಗಳಿಗೆ ‘ಮುಖ್ಯ’ರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕ ಮಾಡದಿರುವುದು ಸಾಂಸ್ಕೃತಿಕ ಲೋಕದ ಅಸಮಾಧಾನಕ್ಕೆ ಕಾರಣವಾಗಿದೆ.;

Update: 2024-02-05 06:30 GMT

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಹದಿನಾಲ್ಕು ಸಾಂಸ್ಕೃತಿಕ ಅಕಾಡೆಮಿ ಹಾಗೂ ನಾಲ್ಕು ಪ್ರಾಧಿಕಾರಗಳಿಗೆ ‘ಮುಖ್ಯ’ರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕ ಮಾಡದಿರುವುದು ಸಾಂಸ್ಕೃತಿಕ ಲೋಕದ ಅಸಮಾಧಾನಕ್ಕೆ ಕಾರಣವಾಗಿದೆ.

ಅಧಿಕಾರಕ್ಕೆ ಬರುವ ಮುನ್ನ ನೀಡಿರುವ ಭಾಗ್ಯಗಳ ಭರವಸೆಯನ್ನು ಈಡೇರಿಸಿ, ಜನಸಾಮಾನ್ಯರ ವಿಶೇಷವಾಗಿ ಮಹಿಳೆಯರ ಭರವಸೆಗೆ ಪಾತ್ರವಾಗಿರುವ ಕಾಂಗ್ರೆಸ್, ಸಾಂಸ್ಕೃತಿಕ ಕ್ಷೇತ್ರವನ್ನು ಕೇಸರಿಮುಕ್ತವಾಗಿಸುವುದಾಗಿ ನೀಡಿರುವ ಭರವಸೆಯನ್ನು ಸಂಪೂರ್ಣವಾಗಿ ಈಡೇರಿಸಲು ಸಾಧ್ಯವಾಗಿಲ್ಲ. ಅಕಾಡೆಮಿ, ಪ್ರಾಧಿಕಾರಗಳಿಗೆ ‘ಮುಖ್ಯಸ್ಥ’ರು ಇನ್ನೂ ನೇಮಕವಾಗದ ಕಾರಣ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಸ್ತಬ್ದವಾಗಿವೆ. ಹಾಗಾಗಿ ಸಾಹಿತ್ಯ, ಸಂಸ್ಕೃತಿಗೂ ಬೇಕು ಸಾಮಾಜಿಕ ಕಾಳಜಿಯ ‘ಕರ್ನಾಟಕದ್ದೇ ಮಾದರಿ’ ಎನ್ನುವಂತಾಗಿದೆ. ಇಡೀ ಸಾಂಸ್ಕೃತಿಕ ಕ್ಷೇತ ಕಾಂಗ್ರೆಸ್‌ನ ಸಾಂಸ್ಕೃತಿಕ ಗ್ಯಾರಂಟಿಗಾಗಿ ಎದುರು ನೋಡುತ್ತಿದೆ.

ಕೇವಲ ಅಕಾಡೆಮಿಗಳಷ್ಟೇ ಅಲ್ಲ. ಕನ್ನಡದ ಹೆಮ್ಮೆ ಹಂಪಿ ಕನ್ನಡ ವಿಶ್ವವಿದ್ಯಾಲಯವೇ ತೀವ್ರ ನಿಗಾ ಘಟಕದಲ್ಲಿರುವಂತೆ ತೋರುತ್ತಿದೆ. ವಿದ್ಯುತ್ ಬಿಲ್ ಪಾವ್ತಿಗಾಗಲೀ, ಕುಡಿಯುವ ನೀರಿಗೂ ತತ್ವಾರ ಎನ್ನುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತು ಕಾರ್ಯ ನಿರ್ವಹಣೆ ಹೇಗೆ ಎಂಬ ಪ್ರಶ್ನೆ ಕುಲಪತಿ ಡಾ. ಡಿ. ವಿ. ಪರಮಶಿವಮೂರ್ತಿ ಅವರನ್ನು ಕಾಡುತ್ತಿದೆ. ಕನ್ನಡ ಭಾಷೆಯ ಸಂಶೋಧನೆಗೆಂದೇ, ಕನ್ನಡದ ಹೊಸ ಲೋಕ ದರ್ಶನಕ್ಕೆಂದೇ ರೂಪುಗೊಂಡಿರುವ ಈ ಕನ್ನಡದ ಹೆಮ್ಮೆ ವಿಶ್ವವಿದ್ಯಾಲಯಕ್ಕೇಕೆ ಈ ಅನಾದರ ಎಂಬ ಪ್ರಶ್ನೆ ಕಾಡುತ್ತಿದೆ.

