ಕೊಕೇನ್ ಪ್ರಕರಣ: ತೆಲುಗು ಚಿತ್ರ ನಿರ್ದೇಶಕರಿಗೆ ಸಮನ್ಸ್ ಜಾರಿ

ಹೈದರಬಾದ್‌ನ ಸ್ಟಾರ್ ಹೋಟೆಲ್‌ನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಕೊಕೇನ್ ಸೇವಿಸಿದ ಆರೋಪದ ಮೇಲೆ ತೆಲುಗು ಸಿನಿಮಾ ನಿರ್ದೇಶಕರನ್ನು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಬುಧವಾರ ತಿಳಿಸಿದ್ದಾರೆ.

Update: 2024-02-28 11:39 GMT
Click the Play button to listen to article

ಹೈದರಾಬಾದ್, ಫೆ 28: ನಗರದ ಸ್ಟಾರ್ ಹೋಟೆಲ್‌ನಲ್ಲಿ ನಡೆದ ಪಾರ್ಟಿಯೊಂದರಲ್ಲಿ ಕೊಕೇನ್ ಸೇವಿಸಿದ ಆರೋಪದ ಮೇಲೆ ತೆಲುಗು ಸಿನಿಮಾ ನಿರ್ದೇಶಕರನ್ನು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಬುಧವಾರ ತಿಳಿಸಿದ್ದಾರೆ.

ನಿರ್ದೇಶಕರು ಕೂಡ ಪಾರ್ಟಿಯಲ್ಲಿ ಭಾಗವಹಿಸಿದ್ದರಿಂದ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರವರಿ 25 ರಂದು ಗಚಿಬೌಲಿಯಲ್ಲಿರುವ ಹೋಟೆಲ್‌ನ ಕೋಣೆಯಲ್ಲಿ ಕೊಕೇನ್ ಸೇವಿಸಿದ ಆರೋಪದ ಮೇಲೆ ನಗರ ಮೂಲದ ಕನ್‌ಸ್ಟ್ರೆಕ್ಷನ್ ಮತ್ತು ರಿಯಲ್ ಎಸ್ಟೇಟ್ ಸಂಸ್ಥೆಯ ನಿರ್ದೇಶಕ ಸೇರಿದಂತೆ ಮೂವರನ್ನು ಬಂಧಿಸಲಾಯಿತು. ನಂತರ ಅವರಿಗೆ ಜಾಮೀನು ನೀಡಲಾಯಿತು.

ಪಾರ್ಟಿಯಲ್ಲಿ ಭಾಗವಹಿಸಿದ್ದವರಲ್ಲಿ ಚಲನಚಿತ್ರ ನಿರ್ದೇಶಕರೂ ಸೇರಿದ್ದು, ಅವರು ಡ್ರಗ್ಸ್ ಸೇವನೆ ಮಾಡಿದ್ದಾರೆಯೇ? ಇಲ್ಲವೇ ಎಂಬುದು ಇದುವರೆಗೆ ದೃಢಪಟ್ಟಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹೋಟೆಲ್‌ನಲ್ಲಿ ಕೊಕೇನ್ ಬಳಕೆ ಮತ್ತು ಸೇವನೆಗಾಗಿ ಎನ್‌ಡಿಪಿಎಸ್ ಕಾಯಿದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಚಲನಚಿತ್ರ ನಿರ್ದೇಶಕ ಸೇರಿದಂತೆ ಹತ್ತು ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಅವರು (ಚಲನಚಿತ್ರ ನಿರ್ದೇಶಕ) ಪಾರ್ಟಿಯಲ್ಲಿ ಇದ್ದರು. ಡ್ರಗ್ಸ್‌ ಸೇವಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಪರೀಕ್ಷೆಯ ನಂತರವೇ ಖಚಿತವಾಗುತ್ತದೆ. ತನಿಖೆಯ ಭಾಗವಾಗಿ ಪೊಲೀಸರ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದಕ್ಕೂ ಮೊದಲು, ಸಂಸ್ಥೆಯ ನಿರ್ದೇಶಕರೊಬ್ಬರು ತಮ್ಮ ಸ್ನೇಹಿತರೊಂದಿಗೆ ಹೋಟೆಲ್‌ನಲ್ಲಿ ಡ್ರಗ್ಸ್ ಸೇವಿಸಿದ ಬಗ್ಗೆ ಮಾಹಿತಿ ಪಡೆದ ಪಡೆದ ಪೊಲೀಸ್ ತಂಡಗಳು ಹೋಟೆಲ್‌ಗೆ ಭೇಟಿ ನೀಡಿದ್ದವು. ಆವರಣವನ್ನು ಪರೀಕ್ಷಿಸಿದಾಗ ಅವರು ಕೊಕೇನ್‌ನ ಮೂರು ಬಳಸಿದ ಪ್ಲಾಸ್ಟಿಕ್ ಸ್ಯಾಚೆಟ್‌ಗಳು (ಪ್ರತಿಯೊಂದು ಗ್ರಾಂ) ಮತ್ತು ಡ್ರಗ್ ಸೇವಿಸಲು ಬಿಳಿ ಕಾಗದದ ರೋಲ್ ಅನ್ನು ವಶಪಡಿಸಿಕೊಂಡಿದ್ದರು.

ಈ ಕುರಿತು ವಿಚಾರಣೆ ನಡೆಸಿದಾಗ ರಿಯಲ್ ಎಸ್ಟೇಟ್ ಸಂಸ್ಥೆಯ ನಿರ್ದೇಶಕರು ಕೊಕೇನ್‌ನೊಂದಿಗೆ ತನ್ನ ಹೋಟೆಲ್ ಕೋಣೆಯಲ್ಲಿ ತನ್ನ ಸ್ನೇಹಿತರಿಗೆ ಪಾರ್ಟಿಯನ್ನು ಆಯೋಜಿಸಿದ್ದಾಗಿ ಬಹಿರಂಗಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಸ್ಥೆಯ ನಿರ್ದೇಶಕರು ಮತ್ತು ಇತರ ಇಬ್ಬರನ್ನು ಡ್ರಗ್ಸ್‌ ಪರೀಕ್ಷೆಗೆ ಒಳಪಡಿಸಲಾಗಿದೆ.

ಆದರೆ ಪಾರ್ಟಿಯಲ್ಲಿ ಭಾಗವಹಿಸಿದ ಇತರರ ಮೇಲೆ ಪರೀಕ್ಷೆಗಳನ್ನು ನಡೆಸಬೇಕಾಗಿತ್ತು. ಡ್ರಗ್ಸ್‌ ಪೂರೈಕೆದಾರರನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Similar News