ಕೇಂದ್ರ ಸರ್ಕಾರ ನಮ್ಮನ್ನು ಒತ್ತೆಯಾಳಾಗಿರಿಸಿದೆ, ಗುಲಾಮರಂತೆ ನಡೆಸಿಕೊಳ್ಳುತ್ತಿದೆ: ಕೇರಳ ಹಣಕಾಸು ಸಚಿವ ಕೆ.ಎನ್ ಬಾಲಗೋಪಾಲ್

ಕೇರಳ ಹಣಕಾಸು ಸಚಿವರ ವಿಶೇಷ ಸಂದರ್ಶನ

Update: 2024-02-26 07:37 GMT
ಕೇರಳ ಹಣಕಾಸು ಸಚಿವ ಕೆ.ಎನ್ ಬಾಲಗೋಪಾಲ್

ತೆರಿಗೆ ಮರು ಹಂಚಿಕೆಯಲ್ಲಿ ಲೋಪ ಆಗುತ್ತಿರುವ ಬಗ್ಗೆ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ. ಅನುದಾನ ನೀಡುವುದರಲ್ಲಿ ತಾರತಮ್ಯ ಹಾಗೂ ಆದಾಯ ತೆರಿಗೆ ಮರು ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಹಾಗೂ ಕೇರಳ ಸೇರಿದಂತೆ ವಿವಿಧ ರಾಜ್ಯಗಳು ಪ್ರತಿಭಟನೆ ನಡೆಸಿವೆ.

ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡುವ ಮೂಲಕ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದೆ. ಇದರ ವಿಚಾರಣೆ ಮಾರ್ಚ್ 6 ಮತ್ತು 7 ರಂದು ನಡೆಯಲಿದೆ.

ಇದಕ್ಕೂ ಮೊದಲು ಕೇರಳ ಮತ್ತು ಕೇಂದ್ರ ಸರ್ಕಾರ ಮಾತುಕತೆ ನಡೆಸುವಂತೆ ನ್ಯಾಯಾಲಯ ಸೂಚನೆ ನೀಡಿತ್ತಾದರೂ, ಅದು ಸಾಧ್ಯವಾಗಲಿಲ್ಲ.

ಕೇಂದ್ರ ಸರ್ಕಾರ ನಮಗೆ ನೀಡಬೇಕಾದ ಆರ್ಥಿಕ ನೆರವನ್ನು ನೀಡುತ್ತಿಲ್ಲ. ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ ಎಂದು ಕೇರಳ ಸರ್ಕಾರ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರವು ಕೇರಳ ಸರ್ಕಾರ ಸಮರ್ಪಕ ಆರ್ಥಿಕ ನೀತಿಯನ್ನು ಹೊಂದಿಲ್ಲ.

ರಾಜ್ಯಗಳ ಸಾಲ ನೀತಿಯು ದೇಶದ ಮೇಲೆ ಗಂಭೀರವಾದ ಪರಿಣಾಮ ಬೀರಲಿದೆ ಎಂದು ಪ್ರತಿಪಾದಿಸಿತ್ತು.

ತಿರುವನಂತಪುರಂನಲ್ಲಿ ದ ಫೆಡರಲ್‌ಗೆ ವಿಶೇಷ ಸಂದರ್ಶನ ನೀಡಿರುವ ಕೇರಳ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್ ಅವರು, ಕೇರಳದ ಸಾರ್ವತ್ರಿಕ ಚುನಾವಣೆಗೆ ಮೊದಲು ಕೇರಳವನ್ನು ಆರ್ಥಿಕವಾಗಿ

ಉಸಿರುಗಟ್ಟಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಕೊನೆಯ ಭರವಸೆಯಾಗಿದೆ ಎಂದಿದ್ದಾರೆ. ಅವರು ದ ಫೆಡರಲ್‌ನೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಪ್ರ: ಸಾಲ ಪಡೆಯುವ ಅಧಿಕಾರದ ಮೇಲೆ ಕೇಂದ್ರ ಸರ್ಕಾರವು ವಿಧಿಸಿರುವ ಮಿತಿಗಳ ವಿರುದ್ಧ ಕೇರಳ ಸರ್ಕಾರ ಹೂಡಿರುವ ಮೊಕದ್ದಮೆಯು ಮತ್ತೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ನ್ಯಾಯಾಲಯದ ಸಲಹೆಯ ಹೊರತಾಗಿಯೂ ಸಂಧಾನಕ್ಕೆ ಸಾಧ್ಯವಾಗಿಲ್ಲ.