ಇದರ ಜೊತೆಯಲ್ಲಿ ದೇಶ-ವಿದೇಶಗಳಲ್ಲಿರುವ ಕನ್ನಡ ಅಧ್ಯಯನ ಪೀಠಗಳಿಗೂ ಇದೇ ರೀತಿಯ ಅಸಡ್ಡೆ. ತಾಂತ್ರಿಕ ಕಾರಣಗಳಿಗಾಗಿ ಅನುದಾನ ತಲುಪಿಲ್ಲ ಎನ್ನುವುದು ಅಧಿಕಾರಿಗಳ ಸಮಝಾಯಿಶಿ. ಕನ್ನಡದೊಂದಿಗೆ ತನ್ನ ಸಂಬಂಧವನ್ನು ಬೆಸೆದುಕೊಂಡಿರುವ ಜರ್ಮನಿಯಲ್ಲಿಯೇ ನಾಲ್ಕು ಕನ್ನಡ ಪೀಠಗಳಿರುವುದು ಹೆವ್ಮ್ಮೆಯ ಸಂಗತಿಯಲ್ಲವೇ? ಎಂದು ಪ್ರಶ್ನಿಸಿದರೆ, ಅಧಿಕಾರಿಗಳಿಂದ ಸಮಂಜಸ ಉತ್ತರವಿಲ್ಲ.

ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಬೇಕಿರುವ ಕನ್ನಡ-ಸಂಸ್ಕೃತಿ ಇಲಾಖೆ ವ್ಯಾಪ್ತಿಗೊಳಪಡುವ ಅಕಾಡೆಮಿ, ಪ್ರಾಧಿಕಾರಗಳ ಪುನರ್ ರಚನೆಯಾಗದ ಹೊರತು, ಅವುಗಳಿಗೆ ಧರ್ಮ ನಿರಪೇಕ್ಷ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ ಮನಸ್ಸು ಈ ಸ್ಥಾನಗಳನ್ನು ಆಕ್ರಮಿಸಿಕೊಳ್ಳಬೇಕಿದೆ. ಈ ಅಕಾಡೆಮಿಗಳಿಗೆ, ಪ್ರಾಧಿಕಾರಗಳಿಗೆ ಅಂಟಿರುವ ಕೇಸರಿ ಬಣ್ಣವನ್ನು ತೊಳೆದು, ಶಾಂತಿ ಸಾಮರಸ್ಯದ ಶ್ವೇತ ವರ್ಣವನ್ನು ಬಳಿಯುವ ತುರ್ತು ಅಗತ್ಯವಿದೆ. “ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕಕ್ಕೆ ಕುರಿತಂತೆ ಕರಡು ಪಟ್ಟಿ ತಯಾರಿಸಿ, ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ಶೀಘ್ರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆʼʼ ಎಂದು ಕನ್ನಡ-ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಹೇಳಿಯೇ ತಿಂಗಳುಗಳು ಕಳೆದಿವೆ.

“ಅಕಾಡೆಮಿ, ಪ್ರಾಧಿಕಾರಗಳು ಪುನರ್‌ರಚನೆಯಾಗದಿದ್ದಲ್ಲಿ ರಂಗಭೂಮಿಯೂ ಸೇರಿದಂತೆ ಯಾವುದೇ ಚಟುವಟಿಕೆ ನಡೆಯುವುದಿಲ್ಲ. ಸರ್ಕಾರ ತನ್ನ ಇತರ ಆದ್ಯತೆಗಳ ಜೊತೆಗೆ ಸಾಂಸ್ಕೃತಿಕ ಕ್ಷೇತ್ರಕ್ಕೆ ಆದ್ಯತೆ ನೀಡಿ ಕೂಡಲೇ ನೇಮಕಾತಿ ಮಾಡುವ ಅಗತ್ಯವಿದೆ” ಎನ್ನುವುದು. ಖ್ಯಾತ ಸಾಹಿತಿ ನಾಟಕಕಾರ ಡಾ. ಕೆ. ಮರುಳಸಿದ್ದಪ್ಪ ಅವರ ಅನಿಸಿಕೆ.

