ಶಬರಿಮಲೆ ಚಿನ್ನ ಕಳವು ವಿವಾದ: ಟಿಡಿಬಿ ಮಂಡಳಿಯಲ್ಲಿ ಹೊಸ ಶಿಸ್ತುಕ್ರಮ
ಈ ಹೊಸ ಆದೇಶದ ಪ್ರಕಾರ, ಇನ್ನು ಮುಂದೆ ಅಧ್ಯಕ್ಷರ ಪೂರ್ವಾನುಮತಿ ಇಲ್ಲದೆ ಮಂಡಳಿ ಸಭೆಯಲ್ಲಿ ಯಾವುದೇ ಅಜೆಂಡಾಗಳನ್ನು ಮಂಡಿಸುವಂತಿಲ್ಲ. ಅನುಮೋದಿತ ವಿಷಯಗಳನ್ನು ಮಾತ್ರವೇ ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು.
ಸಾಂದರ್ಭಿಕ ಚಿತ್ರ
ಶಬರಿಮಲೆ ದೇವಾಲಯದಲ್ಲಿ ನಡೆದ ಚಿನ್ನ ಕಳವು ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಕೆ. ಜಯಕುಮಾರ್ ಅವರು ಮಂಡಳಿಯ ಕಾರ್ಯವೈಖರಿಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದ್ದಾರೆ. ಮಂಡಳಿ ಸಭೆಗಳಲ್ಲಿ ವಿಷಯ ಮಂಡನೆಗೆ ಸಂಬಂಧಿಸಿದಂತೆ ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಿ, ಆಡಳಿತದಲ್ಲಿ ಪಾರದರ್ಶಕತೆ ತರಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ಈ ಹೊಸ ಆದೇಶದ ಪ್ರಕಾರ, ಇನ್ನು ಮುಂದೆ ಅಧ್ಯಕ್ಷರ ಪೂರ್ವಾನುಮತಿ ಇಲ್ಲದೆ ಮಂಡಳಿ ಸಭೆಯಲ್ಲಿ ಯಾವುದೇ ಅಜೆಂಡಾಗಳನ್ನು ಮಂಡಿಸುವಂತಿಲ್ಲ. ಅನುಮೋದಿತ ವಿಷಯಗಳನ್ನು ಮಾತ್ರವೇ ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗುವುದು. ಈ ವಿಷಯಗಳನ್ನು ಒಳಗೊಂಡ ಕಡತಗಳನ್ನು ಸಭೆಯ ಸಂದರ್ಭದಲ್ಲಿ ಸದಸ್ಯರಿಗೆ ಹಸ್ತಾಂತರಿಸಬೇಕು. ಅಲ್ಲದೆ, ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ದಾಖಲಿಸಿದ ‘ಮಾಸ್ಟರ್ ಕಾಪಿ’ಗೆ ಸದಸ್ಯರ ಸಹಿ ಪಡೆದು, ಅದನ್ನು ಮುಂದಿನ ಸಭೆಯ ನಡಾವಳಿಗಳಲ್ಲಿ (Minutes) ಅಧಿಕೃತವಾಗಿ ದೃಢೀಕರಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಆದರೆ, ದೈನಂದಿನ ಆಡಳಿತ ಸುಗಮವಾಗಿ ನಡೆಯಲು ಇಲಾಖೆಗಳಿಗೆ ನೀಡಿರುವ ಅಧಿಕಾರ ಹಂಚಿಕೆಯ ಅನ್ವಯ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ಮುಂದುವರಿಯಲಿದೆ.
2019ರಲ್ಲಿ ನಡೆದ ಮಂಡಳಿ ಸಭೆಯೊಂದರಲ್ಲಿ ದೇವಾಲಯದ ದ್ವಾರಪಾಲಕರ ವಿಗ್ರಹಗಳ ಚಿನ್ನದ ಕವಚ ಮತ್ತು ಗರ್ಭಗುಡಿಯ ಬಾಗಿಲು ಚೌಕಟ್ಟುಗಳಿಗೆ ಚಿನ್ನ ಲೇಪನ ಮಾಡುವ ನೆಪದಲ್ಲಿ ದಾಖಲೆಗಳನ್ನು ತಿದ್ದಿ ಅಕ್ರಮ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಂದಿನ ಟಿಡಿಬಿ ಅಧ್ಯಕ್ಷ ಎ. ಪದ್ಮಕುಮಾರ್ ಅವರು ದಾಖಲೆಗಳಲ್ಲಿ ‘ಚಿನ್ನ ಲೇಪಿತ ತಾಮ್ರದ ಫಲಕಗಳು’ ಎಂಬುದನ್ನು ‘ತಾಮ್ರದ ಫಲಕಗಳು’ ಎಂದು ಬದಲಾಯಿಸಿ ವಂಚನೆಗೆ ದಾರಿ ಮಾಡಿಕೊಟ್ಟಿದ್ದರು ಎಂದು ವಿಶೇಷ ತನಿಖಾ ತಂಡ (SIT) ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಮಾಜಿ ಅಧ್ಯಕ್ಷರನ್ನು ಬಂಧಿಸಲಾಗಿದೆ. ಇಂತಹ ಆಡಳಿತಾತ್ಮಕ ಲೋಪಗಳು ಮರುಕಳಿಸದಂತೆ ಎಚ್ಚರ ವಹಿಸಲು ಹಾಲಿ ಅಧ್ಯಕ್ಷರು ಈ ಹೊಸ ಶಿಸ್ತುಕ್ರಮವನ್ನು ಜಾರಿಗೆ ತಂದಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.