ಉ. ಸುಪ್ರೀಂ ಕೋರ್ಟ್‌ನ ಮೊರೆ ಹೋಗುವುದು ನಮ್ಮ ಕೊನೆಯ ಆಯ್ಕೆಯಾಗಿದೆ. ಕೇಂದ್ರ ಸರ್ಕಾರದ ಅಸಮರ್ಥತ ಆರ್ಥಿಕ ನೀತಿಯ ಬಗ್ಗೆ ಮಾತನಾಡಬೇಕಿದೆ.

ಸಹಕಾರಿ ಫೆಡರಲಿಸಂ ಅನ್ನು ರಕ್ಷಿಸಲು ನಮ್ಮ ರಾಜ್ಯವು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಸಾಂವಿಧಾನಿಕವಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ ಕೂಡ ಅದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಪ್ರ. ಆದರೆ, SC ಮಧ್ಯಂತರ ಆದೇಶವನ್ನು ನೀಡಲು ಅಥವಾ ಮಧ್ಯಪ್ರವೇಶಿಸಲು ನಿರಾಕರಿಸಿದೆ, ಕೋರ್ಟ್‌ ಎರಡು ಪಕ್ಷಗಳ ನಡುವೆ ಮಾತುಕತೆಗೆ ಶಿಫಾರಸು ಮಾಡಿದೆ.

ಉ. ಹೌದು, ಆದರೆ, ಅದು ಸಾಧ್ಯವಾಗಲಿಲ್ಲ. ಸುಪ್ರೀಂ ಕೋರ್ಟ್‌ ಮಾತುಕತೆಗೆ ನಿರ್ದೇಶನ ನೀಡಿದಾಗ ಕೇಂದ್ರ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ.

ಇಚ್ಛಾಶಕ್ತಿಯನ್ನೂ ಪ್ರದರ್ಶಿಸಲಿಲ್ಲ. ಮಾರ್ಚ್‌ಗಿಂತ ಮೊದಲು 11,000 ಕೋಟಿ ರೂ.ಗಳನ್ನು ಪಡೆಯಲು ನಾವು ಅರ್ಹರಾಗಿದ್ದೇವೆ. ಆದರೆ, ಈ ಮೊತ್ತ ಬಿಡುಗಡೆ ಮಾಡುವ ಮುನ್ನವೇ ನ್ಯಾಯಾಲಯದ ಮೊರೆ ಹೋಗಿರುವ ಪ್ರಕರಣವನ್ನು ಹಿಂಪಡೆಯಬೇಕು ಎಂದು ಪಟ್ಟು ಹಿಡಿದಿದ್ದು. ಕೇರಳವನ್ನು ಉಸಿರುಗಟ್ಟುವಂತೆ ಮಾಡಿದೆ. ಕೇಂದ್ರ ಸರ್ಕಾರವು ನಮ್ಮನ್ನು ಒತ್ತೆಯಾಳಿನಂತೆ ನಡೆಸಿಕೊಳ್ಳುತ್ತಿದೆ.

ಶರಣಾಗತಿಗೆ ಒತ್ತಾಯಿಸುತ್ತಿದೆ. ಕೇಂದ್ರ ಸರ್ಕಾರವು ವಿರೋಧ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ.

ನಮಗಿಂತ ಮುಂಚೆಯೇ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಸಂಸದರು ಮತ್ತು ಶಾಸಕರೊಂದಿಗೆ ಪ್ರತಿಭಟನೆ ನಡೆಸಿದ್ದರು.

