ರಾಹುಲ್‌ ʻಹಿಂದು ವಿರೋಧಿʼ ಹೇಳಿಕೆ: ಶಂಕರಾಚಾರ್ಯರ ಬೆಂಬಲ

ರಾಹುಲ್‌ ಅವರ ಭಾಷಣಗಳನ್ನು ಸಂಪಾದಿಸುವ ಮೂಲಕ ಅರ್ಧ ಸತ್ಯವನ್ನು ಹರಡುವುದು ಅಪರಾಧ. ಅಂತಹವರು ಯಾವುದೇ ಪತ್ರಿಕೆ ಅಥವಾ ಚಾನೆಲ್‌ನವರಾಗಿದ್ದರೂ, ಶಿಕ್ಷೆಯಾಗಬೇಕುʼ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಹೇಳಿದರು.;

Update: 2024-07-08 13:50 GMT

ಕಳೆದ ಸೋಮವಾರ (ಜೂನ್ 1) ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ನೀಡಿದ ʻಹಿಂದು ವಿರೋಧಿʼ ಹೇಳಿಕೆಯನ್ನು ಜ್ಯೋತಿರ್ ಮಠದ 46 ನೇ ಶಂಕರಾಚಾರ್ಯರಾದ ಸ್ವಾಮಿ ಅವಿಮುಕ್ತೇ ಶ್ವರಾನಂದ ಬೆಂಬಲಿಸಿದ್ದಾರೆ. 

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ತಮ್ಮ ಮೊದಲ ಭಾಷಣದಲ್ಲಿ ರಾಹುಲ್, ಬಿಜೆಪಿಯ ನಾಯಕರು ಜನರನ್ನು ಕೋಮುವಾದದ ಆಧಾರದ ಮೇಲೆ ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿ‌ದ್ದರು. ಇದಕ್ಕೆ ಆಡಳಿತ ಪಕ್ಷದಿಂದ ಭಾರಿ ಪ್ರತಿರೋಧ ವ್ಯಕ್ತವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆದಿದ್ದಕ್ಕಾಗಿ ಕಾಂಗ್ರೆಸ್ ನಾಯಕನನ್ನು ತರಾಟೆಗೆ ತೆಗೆದುಕೊಂಡಿದ್ದರು. ರಾಹುಲ್ ವಿರುದ್ಧ ದೇಶದ ವಿವಿಧ ಭಾಗಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. 

ಶಂಕರಾಚಾರ್ಯರ ಪ್ರತಿಕ್ರಿಯೆ ವಿಡಿಯೋ ವೈರಲ್: ರಾಹುಲ್ ಭಾಷಣಕ್ಕೆ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಪ್ರತಿಕ್ರಿಯಿಸಿರುವ ವಿಡಿಯೋ ವೈರಲ್ ಆಗಿದೆ. ʻಕಾಂಗ್ರೆಸ್ ಸಂಸದ ಯಾವುದೇ ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡಿಲ್ಲʼ ಎಂದಿರುವ ಅವರು, ಮಾಧ್ಯಮಗಳು ರಾಜಕೀಯ ನಾಯಕರ ಭಾಷಣಗಳನ್ನು ಸಂಪಾದಿಸಿ, ಅರ್ಧ ಸತ್ಯವನ್ನು ಪ್ರಸಾರ ಮಾಡಬಾರದು,ʼ ಎಂದು ಕೇಳಿಕೊಂಡರು. 

ʻರಾಹುಲ್ ಗಾಂಧಿ ಅವರು ಹಿಂದು ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಕೇಳಿದಾಗ, ಅವರ ಭಾಷಣದ ಸಂಪೂರ್ಣ ವಿಡಿಯೋ ನೋಡಿದೆ ಮತ್ತು ಅವರು ಯಾವುದೇ ತಪ್ಪನ್ನು ಹೇಳಿಲ್ಲ ಎಂದು ನಾನು ಕಂಡುಕೊಂಡೆ. ಹಿಂದು ಧರ್ಮದಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದು ಸಂಪೂರ್ಣವಾಗಿ ಸರಿ,ʼ ಎಂದು ಸ್ವಾಮೀಜಿ ಪತ್ರಕರ್ತರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ. 

