Deportation row : ಅಮೆರಿಕದಿಂದ ಭಾರತೀಯ ಅಕ್ರಮ ವಲಸಿಗರ ಗಡಿಪಾರು; ಟ್ರಾವೆಲ್ ಏಜೆಂಟ್‌ಗಳ ಮೇಲೆ ಕೇಸ್
Deportation row : ಅಮೃತಸರ ಗ್ರಾಮೀಣ ಪೊಲೀಸರು ಶುಕ್ರವಾರ ಪ್ರವಾಸಿ ಏಜೆಂಟ್ ಸತ್ನಾಂ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆತ ಅಮೆರಿಕದಿಂದ ನಿರ್ಗಮಿತಗೊಂಡ 104 ಭಾರತೀಯರಲ್ಲಿ ಒಬ್ಬರಾದ ದಲೇರ ಸಿಂಗ್‌ಗೆ ಮೋಸ ಮಾಡಿದ್ದ.;
ಅಮೆರಿಕದಿಂದ ಭಾರತೀಯರನ್ನು ಗಡಿಪಾರು ಮಾಡಿರುವ ವಿಚಾರದಲ್ಲಿ ಪಂಜಾಬ್ ಮತ್ತು ಹರಿಯಾಣ ಪೊಲೀಸರು ಕೆಲವು ಪ್ರವಾಸಿ ಏಜೆಂಟ್‌ಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಏಜೆಂಟ್‌ಗಳ ವಿರುದ್ಧ ಅಮೆರಿಕದಿಂದ ಗಡೀಪಾರಾದ ಭಾರತೀಯರಿಗೆ ಮೋಸ ಮಾಡಿದ ಆರೋಪವಿದೆ.
ಏಜೆಂಟ್‌ಗಳು ತಮ್ಮನ್ನು ಅಕ್ರಮ ಮಾರ್ಗಗಳ ಮೂಲಕ ಅಮೆರಿಕಕ್ಕೆ ಕೊಂಡೊಯ್ದಿದ್ದಾರೆ ಎಂದು ಗಡಿಪಾರಾದ ಹಲವರು ಆರೋಪಿಸಿದ್ದಾರೆ. ಅಮೃತಸರ ಗ್ರಾಮೀಣ ಪೊಲೀಸರು ಶುಕ್ರವಾರ ಪ್ರವಾಸಿ ಏಜೆಂಟ್ ಸತ್ನಾಂ ಸಿಂಗ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆತ ಅಮೆರಿಕದಿಂದ ನಿರ್ಗಮಿತಗೊಂಡ 104 ಭಾರತೀಯರಲ್ಲಿ ಒಬ್ಬರಾದ ದಲೇರ ಸಿಂಗ್ ಎಂಬುವರಿಗೆ ಮೋಸ ಮಾಡಿದ್ದಾನೆ ಎಂಬ ಆರೋಪವಿದೆ.
ಅದೇ ರೀತಿ ಹರಿಯಾಣಾ ಪೊಲೀಸರು ಮೂರು ಪ್ರವಾಸಿ ಏಜೆಂಟ್‌ಗಳ ವಿರುದ್ಧ ಗಡಿಪಾರಾದವರ ಕುಟುಂಬ ಸದಸ್ಯರಿಂದ ಬಂದ ದೂರುಗಳ ಆಧಾರದ ಮೇಲೆ ವಂಚನೆ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಬುಧವಾರ ಅಮೆರಿಕದ ಸೇನಾ ವಿಮಾನದಲ್ಲಿ ಅಮೃತಸರಕ್ಕೆ ಬಂದಿಳಿದ 104 ಅಕ್ರಮ ವಲಸಿಗರ ಪೈಕಿ 33 ಮಂದಿ ಹರಿಯಾಣ ಮತ್ತು ಗುಜರಾತ್‌ನವರು, 30 ಮಂದಿ ಪಂಜಾಬ್‌ನವರು, 3 ಮಂದಿ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದವರು, ಮತ್ತು ಇಬ್ಬರು ಚಂಡೀಗಢದವರು.