“ಘೋಷಣೆಯಾಗಿರುವ ಪ್ರಶಸ್ತಿಗಳು ಪ್ರದಾನವಾಗಿಲ್ಲದಿರುವುದು ದುರದೃಷ್ಟಕರ ಸಂಗತಿ. ಆಯಾ ವರ್ಷವೇ ಪ್ರಶಸ್ತಿಗಳು ವಿತರಣೆಯಾಗದಿದ್ದಲ್ಲಿ ಪ್ರಶಸ್ತಿ ಪುರಸ್ಕೃತರೇ ತಮ್ಮ ಪ್ರಶಸ್ತಿಯನ್ನು ಮರೆತುಬಿಡುವ ಸಾಧ್ಯತೆ ಇದೆ ಎನ್ನುವುದು ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಿ. ಮಹೇಂದ್ರ ಅವರ ಅಭಿಪ್ರಾಯ. ಅವರು ಹೇಳುವಂತೆ ಘೋಷಣೆಯಾದ ಪ್ರಶಸ್ತಿಗಳು ಪ್ರಧಾನವಾಗಿಲ್ಲ. ಚಿತ್ರಕಲಾ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಶಿಷ್ಯವೇತನ ಸ್ಥಗಿತಗೊಂಡಿದೆ. ಡಿಜಿಟಲ್ ಆತ್ಮಕಥೆಯಂಥ ಯೋಜನೆಗಳು ಆರಂಭವಾಗಿಲ್ಲ. ಸಚಿವರು ಖಾಸಗಿಯಾಗಿ ಹೇಳುವುದು; ಈ ಬೆಳಗಾವಿಯ ವಿಧಾನ ಸಭಾ ಅಧಿವೇಶನ ಮುಕ್ತಾಯವಾಗುತ್ತಿದ್ದಂತೆ ಎಲ್ಲ ಅಕಾಡೆಮಿ- ಪ್ರಾಧಿಕಾರದ ಅಧ್ಯಕ್ಷ ಸ್ಥಾನಗಳು ಭರ್ತಿ ಮಾಡುವ ಸಾಧ್ಯತೆ ದಟ್ಟವಾಗಿದೆ.

ರಾಜ್ಯದ ವಿವಿಧ ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಪ್ರಾಧಿಕಾರಗಳಿಗೆ ಅರ್ಹ ವ್ಯಕ್ತಿಗಳನ್ನು ನೇಮಿಸುವುದು ಸಿದ್ದರಾಮಯ್ಯ ಸರ್ಕಾರದ ಮುಂದಿರುವ ನಿಜವಾದ ಸವಾಲು. ಹಿಂದಿನ ಬಿಜೆಪಿ ಸರ್ಕಾರವು ಎಲ್ಲಾ ಸಾಂಸ್ಕೃತಿಕ ಸಂಸ್ಥೆಗಳನ್ನು ರಾಜಕೀಯಗೊಳಿಸುವ ಪ್ರಯತ್ನದಿಂದಾಗಿ ಇದು ಸವಾಲಾಗಿದೆ ಎಂದು ಲೇಖಕ ಡಾ. ಜಗದೀಶ್ ಕೊಪ್ಪ ಹೇಳಿದರು.