ಬಿಜೆಪಿ ಆಡಳಿತವಿರುವ ರಾಜ್ಯಗಳು ಮತ್ತು ಬಿಜೆಪಿಯೇತರ ರಾಜ್ಯಗಳ ನಡುವೆ ಅಸಮಾನತೆ ಇದೆ. ಪ್ರತಿ ರಾಜ್ಯ ಹಾಗೂ ಜನರನ್ನು ಸಮಾನ ಹಾಗೂ ಗೌರವಯುತವಾಗಿ ನಡೆಸಿಕೊಳ್ಳಬೇಕು. ಅದು ಕೇಂದ್ರ ಸರ್ಕಾರದ ಜವಾಬ್ದಾರಿಯೂ ಹೌದು.

ಪ್ರ. ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿ ಚಟುವಟಿಕೆಗಳ ಮೇಲೆ ಸದ್ಯದ ಬೆಳವಣಿಗೆ ಪರಿಣಾಮ ಬೀರಲಿದೆಯೇ. ಇದರ ರಾಜಕೀಯ ಪಕ್ಷಪಾತವಿದೆಯೇ?

ಉ. ಕೇಂದ್ರ ಸರ್ಕಾರವು ಹಣ ಬಿಡುಗಡೆ ಮಾಡಲು ವಿಫಲವಾದರೆ,ಜನರ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಕೇಂದ್ರಕ್ಕೆ ಚೆನ್ನಾಗಿ ತಿಳಿದಿದೆ.

ರಾಜ್ಯದ ಪ್ರತಿಪಕ್ಷಗಳು ಈ ವಿಷಯದಲ್ಲಿ ನಿಜವಾದ ಆಸಕ್ತಿ ಹೊಂದಿವಿಯೇ ಅಥವಾ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆಯೇ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ.

ಇದರಿಂದ ಸರ್ಕಾರಿ ನೌಕರರ ವೇತನ ಪಾವತಿಯ ಮೇಲೆ ಪರಿಣಾಮ ಬೀರಲಿದೆ. ಚುನಾವಣೆಗೆ ಮುಂಚೆಯೇ ನಮ್ಮನ್ನು ಗುರಿಯಾಗಿಸಿಕೊಂಡಂತೆ ತೋರುತ್ತಿದೆ.

ಕೇಂದ್ರ ಸರ್ಕಾರವು ಸಾರ್ವಜನಿಕ ಸೇವಾ ಆಯೋಗವನ್ನು ದುರ್ಬಲಗೊಳಿಸಿದೆ. ಇದರಿಂದಾಗಿ ಸಾರ್ವಜನಿಕ ವಲಯದಲ್ಲಿ 10 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ.

ಆದರೆ, ಕಳೆದ ವರ್ಷ ಕೇರಳದಲ್ಲಿ ಎಲ್ಲಾ ನೇಮಕಾತಿಗಳಲ್ಲಿ 42% ಪ್ರತಿಶತ ಭರ್ತಿಯಾಗಿದೆ. ಇದು ಕೇರಳ PSC ನೇಮಕಾತಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ ಎನ್ನುವುದನ್ನು ಸೂಚಿಸುತ್ತದೆ.

ಈ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರವು ಕೇರಳವನ್ನು ಆರ್ಥಿಕವಾಗಿ ಕತ್ತು ಹಿಸುಕುತ್ತಿದೆ. ವೇತನ ಪಾವತಿಗೆ ಅಡ್ಡಿಪಡಿಸುತ್ತಿದೆ. ರಾಜಕೀಯ ಲಾಭಕ್ಕಾಗಿ ಈ ಕೆಲಸ ಮಾಡುತ್ತಿದೆ. ಇದರ ಹಿಂದೆ ದೊಡ್ಡ ಹುನ್ನಾರವಿದ್ದಂತಿದೆ.

ಪ್ರ. ಈ ಪರಿಸ್ಥಿತಿಯನ್ನು ಹೇಗೆ ತಿಳಿಗೊಳಿಸಬಹುದು, ಪ್ರಕರಣದಲ್ಲಿ ಅನುಕೂಲಕರ ತೀರ್ಪು ನಿಮ್ಮದಾಗಲಿದೆ ಎಂದು ಅನಿಸುತ್ತದೆಯೇ ? ತೀರ್ಪು ರಾಜ್ಯದ ಪರವಾಗಿ ಬರದಿದ್ದರೆ, ನಿಮ್ಮ ಮುಂದಿನ ನಡೆ ಏನು ?

