ಆನ್‌ಲೈನ್‌ ಬುಕ್ಕಿಂಗ್‌ ಮಾಡಿದರಷ್ಟೇ ಯಾತ್ರಾರ್ಥಿಗಳಿಗೆ ಶಬರಿಮಲೆ ಪ್ರವೇಶ

ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ನಿತ್ಯ 80 ಸಾವಿರ ಭಕ್ತರಿಗೆ ಮಾತ್ರ ದರ್ಶನಾವಕಾಶ ಕಲ್ಪಿಸುವ ಉದ್ದೇಶದಿಂದ ಆನ್‌ಲೈನ್‌ ಬುಕ್ಕಿಂಗ್‌ ಜಾರಿಗೊಳಿಸಲಾಗಿದೆ.

Update: 2024-10-06 15:59 GMT

ಶಬರಿಮಲೆ ಯಾತ್ರೆಗೆ ಒಂದು ತಿಂಗಳು ಬಾಕಿ ಇರುವಂತೆ ಕೇರಳ ಸರ್ಕಾರ ಪ್ರಸಕ್ತ ಸಾಲಿನ ಯಾತ್ರೆಗೆ ಆಗಮಿಸುವ ಪ್ರವಾಸಿಗರು ಹಾಗೂ ಮಾಲಾಧಾರಿಗಳಿಗೆ ಆನ್‌ಲೈನ್‌ ಬುಕ್ಕಿಂಗ್‌ ಕಡ್ಡಾಯಗೊಳಿಸಿದೆ.

ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ನಿತ್ಯ 80 ಸಾವಿರ ಭಕ್ತರಿಗೆ ಮಾತ್ರ ದರ್ಶನಾವಕಾಶ ಕಲ್ಪಿಸುವ ಉದ್ದೇಶದಿಂದ ಆನ್‌ಲೈನ್‌ ಬುಕ್ಕಿಂಗ್‌ ಜಾರಿಗೊಳಿಸಲಾಗಿದೆ. ಆನ್‌ಲೈನ್‌ ಬುಕ್ಕಿಂಗ್‌ ವೇಳೆ ಭಕ್ತರು ಯಾತ್ರೆ ಕೈಗೊಳ್ಳುವ ಮಾರ್ಗವನ್ನೂ ಆಯ್ಕೆ ಮಾಡಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಶಬರಿಮಲೆ ಯಾತ್ರೆಗೆ ಕೈಗೊಂಡಿರುವ ಅಗತ್ಯ ಸಿದ್ಧತೆಗಳ ಕುರಿತು ಪರಿಶೀಲಿಸಲು ಸಿಎಂ ಪಿಣರಾಯಿ ವಿಜಯನ್‌ ಅವರು ಶನಿವಾರ ಕರೆದಿದ್ದ ಸಭೆಯಲ್ಲಿ ಈ ತೀರ್ಮಾನ ತಗೆದುಕೊಳ್ಳಲಾಗಿದೆ. ಯಾತ್ರೆ ಅವಧಿಯಲ್ಲಿ ಉಂಟಾಗಬಹುದಾದ ಭಕ್ತರ ದಟ್ಟಣೆ ನಿವಾರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದಲ್ಲದೇ ಭಕ್ತರು ಸಾಗುವ ಅರಣ್ಯ ಮಾರ್ಗದಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಬೇಕು. ಅಗತ್ಯ ಸಂದರ್ಭಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ವಾಹನಗಳಿಗೆ ಪಾರ್ಕಿಂಗ್‌ ಸ್ಥಳ ಗುರುತಿಸಬೇಕು. ಈ ಬಾರಿ ನೀಲಕ್ಕಲ್‌ ಹಾಗೂ ಪಂಪಾ ಸಮೀಪವೇ ಹೆಚ್ಚು ಪಾರ್ಕಿಂಗ್‌ ಸ್ಥಳಗಳನ್ನು ಗುರುತಿಸಬೇಕು ಎಂದು ಸಿಎಂ ಪಿಣರಾಯಿ ವಿಜಯನ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಶಬರಿಮಲೆ ಯಾತ್ರೆ ವೇಳೆ ಭಕ್ತರನ್ನು ನಿಯಂತ್ರಿಸಲು ನೇಮಕ ಮಾಡುವ ವಿಶುಧಿ ಸೇನೆಯ ಸ್ವಯಂ ಸೇವಕರನ್ನು ಕಡ್ಡಾಯವಾಗಿ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು, ಅವರಿಗೆ ಸೂಕ್ತ ತರಬೇತಿ ನೀಡಬೇಕು. ಜೊತೆಗೆ ರಸ್ತೆಗಳು, ಪಾರ್ಕಿಂಗ್‌ ಸ್ಥಳಗಳನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭಿಸಬೇಕು ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ನಿರ್ಮಿಸುತ್ತಿರುವ ಅತಿಥಿ ಗೃಹಗಳ ಪೈಕಿ ಒಂದು ಸಿದ್ಧವಾಗಿದೆ. ಮತ್ತೊಂದು ಅತಿಥಿ ಗೃಹದ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಮುಜರಾಯಿ ಇಲಾಖೆ ಸಚಿವ ವಿ.ಎನ್.ವಾಸವನ್‌, ಮುಖ್ಯ ಕಾರ್ಯದರ್ಶಿ ಶಾರದಾ ಮುರಳೀಧರನ್‌, ಪೊಲೀಸ್‌ ಮಹಾನಿರ್ದೇಶಕ ಶೇಖ್‌ ದರ್ವೇಶ್‌ ಸಾಹೇಬ್‌ ಇತರರು ಭಾಗಿಯಾಗಿದ್ದರು.

Tags:    

Similar News