ಬೆಂಗಳೂರಿನಲ್ಲಿ ಬರ ಇರುವುದು ನೀರಿಗಲ್ಲ; ನಿರ್ವಹಣೆಗೆ!

ಕಳೆದ ಎರಡು ದಶಕಗಳ ಅವೈಜ್ಞಾನಿಕ/ಯೋಜನಾಬದ್ಧವಲ್ಲದ ಬೆಳವಣಿಗೆಯಿಂದ, ಬೆಂಗಳೂರಿನ ನೀರಿನ ಬವಣೆ ಕುದಿಯುವ ಹಂತ ತಲುಪಿದೆ. ನಗರಕ್ಕೆ 2007ರಲ್ಲಿ ಸೇರ್ಪಡೆಯಾದ 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೊಳಾಯಿ ನೀರು ಮತ್ತು ಶೌಚ ವ್ಯವಸ್ಥೆ ಈವರೆಗೆ ಸಾಕಾರಗೊಂಡಿಲ್ಲ. 2023ರಲ್ಲಿ ಮಳೆಗಾಲ ವಿಫಲವಾಗಿರುವುದರಿಂದ, ಅಂತರ್ಜಲ ಪಾತಾಳಕ್ಕೆ ಇಳಿದಿದೆ. ಬಿಬಿಎಂಪಿಯ ಕೊಳವೆ ಬಾವಿಗೆ ಜೋಡಣೆಯಾದ ನೀರಿನ ಎಟಿಎಂಗಳು ಖಾಲಿಯಾಗಿವೆ.

Update: 2024-03-26 01:20 GMT
ತ್ಯಾಜ್ಯ ನೀರು ಸಂಸ್ಕರಣೆ ಘಟಕ

ಬೆಂಗಳೂರಿನ ಜಲ ಕ್ಷಾಮ ಒಂದು ದಿನದಲ್ಲಿ ಆದದ್ದಲ್ಲ. ಇರುವುದು ನೀರಿನ ಕೊರತೆಯಲ್ಲ; ನಿರ್ವಹಣೆಯಲ್ಲಿನ ವೈಫಲ್ಯ. ಕಳೆದ ಎರಡು ದಶಕಗಳ ಅವೈಜ್ಞಾನಿಕ/ಯೋಜನಾಬದ್ಧವಲ್ಲದ ಬೆಳವಣಿಗೆಯಿಂದ, ಬೆಂಗಳೂರಿನ ನೀರಿನ ಬವಣೆ ಕುದಿಯುವ ಹಂತ ತಲುಪಿದೆ. ನಗರಕ್ಕೆ 2007ರಲ್ಲಿ ಸೇರ್ಪಡೆಯಾದ 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕೊಳಾಯಿ ನೀರು ಮತ್ತು ಶೌಚ ವ್ಯವಸ್ಥೆ ಈವರೆಗೆ ಸಾಕಾರಗೊಂಡಿಲ್ಲ. 2023ರಲ್ಲಿ ಮಳೆಗಾಲ ವಿಫಲವಾಗಿರುವುದರಿಂದ, ಅಂತರ್ಜಲ ಪಾತಾಳಕ್ಕೆ ಇಳಿದಿದೆ. ಬಿಬಿಎಂಪಿಯ ಕೊಳವೆ ಬಾವಿಗೆ ಜೋಡಣೆಯಾದ ನೀರಿನ ಎಟಿಎಂಗಳು ಖಾಲಿಯಾಗಿವೆ. ʻಒಬ್ಬರಿಗೆ ದಿನಕ್ಕೆ ಒಂದು ಕ್ಯಾನ್‌ ಮಾತ್ರʼ ಎಂಬ ಬೋರ್ಡ್‌ ಕೆಲವೆಡೆ ರಾರಾಜಿಸುತ್ತಿದೆ. ನಗರದ ಹೊರಭಾಗದ ಹಳ್ಳಿಗಳಲ್ಲಿ ಸ್ಥಳೀಯ ಪಂಚಾಯಿತಿಗಳು ಕೊರೆಸಿದ ಬಾವಿಗಳು ಈಗ ಬಿಬಿಎಂಪಿ ಸುಪರ್ದಿನಲ್ಲಿದ್ದು, ಹೆಚ್ಚಿನವು ಬತ್ತಿ ಹೋಗಿವೆ. 