ಉ. ನಾವು ಜನರೊಂದಿಗೆ ಪಾರದರ್ಶಕವಾಗಿದ್ದೇವೆ ಮತ್ತು ಸತ್ಯ ತಿಳಿಸುತ್ತೇವೆ. ದುರದೃಷ್ಟವಶಾತ್, ನಾವು ಹಣವನ್ನು ಮುದ್ರಿಸಲು ಅಥವಾ ದೊಡ್ಡ ಮೊತ್ತದ ಸಾಲವನ್ನು ಪಡೆಯಲು ಸಾಧ್ಯವಿಲ್ಲ. ನಮಗೆ ಅಂದಾಜು 25,000 ಕೋಟಿ ರೂ.ಗಳ ಅಗತ್ಯವಿದ್ದು, ಕಳೆದ ವರ್ಷ ಮಾರ್ಚ್‌ನಲ್ಲಿ 22,000 ಕೋಟಿ ರೂ.ಗೂ ಹೆಚ್ಚು ಹಣವನ್ನು ಕೇರಳದ ಖಜಾನೆಯಿಂದ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ಸೂಕ್ತ ಅನುದಾನ ಬರದೇ ಇದ್ದರೆ ಹಣಕಾಸು ನಿರ್ವಹಣೆ ಕಷ್ಟವಾಗಲಿದೆ. ಕೇರಳ ಸರ್ಕಾರವು ಕಠಿಣ ಆರ್ಥಿಕ ಪರಿಸ್ಥತಿಯಲ್ಲಿದ್ದು, ಯಾವುದೇ ಸುಲಭ ಮಾರ್ಗ ನಮ್ಮ ಮುಂದೆ ಇಲ್ಲ. ಹೀಗಾಗಿ, ನಾವು ಪ್ರಾಮಾಣಿಕವಾಗಿ ಜನರಿಗೆ ಪರಿಸ್ಥಿತಿಯನ್ನು ವಿವರಿಸುತ್ತೇವೆ. ಕೇಂದ್ರ ಸರ್ಕಾರವು ಬಹುದೊಡ್ಡ ಮೊತ್ತದ ಹಣವನ್ನು ತಡೆಹಿಡಿದಿದೆ. ಇದನ್ನು ನಮ್ಮಿಂದ ನಿರ್ವಹಿಸುವುದು ಕಷ್ಟಕರವಾಗಿದೆ. ಹೀಗಾಗಿ, ನಾವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದೇವೆ. ಇದು ಕೇವಲ ಎಲ್‌ಡಿಎಫ್‌ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಲ್ಲ ಇಡೀ ಕೇರಳಕ್ಕೆ ಸಂಬಂಧಿಸಿದ್ದಾಗಿದೆ. ನಮಗೆ ನ್ಯಾಯಾಂಗದ ಮೇಲೆ ಸಂಪೂರ್ಣ ಭರವಸೆ ಇದೆ.

ಕೇಂದ್ರ ಸರ್ಕಾರವು ರಾಜ್ಯದ ಬಗೆಗಿನ ತನ್ನ ಧೋರಣೆಯನ್ನು ಬದಲಾಯಿಸದಿದ್ದಲ್ಲಿ ನಿಮ್ಮ ಪ್ಲಾನ್ ಬಿ ಏನು ?

ಉ. ಬಜೆಟ್ ಭಾಷಣದಲ್ಲಿ, ನಾನು ನಿರ್ದಿಷ್ಟವಾದ ಪ್ಲಾನ್‌ ಬಿ ಯೋಜನೆಯನ್ನು ವಿವರಿಸಲಿಲ್ಲ. ನಾವು ಕಾನೂನಾತ್ಮಕ ಹೋರಾಟ ಮಾಡುತ್ತಿದ್ದೇವೆ. ರಾಜ್ಯದ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಆಗಿರುವ ಸಮಸ್ಯೆಯನ್ನು ನಾವು ಸಾರ್ವಜನಿಕರಿಗೆ ತಿಳಿಸುತ್ತಿದ್ದೇವೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯು ಸರ್ಕಾರದ ಮಹತ್ವದ ನಿರ್ಧಾರವಾಗಿದೆ.

