ಶೀನಾ ಬೋರಾ ಹತ್ಯೆ ಪ್ರಕರಣ | ನಾಪತ್ತೆಯಾಗಿ ಅಸ್ಥಿಪಂಜರದ ಅವಶೇಷ ಪತ್ತೆ

Update: 2024-07-11 11:48 GMT
ಶೀನಾ ಬೋರಾ ತಾಯಿ ಇಂದ್ರಾಣಿ ಮುಖರ್ಜಿ
Click the Play button to listen to article

ಕಳೆದುಹೋಗಿವೆ ಎನ್ನಲಾಗಿದ್ದ ಶೀನಾ ಬೋರಾ ಅಸ್ಥಿಪಂಜರ ಪತ್ತೆಯಾಗಿದೆ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.

ಇಡೀ ದೇಶದ ಗಮನ ಸೆಳೆದಿದ್ದ ಶೀನಾ ಬೋರಾ ಹತ್ಯೆ ಪ್ರಕರಣದ ತನಿಖೆ ಮತ್ತು ವಿಚಾರಣೆಯಲ್ಲಿ ಆಕೆಯ ಅಸ್ಥಿಪಂಜರ ಅತ್ಯಂತ ನಿರ್ಣಾಯಕ ಸಾಕ್ಷ್ಯವಾಗಿತ್ತು. ಆದರೆ, ಅಸ್ಥಿಪಂಜರದ ಅವಶೇಷಗಳು ನಾಪತ್ತೆ ಆಗಿವೆ ಎಂದು ಕೋರ್ಟ್ಗೆ ಪ್ರಾಸಿಕ್ಯೂಷನ್ ತಿಳಿಸಿತ್ತು. ಅದಾದ ವಾರದಲ್ಲೇ ಸಿಬಿಐ, ಅಸ್ಥಿಪಂಜರದ ಅವಶೇಷಗಳನ್ನು ಪತ್ತೆ ಮಾಡಿದೆ.

ಮುಂಬೈನ ವಿಚಾರಣಾ ನ್ಯಾಯಾಲಯಕ್ಕೆ ಬುಧವಾರ (ಜು.10) ಮಾಹಿತಿ ನೀಡಿರುವ ಸಿಬಿಐ, ನವದೆಹಲಿಯ ತನ್ನ ಕಚೇರಿಯ ದಾಖಲಾತಿ ವಿಭಾಗದಲ್ಲಿ ಅಸ್ಥಿಪಂಜರದ ಅವಶೇಷಗಳು ಇವೆ ಎಂದು ತಿಳಿಸಿದೆ. ಆದರೆ, ಪ್ರಕರಣದ ಸಾಕ್ಷ್ಯವಾಗಿ ಈಗ ಆ ಅವಶೇಷಗಳನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದೂ ಸಿಬಿಐ ಹೇಳಿದೆ.

ಶೀನಾ ಬೋರಾ ಅಸ್ಥಿಪಂಜರದ ಅವಶೇಷಗಳು ನಾಪತ್ತೆಯಾಗಿವೆ ಎಂಬುದು ಸುಳ್ಳು. ವಿಧಿ ವಿಜ್ಞಾನ ವಿಭಾಗದಲ್ಲೇ ಅಸ್ಥಿಪಂಜರದ ಅವಶೇಷಗಳಿವೆ. ಆದರೆ, ಕಳೆದುಹೋಗಿವೆ ಎಂದು ಸುಳ್ಳು ಹೇಳಲು ವಿಧಿವಿಜ್ಞಾನ ಅಧಿಕಾರಿಗಳು ಭಾರೀ ಲಂಚ ಪಡೆದಿದ್ದಾರೆ ಎಂದು ವಿಚಾರಣಾ ನ್ಯಾಯಾಲಯಕ್ಕೆ ಅನಾಮಧೇಯ ಇ-ಮೇಲ್‌ ಬಂದಿತ್ತು. ಆ ಇ-ಮೇಲ್‌ನ್ನು ನ್ಯಾಯಾಲಯ ಪ್ರಕರಣದ ಆರೋಪಿ, ಶೀನಾ ಮಲತಾಯಿ ಇಂದ್ರಾಣಿ ಮುಖರ್ಜಿ ಅವರ ಪರ ವಕೀಲರು ಮತ್ತು ಸರ್ಕಾರದ ಪರ ವಕೀಲರಿಗೆ ತೋರಿಸಿತ್ತು.

ಪ್ರಕರಣದ ಹಿನ್ನೆಲೆ

24 ವರ್ಷದ ಶೀನಾ ಬೋರಾ ಅವರನ್ನು ಏಪ್ರಿಲ್ 2012 ರಲ್ಲಿ ಕೊಲ್ಲಲಾಗಿತ್ತು, ಆಕೆಯ ಕೊಲೆ 2015 ರಲ್ಲಿ ಬೆಳಕಿಗೆ ಬಂದಿತ್ತು. ಆಕೆಯ ಮಲತಾಯಿ ಇಂದ್ರಾಣಿ ಮುಖರ್ಜಿ ಪ್ರಕರಣದ ಪ್ರಮುಖ ಆರೋಪಿ. ಇಂದ್ರಾಣಿ ಮುಖರ್ಜಿ ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಪುತ್ರಿ ಶೀನಾ ಬೋರೋ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾದ, ಮಾಧ್ಯಮ ಉದ್ಯಮಿಯಾಗಿದ್ದ ಇಂದ್ರಾಣಿ ಮುಖರ್ಜಿ ಆರೂವರೆ ವರ್ಷಗಳ ನಂತರ 2022ರ ಮೇನಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾಳೆ.

ಇಂದ್ರಾಣಿ ಮುಖರ್ಜಿ, ಪತಿ ಪೀಟರ್‌ ಮುಖರ್ಜಿ, ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಚಾಲಕ ಶ್ಯಾಮವರ್ ರೈ ಸೇರಿಕೊಂಡು ಶೀನಾ ಅವರನ್ನು ಕಾರಿನಲ್ಲಿ ಕತ್ತು ಹಿಸುಕಿ ಕೊಲೆ ಮಾಡಿರುವುದು ತನಿಖೆಯಿಂದ ಬಹಿರಂಗವಾಗಿತ್ತು. ಬಳಿಕ ಶೀನಾ ಮೃತದೇಹವನ್ನು ರಾಯಗಢ ಜಿಲ್ಲೆಯ ಅರಣ್ಯದಲ್ಲಿ ಎಸೆಯಲಾಗಿತ್ತು. ಕಾರು ಚಾಲಕ ಶ್ಯಾಮವರ್‌ ರಾಯ್ ಪ್ರಕರಣದ ಅಪ್ರೂವರ್‌ ಆಗಿ ಪ್ರಮುಖ ಸಾಕ್ಷಿಯಾಗಿದ್ದರು.

Tags:    

Similar News