ಅಮೇಥಿ, ಫೆ. 19- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅಮೇಥಿಯ ನಿರ್ಜನ ಬೀದಿಗಳು ಸ್ವಾಗತಿಸಿವೆ. ಧೈರ್ಯವಿದ್ದರೆ ಅವರು ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದ ಮಾತ್ರ ಸ್ಪರ್ಧಿಸಲಿ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೋಮವಾರ ಸವಾಲು ಹಾಕಿದ್ದಾರೆ.
ರಾಹುಲ್ ಮತ್ತು ಇರಾನಿ ಇಬ್ಬರೂ ಸೋಮವಾರ ಅಮೇಥಿ ಕ್ಷೇತ್ರದಲ್ಲಿದ್ದರು; ʻರಾಹುಲ್ ಗಾಂಧಿ ಅಮೇಥಿಯನ್ನು ಅಧಿಕಾರ ಕೇಂದ್ರವೆಂದು ಪರಿಗಣಿಸಿದ್ದರು. ಆದರೆ ಕ್ಷೇತ್ರದ ಅಭಿವೃದ್ಧಿ ಮಾಡಲಿಲ್ಲ. ಅದರಿಂದಾಗಿ ಅವರನ್ನು ನಿರ್ಜನ ಬೀದಿಗಳು ಸ್ವಾಗತಿಸಿದವು. ನ್ಯಾಯಯಾತ್ರೆಗೆ ಸುಲ್ತಾನ್‌ಪುರ ಮತ್ತು ಪ್ರತಾಪ್‌ಗಢದಿಂದ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆತರಬೇಕಾಯಿತುʼ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ʻಅಮೇಥಿಯ ಮಾಜಿ ಸಂಸದ ವಯನಾಡ್‌ನಲ್ಲಿ ಅಮೇಥಿಯ ಜನರನ್ನು ಅವಮಾನಿಸಿದ್ದಾರೆ. ಬಾಲರಾಮನ ಪ್ರತಿಷ್ಠಾಪನೆಯ ಆಹ್ವಾನವನ್ನು ಅವರು ಮತ್ತು ಅವರ ಕುಟುಂಬ ತಿರಸ್ಕರಿಸಿದೆ. ರಾಹುಲ್‌ಗೆ ಧೈರ್ಯವಿದ್ದರೆ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದ ಮಾತ್ರ ಸ್ಪರ್ಧಿಸಲಿʼ ಎಂದು ಸವಾಲೆಸೆದರು.ರಾಹು ಲ್ ಗಾಂಧಿ 15 ವರ್ಷ ಕಾಲ ಲೋಕಸಭೆಯಲ್ಲಿ ಅಮೇಥಿಯನ್ನು ಪ್ರತಿನಿಧಿಸಿದ್ದರು. 2019 ರ ಲೋಕಸಭೆ ಚುನಾವಣೆಯಲ್ಲಿ ಇರಾನಿ ಅವರಿಂದ ಪರಾಜಿತರಾದರು. ಆದರೆ, ಕೇರಳದ ವಯನಾಡಿನಿಂದ ಗೆದ್ದರು.
2004 ರಿಂದ ರಾಯ್‌ಬರೇಲಿಯನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆರೋಗ್ಯ ಮತ್ತು ವಯಸ್ಸಿನ ಸಮಸ್ಯೆಗಳಿಂದಾಗಿ 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಇತ್ತೀಚೆಗೆ ಪ್ರಕಟಿಸಿದ್ದಾರೆ. ʻ ಗಾಂಧಿ ಕುಟುಂಬ ರಾಯ್ ಬರೇಲಿಯಿಂದ ಪಲಾಯನ ಮಾಡಿದೆʼ ಎಂದು ಇರಾನಿ ಹೇಳಿದರು.
ʻಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಅಂತಿಮಗೊಳ್ಳುವವರೆಗೂ ನ್ಯಾಯ ಯಾತ್ರೆಯಲ್ಲಿ ತಮ್ಮ ಪಕ್ಷ ಭಾಗವಹಿಸುವುದಿಲ್ಲʼ ಎಂದು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸೋಮವಾರ ಹೇಳಿದ್ದಾರೆ. ಅಖಿಲೇಶ್ ಯಾದವ್ ಯಾತ್ರೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಇರಾನಿ, ʻಯಾವುದೇ ನಾಯಕ ಬೆಂಬಲ ಅಗತ್ಯವಿರುವವರನ್ನು ಏಕೆ ಬೆಂಬಲಿಸುತ್ತಾರೆ?ʼ ಎಂದು ಪ್ರತಿಕ್ರಿಯಿಸಿದರು.
ʻ ಅಮೇಥಿಯಲ್ಲಿ 6,253 ಕೋಟಿ ರೂ. ಹೂಡಿಕೆ ಮಾಡಲಾಗಿದೆ, 662 ಯೋಜನೆಗಳು ಪ್ರಾರಂಭವಾಗಿದೆ. ರಾಮ್‌ಗಂಜ್ ತ್ರಿಶುಂಡಿಯಲ್ಲಿ ಸ್ಥಾಪಿಸಲಾದ ಕೋಕಾ-ಕೋಲಾ ಕಾರ್ಖಾನೆಯು ದಕ್ಷಿಣ ಏಷ್ಯಾದಲ್ಲಿಯೇ ದೊಡ್ಡದು. ಅತಿ ದೊಡ್ಡ ಮೊಟ್ಟೆ ಮತ್ತು ಕೋಳಿ ಫೀಡ್ ಕಾರ್ಖಾನೆಯನ್ನು ಸ್ಥಾಪಿಸಲಾಗಿದೆʼ ಎಂದು ಹೇಳಿದರು.