ಬಿಜೆಪಿಯ 'ಬುಲ್ಡೋಜರ್ ನೀತಿ'| ಸುಪ್ರೀಂ ಕೋರ್ಟ್‌ ನಿಲುವಿಗೆ ರಾಹುಲ್‌ ಶ್ಲಾಘನೆ

ಮಾನವೀಯತೆ ಮತ್ತು ನ್ಯಾಯವನ್ನು ಬುಲ್ಡೋಜರ್ ಅಡಿಯಲ್ಲಿ ಪುಡಿಮಾಡಿದ ಬಿಜೆಪಿಯ ಸಂವಿಧಾನ ವಿರೋಧಿ ಮುಖ ಈಗ ದೇಶದ ಮುಂದೆ ಬಹಿರಂಗವಾಗಿದೆ ಎಂದು ರಾಹುಲ್‌ ಹೇಳಿದ್ದಾರೆ.;

Update: 2024-09-03 10:03 GMT

ಹೊಸದಿಲ್ಲಿ: ʻಮಾನವೀಯತೆ ಮತ್ತು ನ್ಯಾಯವನ್ನು ಬುಲ್ಡೋಜರ್ ಅಡಿ ಹತ್ತಿಕ್ಕಿರುವ ಬಿಜೆಪಿಯ ಸಂವಿಧಾನ ವಿರೋಧಿ ಮುಖ ಈಗ ಬಹಿರಂಗಗೊಂಡಿದೆ,ʼ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.

ಆರೋಪಿಗಳ ಮನೆ ಧ್ವಂಸಗೊಳಿಸುವಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಅವಲೋಕನವನ್ನು ಅವರು ಶ್ಲಾಘಿಸಿದ್ದಾರೆ. 

ಹಲವಾರು ರಾಜ್ಯಗಳು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಮನೆಗಳನ್ನು ಬುಲ್ಡೋಜರ್‌ಗಳಿಂದ ನೆಲಸಮಗೊಳಿಸುತ್ತಿದ್ದು, ಆರೋಪಿ ಎಂಬ ಕಾರಣಕ್ಕೆ ವ್ಯಕ್ತಿಯ ಮನೆಯನ್ನು ಕೆಡವಲು ಹೇಗೆ ಸಾಧ್ಯ? ಎಂದು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿತ್ತು. ಈ ಕುರಿತು ದೇಶಾದ್ಯಂತ ಅನ್ವಯಿಸುವ ಮಾರ್ಗಸೂಚಿಗಳನ್ನು ರೂಪಿಸುವುದಾಗಿ ನ್ಯಾಯಾಲಯ ಹೇಳಿತ್ತು. 

ಬಿಜೆಪಿಯ ಅಸಂವಿಧಾನಿಕ ಮತ್ತು ಅನ್ಯಾಯದ ಬುಲ್ಡೋಜರ್ ನೀತಿ ಕುರಿತು ನ್ಯಾಯಾಲಯದ ಹೇಳಿಕೆ ಸ್ವಾಗತಾರ್ಹ ಎಂದು ಎಕ್ಸ್‌ ನಲ್ಲಿ ರಾಹುಲ್‌ ಅವರು ಬರೆದಿದ್ದಾರೆ. 

ʻಮಾನವೀಯತೆ ಮತ್ತು ನ್ಯಾಯವನ್ನು ಬುಲ್ಡೋಜರ್ ಅಡಿಯಲ್ಲಿ ಪುಡಿಮಾಡಿದ ಬಿಜೆಪಿಯ ಸಂವಿಧಾನ ವಿರೋಧಿ ಮುಖ ಈಗ ದೇಶದ ಮುಂದೆ ಬಹಿರಂಗವಾಗಿದೆ. ಕಡಿವಾಣವಿಲ್ಲದ ಶಕ್ತಿಯ ಸಂಕೇತವಾಗಿರುವ ಬುಲ್ಡೋಜರ್, ನಾಗರಿಕ ಹಕ್ಕುಗಳನ್ನು ಪುಡಿಮಾಡುವ ಮೂಲಕ ಕಾನೂನನ್ನು ಪ್ರಶ್ನಿಸಿದೆ. ಬಹುಜನರು ಮತ್ತು ಬಡವರ ಮನೆಗಳು ಬುಲ್ಡೋಜರ್‌ ಕೆಳಗೆ ಬರುತ್ತವೆ. ತಕ್ಷಣ ನ್ಯಾಯ'ದ ನೆಪದಲ್ಲಿ ಭಯದ ನಿಯಮವನ್ನು ಸ್ಥಾಪನೆ ನಡೆಯುತ್ತಿದೆ,ʼ ಎಂದು ರಾಹುಲ್‌ ಬರೆದಿದ್ದಾರೆ. 

ʻಇಂಥ ಸೂಕ್ಷ್ಮ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡುತ್ತದೆ ಮತ್ತು ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಕ್ರಿಯೆಯಿಂದ ನಾಗರಿಕರನ್ನು ರಕ್ಷಿಸುತ್ತದೆ ಎಂದು ನಿರೀಕ್ಷಿಸುತ್ತೇವೆ. ದೇಶವನ್ನು ಬಾಬಾ ಸಾಹೇಬರ ಸಂವಿಧಾನದಿಂದ ನಡೆಸಲಾಗುವುದು; ಅಧಿಕಾರದ ಚಾವಟಿಯಿಂದ ಅಲ್ಲ,ʼ ಎಂದು ಬರೆದಿದ್ದಾರೆ.