ಹೊರವಲಯದ ಗ್ರಾಮಗಳ ರೈತರ ಜಮೀನುಗಳಲ್ಲಿನ ಕೊಳವೆ ಬಾವಿಗಳು ಅವರ ಆದಾಯ ಮೂಲವಾಗಿದ್ದವು ಮತ್ತು ಅವು ಈಗ ಖಾಲಿಯಾಗಿವೆ. ಕೆಲವು ಗ್ರಾಮಗಳಲ್ಲಿ ನೀರು ಎತ್ತುವುದನ್ನು ನಿಷೇಧಿಸಲಾಗಿದೆ. ರಾಜಧಾನಿಯಲ್ಲಿ ಅಂದಾಜು 3,500 ಟ್ಯಾಂಕರ್‌ಗಳಿದ್ದು, ಇವು ಒಟ್ಟು ಅಗತ್ಯದ ಶೇ.25ರಷ್ಟು ನೀರು ಪೂರೈಸುತ್ತಿವೆ. ಕಳೆದ ವರ್ಷ ಜಲ ಮೂಲದಿಂದ ಗ್ರಾಹಕರಿಗೆ ಇದ್ದ ದೂರ 30 ಕಿಮೀ. ಈಗ 50 ಕಿಮೀಗೆ ಹೆಚ್ಚಳಗೊಂಡಿದೆ. ಬೆಂಗಳೂರಿನ ಮೇಲೆ ಜಲಕ್ಷಾಮದ ಛಾಯೆ ಸುಳಿದಾಡುತ್ತಲೇ ಇತ್ತು. ಕಳೆದ ವರ್ಷ ನೈಋತ್ಯ ಮಾರುತದಿಂದ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ದಿಲ್ಲಿ, ಕೋಲೊತ್ತಾದಂಥ ನಗರಗಳಲ್ಲಿ ನೀರಿನ ಕೊರತೆ ವರದಿಯಾಗಿತ್ತು. ಆದರೆ, ಅವು ನದಿಗಳ ಪಕ್ಕದಲ್ಲಿ ಇರುವುದರಿಂದ, ಹೆಚ್ಚು ಸಮಸ್ಯೆ ಆಗಲಿಲ್ಲ. ಆದರೆ, ಬೆಂಗಳೂರಿನ ಪಕ್ಕ ಯಾವುದೇ ನದಿ ಅಥವಾ ಕರಾವಳಿ ಇಲ್ಲ. ಕೆಂಪೇಗೌಡರು 1537ರಲ್ಲಿ ಸ್ಥಾಪಿಸಿದ ಬೆಂಗಳೂರು, ಈಗ ದೇಶದ 3ನೇ ಅತಿ ಹೆಚ್ಚು ಜನಸಂಖ್ಯೆ ಇರುವ ನಗರವಾಗಿದೆ. 1990ರಲ್ಲಿ ಪ್ರಾರಂಭವಾದ ರಿಯಲ್‌ ಎಸ್ಟೇಟ್‌ ಉಬ್ಬರಕ್ಕೆ ನಗರದಲ್ಲಿನ ಕೆರೆಗಳು/ಜೌಗು ಪ್ರದೇಶಗಳು ಬಲಿಯಾದವು. ಇದರ ಪರಿಣಾಮವೇ ಜಲ ಕ್ಷಾಮ. 

ಹಿಂದೆ ಬೆಂಗಳೂರಿನ ನೀರಿನ ಅಗತ್ಯಗಳನ್ನು ಕೆರೆಗಳು ಪೂರೈಸುತ್ತಿದ್ದವು. ಕೆರೆಗಳು ಮಳೆ ನೀರು ಸಂಗ್ರಹಿಸಿ, ಪಶುಗಳು, ಕೃಷಿಗೆ ಹಾಗೂ ಜನ ಬಳಕೆಗೆ ಪೂರೈಸುತ್ತಿದ್ದವು. ನಗರದ ಭೂಮೇಲ್ಮೈ ಉಬ್ಬುತಗ್ಗುಗಳಿಂದ ಕೂಡಿರುವುದರಿಂದ, ಕೆರೆಗಳು ನೀರು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಈ ಕೆರೆ ವ್ಯವಸ್ಥೆ ಕಾಲಕ್ರಮೇಣ ಕೊಳಾಯಿ ನೀರು ಪೂರೈಕೆಯಿಂದ ಪ್ರಾಮುಖ್ಯತೆ ಕಳೆದುಕೊಂಡಿತು. ನಗರೀಕರಣದಿಂದ ಕೆರೆಗಳು ಒತ್ತುವರಿಯಾದವು ಇಲ್ಲವೇ ನಿರ್ಲಕ್ಷ್ಯದಿಂದ ಬತ್ತಿದವು. ಇದರಿಂದ ಒಣ ಹವೆ ಮತ್ತು ಪ್ರವಾಹದ ಭೀತಿ ಹೆಚ್ಚಿತು. ಬೆಂಗಳೂರು ಸುಮಾರು 90ಕಿ ಮೀ ದೂರದಲ್ಲಿರುವ, ಮಳೆಗಾಲವನ್ನು ಅವಲಂಬಿಸಿದ, ನಂಬಿಕಾರ್ಹವಲ್ಲದ ಮತ್ತು ಸಂಗ್ರಹ-ಶುದ್ಧೀಕರಣ-ಸಾಗಣೆ-ವಿತರಣೆಗೆ ಹೆಚ್ಚು ವೆಚ್ಚ ತಗಲುವ ದುಬಾರಿ ಜಲಮೂಲವಾದ ಕಾವೇರಿಯನ್ನು ಆಧರಿಸಿದೆ. ರಾಜಧಾನಿಗಿತ 350 ಮೀಟರ್‌ ತಗ್ಗಿನಲ್ಲಿರುವ ಜಲಾಶಯದಿಂದ ನೀರು ಎತ್ತಿ, ತೊರೆಕಾಡನಹಳ್ಳಿಯಲ್ಲಿ ಸಂಗ್ರಹಿಸಿ, ನಗರಕ್ಕೆ ವಿತರಿಸಲು ಅಪಾರ ವೆಚ್ಚ ಆಗುತ್ತದೆ. ರಾಜ್ಯದೆಲ್ಲೆಡೆ ಬರ ಪರಿಸ್ಥಿತಿ ಇರುವುದರಿಂದ, ಕನ್ನಂಬಾಡಿ ಕಟ್ಟೆಯಲ್ಲಿ ಈ ವರ್ಷ ನೀರು ಕಡಿಮೆ ಇದೆ.

