ಗಣಿಗಳು, ಖನಿಜಭರಿತ ಜಮೀನಿನ ಮೇಲೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಅಧಿಕಾರವಿದೆ: ಸುಪ್ರೀಂ
ಖನಿಜಗಳ ಮೇಲೆ ಪಾವತಿಸಬೇಕಾದ ರಾಯಧನವು ತೆರಿಗೆಯಲ್ಲ ಎಂದು ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠವು 8:1 ರ ಬಹುಮತದ ತೀರ್ಪಿನಲ್ಲಿ ಹೇಳಿದೆ. ಇದರಿಂದ ಕೇಂದ್ರಕ್ಕೆ ಹಿನ್ನಡೆಯಾಗಿದೆ.;
ಸಂವಿಧಾನದ ಅಡಿಯಲ್ಲಿ ಗಣಿಗಳು ಮತ್ತು ಖನಿಜಗಳನ್ನು ಹೊಂದಿರುವ ಭೂಮಿಗೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಶಾಸನಾತ್ಮಕ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ಜುಲೈ 25) ಹೇಳಿದ್ದು, ಇದರಿಂದ ಕೇಂದ್ರಕ್ಕೆ ಹಿನ್ನಡೆ ಯಾಗಿದೆ.
ಒಂಬತ್ತು ನ್ಯಾಯಾಧೀಶರ ಸಂವಿಧಾನ ಪೀಠವು ಖನಿಜಗಳ ಮೇಲೆ ಪಾವತಿಸಬೇಕಾದ ರಾಯಧನವು ತೆರಿಗೆಯಲ್ಲ ಎಂದು 8:1ರ ಬಹುಮತದ ತೀರ್ಪು ನೀಡಿದೆ.
ತಮ್ಮ ಮತ್ತು ಪೀಠದ ಏಳು ನ್ಯಾಯಾಧೀಶರ ತೀರ್ಪು ಓದಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಸಂವಿಧಾನದ ಪಟ್ಟಿ 2 ರ ಉಲ್ಲೇಖ 50 ರ ಅಡಿಯಲ್ಲಿ ಖನಿಜಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರ ಸಂಸತ್ತಿಗೆ ಇಲ್ಲ ಎಂದು ಹೇಳಿದರು.
ಸಂವಿಧಾನದ ಪಟ್ಟಿ 2 ರ ಉಲ್ಲೇಖ 50, ಖನಿಜ ಅಭಿವೃದ್ಧಿಗೆ ಸಂಬಂಧಿಸಿದ ಕಾನೂನು ಮೂಲಕ ಸಂಸತ್ತು ವಿಧಿಸುವ ನಿರ್ಬಂಧಗಳಿಗೆ ಒಳಪಟ್ಟಿರುವ ಖನಿಜ ಹಕ್ಕುಗಳ ಮೇಲಿನ ತೆರಿಗೆಗಳನ್ನು ಕುರಿತು ಇದೆ.
ಕೇಂದ್ರವು ಗಣಿ ಮತ್ತು ಖನಿಜಗಳ ಮೇಲೆ ಈವರೆಗೆ ವಿಧಿಸಿರುವ ತೆರಿಗೆಯನ್ನು ವಸೂಲಿ ಮಾಡುವ ವಿಷಯವನ್ನು ಜುಲೈ 31 ರಂದು ಪರಿಗಣಿ ಸುವುದಾಗಿ ಎಸ್‌ಸಿ ಹೇಳಿದೆ. ಗಣಿ ಮತ್ತು ಖನಿಜಗಳ ಮೇಲೆ ತೆರಿಗೆ ವಿಧಿಸುವ ರಾಜ್ಯಗಳ ಅಧಿಕಾರ ಕುರಿತ ತೀರ್ಪನ್ನು ಭವಿಷ್ಯವರ್ತಿಯಾಗಿಸುವಂತೆ ಕೇಂದ್ರವು ಸುಪ್ರೀಂ ಕೋರ್ಟಿಗೆ ಒತ್ತಾಯಿಸಿತ್ತು.
1989 ರ ತೀರ್ಪು ತಪ್ಪು: ಸುಪ್ರೀಂ- ಬಹುಮತದ ತೀರ್ಪಿನ ಕಾರ್ಯಕಾರಿ ಭಾಗವನ್ನು ಓದಿದ ಸಿಜೆಐ, ಸುಪ್ರೀಂ ಕೋರ್ಟಿನ ಏಳು ನ್ಯಾಯಾಧೀಶರ ಸಂವಿಧಾನ ಪೀಠದ 1989ರ ತೀರ್ಪು ಸರಿಯಲ್ಲ ಎಂದು ಹೇಳಿದರು. ಪೀಠವು ಎರಡು ಭಿನ್ನ ತೀರ್ಪುಗಳನ್ನು ನೀಡಿದೆ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸಿಜೆಐ ಹೇಳಿದರು.
ತಮ್ಮ ತೀರ್ಪು ಓದಿದ ನ್ಯಾ.ಬಿ.ವಿ.ನಾಗರತ್ನ ಅವರು, ಗಣಿ ಮತ್ತು ಖನಿಜಗಳನ್ನು ಹೊಂದಿರುವ ಭೂಮಿಗೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಶಾಸಕಾಂಗ ಸಾಮರ್ಥ್ಯವಿಲ್ಲ ಎಂದು ಹೇಳಿದರು.
1957 ರ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ)ಗಳ ಕಾಯಿದೆಯಡಿಯಲ್ಲಿ ಖನಿಜಗಳ ಮೇಲೆ ಪಾವತಿಸಬೇಕಾದ ರಾಯಧನವು ತೆರಿಗೆಯೇ? ತಮ್ಮ ಭೂಪ್ರದೇಶದಲ್ಲಿ ಖನಿಜಭರಿತ ಭೂಮಿಗೆ ತೆರಿಗೆಯವನ್ನು ವಿಧಿಸುವ ಅಧಿಕಾರವನ್ನು ಕೇಂದ್ರಕ್ಕೆ ಮಾತ್ರ ನೀಡಬೇಕೇ ಅಥವಾ ರಾಜ್ಯಗಳೂ ಹೊಂದಿರಬಹುದೇ ಎಂಬ ವಿವಾದಾತ್ಮಕ ವಿಷಯವನ್ನು ಪೀಠ ನಿರ್ಧರಿಸಿತು.
ಸಿಜೆಐ ಚಂದ್ರಚೂಡ್ ಮತ್ತು ನ್ಯಾ. ನಾಗರತ್ನ ಅವರಲ್ಲದೆ, ಪೀಠದಲ್ಲಿ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಅಭಯ್ ಎಸ್. ಓಕಾ, ಜೆ.ಬಿ. ಪರ್ದಿವಾಲಾ, ಮನೋಜ್ ಮಿಶ್ರಾ, ಉಜ್ಜಲ್ ಭುಯಾನ್, ಸತೀಶ್ ಚಂದ್ರ ಶರ್ಮಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಇದ್ದರು.