Haryana Polls| ಕಾಂಗ್ರೆಸ್ ಪರ ಸೆಲ್ಜಾ ಪ್ರಚಾರ

Update: 2024-09-23 10:11 GMT

ಕಾಂಗ್ರೆಸ್ ಸಂಸದೆ ಕುಮಾರಿ ಸೆಲ್ಜಾ ಅವರು ಹರಿಯಾಣದ ನರ್ವಾನಾದಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಅವರು ಸೋಮವಾರ (ಸೆಪ್ಟೆಂಬರ್ 23) ಹೇಳಿದ್ದಾರೆ.

ಸೆಲ್ಜಾ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಪ್ರಮುಖ ದಲಿತ ನಾಯಕಿ. ಅವರು ಕಾಂಗ್ರೆಸ್ ಚುನಾವಣೆ ಪ್ರಚಾರದಿಂದ ದೂರ ಉಳಿದಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ. 

ಬಿಜೆಪಿಗೆ ಸೇರಲು ಆಹ್ವಾನ: ಇತ್ತೀಚೆಗೆ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಸೆಲ್ಜಾ ಅವರನ್ನು ಬಿಜೆಪಿ ಸೇರುವಂತೆ ಆಹ್ವಾನಿಸಿ, ಕಾಂಗ್ರೆಸ್‌ಗೆ ಭಾರೀ ಮುಜುಗರ ಉಂಟುಮಾಡಿದ್ದರು. ʻಸೆಲ್ಜಾಅವರು ಸೆಪ್ಟೆಂಬರ್ 26 ರಂದು ನರ್ವಾನಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದಾರೆ. ಇಂದು ನಾನು ನರ್ವಾನಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತ್ಬೀರ್ ದಬ್ಲೈನ್‌ ಪರ 22 ಸಾರ್ವಜನಿಕ ಸಭೆಗಳಲ್ಲಿ ಮಾತನಾಡುತ್ತೇನೆ. ನಾವು ಜಿಲ್ಲೆ ಮತ್ತು ಹರಿಯಾಣದಲ್ಲಿ ಕಾಂಗ್ರೆಸ್ ವಿಜಯದ ಪತಾಕೆಯನ್ನು ಹಾರಿಸುತ್ತೇವೆ,ʼ ಎಂದು ಸುರ್ಜೆವಾಲಾ ಎಕ್ಸ್‌ನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಸೆಲ್ಜಾ ಅಸಮಾಧಾನವೇಕೆ?: ಸುರ್ಜೇವಾಲಾ ಅವರು ಸಂದೇಶದಲ್ಲಿ ಸೆಲ್ಜಾ ಅವರನ್ನು ʻಹಿರಿಯ ಸೋದರಿʼ ಎಂದು ಕರೆದಿದ್ದಾರೆ. ಸುರ್ಜೆವಾಲಾ ಅವರ ಪುತ್ರ ಆದಿತ್ಯ ಅವರು ಈ ಹಿಂದೆ ರಣದೀಪ್ ಸುರ್ಜೆವಾಲಾ ಪ್ರತಿನಿಧಿಸಿದ್ದ ಕೈತಾಲ್ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಕ್ಷೇತ್ರ ಈಗ ಬಿಜೆಪಿಯ ಲೀಲಾ ರಾಮ್ ಅವರ ಕೈಯಲ್ಲಿದೆ. 

ಟಿಕೆಟ್ ಹಂಚಿಕೆಯಲ್ಲಿ ಪಕ್ಷ ತನ್ನ ಟೀಕಾಕಾರ- ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾಗೆ ಮುಕ್ತ ಹಸ್ತ ನೀಡಿದ್ದಕ್ಕೆ ಸೆಲ್ಜಾ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ.  17 ಮೀಸಲು (ಎಸ್‌ಸಿ) ಸ್ಥಾನಗಳಲ್ಲಿ ಹೆಚ್ಚಿನವು ಹೂಡಾ ಅವರ ನಿಷ್ಠಾವಂತರ ಪಾಲಾಗಿದೆ. ನವದೆಹಲಿಯಲ್ಲಿ ಹರಿಯಾಣದ ಚುನಾವಣೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದಾಗ, ಸೆಲ್ಜಾ ಅವರು ಪಾಲ್ಗೊಂಡಿರಲಿಲ್ಲ. 

ಹಿರಿಯ ನಾಯಕ ಪಿ. ಚಿದಂಬರಂ ಅವರು ಹರಿಯಾಣ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಇತ್ತೀಚೆಗೆ ಹೇಳಿದ್ದರು.

Tags:    

Similar News