ಕೋಲ್ಕತ್ತ,ಫೆ.13: ಸಂದೇಶಖಲಿಯಲ್ಲಿ ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಹೊರಡಿಸಿದ ನಿಷೇಧಾಜ್ಞೆಯನ್ನು ಕೋಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿದೆ.
ಕಳೆದೊಂದು ವಾರದಿಂದ ಗ್ರಾಮಸ್ಥರ ಮೇಲೆ ದೌರ್ಜನ್ಯ ನಡೆಯುತ್ತಿದ್ದು,ಮಹಿಳೆಯರ ಪ್ರತಿಭಟನೆಯನ್ನು ಹತ್ತಿಕ್ಕುವ ಬದಲು ಪೊಲೀಸ್ ಅಧಿಕಾರಿಗಳು ತಮ್ಮಕೆಲಸ ಸಮರ್ಪಕವಾಗಿ ನಿರ್ವಹಿಸಬೇಕು ಮತ್ತು ಇಬ್ಬರು ಪ್ರಮುಖ ಆರೋಪಿಗಳನ್ನು ಹುಡುಕಬೇಕು ಎಂದು ನ್ಯಾಯಾಲಯ ಹೇಳಿದೆ. ʻಅಪರಾಧಿಗಳನ್ನು ಬಂಧಿಸಿದ ನಂತರವಷ್ಟೇ ಮಹಿಳೆಯರು ತಮ್ಮಸಮಸ್ಯೆಯನ್ನು ಹೇಳಿಕೊಳ್ಳುವ ಧೈರ್ಯ ಗಳಿಸಿಕೊಳ್ಳುತ್ತಾರೆʼ ಎಂದ ನ್ಯಾಯಾಲಯ ನಿಷೇಧಾಜ್ಞೆಯನ್ನು ರದ್ದುಪಡಿಸಿದೆ.
ʻಈ ಪ್ರದೇಶದಲ್ಲಿ ಶಾಂತಿಯನ್ನು ಕಾಪಾಡಲು ಹೆಚ್ಚಿನ ಸಶಸ್ತ್ರ ಪಡೆಗಳನ್ನು ನಿಯೋಜಿಸಬೇಕು ಮತ್ತು ಕಣ್ಗಾವಲಿಗಾಗಿ ಡ್ರೋನ್ ಕ್ಯಾಮೆರಾಗಳಂತಹ ಆಧುನಿಕ ತಂತ್ರಜ್ಞಾನವನ್ನು ಬಳಸಬೇಕುʼ ಎಂದು ನ್ಯಾಯಮೂರ್ತಿ ಜೆ.ಸೇನ್ ಗುಪ್ತಾ ಸೂಚಿಸಿದ್ದಾರೆ.
ಇಬ್ಬರು ಸ್ಥಳೀಯರು ಫೆಬ್ರವರಿ 9 ರಿಂದ ಜಾರಿಗೊಳಿಸಿದ ನಿಷೇಧಾಜ್ಞೆಯನ್ನು ಹಿಂಪಡೆಯಬೇಕೆಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಕೀಲ ಬಿಕಾಶ್ ರಂಜನ್ ಭಟ್ಟಾಚಾರ್ಯ, ʻನಿಷೇಧಾಜ್ಞೆ ಜಾರಿಗೆ ಯಾವುದೇ ಆಧಾರವಿಲ್ಲ; ಜನರ ಪ್ರತಿಭಟಿಸುವ ಹಕ್ಕುಗಳನ್ನು ಹತ್ತಿಕ್ಕಲು ಇದನ್ನು ಮಾಡಲಾಗಿದೆʼ ಎಂದು ವಾದಿಸಿದರು. ಗ್ರಾಮಸ್ಥರ ಮೇಲೆ ಮೂವರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಅವರಲ್ಲಿ ಉತ್ತಮ್ ಸರ್ದಾರ್ ಎಂಬಾತನನ್ನು ಬಂಧಿಸಲಾಗಿದೆ. ಶಾಜಹಾನ್ ಶೇಖ್ ಮತ್ತು ಶಿಬಾ ಪ್ರಸಾದ್ ಹಜ್ರಾ ಅವರನ್ನು ಬಂಧಿಸಬೇಕಿದೆ.
ಜನವರಿ 5 ರಂದು ತೃಣಮೂಲ ಕಾಂಗ್ರೆಸ್ ನಾಯಕ ಶಾಜಹಾನ್ ಶೇಖ್ ಅವರ ಬೆಂಬಲಿಗರು ತನಿಖಾ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದೆ ಎಂದು ಪ್ರತಿಭಟನೆ ನಡೆಯುತ್ತಿದೆ.