ಪ್ರವಾಸಿ ಏಜೆಂಟ್‌ಗಳ ಅಕ್ರಮ
ಅಮೃತಸರ ಜಿಲ್ಲೆಯ ಗ್ರಾಮವೊಂದರ ನಿವಾಸಿಯಾದ ದಲೇರ್ ಸಿಂಗ್ (37) ಪ್ರವಾಸಿ ಏಜೆಂಟ್‌ನಿಂದ ತಾನು ಮೋಸಕ್ಕೆ ಒಳಗಾಗಿದ್ದೇನೆ ಎಂದು ಆರೋಪಿಸಿದ್ದಾರೆ. ಕಾನೂನುಬದ್ಧ ರೀತಿಯಲ್ಲಿ ಅಮೆರಿಕಕ್ಕೆ ಕರೆದೊಯ್ಯುವುದಾಗಿ ನಂಬಿಸಿ ವಂಚಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಚಾಲಕನಾಗಿ ಕೆಲಸ ಮಾಡುತ್ತಿದ್ದ ದಲೇರ್, ಕುಟುಂಬದ ಭವಿಷ್ಯಕ್ಕಾಗಿ ಅಮೆರಿಕಕ್ಕೆ ಹೋಗಲು ಬಯಸಿದ್ದರು. ಸಂಬಂಧಿಕರು ಮತ್ತು ಸ್ನೇಹಿತರಿಂದ ಸಾಲ ಪಡೆದಿದ್ದರು. ಜೊತೆಗೆ ಕೃಷಿ ಭೂಮಿ ಗಿರವಿ ಇಟ್ಟು ಹಣ ಕೊಟ್ಟಿದ್ದರು.
ಆರೋಪಿಗಳು ದಲೇರ್ ಸಿಂಗ್ ಅವರನ್ನು ಮೊದಲು ದುಬೈಗೆ ಅಲ್ಲಿಂದ ಬ್ರೆಜಿಲ್‌ಗೆ ಕರೆದೊಯ್ದಿದ್ದರು. ಅಲ್ಲಿಂದ ಪನಾಮಾ ಕಾಡುಗಳ ಮೂಲಕ ಅಪಾಯಕಾರಿ ನಡಿಗೆ ನಡೆಸಿ ಅಮೆರಿಕಕ್ಕೆ ಸೇರಿಸಿದ್ದರು. ಜನವರಿ 15ರಂದು ಅಮೆರಿಕದ ಅಧಿಕಾರಿಗಳು ಬಂಧಿಸಿದ್ದರು
ಅಮೃತಸರ ಗ್ರಾಮೀಣ ಜಿಲ್ಲಾ ಪೊಲೀಸ್ ಅಧೀಕ್ಷಕ (SSP) ಚರಣ್‌ಜೀತ್ ಸಿಂಗ್ ದೂರಿನ ಬಗ್ಗೆ ಮಾಹಿತಿ ನೀಡಿದ್ದಾರೆ. ದಲೇರ್ ಸಿಂಗ್ ತನ್ನ ಆರೋಪದ ಕುರಿತು ಸಾಕ್ಷ್ಯಗಳನ್ನು ನೀಡಿದ್ದಾರೆ. ಪ್ರವಾಸಿ ಏಜೆಂಟ್‌ಗೆ ದಲೇರ್ ಕಂತಿನ ಮೂಲಕ 60 ಲಕ್ಷ ರೂಪಾಯಿ ಪಾವತಿಸಿದ್ದಾರೆ.
ಹರಿಯಾಣದ ಕರ್ನಾಲ್‌ನಲ್ಲಿ ಪ್ರಕರಣ
ಕರ್ನಾಲ್ ಪೊಲೀಸರು ಶುಭಮ್ ಎಂಬಾತನ ದೂರು ಆಧರಿಸಿ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಕಲಾರಂ ಗ್ರಾಮದ ನಿವಾಸಿಯಾದ ಶುಭಮ್‌ನ ಸಹೋದರ ಆಕಾಶ್‌ನನ್ನು ಅಮೆರಿಕದಿಂದ ವಾಪಸ್ ಕಳುಹಿಸಲಾಗಿತ್ತು.ಈ ಬಗ್ಗೆ ಏಜೆಂಟ್ ವಿರುದ್ಧ ದೂರು ನೀಡಿದ್ದಾರೆ.
ಆಕಾಶ್‌ನನ್ನು ಕಾನೂನುಬದ್ಧವಾಗಿ ಅಮೆರಿಕಕ್ಕೆ ಕರೆದೊಯ್ಯುವುದಾಗಿ ಏಜೆಂಟ್ ಒಬ್ಬರು 42.5 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಹೇಳಲಾಗಿದೆ. ಕರ್ನಾಲ್ ಜಿಲ್ಲೆಯ ಮತ್ತೊಬ್ಬರಿಂದಲೂ ₹40 ಲಕ್ಷ ಪಾವತಿ ಮಾಡಿದ್ದಾರೆ ಎಂದು ಹೇಳಲಾಗಿದೆ.