ಜೆಡಿಎಸ್‌ ತೊರೆದು ಹೊಸ ಪಕ್ಷ ಕಟ್ಟಲು ಕೇರಳ ನಾಯಕರ ಸಾಮೂಹಿಕ ನಿರ್ಧಾರ

ಬಿಜೆಪಿ ಪಕ್ಷದೊಂದಿಗೆ ಏಕಪಕ್ಷೀಯ ಮೈತ್ರಿ ತೀರ್ಮಾನ ಕೈಗೊಂಡಿರುವ ಜೆಡಿಎಸ್ ಅಧಿನಾಯಕರ ಧೋರಣೆಗೆ ಆರಂಭದಿಂದಲೂ ವಿರೋಧ ಸೂಚಿಸಿದ್ದ ಕೇರಳ ರಾಜ್ಯ ಜಾತ್ಯತೀತ ಜನತಾ ದಳ ಘಟಕ, ಇದೀಗ ಜೆಡಿಎಸ್ ನಿಂದ ಹೊರ ಹೋಗಿ ಪ್ರತ್ಯೇಕ ರಾಜಕೀಯ ಪಕ್ಷ ಹುಟ್ಟುಹಾಕುವ ನಿರ್ಧಾರ ಕೈಗೊಂಡಿದೆ.;

Update: 2024-06-19 10:10 GMT

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಎರಡು ಸ್ಥಾನಗಳಲ್ಲಿ ಗೆಲುವು ಪಡೆದಿರುವ ಪ್ರಾದೇಶಿಕ ಪಕ್ಷ ಜೆಡಿಎಸ್, ಅದೇ ಮೈತ್ರಿಯ ಕಾರಣಕ್ಕೆ ನೆರೆಯ ಕೇರಳದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸಂಕಷ್ಟಕ್ಕೆ ಸಿಲುಕಿದೆ.

ಬಿಜೆಪಿ ಪಕ್ಷದೊಂದಿಗೆ ಏಕಪಕ್ಷೀಯ ಮೈತ್ರಿ ತೀರ್ಮಾನ ಕೈಗೊಂಡಿರುವ ಜೆಡಿಎಸ್ ಅಧಿನಾಯಕರ ಧೋರಣೆಗೆ ಆರಂಭದಿಂದಲೂ ವಿರೋಧ ಸೂಚಿಸಿದ್ದ ಕೇರಳ ರಾಜ್ಯ ಜಾತ್ಯತೀತ ಜನತಾ ದಳ ಘಟಕ, ಇದೀಗ ಜೆಡಿಎಸ್ ನಿಂದ ಹೊರ ಹೋಗಿ ಪ್ರತ್ಯೇಕ ರಾಜಕೀಯ ಪಕ್ಷ ಹುಟ್ಟುಹಾಕುವ ನಿರ್ಧಾರ ಕೈಗೊಂಡಿದೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ನೇತೃತ್ವದ ಜೆಡಿಎಸ್ ಪಕ್ಷ ಎನ್ಡಿಎ ಮೈತ್ರಿಕೂಟದ ಭಾಗವಾಗಿ ಬಿಜೆಪಿಯೊಂದಿಗೆ ಹೋಗುವ ನಿರ್ಧಾರ ಮಾಡಿದ್ದರಿಂದಾಗಿ ಕೇರಳದಲ್ಲಿ ಆಡಳಿತಾರೂಢ ಸಿಪಿಎಂ ನೇತೃತ್ವದ ಎಡರಂಗ(ಎಲ್ಡಿಎಫ್) ಭಾಗವಾಗಿರುವ ಕೇರಳ ಜೆಡಿಎಸ್ ಘಟಕ ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಅಲ್ಲದೆ ಮಿತ್ರಪಕ್ಷದ ಈ ದ್ವಂದ್ವ ನಿಲುವಿನಿಂದಾಗಿ ಎಡರಂಗ ಸರ್ಕಾರ ಕೂಡ ಟೀಕೆಗಳನ್ನು ಎದುರಿಸುವಂತಾಗಿದೆ. ಆ ಹಿನ್ನೆಲೆಯಲ್ಲಿ ಪಕ್ಷದ ಸ್ಥಳೀಯ ಮುಖಂಡರು ಮೈತ್ರಿಯ ವಿಷಯದಲ್ಲಿ ಯೋಚಿಸುವಂತೆ ದೇವೇಗೌಡರಿಗೆ ಹಲವು ಬಾರಿ ಮನವಿ ಮಾಡಿದ್ದರು.