ಆರ್‌ಎಸ್‌ಎಸ್ ಸಂಸ್ಥಾಪಕ ಕೆ.ಬಿ.ಹೆಡಗೇವಾರ್ ಅವರ ಭಾವಚಿತ್ರದ ಪಕ್ಕದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಕುಳಿತಿರುವ ಛಾಯಾಚಿತ್ರವನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿತ್ತು. ಅದೇ ರೀತಿ ಅವರು ಇತ್ತೀಚೆಗೆ 'ಉರಿಗೌಡ ಮತ್ತು ನಂಜೇಗೌಡ' ಕಾಲ್ಪನಿಕ ಕಥೆ ಮತ್ತು ಟಿಪ್ಪು ಸುಲ್ತಾನನ ನಾಟಕವನ್ನು ಸರ್ಕಾರಿ ಸ್ವಾಮ್ಯದ ರಂಗಭೂಮಿ ರೆಪರ್ಟರಿ ರಂಗಾಯಣ ತನ್ನ ವಾದವನ್ನು ಸಮರ್ಥಿಸಲು ರಚಿಸಿದ್ದನ್ನು ಜಗದೀಶ್ ಕೊಪ್ಪ ಅವರು ಪ್ರಸ್ತಾಪಿಸಿದರು.

ಸುಮಾರು 700 ಎಕರೆ ಪ್ರದೇಶದಲ್ಲಿ ಇರುವ ‘ವಿದ್ಯಾರಣ್ಯ’ ಕ್ಯಾಂಪಸ್‌ನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 18 ಅಧ್ಯಯನ ವಿಭಾಗಗಳಿದ್ದು, ಆದರೆ ಸದ್ಯ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚೆಂದರೆ 300 ಮಂದಿ. ಈ ಕನ್ನಡ ವಿಶ್ವವಿದ್ಯಾಲಯ ಕೂಡ ಇತರ ವಿವಿಗಳಂತೆ ಬೊಧಕ, ಬೋಧಕೇತರ ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ. ಈ ಎಲ್ಲ ಸಮಸ್ಯೆಗಳ ನಡುವೆಯೂ ಇತ್ತೀಚೆಗೆ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಇರುವ ಪದಾಂತರಂಗ ಕಾರ್ಪೋರೇಷನ್ ನಲ್ಲಿ ಕನ್ನಡ ಕಲಿಸುವ ಕಾರ್ಯಕ್ರಮವೊಂದಕ್ಕೆ ಸಹಿ ಮಾಡಿದೆ. ಸದ್ಯ ರೋಗಗ್ರಸ್ತವಾಗಿರುವ ಈ ವಿವಿ ಪುನಶ್ಚೇತನಕ್ಕೆ ಕನಿಷ್ಠ ರೂ.25 ಕೋಟಿ ರೂಪಾಯಿಗಳ ಅಗತ್ಯವಿದೆ.

“ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ, ಕನ್ನಡಕ್ಕಾಗಲಿ, ನಾಡಿನ ಸಂಸ್ಸೃತಿಯ ಉಳಿವಿಗಾಗಲಿ ಇನ್ನೂ ತನ್ನ ಪ್ರಯತ್ನ ಆರಂಭಿಸಿಲ್ಲ. ಅಧಿಕಾರಕ್ಕೆ ಬರುವ ಎಲ್ಲ ಸರ್ಕಾರಗಳಂತೆ ಕಾಂಗ್ರೆಸ್ ಸರ್ಕಾರ ಕೂಡ ಭಾಷೆ ಮತ್ತು ಸಂಸ್ಸೃತಿಗಳಿಗೆ ಸಂಬಂಧಿಸಿದ ಎಲ್ಲ ಕ್ರಿಯೆಗಳಿಗೂ ತನ್ನ ಜಡ ನೀತಿಯನ್ನೇ ಅನುಸರಿಸುತ್ತಿದೆ. ಸಾರ್ವಜನಿಕ ಸಂಗತಿಗಳಿಗೆ ಈ ನೀತಿ ಸರಿ ಅಲ್ಲ. ಸಾಂಸ್ಕೃತಿಕ ಲೋಕಕ್ಕೆ ಇದೇ ಧೋರಣೆ ಅನುಸರಿಸುತ್ತಿರುವುದು ಅಕ್ಷಮ್ಯ”, ಎನ್ನುವುದು ಲೇಖಕ ಚ.ಹ. ರಘುನಾಥ್ ಅವರ ಅನಿಸಿಕೆ.