ಪ್ರ. GSDP ಯ 3.5% ರ ಸಾಲದ ಮಿತಿಯು ರಾಜ್ಯದ ಮೇಲೆ ಈಗ ಯಾವ ಪರಿಣಾಮವನ್ನು ಬೀರುತ್ತದೆ? ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಇಂತಹ ನಿಯಂತ್ರಣ ಕ್ರಮವನ್ನು ನೀವು ಹೇಗೆ ವಿರೋಧಿಸುತ್ತೀರಿ ?

ಉ. 2003ರ ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (FRBM) ಕಾಯ್ದೆಯ ಬಗ್ಗೆ ನಮಗೆ ಯಾವುದೇ ಅಭ್ಯಂತರವಿಲ್ಲ. ಈ ಕಾಯ್ದೆಯು ತೊಂಬತ್ತರ ದಶಕದ ನಂತರ ಬೇಜವಾಬ್ದಾರಿ ಮತ್ತು ಅತಿಯಾದ ಸಾಲ ಪಡೆಯುವುದನ್ನು ನಿರ್ಬಂಧಿಸುತ್ತದೆ.

ಇದು ಕೇಂದ್ರ ಸರ್ಕಾರ ಮತ್ತು ರಾಜ್ಯಗಳೆರಡಕ್ಕೂ ಅನ್ವಯಿಸುತ್ತದೆ. ಆದಾಗ್ಯೂ, ಕೇಂದ್ರ ಸರ್ಕಾರವು GDP ಯ 6.4% ನಲ್ಲಿ ಸಾಲವನ್ನು ಪಡೆಯುತ್ತಿದೆ. ಇದು 5.1% ಕ್ಕೆ ಇಳಿಕೆಯಾಗಬಹುದು ಎಂದು ನಿರೀಕ್ಷಿಸುತ್ತದೆ.

ಕಳೆದ ವರ್ಷ, ನಮಗೆ GSDPಯ 2.4% ವರೆಗೆ ಮಾತ್ರ ಸಾಲ ಪಡೆಯಲು ಅವಕಾಶವಿತ್ತು. ಮಿತಿಯನ್ನು 3.5% ಕ್ಕೆ ನಿಗದಿಪಡಿಸಲಾಗಿದ್ದರೂ, ನಮ್ಮ ಹಿಂದಿನ ಸಾಲಗಳನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರ ಸಾಲವನ್ನು ಕಡಿಮೆ ಮಾಡಿದೆ.

ಕೇಂದ್ರ ಸರ್ಕಾರಕ್ಕೂ ಸಾಲ ಮಿತಿ ಅನ್ವಯವಾಗುವುದಿಲ್ಲವೇ? ಅವರು ಅನುಮತಿಸಿದ ಮೊತ್ತಕ್ಕಿಂತ ಸುಮಾರು ಎರಡು ಪಟ್ಟು ಸಾಲವನ್ನು ಪಡೆಯುತ್ತಿದ್ದಾರೆ.

ಈ ವರ್ಷ ಕೇಂದ್ರ ಸರ್ಕಾರದ ವಿತ್ತೀಯ ಕೊರತೆ 17,00,000 ಕೋಟಿ ರೂ. ತೆರಿಗೆ ಹಂಚಿಕೆಯನ್ನು ಸಮರ್ಪಕವಾಗಿ ಮಾಡಿದ್ದರೆ, ಕೇರಳಕ್ಕೆ ದೊಡ್ಡ ಮಟ್ಟದ ಸಾಲ ಪಡೆಯವ ಅವಶ್ಯಕತೆ ಇಲ್ಲ.