ಭಾರತೀಯ ವಿಜ್ಞಾನ ಸಂಸ್ಥೆಯ ಶಕ್ತಿ ಮತ್ತು ಜೌಗು ಪ್ರದೇಶಗಳ ಸಂಶೋಧನೆ ಗುಂಪಿನ ಟಿ.ವಿ.ರಾಮಚಂದ್ರ ಅವರ ಪ್ರಕಾರ, ಯೋಜನಾರಹಿತ ನಗರೀಕರಣದಿಂದ ಮಾಲಿನ್ಯ ಹೆಚ್ಚಿದೆ. ಅಗತ್ಯ ಮೂಲಸೌಲಭ್ಯಗಳ ಕೊರತೆ ಉಂಟಾಗಿದ್ದು, ಇದರ ಫಲವೇ ನೀರಿನ ಕೊರತೆ, ಸ್ವಲ್ಪ ಹೆಚ್ಚು ಮಳೆ ಬಿದ್ದರೆ ಪ್ರವಾಹ, ಹಿತವೆನಿಸದ ಕಟ್ಟಡಗಳು, ಘನ-ದ್ರವ ತ್ಯಾಜ್ಯದ ಗುಡ್ಡೆ ನಿರ್ಮಾಣ. 1961ರಲ್ಲಿ 262 ಕೆರೆಗಳಿದ್ದವು. ಪರಸ್ಪರ ಸಂಪರ್ಕವಿದ್ದ ಈ ಕೆರೆಗಳು ಅಂತರ್ಜಲ ಮಟ್ಟವನ್ನು ಕಾಯ್ದುಕೊಂಡಿದ್ದವು. ಹಲವು ಕೆರೆಗಳು ಲೇಔಟ್‌ ಆಗಿ ಬದಲಾದವು. ಬಿಡಿಎ-ಬಿಬಿಎಂಪಿ ಸುಮಾರು 100 ಕೆರೆಗಳನ್ನು ನೇರ-ಅಪರೋಕ್ಷವಾಗಿ ನೆಲಮಟ್ಟಗೊಳಿಸಿತು. ಉಳಿದಿರುವುದು 81 ಕೆರೆ ಮಾತ್ರ. ಇದರಲ್ಲಿ 33 ಕೆರೆಗಳು ಮಾತ್ರ ಜೀವಂತವಾಗಿವೆ; ಅತಿಕ್ರಮಣಕ್ಕೆ ಅವಕಾಶವಿಲ್ಲದ ಸ್ಥಳದಲ್ಲಿ ಅವು ಇರುವುದು ಉಳಿದುಕೊಳ್ಳಲು ಕಾರಣ. ಹೆಬ್ಬಾಳ, ನಾಗವಾರ, ದಾಸರಹಳ್ಳಿ, ಲಾಲ್‌ಬಾಗ್‌, ವೆಂಗಯ್ಯನ ಕೆರೆ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ಶೇ.90ರಷ್ಟು ಕೆರೆಗಳು ಮಾಲಿನ್ಯದಿಂದ ಸಾಯುತ್ತಿವೆ. ಕರಗಿದ ಆಮ್ಲಜನಕದ ಪ್ರಮಾಣ ಲೀಟರಿಗೆ 4 ಮಿಲಿಗ್ರಾಂಗಿಂತ ಬಹಳ ಕಡಿಮೆ ಇದೆ. 

ಬೇಡಿಕೆ-ಪೂರೈಕೆ:

* ನಗರಕ್ಕೆ ಅಗತ್ಯವಿರುವುದು 2,600-2,800 ಎಂಎಲ್ಡಿ(ಗೃಹಬಳಕೆ 1,890, ವಾಣಿಜ್ಯ-ಸಾಂಸ್ಥಿಕ 205, ಕೈಗಾರಿಕೆ 441, ನಿರ್ಮಾಣ ಕ್ಷೇತ್ರ 78, ಉದ್ಯಾನಗಳಿಗೆ 24 ಎಂಎಲ್‌ಡಿ).

* ಪೂರೈಕೆ ಆಗುತ್ತಿರುವುದು-2,536 ಎಂಎಲ್‌ಡಿ(ಬಿಡಬ್ಲ್ಯುಎಸ್‌ಎಸ್‌ಬಿ- ಗೃಹ ಬಳಕೆಗೆ 1018, ವಾಣಿಜ್ಯ/ಸಾಂಸ್ಥಿಕ ಪೂರೈಕೆ 158 ಎಂಎಲ್‌ಡಿ, ಕೈಗಾರಿಕೆಗಳಿಗೆ 47 ಎಂಎಲ್‌ಡಿ: ಕೊಳವೆ ಬಾವಿಗಳಿಂದ-ಸ್ವಂತ ಕೊಳವೆ ಬಾವಿ 872, ಕೈಗಾರಿಕೆಗಳ ಕೊಳವೆ ಬಾವಿ 428 ಎಂಎಲ್‌ಡಿ, ವಾಣಿಜ್ಯ-ಸಾಂಸ್ಥಿಕ ಕೊಳವೆ ಬಾವಿ 47 ಇತ್ಯಾದಿ). ಅಂದರೆ, ಕೊಳವೆ ಬಾವಿಗಳಿಂದ 1,347 ಎಂಎಲ್‌ಡಿ ಪೂರೈಕೆ ಆಗುತ್ತಿದೆ.

* ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ನೀರು-1,940 ಎಂಎಲ್‌ಡಿ(ಸಂಸ್ಕರಣೆ 1,239 ಎಂಎಲ್‌ಡಿ, ಮರುಬಳಕೆ 689 ಎಂಎಲ್‌ಡಿ)

ಕಾವೇರಿ ನೀರು 1,460 ಎಂಎಲ್‌ಡಿ. ಅಂದರೆ, ಮಾಸಿಕ 1.54 ಟಿಎಂಸಿ ಅಡಿ: ಕಾವೇರಿಯಲ್ಲಿರುವ ಸಂಗ್ರಹ 15.071 ಟಿಎಂಸಿ ಅಡಿ(ಫೆಬ್ರವರಿ 2024). 

ಸಂಭಾವ್ಯ ಪರಿಹಾರಗಳು: ಬೆಂಗಳೂರು ಎರಡು ನದಿಗಳ ಪಾತ್ರದಲ್ಲಿದೆ. ಪಶ್ಚಿಮದಲ್ಲಿ ಕಾವೇರಿಯ ಉಪನದಿಗಳಾದ ವೃಷಭಾವತಿ ಮತ್ತು ಅರ್ಕಾವತಿ ಹಾಗೂ ಪೂರ್ವದಲ್ಲಿ ಪೊನ್ನಿಯಾರ್(ದಕ್ಷಿಣ ಪಿನಾಕಿನಿ). ಈ ನದಿಗಳು ಮಳೆಗಾಲದಲ್ಲಿ ಮಾತ್ರ ಕಾಣಸಿಗುತ್ತವೆ. ವೃಷಭಾವತಿ ತ್ಯಾಜ್ಯ-ಕಸದಿಂದ ಚರಂಡಿಯಾಗಿ ಪರಿವರ್ತನೆಯಾಗಿದೆ. ರಾಜ್ಯದೆಲ್ಲೆಡೆ ಬರ ಸನ್ನಿವೇಶ ಇರುವುದರಿಂದ, ಕನ್ನಂಬಾಡಿ ಕಟ್ಟೆಯಲ್ಲಿ ಕೂಡ ನೀರು ಕಡಿಮೆ ಇದೆ (2023ರಲ್ಲಿ 28.44 ಟಿಎಂಸಿ ಅಡಿ. ಈ ವರ್ಷ 15.72 ಟಿಎಂಸಿ ಅಡಿ).

ಪರಿಹಾರ 1: ಮಳೆ ಕೊಯ್ಲು ಕಡ್ಡಾಯಗೊಳಿಸುವುದು- ನಗರದಲ್ಲಿ ವಾರ್ಷಿಕ 700-850 ಮಿಮೀ ಮಳೆ ಆಗುತ್ತದೆ. ಇದರಿಂದ 15 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದು. ನಗರಕ್ಕೆ ಅಗತ್ಯವಿರುವುದು 18 ಟಿಎಂಸಿ ನೀರು. ಮಳೆ ನೀರು ಸಂಗ್ರಹಿಸಿದಲ್ಲಿ ಅದು ನಗರದ ಶೇ.70ರಷ್ಟು ನೀರು ಪೂರೈಸಲಿದೆ. ಬೆಂಗಳೂರಿನಲ್ಲಿ 39,291 ಕಟ್ಟಡಗಳಲ್ಲಿ ಮಾತ್ರ ಮಳೆ ನೀರು ಸಂಗ್ರಹ ವ್ಯವಸ್ಥೆ ಇದೆ. 30X40 ಅಡಿಗಿಂತ ಹೆಚ್ಚು ವಿಸ್ತೀಣದ ಕಟ್ಟಡಗಳಲ್ಲಿ ಮಳೆ ಕೊಯ್ಲು ಕಡ್ಡಾಯಗೊಳಿಸಿದ್ದರೂ, ಜನ ಅಳವಡಿಕೆಗೆ ನಿರ್ಲಕ್ಷ್ಯ ತೋರಿಸಿದ್ದಾರೆ. ಕಾಯಿದೆ ಉಲ್ಲಂಘನೆಗೆ ಮಾಸಿಕ 194 ಲಕ್ಷ ರೂ ದಂಡ ಪಾವತಿ ಕಟ್ಟುತ್ತಿದ್ದಾರೆ! ಬಿಬಿಎಂಪಿಗೆ ಅಂದಾಜು 6,000 ಕೋಟಿ ರೂ. ಆಸ್ತಿ ತೆರಿಗೆ ಕಟ್ಟುವ ಕಟ್ಟಡ ಮಾಲೀಕರಿಗೆ ಮಳೆ ಕೊಯ್ಲು ಅಳವಡಿಸಿಕೊಳ್ಳಲು ಹಿಂಜರಿಕೆ ಏಕೆ ಎನ್ನುವುದು ಅರ್ಥವಾಗದ ಸಂಗತಿ.

