Haryana Polls| ಬಿಜೆಪಿ ಕೈಗಾರಿಕೋದ್ಯಮಿ ಪರ - ರಾಹುಲ್

Update: 2024-09-30 11:27 GMT

ಚಂಡೀಗಢ: ಮೋದಿ ಸರ್ಕಾರವು ಕೈಗಾರಿಕೋದ್ಯಮಿಗಳಿಗಾಗಿ ಕೆಲಸ ಮಾಡುತ್ತಿದೆ. ಜನಸಾಮಾನ್ಯ ಕಷ್ಟಪಡುತ್ತಿರುವಾಗ ಗೌತಮ್ ಅದಾನಿ ಅವರ ಖಾತೆಗೆ ಸುನಾಮಿಯಂತೆ ಹಣ ಹರಿಯುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. 

ಹರಿಯಾಣದ ಅಂಬಾಲಾ ಜಿಲ್ಲೆಯ ನಾರಾಯಣ್‌ ಗಢದಲ್ಲಿ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ  ಸೈದ್ಧಾಂತಿಕ ಹೋರಾಟವಿದೆ. ಒಂದೆಡೆ ನ್ಯಾಯ, ಮತ್ತೊಂದೆಡೆ ಅನ್ಯಾಯ ಇದೆ. ಕಾಂಗ್ರೆಸ್ ಸರ್ಕಾರ ಬದಲಾವಣೆ ತರಲಿದೆ ಎಂದು ಹೇಳಿದರು. 

ʻಬಿಜೆಪಿ ಸರ್ಕಾರ ದೊಡ್ಡ ಕೈಗಾರಿಕೋದ್ಯಮಿಗಳದ್ದು. ಹರಿಯಾಣದಲ್ಲಿ ನಮಗೆ ಅಂತಹ ಸರ್ಕಾರ ಅಗತ್ಯವಿಲ್ಲ; ಬದಲಿಗೆ, ರೈತರು, ಕಾರ್ಮಿಕರು ಮತ್ತು ಬಡವರ ಸರ್ಕಾರ ಬೇಕಿದೆ,ʼ ಎಂದು ಹೇಳಿದರು. 

ಇತ್ತೀಚಿನ ಅಮೆರಿಕ ಭೇಟಿಯಲ್ಲಿ ಹರಿಯಾಣದಿಂದ ವಲಸೆ ಹೋದವರನ್ನು ತಾವು ಭೇಟಿಯಾಗಿದ್ದು, ತವರು ರಾಜ್ಯದಲ್ಲಿ ಉದ್ಯೋಗಾವಕಾಶ ಇಲ್ಲದ ಕಾರಣ ಉತ್ತಮ ಭವಿಷ್ಯಕ್ಕಾಗಿ ಇಲ್ಲಿಗೆ ಬಂದೆವು ಎಂದು ಹೇಳಿದ್ದರು. ಬಡವರು ಮತ್ತು ಜನಸಾಮಾನ್ಯರ ಜೇಬಿಗೆ ಎಷ್ಟು ಹಣ ಬರುತ್ತಿದೆ ಮತ್ತು ಎಷ್ಟು ಹಣ ಹೋಗುತ್ತಿದೆ ಎಂಬುದನ್ನು ನೋಡುವುದು ಮುಖ್ಯ ಎಂದು ಹೇಳಿದರು. 

ʻಅದಾನಿ ಬೆಳಗ್ಗೆ ಎದ್ದೇಳುತ್ತಾರೆ; ಹೊಲದಲ್ಲಿ ಕೆಲಸ ಮಾಡುವುದಿಲ್ಲ, ನೇಗಿಲು ಬಳಸುವುದಿಲ್ಲ, ವ್ಯಾಪಾರ ಮಾಡುವುದಿಲ್ಲ; ಆದರೆ, ಒಳ್ಳೆಯ ಆಹಾರ ಸೇವಿಸುತ್ತಾರೆ. ಅರಮನೆಯಲ್ಲಿ ಜೀವಿಸುತ್ತಾರೆ. ಪ್ರತಿದಿನ 24 ಗಂಟೆ ಕಾಲ ಅವರ ಬ್ಯಾಂಕ್ ಖಾತೆಗೆ ಸುನಾಮಿಯಂತೆ ಹಣ ಬರುತ್ತದೆ. ಬಡಜನರ ಬ್ಯಾಂಕ್ ಖಾತೆಗಳಿಂದ ಹಣ ಬಿರುಗಾಳಿಯಂತೆ ಹೋಗುತ್ತಿದೆ,ʼ ಎಂದು ಹೇಳಿದರು. 

ʻಕಾಂಗ್ರೆಸ್ ರೈತರು, ಬಡವರು ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಿದರೆ, ಬಿಜೆಪಿ ದೊಡ್ಡ ಕೈಗಾರಿಕೋದ್ಯಮಿಗಳಿಗೆ ಲಾಭ ನೀಡುತ್ತದೆ. ಬಿಜೆಪಿ ರೈತರಿಗಾಗಿ ಕಾನೂನು ರೂಪಿಸಲಾಗಿದೆ ಎಂದು ಹೇಳುತ್ತದೆ. ಹಾಗಿದ್ದರೆ, ರೈತರು ಏಕೆ ರಸ್ತೆಯಲ್ಲಿದ್ದಾರೆ?ʼ ಎಂದು ಪ್ರಶ್ನಿಸಿದರು.

ʻಅಗ್ನಿವೀರ್ ಯೋಜನೆ ಜವಾನರ ಪಿಂಚಣಿ ಕದಿಯುವ ಮಾರ್ಗ. ಸಾಮಾನ್ಯ ಸೈನಿಕರಿಗೆ ಜೀವನಪೂರ್ತಿ ಪಿಂಚಣಿ ಸಿಗುತ್ತದೆ. ಆದರೆ, ಅಗ್ನಿವೀರರಿಗೆ ಪಿಂಚಣಿ ಸಿಗುವುದಿಲ್ಲ. ಇದರರ್ಥ, ಅವರ ಜೇಬಿನಿಂದ ಹಣ ಕಸಿದುಕೊಳ್ಳಲಾಗುತ್ತದೆ,ʼ ಎಂದು ಹೇಳಿದರು.

ಐಎನ್‌ಎಲ್‌ಡಿ ಮತ್ತು ಜೆಜೆಪಿಯನ್ನು ಹೆಸರಿಸದೆ, ಸಣ್ಣ ಪಕ್ಷಗಳ ರಿಮೋಟ್ ಕಂಟ್ರೋಲ್ ಬಿಜೆಪಿಯ ಕೈಯಲ್ಲಿದೆ ಎಂದು ಗಾಂಧಿ ಹೇಳಿದರು.

ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ, ಹರಿಯಾಣದ ಹಿರಿಯ ಕಾಂಗ್ರೆಸ್ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ ಮತ್ತು ಸಂಸದೆ ಕುಮಾರಿ ಸೆಲ್ಜಾ ಪಾಲ್ಗೊಂಡಿದ್ದರು. 

Tags:    

Similar News