ಜಿಡಿಪಿ ಕುಸಿತದ ಹೊರತಾಗಿಯೂ ಬಡ್ಡಿದರ ಕಡಿಮೆ ಮಾಡದ ಆರ್ಬಿಐ
ಪ್ರಸಕ್ತ ಹಣಕಾಸು ವರ್ಷದ ಐದನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, ಹಣಕಾಸು ನೀತಿ ಸಮಿತಿ (ಎಂಪಿಸಿ) ರೆಪೊ ದರವನ್ನು ಶೇಕಡಾ 6.5 ಕ್ಕೆ ಬದಲಾಯಿಸದೆ ಉಳಿಸಿಕೊಳ್ಳಲು ನಿರ್ಧರಿಸಿದೆ;
2024-25ನೇ ಹಣಕಾಸು ವರ್ಷದ ಎರಡನೇ ತೈಮಾಸಿಕದಲ್ಲಿ ಜಿಡಿಪಿ 5.4ಕ್ಕೆ ಕುಸಿದ ಹೊರತಾಗಿಯೂ ಆರ್ಬಿಐ ರೆಪೊ ರೇಟ್ ಇಳಿಕೆ ಮಾಡಿಲ್ಲ. ಜಿಡಿಪಿ ಕುಸಿತದ ಹಿನ್ನೆಲೆಯಲ್ಲಿ ಬಡ್ಡಿ ದರದ ಇಳಿಸಬಹುದು ಎಂಬುದು ಆರ್ಥಿಕ ಪರಿಣತರು ನಿರೀಕ್ಷೆ ಮಾಡಿದ್ದರು. ಆದರೆ, ಡಿಸೆಂಬರ್ 6ರಂದು ಆರ್ಬಿಐನ ಹಣಕಾಸು ಪರಾಮರ್ಶೆ ಸಮಿತಿ ಸಭೆಯಲ್ಲಿ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆರ್ಥಿಕತೆಯು ಚೇತರಿಕೆಯ ಹಾದಿಯಲ್ಲಿರುವ ಕಾರಣ ಹಾಗೂ ಮುಂದಿನ ದಿನಗಳಲ್ಲಿ ಚಿಲ್ಲರೆ ಹಣದುಬ್ಬರ ನಿಯಂತ್ರಣಕ್ಕೆ ಬರಲಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಮ್ಮನೇತೃತ್ವದ ಸಮಿತಿಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ರಿಸರ್ವ್ ಬ್ಯಾಂಕ್ (ಆರ್ಬಿಐ) ಸತತ 11ನೇ ಬಾರಿಗೆ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ರೆಪೊ ದರವನ್ನು ಯಥಾಸ್ಥಿತಿಯಲ್ಲಿಡಲು ನಿರ್ಧರಿಸಿದೆ. ಇದೇ ವೇಳೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 6.6 ಕ್ಕೆ ಇಳಿಸಿದೆ.
ಪ್ರಸಕ್ತ ಹಣಕಾಸು ವರ್ಷದ ಐದನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, ಹಣಕಾಸು ನೀತಿ ಸಮಿತಿ (ಎಂಪಿಸಿ) ರೆಪೊ ದರವನ್ನು ಶೇಕಡಾ 6.5 ಕ್ಕೆ ಬದಲಾಯಿಸದೆ ಉಳಿಸಿಕೊಳ್ಳಲು ನಿರ್ಧರಿಸಿದೆ ಎಂದು ಹೇಳಿದರು. ಮುಂದಿನ ವರ್ಷಗಳಲ್ಲಿ ಚಿಲ್ಲರೆ ಹಣದುಬ್ಬರ ಕಡಿಮೆಯಾಗಲಿರುವ ಕಾರಣ ಜಿಡಿಪಿ ನಿಯಂತ್ರಣಕ್ಕೆ ಬರಲಿದೆ. ಹೀಗಾಗಿ ರೆಪೊ ದರವನ್ನು ಇಳಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿಆರ್ಆರ್ (cash reserve ratio) ಎಂದರೆ ಆರ್ಬಿಐನಲ್ಲಿ ಬ್ಯಾಂಕ್ಗಳು ನಗದು ರೂಪದಲ್ಲಿ ನಿರ್ವಹಿಸಬೇಕಾದ ಬ್ಯಾಂಕಿನ ಒಟ್ಟು ಠೇವಣಿಗಳ ಶೇಕಡಾವಾರು ಪ್ರಮಾಣ. ಸಿಆರ್ಆರ್ ಶೇಕಡಾವಾರು ಪ್ರಮಾಣವನ್ನುಆರ್ಬಿಐ ಕಾಲಕಾಲಕ್ಕೆ ನಿರ್ಧರಿಸುತ್ತದೆ. ಈ ಮೊತ್ತಕ್ಕೆ ಬ್ಯಾಂಕ್ಗಳು ಯಾವುದೇ ಬಡ್ಡಿಯನ್ನು ಪಡೆಯುವುದಿಲ್ಲ.