ಸೆಂಟರ್‌ ಫಾರ್‌ ಪಬ್ಲಿಕ್‌ ಪ್ರಾಬ್ಲಂ ಸಾಲ್ವಿಂಗ್‌ನ ಮುನ್ನೋಟ ದಾಖಲೆ ʻಮತ್ತೊಂದು ಕಾವೇರಿʼ ಪ್ರಕಾರ, ಬೆಂಗಳೂರು ಮೆಟ್ರೋ ರೀಜನ್(ಬಿಎಂಆರ್)ನಲ್ಲಿ ಬೀಳುವ ಮಳೆಯಲ್ಲಿ ಶೇ.10ರಷ್ಟು ಹಿಡಿದಿಟ್ಟರೆ, ಸಮಸ್ಯೆ ಬಗೆಹರಿಯಲಿದೆ. ದೊಡ್ಡ ಕೆರೆಗಳಿಂದ 700 ಎಂಎಲ್ಡಿ ನೀರು ಪಡೆಯಬಹುದು. ಶೇ.50ರಷ್ಟು ಕಟ್ಟಡಗಳಿಗೆ ಮಳೆಕೊಯ್ಲು ಅಳವಡಿಸಿದರೆ, 200 ಎಂಎಲ್ಡಿ ನೀರು ಸಿಗಲಿದೆ. ಕಟ್ಟಡಗಳಿಗೆ ಜೋಡಿ ಕೊಳವೆ(ಶುದ್ಧ ನೀರು-ಸಂಸ್ಕರಿಸಿದ ನೀರು) ವ್ಯವಸ್ಥೆ ಕಡ್ಡಾಯಗೊಳಿಸಬೇಕು. 

ಪರಿಹಾರ 2: ಕೆರೆಗಳ ಪುನರುಜ್ಜೀವನದ ಮೂಲಕ ಮಳೆ ನೀರಿನ ಸಂಗ್ರಹ- ನಗರೀಕರಣದಿಂದ ಕೆರೆಗಳು ಒತ್ತುವರಿಯಾದವು ಇಲ್ಲವೇ ನಿರ್ಲಕ್ಷ್ಯದಿಂದ ಬತ್ತಿದವು. ಇದರಿಂದ ಒಣ ಹವೆ ಮತ್ತು ಪ್ರವಾಹದ ಭೀತಿ ಹೆಚ್ಚಿತು. ಕೆರೆಗಳು ಮತ್ತು ಮಳೆ ನೀರು ಕಾಲುವೆಗಳು ಕಸದ ತೊಟ್ಟಿಗಳಾಗಿವೆ. ಮಳೆ ನೀರು ಕಾಲುವೆ ಒತ್ತುವರಿ ತೆರವುಗೊಳಿಸಿ, ಕೆರೆಗಳ ಅಂತರ್‌ ಜೋಡಣೆಯನ್ನು ಮರುಸ್ಥಾಪನೆ ಮಾಡಬೇಕು. ವಿಜ್ಞಾನಿ ಟಿ.ವಿ.ರಾಮಚಂದ್ರ ಅವರ ಪ್ರಕಾರ, ʻನಗರದಲ್ಲಿ ಕೆರೆಗಳಿದ್ದಾಗ 100 ಅಡಿಗೆ ನೀರು ಸಿಗುತ್ತಿತ್ತು. ಅಭಿವೃದ್ಧಿ ಹೆಸರಿನಲ್ಲಿ ಕೆರೆಗಳನ್ನು ನುಂಗಿದ ಬಳಿಕ 1,800 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಸಿಕ್ಕಿದರೂ ಭಾರ ಲೋಹಗಳಿಂದ ತುಂಬಿಕೊಂಡು, ಕುಡಿಯಲು ಅರ್ಹವಾಗಿರುವುದಿಲ್ಲ. 1970ರಲ್ಲಿ ಶೇ.68ರಷ್ಟು ಹಸಿರು ಕವಚವಿದ್ದ ನಗರದಲ್ಲಿ ಈಗ ಶೇ.18 ಮಾತ್ರ ಮರಗಿಡಗಳು ಉಳಿದಿವೆ. ಶೇ.79ರಷ್ಟು ಜಲಕಾಯಗಳು ಕಣ್ಮರೆಯಾಗಿವೆ. ಬೆಂಗಳೂರಿನ ಶೇ.45ರಷ್ಟು ಜನ ಅಂತರ್ಜಲವನ್ನು ಆಧರಿಸಿದ್ದಾರೆ. ಕಾಡಿನ ನಾಶದಿಂದ ಕಾವೇರಿಯಲ್ಲಿ ನೀರಿನ ಸಂಗ್ರಹ ಕುಸಿದಿದೆ. ಬೆಂಗಳೂರಿಗೆ ಕೆರೆ ಮಾಹಿತಿ ವ್ಯವಸ್ಥೆ(ಬಿಎಲ್‌ಐಎಸ್‌ಎಸ್‌,ಬ್ಲಿಸ್) ರೂಪಿಸಬೇಕಿದೆ. ನಾವು 193 ಕೆರೆಗಳನ್ನು ಅವಲೋಕಿಸಿದ್ದೇವೆ; ಯಾವ ಕೆರೆ ಎಷ್ಟು ಅತಿಕ್ರಮಣಗೊಂಡಿದೆ? ಕೆರೆ ನೀರಿನ ಭೌತಿಕ, ಜೈವಿಕ, ರಾಸಾಯನಿಕ ಸ್ಥಿತಿ ಏನು ಎನ್ನುವುದು ನಮಗೆ ಗೊತ್ತಿದೆ. ಆದರೆ, ಗೊತ್ತಾಗಬೇಕಿರುವುದು ಯಾರು ಕೆರೆ ನುಂಗಿದ್ದಾರೆ ಎನ್ನುವುದುʼ ! ಕೆರೆ ಜತೆಗೆ ಎಲ್ಲ ಜಲಮೂಲಗಳನ್ನು ಸಂರಕ್ಷಿಸಬೇಕಿದೆ. 