ಸುಪ್ರೀಂ ಕೋರ್ಟ್‌ ಹೇಳಿದ್ದೇನು?: ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠ, ʻಆರೋಪಿ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರ ಮನೆಯನ್ನು ಕೆಡವಲು ಹೇಗೆ ಸಾಧ್ಯ? ಆತ ಅಪರಾಧಿಯಾಗಿದ್ದರೂ, ಕಾನೂನು ಅನುಸರಿಸದೆ ಹಾಗೆ ಮಾಡಲು ಸಾಧ್ಯವಿಲ್ಲ. ಆದರೆ, ಸಾರ್ವಜನಿಕ ರಸ್ತೆಗಳಲ್ಲಿ ಯಾವುದೇ ಅನಧಿಕೃತ ನಿರ್ಮಾಣ ಅಥವಾ ಅತಿಕ್ರಮಣವನ್ನು ರಕ್ಷಿಸುವುದಿಲ್ಲ,ʼ ಎಂದು ನ್ಯಾಯಾಲಯ ಹೇಳಿದೆ.

ಉತ್ತರ ಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯ ಸಲ್ಲಿಸಿದ್ದ ಹಿಂದಿನ ಪ್ರಮಾಣಪತ್ರವನ್ನು ಉಲ್ಲೇಖಿಸಿದರು. ವ್ಯಕ್ತಿಯೊಬ್ಬ ಅಪರಾಧದ ಭಾಗವಾಗಿದ್ದಾನೆ ಎಂದು ಆರೋಪವು ಅವನ ಸ್ಥಿರ ಆಸ್ತಿಯನ್ನು ಕೆಡವಲು ಆಧಾರವಾಗುವುದಿಲ್ಲ ಎಂದು ಪ್ರಮಾಣಪತ್ರ ಹೇಳುತ್ತದೆ. ʻಸ್ಥಿರಾಸ್ತಿಯ ಉರುಳಿಸುವಿಕೆಯು ಮುನ್ಸಿಪಲ್ ಕಾನೂನು ಅಥವಾ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ಕಾನೂನಿನಲ್ಲಿ ಸೂಚಿಸಿದ ಕಾರ್ಯವಿಧಾನದ ಉಲ್ಲಂಘನೆಗೆ ಮಾತ್ರ ನಡೆಸಬಹುದೆಂದು ರಾಜ್ಯ ಹೇಳಿದೆ. ಅಂತಹ ಆಸ್ತಿಯ ಮಾಲೀಕರು ಅಥವಾ ನಿವಾಸಿಗಳು ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂಬ ಕಾರಣಕ್ಕೆ ಯಾವುದೇ ಸ್ಥಿರ ಆಸ್ತಿಯನ್ನು ಕೆಡವಲು ಸಾಧ್ಯವಿಲ್ಲ,ʼ ಎಂದು ಮೆಹ್ತಾ ಹೇಳಿದರು.

ಈ ಸಂಬಂಧ ಮಾರ್ಗಸೂಚಿಗಳನ್ನು ರೂಪಿಸುವ ಅಗತ್ಯವನ್ನು ಒತ್ತಿ ಹೇಳಿದ ಪೀಠ, ʻವ್ಯಕ್ತಿಯೊಬ್ಬರು ಕಾನೂನಿನ ಲೋಪದೋಷದ ಲಾಭ ಪಡೆದುಕೊಳ್ಳುವುದಿಲ್ಲ ಅಥವಾ ಅಧಿಕಾರಿಗಳು ಇಂಥ ಲೋಪದೋಷವನ್ನು ಅವಲಂಬಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವ ಅಗತ್ಯವಿದೆ,ʼ ಎಂದು ಹೇಳಿದೆ.

ಗೆಹ್ಲೋಟ್‌ ಸ್ವಾಗತ: ಸುಪ್ರೀಂ ಕೋರ್ಟಿನ ಅವಲೋಕನವನ್ನು ಸ್ವಾಗತಿಸಿರುವ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ʻತಕ್ಷಣ ನ್ಯಾಯದಂಥ ನೀತಿಗಳು ಸುಸಂಸ್ಕೃತ ಮತ್ತು ಕಾನೂನು ಪಾಲಿಸುವ ಸಮಾಜದಲ್ಲಿ ಸ್ವೀಕಾರಾರ್ಹವಲ್ಲ; ಇವು ಸಂವಿಧಾನದ ಮೂಲಭೂತ ಸಿದ್ಧಾಂತಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿವೆ. ʻಬುಲ್ಡೋಜರ್ ಸಂಸ್ಕೃತಿ' ಕುರಿತು ಸುಪ್ರೀಂ ಕೋರ್ಟ್‌ನ ಅಭಿಪ್ರಾಯ ಸ್ವಾಗತಾರ್ಹ. ಯಾವುದೇ ಆರೋಪಿ ಮನೆ ಮೇಲೆ ಬುಲ್ಡೋಜರ್ ಓಡಿಸುವುದು ನ್ಯಾಯವಲ್ಲ,ʼ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.

Tags:    

Similar News