ರಷ್ಯಾ ತೈಲ ಆಮದು ನಿಲ್ಲಿಸುವ ಬಗ್ಗೆ ಟ್ರಂಪ್ ಹೇಳಿಕೆ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಆಗಸ್ಟ್‌ನಲ್ಲಿ ಟ್ರಂಪ್ ಅವರು ಭಾರತದ ಮೇಲೆ ಹೆಚ್ಚುವರಿಯಾಗಿ 25% ಸುಂಕವನ್ನು ವಿಧಿಸಿದಾಗಿನಿಂದ, ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿರುವುದು ಚರ್ಚೆಯಲ್ಲಿದೆ. ಈ ಹೆಚ್ಚಳದೊಂದಿಗೆ, ಭಾರತದ ಮೇಲಿನ ಅಮೆರಿಕದ ಒಟ್ಟು ಸುಂಕವು 50% ಕ್ಕೆ ಏರಿಕೆಯಾಗಿತ್ತು.
ರಾಹುಲ್ ಗಾಂಧಿ
"ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲಿದೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯವರು ಟ್ರಂಪ್‌ಗೆ ಹೆದರಿದ್ದಾರೆ ಮತ್ತು ಭಾರತದ ನಿರ್ಧಾರಗಳನ್ನು ಅಮೆರಿಕವೇ ನಿರ್ದೇಶಿಸುವಂತೆ ಮಾಡುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.
ಗುರುವಾರ (ಅಕ್ಟೋಬರ್ 16) 'ಎಕ್ಸ್' (ಹಿಂದಿನ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್ ಸಂಸದ ರಾಹುಲ್, "ಭಾರತವು ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ನಿರ್ಧರಿಸಿ ಘೋಷಿಸಲು ಪ್ರಧಾನಿ ಮೋದಿಯವರು ಟ್ರಂಪ್‌ಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಪದೇ ಪದೇ ಅವಮಾನ ಮಾಡಿದರೂ, ಮೋದಿಯವರು ಟ್ರಂಪ್‌ಗೆ ಅಭಿನಂದನಾ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದಾರೆ. ಇದು ಪ್ರಧಾನಿ ಮೋದಿಯವರು ಟ್ರಂಪ್‌ಗೆ ಹೆದರಿರುವುದನ್ನು ತೋರಿಸುತ್ತದೆ" ಎಂದು ಆರೋಪಿಸಿದ್ದಾರೆ.
ಟ್ರಂಪ್ ಹೇಳಿಕೆಯಿಂದ ವಿವಾದ
"ಭಾರತವು ಇನ್ನು ಮುಂದೆ ರಷ್ಯಾದಿಂದ ತೈಲವನ್ನು ಖರೀದಿಸುವುದಿಲ್ಲ ಎಂದು ಪ್ರಧಾನಿ ಮೋದಿ ನನಗೆ ಭರವಸೆ ನೀಡಿದ್ದಾರೆ" ಎಂದು ಟ್ರಂಪ್ ಹೇಳಿಕೆ ನೀಡಿದ ನಂತರ ಈ ವಿವಾದ ಭುಗಿಲೆದ್ದಿದೆ. "ಭಾರತ ತೈಲ ಖರೀದಿಸುತ್ತಿರುವುದು ನನಗೆ ಇಷ್ಟವಿರಲಿಲ್ಲ. ಆದರೆ, ಇನ್ನು ಮುಂದೆ ಅವರು ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಮೋದಿ ಇಂದು ನನಗೆ ಭರವಸೆ ನೀಡಿದ್ದಾರೆ. ಇದು ಒಂದು ದೊಡ್ಡ ಹೆಜ್ಜೆ" ಎಂದು ಟ್ರಂಪ್ ಓವಲ್ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು. ಭಾರತದ ನಂತರ, ಚೀನಾ ಕೂಡ ಇದೇ ರೀತಿ ಮಾಡುವಂತೆ ನೋಡಿಕೊಳ್ಳುವುದಾಗಿ ಅವರು ಹೇಳಿದ್ದಾರೆ.
ರಷ್ಯಾ ತೈಲ ಖರೀದಿಯ ವಿವಾದ
ಆಗಸ್ಟ್‌ನಲ್ಲಿ ಟ್ರಂಪ್ ಅವರು ಭಾರತದ ಮೇಲೆ ಹೆಚ್ಚುವರಿಯಾಗಿ 25% ಸುಂಕವನ್ನು ವಿಧಿಸಿದಾಗಿನಿಂದ, ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿರುವುದು ಚರ್ಚೆಯಲ್ಲಿದೆ. ಈ ಹೆಚ್ಚಳದೊಂದಿಗೆ, ಭಾರತದ ಮೇಲಿನ ಅಮೆರಿಕದ ಒಟ್ಟು ಸುಂಕವು 50% ಕ್ಕೆ ಏರಿಕೆಯಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, "ಭಾರತದ ರೈತರ ಜೀವನೋಪಾಯದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ಅದಕ್ಕಾಗಿ ನಾವು ದೊಡ್ಡ ಬೆಲೆ ತೆರಬೇಕಾದರೂ ಸರಿ" ಎಂದು ಹೇಳಿದ್ದರು.