ಪರಿಹಾರ 3: ತ್ಯಾಜ್ಯ ನೀರಿನ ಪರಿಷ್ಕರಣೆ- ನಗರ ಪ್ರತಿನಿತ್ಯ 1,940 ಎಂಎಲ್‌ಡಿ ಮಲಿನ ನೀರು ಸೃಷ್ಟಿಸುತ್ತಿದೆ. ಜನಸಂಖ್ಯೆ ಹೆಚ್ಚಿದಂತೆ, ಮಲಿನ ನೀರಿನ ಪ್ರಮಾಣ ಕೂಡ ಹೆಚ್ಚುತ್ತದೆ. ತ್ಯಾಜ್ಯ ನೀರಿನ ಪರಿಷ್ಕರಣೆ ಮತ್ತು ಮರುಬಳಕೆಯಿಂದ ಶುದ್ಧ ನೀರಿಗೆ ಬೇಡಿಕೆ ಕಡಿಮೆಯಾಗಲಿದೆ; ಅದರೊಟ್ಟಿಗೆ ಕೊರತೆಯ ಪ್ರಮಾಣವೂ. ಅಪಾರ್ಟ್‌ ಮೆಂಟ್‌ಗಳು-ವಾಣಿಜ್ಯಿಕ ಸಂಸ್ಥೆಗಳು ಮತ್ತು ಉದ್ಯಮಗಳು ತಾಜ್ಯ ಸಂಸ್ಕರಣೆ ಘಟಕ(ಎಸ್‌ಟಿಪಿ)ಗಳನ್ನು ಅಳವಡಿಸಿಕೊಂಡಿರುವುದರಿಂದ, ಅವುಗಳ ಗುಣಮಟ್ಟದ ಮಾನಕಗಳನ್ನು ಏಕರೂಪಗೊಳಿಸಬೇಕಿದೆ ಮತ್ತು ಸಮರ್ಪಕ ಕಾರ್ಯನೀತಿ ರೂಪಿಸಬೇಕಿದೆ. ಇದರಿಂದ ಒಂದೇ ಗುಣಮಟ್ಟದ ಸಂಸ್ಕರಿಸಿದ ನೀರು ಲಭ್ಯವಾಗಲಿದ್ದು, ಮನೆ-ಉದ್ಯಮ-ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಬಳಸಬಹುದು. ಇದರಿಂದ ಶುದ್ಧ ನೀರಿಗೆ ಬೇಡಿಕೆ ಕಡಿಮೆಯಾಗಲಿದೆ. ಸಂಸ್ಕರಿಸಿದ ನೀರು ಬಳಸಬೇಕೆಂಬ ಕಾನೂನು ಇದೆ. 20 ಘಟಕ ಇರುವ ಅಪಾರ್ಟ್ಮೆಂಟ್‌ಗಳು ತ್ಯಾಜ್ಯ ನೀರು ಸಂಸ್ಕರಣೆ(ಎಸ್‌ಟಿಪಿ)ಘಟಕವನ್ನು ಅಳವಡಿಸುವಿಕೆಯನ್ನು ಕಡ್ಡಾಯಗೊಳಿಸಬೇಕಿದೆ. ಆದರೆ, ಬಿಬಿಎಂಪಿ ಮೂಲಗಳ ಪ್ರಕಾರ, ಜನ ಕಟ್ಟಡ ನಿರ್ಮಾಣಕ್ಕೆ ಕೂಡ ಸಂಸ್ಕರಿಸಿದ ನೀರು ಬಳಸಲು ಹಿಂಜರಿಯುತ್ತಾರೆ. ಈ ಪ್ರವೃತ್ತಿ ತೊಲಗಬೇಕಿದೆ. ಕಟ್ಟಡಗಳಿಗೆ ತ್ಯಾಜ್ಯ ನೀರು ಪೂರೈಸಲು ಪ್ರತ್ಯೇಕ ಕೊಳವೆ ಅಳವಡಿಸಬೇಕಿದೆ. ಇದನ್ನು ಕಡ್ಡಾಯಗೊಳಿಸಬೇಕು. 

