ಸಾವರ್ಕರ್ ಮಾನನಷ್ಟ: ರಾಹುಲ್ ವಿರುದ್ಧದ ದೂರು ಮೇಲ್ನೋಟಕ್ಕೆ ಸತ್ಯ

ರಾಹುಲ್ ಗಾಂಧಿ ಅವರು 2023 ರಲ್ಲಿ ಲಂಡನ್‌ನಲ್ಲಿ ಮಾಡಿದ ಭಾಷಣದಲ್ಲಿ ವಿ.ಡಿ. ಸಾವರ್ಕರ್‌ ಅವರನ್ನು ಅವಮಾನಿಸಿದ್ದಾರೆ ಎಂಬ ಸಾತ್ಯಕಿ ಸಾವರ್ಕರ್‌ ಅವರ ದೂರಿನಲ್ಲಿ ಪ್ರಾಥಮಿಕ ಸತ್ಯವಿದೆ ಎಂದು ಪುಣೆ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.;

Update: 2024-05-28 07:17 GMT

ರಾಹುಲ್ ಗಾಂಧಿ ಅವರು 2023 ರಲ್ಲಿ ಲಂಡನ್‌ನಲ್ಲಿ ಮಾಡಿದ ಭಾಷಣದಲ್ಲಿ ವಿ.ಡಿ. ಸಾವರ್ಕರ್‌ ಅವರನ್ನು ಅವಮಾನಿಸಿದ್ದಾರೆ ಎಂಬ ಸಾತ್ಯಕಿ ಸಾವರ್ಕರ್‌ ಅವರ ದೂರಿನಲ್ಲಿ ಪ್ರಾಥಮಿಕ ಸತ್ಯವಿದೆ ಎಂದು ಪುಣೆ ಪೊಲೀಸರು ನ್ಯಾಯಾಲಯ ವರದಿ ಸಲ್ಲಿಸಿದ್ದಾರೆ.

ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್ (ಪ್ರಥಮ ದರ್ಜೆ) ಅಕ್ಷಿ ಜೈನ್ ಅವರ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಸಾತ್ಯಕಿ ಅಶೋಕ್ ಸಾವರ್ಕರ್ ಅವರ ವಕೀಲ ಸಂಗ್ರಾಮ್ ಕೊಲ್ಹಟ್ಕರ್ ಹೇಳಿದ್ದಾರೆ. ನ್ಯಾಯಾಲಯ ರಾಹುಲ್ ಅವರಿಗೆ ಹಾಜರಾಗುವಂತೆ ನೋಟಿಸ್ ನೀಡಬಹುದು ಎಂದಿದ್ದಾರೆ. 

ಲಂಡನ್ ಭಾಷಣ: ಕಳೆದ ಏಪ್ರಿಲ್‌ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ತಮ್ಮ ವಕೀಲರು ನಗರ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ ಎಂದು ಸಾತ್ಯಕಿ ಸಾವರ್ಕರ್ ಹೇಳಿದ್ದಾರೆ. ಸಾತ್ಯಕಿ ಸಲ್ಲಿಸಿದ ಪುರಾವೆಗಳನ್ನು ಪರಿಶೀಲಿಸಿ, ಮೇ 27ರೊಳಗೆ ವರದಿ ಸಲ್ಲಿಸುವಂತೆ ವಿಶ್ರಂಬಾಗ್ ಪೊಲೀಸರಿಗೆ ನ್ಯಾಯಾಲಯ ಸೂಚಿಸಿತ್ತು. 

ಮಾರ್ಚ್ 2023 ರಲ್ಲಿ ಲಂಡನ್‌ನಲ್ಲಿ ಮಾಡಿದ ಭಾಷಣದಲ್ಲಿ ವಿ.ಡಿ. ಸಾವರ್ಕರ್ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಕಳೆದ ಏಪ್ರಿಲ್‌ನಲ್ಲಿ ಸಾತ್ಯಕಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ಮಾನನಷ್ಟ ಆರೋಪ: ಸಾತ್ಯಕಿ ಅವರ ದೂರಿನಲ್ಲಿ ಮೇಲ್ನೋಟಕ್ಕೆ ಸತ್ಯಾಂಶವಿದೆ. ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಸಹಾಯಕ ಪೊಲೀಸ್ ನಿರೀಕ್ಷಕ ತುಕಾರಾಂ ನಿಂಬಾಳ್ಕರ್ ತಿಳಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಸೂರತ್‌ನ ಮೆಟ್ರೋಪಾಲಿಟನ್ ನ್ಯಾಯಾಲಯವು ರಾಹುಲ್ ಗಾಂಧಿಯವರ 2019 ರ ʻಎಲ್ಲಾ ಕಳ್ಳರು ಮೋದಿ ಎಂಬ ಸಾಮಾನ್ಯ ಉಪನಾಮ ಹೇಗೆ ಹೊಂದಿರುತ್ತಾರೆ?,ʼ ಎಂಬ ಹೇಳಿಕೆ ಕ್ರಿಮಿನಲ್ ಮಾನನಷ್ಟ ಎಂದು ತೀರ್ಪು ನೀಡಿತ್ತು. ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ನಂತರ ಸೆಷನ್ಸ್ ನ್ಯಾಯಾಲಯವು ಏಪ್ರಿಲ್ 3 ರಂದು ಅವರಿಗೆ ಜಾಮೀನು ನೀಡಿತು. ಅವರ ಶಿಕ್ಷೆಗೆ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್ ತಡೆ ನೀಡಿತು. 

ದೂರು ಏನು?: ರಾಹುಲ್ ತಮ್ಮ ಭಾಷಣದಲ್ಲಿ ವಿ.ಡಿ. ಸಾವರ್ಕರ್ ಮತ್ತು ಅವರ ಐದರಿಂದ ಆರು ಸ್ನೇಹಿತರು ಮುಸ್ಲಿಂ ವ್ಯಕ್ತಿಯೊಬ್ಬರನ್ನು ಹೊಡೆದರು ಮತ್ತು ಅದರಿಂದ ನನಗೆ ಸಂತೋಷವಾಯಿತು ಎಂದು ಬರೆದುಕೊಂಡಿದ್ದಾರೆ ಎಂದು ಹೇಳಿದ್ದರು. ಆದರೆ, ಇಂತಹ ಯಾವುದೇ ಘಟನೆ ನಡೆದಿಲ್ಲ ಮತ್ತು ಅವರು ಇಂಥ ವಿಷಯವನ್ನು ಬರೆದಿಲ್ಲ. ಈ ಆರೋಪ ಕಾಲ್ಪನಿಕ, ಸುಳ್ಳು ಮತ್ತು ದುರುದ್ದೇಶಪೂರಿತ. ಇದರಿಂದ ಸಾವರ್ಕರ್‌ ಅವರ ಮಾನನಷ್ಟವಾಗಿದೆ ಎಂದು ಸಾತ್ಯಕಿ ಸಾವರ್ಕರ್ ದೂರು ನೀಡಿದ್ದರು. 

Tags:    

Similar News