ʻಅವರ ಭಾಷಣಗಳನ್ನು ಸಂಪಾದಿಸಿ, ಅರ್ಧ ಸತ್ಯವನ್ನು ಹರಡುವುದು ಅಪರಾಧ ಮತ್ತು ಅಂತಹವರನ್ನು ಶಿಕ್ಷಿಸಬೇಕು; ಅವರು ಪತ್ರಿಕೆ ಅಥವಾ ಚಾನೆಲ್ ಆಗಿರಲಿ. ಆನಂತರ ರಾಹುಲ್‌ ತಮ್ಮ ಹೇಳಿಕೆ ಕೇಂದ್ರದ ನೇತೃತ್ವ ವಹಿಸಿರುವ ಪಕ್ಷವನ್ನು ಉದ್ದೇಶಿಸಿದೆ. ಅವರು ಧರ್ಮದ ಸೋಗಿನಲ್ಲಿ ಹಿಂಸಾಚಾರವನ್ನು ಉತ್ತೇಜಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು,ʼ ಎಂದು ಶಂಕರಾಚಾರ್ಯರು ಸೇರಿಸಿದರು. 

ರಾಹುಲ್ ಭಾಷಣ: ಜುಲೈ 1 ರಂದು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ, ರಾಹುಲ್ ಲೋಕಸಭೆಯಲ್ಲಿ ಮಾತನಾಡಿದರು. ಖುರಾನ್ ನಿರ್ಭಯತೆ ಬಗ್ಗೆ ಹೇಳುತ್ತದೆ ಎಂದು ಪ್ರವಾದಿ ಮುಹಮ್ಮದ್ ಅವರನ್ನು ಉಲ್ಲೇಖಿಸಿದ್ದರು. ಭಗವಾನ್ ಶಿವ, ಗುರುನಾನಕ್ ಮತ್ತು ಕ್ರಿಸ್ತನ ಚಿತ್ರಗಳನ್ನು ಹಿಡಿದುಕೊಂಡು, ಹಿಂದು ಧರ್ಮ, ಇಸ್ಲಾಂ, ಸಿಖ್ , ಕ್ರಿಶ್ಚಿಯನ್ , ಬೌದ್ಧ ಮತ್ತು ಜೈನ ಧರ್ಮಗಳು ನಿರ್ಭಯತೆಯ ಮಹತ್ವವನ್ನು ಒತ್ತಿ ಹೇಳಿವೆ ಎಂದರು.

ಆಡಳಿತ ಪಕ್ಷದ ಸದಸ್ಯರು ಪ್ರತಿಭಟಿಸಿದಾಗ, ʼನೀವು ಹಿಂದುಗಳಲ್ಲ. ಸತ್ಯದ ಜೊತೆಗೆ ನಿಲ್ಲಬೇಕು, ಸತ್ಯದಿಂದ ಹಿಂದೆ ಸರಿಯಬಾರದು ಎಂದು ಹಿಂದು ಧರ್ಮದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ,ʼ ಎಂದು ಪ್ರತಿಕ್ರಿಯಿಸಿದ್ದರು.

ಮಧ್ಯಪ್ರವೇಶಿಸಿದ ಪ್ರಧಾನಿ ಮೋದಿ, ʻಇಡೀ ಹಿಂದು ಸಮುದಾಯವನ್ನು ಹಿಂಸಾತ್ಮಕ ಎಂದು ಕರೆಯುವುದು ಗಂಭೀರ ವಿಷಯ,ʼ ಎಂದು ಹೇಳಿದರು.

ʻತಮ್ಮನ್ನು ಹಿಂದುಗಳೆಂದು ಗುರುತಿಸಿಕೊಳ್ಳಲು ಹೆಮ್ಮೆ ಪಡುವ ಕೋಟ್ಯಂತರ ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ರಾಹುಲ್‌ ಕ್ಷಮೆಯಾಚನೆ ಮಾಡಬೇಕುʼ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು.

Tags:    

Similar News