ಪರಿಹಾರ 4: ಅಂತರ್ಜಲದ ಮರುದುಂಬುವಿಕೆ- ಜಲ ಸುರಕ್ಷೆಯನ್ನು ಸುಧಾರಿಸುವ ಇನ್ನೊಂದು ಪ್ರಮುಖ ಹೆಜ್ಜೆ. ನಗರದ ಹಸಿರು-ನೀರಿನ ಮೂಲ ವ್ಯವಸ್ಥೆಗಳು-ಕೆರೆ, ಉದ್ಯಾನ, ಜೌಗು ಪ್ರಧೇಶ ಮತ್ತು ತೆರೆದ ಪ್ರದೇಶಗಳು ನೀರು ಇಂಗಿಸಲು ನೆರವಾಗುತ್ತವೆ. ಎ ಮಿಲಿಯನ್‌ ವೆಲ್ಸ್‌ ಫಾರ್‌ ಬೆಂಗಳೂರು ಆಂದೋಲನದಡಿ ಬಾವಿಗಳನ್ನು ಮರುದುಂಬುವ ಕಾರ್ಯ ನಡೆಯುತ್ತಿದೆ. ಬಿಬಿಎಂಪಿ ಕೊರೆದ 10,955 ಕೊಳವೆ ಬಾವಿಗಳಲ್ಲಿ 1,214 ಸಂಪೂರ್ಣ ಬತ್ತಿಹೋಗಿವೆ ಮತ್ತು 3,700ರಲ್ಲಿ ನೀರಿನ ಮಟ್ಟ ಕುಸಿದಿದೆ. ಒಟ್ಟು ಶೇ.47ರಷ್ಟು ಕೊಳವೆ ಬಾವಿಗಳು ಬತ್ತಿಹೋಗಿವೆ.(16,781ರಲ್ಲಿ 6,997: 7,784 ಸಕ್ರಿಯ). ಈ ಬಾವಿಗಳನ್ನು ಪುನಶ್ಚೇತನಗೊಳಿಸಬೇಕೆಂದರೆ, ಅವುಗಳಿಗೆ ಮಳೆ ನೀರು ಹರಿಯುವಂತೆ ಮತ್ತು ಇಂಗುವಂತೆ ಮಾಡಬೇಕು. ಬಾವಿಗಳನ್ನು ಇನ್ನಷ್ಟು ಆಳವಾಗಿಸುವ ಮೂಲಕ ತಾತ್ಕಾಲಿಕ ಪರಿಹಾರ ದೊರೆಯಬಹುದಷ್ಟೆ. ಓಡುವ ನೀರನ್ನು ಸೆರೆ ಹಿಡಿಯುವುದು ಜಲ ಸಂರಕ್ಷಣೆಯ ಮೊದಲ ಪಾಠ. ನಗರದ ಹಸಿರು-ನೀರಿನ ಮೂಲ ವ್ಯವಸ್ಥೆಗಳು-ಕೆರೆ, ಉದ್ಯಾನ, ಜೌಗು ಪ್ರದೇಶ ಮತ್ತು ತೆರೆದ ಪ್ರದೇಶಗಳು ನೀರು ಇಂಗಿಸಲು ನೆರವಾಗುತ್ತವೆ. ಇವುಗಳ ಒತ್ತುವರಿ ತೆರವುಗೊಳಿಸಬೇಕು. 

ಪರಿಹಾರ 5: ಜಲ ಸಾಕ್ಷರತೆ. ಈ ಭೂಮಿ ಸೃಷ್ಟಿಯಾದಾಗ ಎಷ್ಟು ನೀರು ಇತ್ತೋ ಈಗಲೂ ಇರುವುದು ಅಷ್ಟೇ ನೀರು. ಆದರೆ, ಜಲಮೂಲಗಳನ್ನು ಮಲಿನಗೊಳಿಸಿರುವುದರಿಂದ, ಶುದ್ಧ ನೀರಿನ ಪ್ರಮಾಣ ಕಡಿಮೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ವ್ಯಕ್ತಿಯೊಬ್ಬನಿಗೆ ಪ್ರತಿದಿನ 135 ಲೀಟರ್‌ ನೀರು ಅಗತ್ಯವಿದೆ. ಕಾವೇರಿಯಿಂದ ಪ್ರತಿದಿನ 1,460 ದಶಲಕ್ಷ ಲೀಟರ್‌ ನೀರು ಪೂರೈಕೆಯಾಗುತ್ತಿದೆ. ಮೇ 2024ರ ಬಳಿಕ ಕಾವೇರಿ 6ನೇ ಹಂತದಿಂದ 750 ಎಂಎಲ್‌ಡಿ ನೀರು ಲಭ್ಯವಾಗಲಿದೆ. ಆದರೆ, ಕಾವೇರಿ ನೀರಿನ ಲಭ್ಯತೆ ಋತುಮಾನಕ್ಕೆ ಅನುಗುಣವಾಗಿ ಬದಲಾಗುತ್ತದೆ. ಮಂಡ್ಯ ಮತ್ತು ಮೈಸೂರು ಕಾವೇರಿಯನ್ನು ಆಧರಿಸಿವೆ. ಮಂಡ್ಯ ಅಚ್ಚುಕಟ್ಟು ಪ್ರದೇಶದ ಬೆಳೆಗಳಿಗೆ ಕಾವೇರಿ ನೀರು ಜೀವಾಧಾರ. ಜೊತೆಗೆ, ತಮಿಳುನಾಡಿಗೆ ನೀರು ನೀಡಲೇಬೇಕಿದೆ. 

