ಶಬರಿಮಲೆ ದೇಗುಲಕ್ಕೆ ಹೋಗುವ ಭಕ್ತರಿಗೆ ಆಧಾರ್ ಕಡ್ಡಾಯ: ಹೊಸ ನಿರ್ದೇಶನ

ಬುಕಿಂಗ್ ಮೂಲಕ 70,000 ಯಾತ್ರಾರ್ಥಿಗಳಿಗೆ ಸನ್ನಿಧಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಮತ್ತು ಸ್ಪಾಟ್ ಬುಕಿಂಗ್ ಕೌಂಟರ್‌ಗಳ ಮೂಲಕ 10,000 ಯಾತ್ರಾರ್ಥಿಗಳಿಗೆ ದೇವಾಲಯಕ್ಕೆ ಪ್ರವೇಶಿಸಬಹುದು;

Update: 2024-11-09 10:27 GMT
ಶಬರಿಮಲೆ ದೇಗುಲಕ್ಕೆ ಹೋಗುವ ಭಕ್ತರಿಗೆ ಆಧಾರ್ ಕಡ್ಡಾಯ: ಹೊಸ ನಿರ್ದೇಶನ
ಶಬರಿಮಲೆ ದೇವಸ್ಥಾನ

ಶಬರಿಮಲೆಗೆ ಯಾತ್ರೆಗೆ ಮಂಡಲ ಪೂಜೆ ವೇಳೆ ಭೇಟಿ ನೀಡುವ ಎಲ್ಲಾ ಭಕ್ತರು ತಮ್ಮ ಆಧಾರ್ ಕಾರ್ಡ್‌ಗಳನ್ನು ತಪ್ಪದೆ ಇಟ್ಟುಕೊಳ್ಳುವಂತೆ ಕೇರಳ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಕಂಪ್ಯೂಟರ್‌ ಮೂಲಕ ಯಾತ್ರಿಕರ ವಿವರಗಳನ್ನು ನೋಂದಾಯಿಸಲು ಆಧಾರ್‌ ಕಾರ್ಡ್‌ ಅವಶ್ಯಕ ಎಂದು ದೇವಸ್ಥಾನದ ಅಧ್ಯಕ್ಷ ಪಿ.ಎಸ್.ಪ್ರಶಾಂತನ್ ಹೇಳಿದ್ದಾರೆ.

ವಿದೇಶಿ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಭಾರತೀಯ ಮೂಲದ ಭಕ್ತರು ತಮ್ಮ ಪಾಸ್‌ಪೋರ್ಟ್‌ ಸಂಖ್ಯೆಯ ಮೂಲಕವೂ ನೋಂದಾಯಿಸಿಕೊಂಡು ದೇವಸ್ಥಾನಕ್ಕೆ ಬರಬಹುದು ಎಂದು ಅವರು ಹೇಳಿದ್ದಾರೆ.

ನೈಜ-ಸಮಯದ ಆನ್‌ಲೈನ್ ಬುಕಿಂಗ್

ಮಲೆಯಲ್ಲಿರುವ ದೇಗುಲದಲ್ಲಿ ಮೂರು ಸ್ಥಳಗಳಲ್ಲಿ ರಿಯಲ್‌ ಟೈಮ್‌ ಆನ್‌ಲೈನ್ ಸ್ಪಾಟ್ ಬುಕಿಂಗ್‌ಗೆ ಸೌಲಭ್ಯಗಳು ಲಭ್ಯವಿರುತ್ತವೆ ಎಂದು ಪ್ರಶಾಂತನ್‌ ಅವರು ಪತ್ತನಂತಿಟ್ಟದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ವಂಡಿಪೆರಿಯಾರ್-ಪುಲ್ಮೇಡು, ಎರುಮೇಲಿ-ಸತ್ರಂ ಮತ್ತು ಪಂಪಾ. ಸ್ಪಾಟ್ ಬುಕಿಂಗ್‌ ಕೇಂದ್ರಗಳಾಗಿವೆ.  ಇವೆಲ್ಲವೂ 'ರಿಯಲ್-ಟೈಮ್ ಬುಕಿಂಗ್' ಆಗಿರುತ್ತವೆ ಎಂದು ಪ್ರಶಾಂತನ್ ಹೇಳಿದ್ದಾರೆ.