ಅಕಾಡೆಮಿ, ಪ್ರಾಧಿಕಾರಗಳ ನಿಷ್ಕ್ರಿಯತೆಯಂತೆಯೇ ‘ಸಾಂಸ್ಕೃತಿಕ ನೀತಿ’ ಗೆ ಸಂಬಂಧಿಸಿದ ಇಬ್ಬಗೆಯ ನಿಲುವು ಸರ್ಕಾರದ ಸಾಂಸ್ಕೃತಿಕ ಜಡತ್ವಕ್ಕೆ ಸಾಕ್ಷಿ. ಇಂಥ ಒಂದು ಸಾಂಸ್ಕೃತಿಕ ನೀತಿ ಅಗತ್ಯವನ್ನು ಮೊದಲ ಮನಗಂಡಿದ್ದೇ ಸಿದ್ದರಾಮಯ್ಯ. ಬರಗೂರು ರಾಮಚಂದ್ರಪ್ಪ ಸಮಿತಿ ನೇಮಕವಾದದ್ದು ಅವರ ಅವಧಿಯಲ್ಲಿಯೇ. ಸಮಿತಿ ವರದಿ ನೀಡಿದ್ದೂ ಅವರ ಅವಧಿಯಲ್ಲಿಯೇ. ಅಂದ ಮೇಲೆ ಆ ವರದಿಯನ್ನು ‘ಅಕ್ಷರಶಹಃ-ಅರ್ಥಶಹಃ’ ಜಾರಿಗೆ ತರಬೇಕಾದ್ದು ಕಾಂಗ್ರೆಸ್ ಸರ್ಕಾರದ ಜವಾಬ್ದಾರಿ. ಅದು ಅವರ ನೈತಿಕ ಕರ್ತವ್ಯ ಕೂಡ. ಸಾಂಸ್ಕೃತಿಕ ನೀತಿ ಬರಗೂರು ವರದಿಯ ಯಥಾವತ್ ಜಾರಿಯಾದಲ್ಲಿ, ಕನ್ನಡದ ಸಾಂಸ್ಕೃತಿಕ ಸವiಸ್ಯೆ, ಪ್ರಶ್ನೆಗಳಿಗೆ ಉತ್ತರ ತಾನಾಗಿಯೇ ದೊರಕುತ್ತದೆ, ಎನ್ನುವುದು ಸಾಂಸ್ಕೃತಿಕ ಲೋಕದ ಅಭಿಮತ.

“ಯಾವುದೇ ಸರ್ಕಾರ ತನ್ನನ್ನು ಜನಪರ ಎಂದು ಬಿಂಬಿಸಿಕೊಳ್ಳುವ ಭರದಲ್ಲಿ ಸಾಂಸ್ಕೃತಿಕ ಕಾಳಜಿಯನ್ನು ಮರೆತುಬಿಡಬಾರದು. ಸಮಾಜ ಮತ್ತು ನಾಡೊಂದರ ಆರೋಗ್ಯ ಲಕ್ಷಣಗಳಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆಯೂ ಸೇರಿದೆ ಎನ್ನುವುದರಲ್ಲಿ ಸರ್ಕಾರಕ್ಕೆ ನಂಬಿಕೆ ಇಲ್ಲದಿದ್ದರೆ ಅದು ತಪ್ಪೆನಲ್ಲ. ಆದರೆ, ಸರ್ಕಾರ ತನ್ನ ಆದ್ಯತೆಗಳನ್ನು ಸ್ಪಷ್ಟಪಡಿಸಬೇಕು. ಆಗ, ಆಡಳಿತ ಯಂತ್ರ ಕೈಬಿಟ್ಟ ಸಾಹಿತ್ಯ ಸಂಸ್ಸೃತಿಯನ್ನು ಜಗ ಗಣ ಮನವೇ ಕೈಗೆತ್ತಿಕೊಂಡೀತು. ಕೊನೆಗೂ ಸಂಸ್ಕೃತಿ-ಭಾಷೆ ಉಳಿಯುವುದು ಜನರಿಂದಲೇ ಹೊರತು ಸರ್ಕಾರದಿಂದಲ್ಲ” ಎನ್ನುವುದು ಅಂಕಣಕಾರ ರಘುನಾಥ ಅವರ ಅಭಿಪ್ರಾಯ.

Similar News