ಉಳಿದ ಮಾರ್ಗಗಳು: ಬೆಂಗಳೂರಿನಲ್ಲಿ ತ್ಯಾಜ್ಯ ಮತ್ತು ನೀರಿನ ಮಾಫಿಯಾ ಬಲಿಷ್ಟವಾಗಿದೆ. ಜಲಮೂಲಗಳನ್ನು ಮಲಿನಗೊಳಿಸುವ, ತ್ಯಾಜ್ಯವನ್ನು ಸಂಸ್ಕರಿಸದ ಕಾರ್ಖಾನೆ-ಉದ್ಯಮಗಳಿಗೆ ಕಾಯಿದೆ 1974ರಡಿ ದಂಡ, ಪ್ರತಿಯೊಂದು ವಾರ್ಡಿನಲ್ಲಿ 1ರಿಂದ 2 ಹೆಕ್ಟೇರ್‌ ವಿಸ್ತೀರ್ಣದ ದೇಶಿ ಮರಗಳಿರುವ ಉದ್ಯಾನ, ಬಳಕೆದಾರರ ಜವಾ ಬ್ದಾರಿಯುತ ವರ್ತನೆ, ನೀರಿನ ಪಡಿತರ ವ್ಯವಸ್ಥೆ ಜಾರಿ- ಬಳಕೆಗೆ ಮಿತಿ ಮತ್ತು ಮಿತಿ ಮೀರಿ ಬಳಸಿದಲ್ಲಿ ದುಬಾರಿ ಶುಲ್ಕ ಮತ್ತು ದಂಡ ವಿಧಿಸಬೇಕು. ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ, ನೀರಿನ ಸಂರಕ್ಷಣೆ, ವ್ಯರ್ಥಗೊಳಿಸುವಿಕೆಗೆ ಮಿತಿ, ಪ್ರಕೃತಿಯನ್ನು ಆಧರಿಸಿದ ಸ್ವಾಭಾವಿಕ ಪರಿಹಾರಗಳು ದಿನನಿತ್ಯದ ಭಾಗವಾಗಬೇಕು. ತಿಪ್ಪಗೊಂಡನಹಳ್ಳಿ ಜಲಾಶಯ(ಚಾಮರಾಜಸಾಗರ)ದಿಂದ ಬೆಂಗಳೂರಿನ ಪಶ್ಚಿಮ ಭಾಗಕ್ಕೆ 2007ರವರೆಗೆ ನೀರು ಪೂರೈಕೆಯಾಗುತ್ತಿತ್ತು. ಜಲಾಶಯಕ್ಕೆ ನೀರು ಹರಿಸುತ್ತಿದ್ದ ಸ್ವಾಭಾವಿಕ ಮಾರ್ಗಗಳನ್ನು ಮುಚ್ಚಿದ್ದರಿಂದ, ಉದ್ಯಮಗಳು ತ್ಯಾಜ್ಯ ನೀರು-ಕಲ್ಮಶ ತುಂಬಿದ್ದರಿಂದ, ಕೃಷಿ ಜಮೀನಿನಿಂದ ಗೊಬ್ಬರ-ಕೀಟನಾಶಕದ ಅಂಶಗಳು ಹೆಚ್ಚಿ ಕರಗಿದ ಆಮ್ಲಜನಕದ ಪ್ರಮಾಣ ಕಡಿಮೆಯಾಯಿತು. ಜಲಚರಗಳು ಸತ್ತವು ಮತ್ತು ನೀರು ಕುಡಿಯಲು ಅಯೋಗ್ಯವಾಯಿತು. ಒತ್ತುವರಿ ತೆರವುಗೊಳಿಸಿದರೆ, ಈಗಲೂ ಚಾಮರಾಜಸಾಗರ ನಗರಕ್ಕೆ ಇನ್ನೊಂದು ನೀರಿನ ಮೂಲವಾಗುವ ಸಾಧ್ಯತೆಯಿದೆ. 

ಸಮಸ್ಯೆ ಇರುವುದು ಇಚ್ಛಾಶಕ್ತಿ ಕೊರತೆಯಲ್ಲಿ-ಜನ ಮತ್ತು ರಾಜಕಾರಣಿಗಳು. ಅಲ್ಲದೆ, ಏಪ್ರಿಲ್‌ 2ನೇ ವಾರ ಸ್ವಲ್ಪ ಮಳೆಯಾಗುತ್ತದೆ. ಆನಂತರ ಜೂನ್‌ನಲ್ಲಿ ಕೇರಳದ ಮೂಲಕ ರಾಜ್ಯಕ್ಕೆ ಮಳೆ ಮಾರುತಗಳು ಪ್ರವೇಶಿಸುತ್ತವೆ. ಬೆಂಕಿಯಂಥ ಬಿಸಿಲು, ನೀರಿಗೆ ಪರದಾಟ ಇವೆಲ್ಲ ಮರೆತು ಮರೆತುಹೋಗುತ್ತವೆ. 2018ರಲ್ಲಿ ದಕ್ಷಿಣ ಆಫ್ರಿಕದ ಕೇಪ್‌ಟೌನ್‌ಗೆ ಬಂದ ಸ್ಥಿತಿ ಬೆಂಗಳೂರಿಗೆ ಬರುವುದಿಲ್ಲ. ನಾಗರಿಕರು-ಸರ್ಕಾರ ಕೈ ಜೋಡಿಸಿದ್ದರಿಂದ ಕೇಪ್ಟೌನ್‌ ಒಂದೇ ವರ್ಷದಲ್ಲಿ ಪರಿಸ್ಥಿತಿಯನ್ನು ಸುಧಾರಿಸಿಕೊಂಡಿತು.

(ಆಕರ: Water, Environment, Land and Livelihoods (WELL) Lab̧̧, https://welllabs.org.,BWSSB ಜಾಲತಾಣ, IIScಯ School of Ecological Sciencȩs ENVIS ವರದಿ)̤



Tags:    

Similar News