ಕಳೆದ ವರ್ಷದ ಯಾತ್ರೆಯ ಸಮಯದಲ್ಲಿ ಪಂಪಾದಲ್ಲಿಯೇ ಮೂರು ಕೌಂಟರ್‌ಗಳಿದ್ದವು. ಅದನ್ನು ಈ ಬಾರಿ ಆರಕ್ಕೆ ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ.

 70,000 ಯಾತ್ರಿಕರಿಗೆ ಒಂದು ಬಾರಿಗೆ ಪ್ರವೇಶ ಅವಕಾಶ 

"ಈ ಬಾರಿ 70,000 ಯಾತ್ರಾರ್ಥಿಗಳಿಗೆ ಆನ್‌ಲೈನ್‌ ಬುಕಿಂಗ್ ಮೂಲಕ ಸನ್ನಿಧಾನ ಪ್ರವೇಶಿಸಲು ಅವಕಾಶ ನೀಡಲಾಗುವುದು. 10,000 ಭಕ್ತರು ಆಧಾರ್ ವಿವರಗಳನ್ನು ಬಳಸಿಕೊಂಡು ಸ್ಪಾಟ್ ಬುಕಿಂಗ್ ಕೌಂಟರ್‌ಗಳಲ್ಲಿ ನೋಂದಾಯಿಸುವ ಮೂಲಕ ದೇಗುಲ ಪ್ರವೇಶಿಸಬಹುದು" ಎಂದು ಪ್ರಶಾಂತನ್ ಮಾಹಿತಿ ನೀಡಿದ್ದಾರೆ.

ಹಿಂದಿನ ಬಾರಿ ʼಗುರುಸ್ವಾಮಿʼಗಳು ತಮ್ಮ ಆಧಾರ್ ಅಡಿಯಲ್ಲಿ ಇತರ ಭಕ್ತರ ಹೆಸರನ್ನು ನೋಂದಾಯಿಸಿಕೊಳ್ಳುವ ಅವಕಾಶ ಇತ್ತು. ಈ ಬಾರಿ ವೈಯಕ್ತಿಕ ಆಧಾರ್ ಗುರುತು ಕಡ್ಡಾಯ ಮಾಡಲಾಗಿದೆ. ಭೇಟಿಯ ದಿನಾಂಕವನ್ನು ಬದಲಾಯಿಸಲು ಬಯಸುವ ಭಕ್ತರು ಬೇರೆ ಭಕ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಹಳೆಯ ಬುಕಿಂಗ್ ರದ್ದುಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.

ಹೊಸ ಮಾರ್ಗಸೂಚಿಗಳ ಪ್ರಕಾರ, ತಮ್ಮ ಭೇಟಿಯ ದಿನಾಂಕ ಬದಲಾವಣೆಯಾದರೆ ತೀರ್ಥಯಾತ್ರೆಯ ಹಿಂದಿನ ದಿನಾಂಕ ರದ್ದುಗೊಳಿಸದವರಿಗೆ ಮರುಬುಕ್ ಮಾಡಲು ಸಾಧ್ಯವಾಗುವುದಿಲ್ಲ.

ಯಾತ್ರೆಗೆ ದಿನಾಂಕ ಕಾಯ್ದಿರಿಸುವ ಪ್ರತಿಯೊಬ್ಬ ಯಾತ್ರಾರ್ಥಿ ಆಕಸ್ಮಿಕ ಮರಣ ಹೊಂದಿದಲ್ಲಿ 5 ಲಕ್ಷ ರೂ.ಗಳ ವಿಮಾ ಕ್ಲೈಮ್‌ಗೆ ಅರ್ಹರಾಗಿರುತ್ತಾರೆ ಎಂದು ದೇವಸ್ವಂ ಮಂಡಳಿ ಭರವಸೆ ನೀಡಿದೆ.

ಕಾಣಿಕೆಯಾಗಿ ಸ್ವೀಕರಿಸಿದ ನಾಣ್ಯಗಳ ಸಂಪೂರ್ಣ ಪರಿಮಾಣವನ್ನು ಎಣಿಸಲು 100 ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗುತ್ತಿದೆ.

Tags:    

Similar News