ಅಕ್ಟೋಬರ್ನಲ್ಲಿ ಸರ್ಕಾರವು ರಿಸರ್ವ್ ಬ್ಯಾಂಕ್ನ ದರ ನಿಗದಿ ಸಮಿತಿ - ಹಣಕಾಸು ನೀತಿ ಸಮಿತಿ (ಎಂಪಿಸಿ) ಅನ್ನು ಪುನರ್ ರಚಿಸಿತು. ಹೊಸದಾಗಿ ನೇಮಕಗೊಂಡ ಸದಸ್ಯರಾದ ರಾಮ್ ಸಿಂಗ್, ಸೌಗತ ಭಟ್ಟಾಚಾರ್ಯ ಮತ್ತು ನಾಗೇಶ್ ಕುಮಾರ್ ಅವರೊಂದಿಗೆ ಪುನರ್ ರಚಿಸಲಾದ ಸಮಿತಿಯ ಎರಡನೇ ಎಂಪಿಸಿ ಸಭೆ ಇದಾಗಿದೆ.
ಕೃಷಿ ಸಾಲ ಮಿತಿ ಹೆಚ್ಚಳ
ಮೇಲಾಧಾರ ರಹಿತ ಕೃಷಿ ಸಾಲದ ಮಿತಿಯನ್ನು ಪ್ರತಿ ಸಾಲಗಾರನಿಗೆ 1.6 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಬ್ಯಾಂಕುಗಳು ಪ್ರತಿ ಸಾಲಗಾರನಿಗೆ 1.6 ಲಕ್ಷ ರೂ.ಗಳವರೆಗೆ ಮೇಲಾಧಾರ ರಹಿತ ಕೃಷಿ ಸಾಲವನ್ನು ನೀಡಬೇಕಾಗಿದೆ. ಈ ಮಿತಿಯನ್ನು 2010 ರಲ್ಲಿ ನಿಗದಿಪಡಿಸಿದ 1 ಲಕ್ಷ ರೂ.ಗಳಿಂದ 2019 ರಲ್ಲಿ 1.6 ಲಕ್ಷ ರೂ.ಗೆ ಹೆಚ್ಚಿಸಲಾಗಿತ್ತು.
ಮೇಲಾಧಾರ ರಹಿತ ಕೃಷಿ ಸಾಲಗಳ ಮಿತಿಯನ್ನು ಕೊನೆಯದಾಗಿ 2019ರಲ್ಲಿ ಪರಿಷ್ಕರಿಸಲಾಗಿತ್ತು. ಕೃಷಿ ವೆಚ್ಚಗಳ ಹೆಚ್ಚಳ ಮತ್ತು ಒಟ್ಟಾರೆ ಹಣದುಬ್ಬರವನ್ನು ಗಣನೆಗೆ ತೆಗೆದುಕೊಂಡು, ಮೇಲಾಧಾರ ರಹಿತ ಕೃಷಿ ಸಾಲಗಳ ಮಿತಿಯನ್ನು ಪ್ರತಿ ಸಾಲಗಾರನಿಗೆ 1.6 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಾಲ ಲಭ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ" ಎಂದು ದಾಸ್ ಹೇಳಿದರು.