10 ನೇ ಹಣಕಾಸು ಆಯೋಗದ ಅವಧಿಯಲ್ಲಿ ನಾವು ಪಡೆಯುತ್ತಿದ್ದಂತಹ ನಮ್ಮ ಪಾಲು ನಮಗೆ ಸಿಕ್ಕಿದ್ದರೆ, ನಮ್ಮ ಅಗತ್ಯಗಳನ್ನು ಕೇವಲ 2% ಸಾಲದಿಂದ ಪೂರೈಸಬಹುದಾಗಿತ್ತು.

ಪ್ರ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವಾಗಲಿ ಅಥವಾ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಆರೋಪವೆಂದರೆ ನಿಮ್ಮ ಸರ್ಕಾರಕ್ಕೆ ಆದಾಯ ಅಥವಾ ಪರಿಣಾಮಕಾರಿಯಾಗಿ ತೆರಿಗೆ ಸಂಗ್ರಹಿಸಲು ಸಾಧ್ಯವಾಗದಿರುವುದು ಆರ್ಥಿಕ ಬಿಕ್ಕಟ್ಟಿಗೆ ಮೂಲ ಕಾರಣ.

ಈ ಆರೋಪಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?

ಉ. ಕೇರಳವು ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡುವುದರೊಂದಿಗೆ ಆದಾಯವನ್ನು ಹೆಚ್ಚಿಸಲು ಸಹ ಯೋಜನೆ ರೂಪಿಸುತ್ತಿದೆ. ಹಣಕಾಸು ಸಚಿವಾಲಯ ಮತ್ತು ರಿಸರ್ವ್ ಬ್ಯಾಂಕ್ ಎರಡೂ ಸಹ ಕೇರಳದ ಆರ್ಥಿಕ ಬಲವರ್ಧನೆ ಮತ್ತು ಆದಾಯ ವೃದ್ಧಿಯ ಬದ್ಧತೆಯನ್ನು ಗುರುತಿಸಿವೆ.

2021ರಲ್ಲಿ COVID-19 ನಂತರ, ನಮ್ಮ ರಾಜ್ಯದ ತೆರಿಗೆ ಆದಾಯವು 47,000 ಕೋಟಿ ರೂಪಾಯಿ ಇತ್ತು. ಎರಡು ವರ್ಷಗಳಲ್ಲಿ ನಾವು 77,000-78,000 ಕೋಟಿ ರೂಪಾಯಿ ತಲುಪಿದೆ.

ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ನಾವು ಎಲ್ಲವನ್ನೂ ಮಾಡಿದ್ದೇವೆ. ಕಲ್ಯಾಣ ಯೋಜನೆಗಳು, ಆರೋಗ್ಯ ಯೋಜನೆಗಳು, ಶಾಲಾ ಶಿಕ್ಷಣ ಮತ್ತು ಕೇರಳದಲ್ಲಿ ಮಾತ್ರ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ.

ಆದರೆ, ಕೇಂದ್ರ ಸರ್ಕಾರವು ಈ ಯೋಜನೆಗಳಿಗೆ ಹಣವನ್ನು ಕಡಿತಗೊಳಿಸಲು ಸೂಚಿಸಿದೆ. ಈ ರೀತಿ ಮಾಡಲು ಸಾಧ್ಯವಿಲ್ಲ. ನಮ್ಮ ನೀತಿಯಿಂದ ಕೆಲವು ನಿರ್ದಿಷ್ಟ ಅಭಿವೃದ್ಧಿ ಸೂಚ್ಯಂಕಗಳ ವಿಷಯದಲ್ಲಿ ಕೇರಳ ಅಗ್ರಸ್ಥಾನದಲ್ಲಿದೆ.

ಖರ್ಚಿನ ವಿಷಯದಲ್ಲಿ ನಾವು ದೇಶದ 24 ಸೂಚ್ಯಂಕಗಳಲ್ಲಿ ಅಗ್ರಸ್ಥಾನದಲ್ಲಿದ್ದೇವೆ. ಇನ್ನು ಕೇರಳ ಸರ್ಕಾರವು ತೆರಿಗೆ ಸಂಗ್ರಹದಲ್ಲಿ ದಾಖಲೆಯ ಏರಿಕೆ ಕಂಡಿದೆ.