ಆದರೆ, ಅಂತಹ ಮನವಿಗಳನ್ನು ಗಣನೆಗೆ ತೆಗೆದುಕೊಳ್ಳದೆ ದೇವೇಗೌಡ ಮತ್ತು ಎಚ್ ಡಿ ಕುಮಾರಸ್ವಾಮಿ ಅವರು ಮೈತ್ರಿಯ ನಿರ್ಧಾರಕ್ಕೆ ಅಂಟಿಕೊಂಡು ಲೋಕಸಭಾ ಚುನಾವಣೆಗೆ ಮುನ್ನ ಮೈತ್ರಿ ಮಾತುಕತೆ ಅಂತಿಮಗೊಳಿಸಿದ್ದರು. ಇದೀಗ ಕರ್ನಾಟಕದಲ್ಲಿ ಎರಡು ಲೋಕಸಭಾ ಸ್ಥಾನಗಳನ್ನು ಗೆದ್ದು ನರೇಂದ್ರ ಮೋದಿಯವರ ಸರ್ಕಾರದ ಭಾಗವಾಗಿರುವ ಜೆಡಿಎಸ್, ಕೇಂದ್ರ ಸಂಪುಟದಲ್ಲಿ ಒಂದು ಸಂಪುಟ ದರ್ಜೆ ಸಚಿವ ಸ್ಥಾನವನ್ನೂ ಗಿಟ್ಟಿಸಿಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಗಣಿ ಮತ್ತು ಉಕ್ಕು ಖಾತೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಅದೇ ಹೊತ್ತಿಗೆ ಎರಡು ಶಾಸಕರನ್ನು ಹೊಂದಿರುವ ಮತ್ತು ಎಡರಂಗ ಸರ್ಕಾರದಲ್ಲಿ ಒಬ್ಬ ಸಚಿವರನ್ನೂ ಹೊಂದಿರುವ ಕೇರಳ ಜೆಡಿಎಸ್, ಆಡಳಿತರೂಢ ಎಡರಂಗದೊಂದಿಗಿನ ತನ್ನ ಮೈತ್ರಿಯನ್ನು ಮುಂದುವರಿಸಿದೆ.

ಹಾಗಾಗಿ, ಜೆಡಿಎಸ್ ನಾಯಕರು ಬಿಜೆಪಿಯ ಮೈತ್ರಿ ಮೂಲಕ ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಒಂದು ಕಡೆಯಾದರೆ, ಮತ್ತೊಂದು ಕಡೆ ಕೇರಳದಲ್ಲಿ ಜೆಡಿಎಸ್ ಮತ್ತು ಎಡರಂಗ ಮೈತ್ರಿ ಮುಂದುವರಿಯುತ್ತಿರುವ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಗಳು ಆರಂಭವಾಗಿವೆ. ಆ ಹಿನ್ನೆಲೆಯಲ್ಲಿ ತೀವ್ರ ಮುಜಗರಕ್ಕೆ ಒಳಗಾಗಿರುವ ಕೇರಳ ಜೆಡಿಎಸ್ ನಾಯಕರು, ಜೆಡಿಎಸ್ ಪಕ್ಷದೊಂದಿಗೆ ಸಂಬಂಧ ಕಡಿದುಕೊಂಡು ಹೊರಹೋಗಿ, ತಮ್ಮದೇ ಆದ ಪ್ರತ್ಯೇಕ ಪಕ್ಷ ಕಟ್ಟುವ ನಿರ್ಧಾರಕ್ಕೆ ಬಂದಿದ್ದಾರೆ.

ಮಂಗಳವಾರ ನಡೆದ ಕೇರಳ ಜೆಡಿಎಸ್ ನಾಯಕರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸದ್ಯ ಕೇರಳ ಸರ್ಕಾರದಲ್ಲಿ ಇಂಧನ ಸಚಿವರಾಗಿರುವ ಪಕ್ಷದ ಶಾಸಕ ಕೆ ಕೃಷ್ಣನ್ ಕುಟ್ಟಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಮತ್ತು ಹಾಲಿ ಶಾಸಕ ಮ್ಯಾಥ್ಯೂ ಟಿ ಥಾಮಸ್ ಅವರು ಹೊಸ ಪಕ್ಷದಲ್ಲಿ ಅಧಿಕೃತವಾಗಿ ಯಾವುದೇ ರೀತಿಯಲ್ಲಿ ಗುರುತಿಸಿಕೊಳ್ಳುವುದಿಲ್ಲ. ಪಕ್ಷದ ಚಿಹ್ನೆಯಲ್ಲಿ ಗೆದ್ದುಬಂದವರು ಈಗ ಪಕ್ಷ ಬದಲಿಸಿದರೆ ಅನರ್ಹಗೊಳ್ಳಲಿದ್ದು, ಅವರ ಶಾಸಕ ಸ್ಥಾನಕ್ಕೆ ಕುತ್ತು ಬರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಉಳಿದಂತೆ ಜೆಡಿಎಸ್ನ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಹೊಸ ಪಕ್ಷಕ್ಕೆ ಸೇರಲಿದ್ದಾರೆ ಎಂದು ಪಕ್ಷದ ನಾಯಕರು ಹೇಳಿರುವುದಾಗಿ ವರದಿಯಾಗಿದೆ.

Similar News