ಆದಾಗ್ಯೂ, ಕೇಂದ್ರ ಸರ್ಕಾರವು ನಮ್ಮ ನ್ಯಾಯಯುತ ಪಾಲನ್ನು ನಿರಾಕರಿಸಿದೆ. ಇದನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಅವರು ಸಹ ಹೇಳಿದ್ದಾರೆ.

ಪ್ರಶ್ನೆ. ನಿಮ್ಮ ಬಜೆಟ್‌ನಲ್ಲಿ ಶಿಕ್ಷಣ ಮತ್ತು ಆರೋಗ್ಯದಲ್ಲಿ ಕಾರ್ಪೊರೇಟ್ ಹೂಡಿಕೆಗಳ ವಿಷಯ ಪ್ರಸ್ತಾಪಿಸಿದ್ದೀರಿ, ಹಾಗೆಯೇ ರಾಜ್ಯವನ್ನು ಶಿಕ್ಷಣ ಕೇಂದ್ರವಾಗಿ ಪರಿವರ್ತಿಸಲು ವಿದೇಶಿ ವಿಶ್ವವಿದ್ಯಾಲಯಗಳಿಗೆ ಆಹ್ವಾನಿಸಿದ್ದೀರಿ, ಈ ಯೋಜನೆಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಪಕ್ಷದೊಳಗೆ ವಿರೋಧ ಎದುರಿಸುತ್ತಿರುವಂತಿದೆ. ಈ ಪ್ರಸ್ತಾವನೆಗಳ ಪ್ರಸ್ತುತ ಸ್ಥಿತಿ ಏನು?

ಉ. ನಾವು ಶಿಕ್ಷಣ ಅಥವಾ ಆರೋಗ್ಯ ಕ್ಷೇತ್ರಗಳ ಮೇಲೆ ಮಾತ್ರ ಗಮನಹರಿಸುತ್ತಿಲ್ಲ. ಬಂದರುಗಳು, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಹೂಡಿಕೆಯನ್ನು ಬಯಸುತ್ತಿದ್ದೇವೆ. ಬಜೆಟ್ ಭಾಷಣದಲ್ಲಿ, ಉನ್ನತ ಶಿಕ್ಷಣದಲ್ಲಿ ವಿದೇಶಿ ಹೂಡಿಕೆಯನ್ನು ಅನುಮತಿಸುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ. ಆದರೆ, ಇದರ ಬಗ್ಗೆ ಅಂತಿಮ ತೀರ್ಮಾನ ಆಗಿಲ್ಲ. ಹೂಡಿಕೆಯನ್ನು ಆಕರ್ಷಿಸುವ ಜೊತೆಗೆ ಕೇರಳದ ಶೈಕ್ಷಣಿಕ ಕ್ಷೇತ್ರವನ್ನು ದೇಶದಲ್ಲೇ ಅಗ್ರಸ್ಥಾನಕ್ಕೆ ತೆಗೆದುಕೊಂಡು ಹೋಗುವುದು ನಮ್ಮ ಗುರಿಯಾಗಿದೆ.

ಇದು ಕೇವಲ ವಿದೇಶಿ ಹೂಡಿಕೆಯ ಬಗ್ಗೆ ಅಲ್ಲ; ಇದು ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದು ಸಹ ಆಗಿದೆ. ನಾವು ಎಲ್ಲಾ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುವುದನ್ನು ತಡೆಯಲು ಸಾಧ್ಯವಿಲ್ಲವಾದರೂ, ಸಾಧ್ಯವಾದಷ್ಟು ತಡೆಯಬಹುದಾಗಿದೆ. ನಾವು ಇಲ್ಲಿ ಉತ್ತಮ ಗುಣಮಟ್ಟದ ಶೈಕ್ಷಣಿಕ ವಾತಾವರಣವನ್ನು ರಚಿಸಬಹುದು. ಇದರಿಂದ ಹೊರ ರಾಜ್ಯ ಹಾಗೂ ವಿದೇಶದ ವಿದ್ಯಾರ್ಥಿಗಳನ್ನೂ ಆಕರ್ಷಿಸಬಹುದಾಗಿದೆ.    

Tags:    

Similar News