ಮಹಿಳೆ ಸಾವು ಪ್ರಕರಣ | ಅಲ್ಲು ಅರ್ಜುನ್ಗೆ ಜಾಮೀನು ನೀಡಿದ ಹೈದಾರಾಬಾದ್ ಹೈಕೋರ್ಟ್
ಮೃತ ಮಹಿಳೆಯ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಹೈದರಾಬಾದ್ ಪೊಲೀಸರು ಅರ್ಜುನ್ ಅವರ ಭದ್ರತಾ ತಂಡ ಮತ್ತು ಥಿಯೇಟರ್ ಆಡಳಿತ ಮಂಡಳಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 105 ಮತ್ತು 118 (1) ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು.;
'ಪುಷ್ಪಾ 2'' ಸಿನಿಮಾದ ಪ್ರೀಮಿಯರ್ ಶೋ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ನಗರ ಪೊಲೀಸರು ಸ್ಟಾರ್ ನಟ ಅಲ್ಲು ಅರ್ಜನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಆದರೆ, ಸಂಜೆಯ ವೇಳೆಗೆ ಅವರಿಗೆ ತೆಲಂಗಾಣ ಹೈಕೋರ್ಟ್ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿದೆ.
ಮೃತ ಮಹಿಳೆಯ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಹೈದರಾಬಾದ್ ಪೊಲೀಸರು ಅರ್ಜುನ್ ಅವರ ಭದ್ರತಾ ತಂಡ ಮತ್ತು ಥಿಯೇಟರ್ ಆಡಳಿತ ಮಂಡಳಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 105 ಮತ್ತು 118 (1) ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಹೀಗಾಗಿ ಶುಕ್ರವಾರ (ಡಿಸೆಂಬರ್ 13ರಂದು) ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಸ್ಥಳೀಯ ನ್ಯಾಯಾಲಯವು ನಟನನ್ನು 14 ದಿನಗಳ ಜೈಲು ಶಿಕ್ಷೆಗೆ ಒಪ್ಪಿಸಿತ್ತು. ಚಲನಚಿತ್ರ ಪ್ರದರ್ಶನದ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಆಕೆಯ ಒಂಬತ್ತು ವರ್ಷದ ಮಗ ಗಾಯಗೊಂಡಿದ್ದಾನೆ. ತನ್ನ ಬಂಧನವನ್ನು ಸೋಮವಾರದವರೆಗೆ (ಡಿಸೆಂಬರ್ 16) ಮುಂದೂಡಬೇಕೆಂಬ ನಟನ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.
ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತಿದೆ: ಸಿಎಂ ರೇವಂತ್ ರೆಡ್ಡಿ
ಅಲ್ಲು ಅರ್ಜುನ್ ಬಂಧನ ರಾಜಕೀಯ ವಿವಾದಕ್ಕೂ ಕಾರಣವಾಗಿತ್ತು. ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ರೇವಂತ್ ರೆಡ್ಡಿ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ. "ಇದರಲ್ಲಿ ನನ್ನ ಪಾತ್ರವಿಲ್ಲ, ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನರು" ಎಂದು ರೆಡ್ಡಿ ಹೇಳಿದರು.
ನಗರದ ಚಿತ್ರಮಂದಿರವೊಂದರಲ್ಲಿ ಕಾಲ್ತುಳಿತದಲ್ಲಿ ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಪೊಲೀಸರು ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಕಾನೂನಿನ ಪ್ರಕಾರವೇ ಎಲ್ಲವೂ ನಡೆಯುತ್ತಿದೆ ಎಂದು ಹೇಳಿದರು
ಪ್ರಕರಣ ಹಿಂಪಡೆಯಲು ಮುಂದಾದ ಸಂತ್ರಸ್ತೆಯ ಪತಿ
ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ ಮಹಿಳೆಯ ಪತಿ ಎಂ.ಭಾಸ್ಕರ್ ಅವರು ನಟ ಅಲ್ಲು ಅರ್ಜುನ್ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹಿಂಪಡೆಯಲು ಮುಂದಾಗಿದ್ದಾರೆ. "ನಾನು ಪ್ರಕರಣವನ್ನು ಹಿಂಪಡೆಯಲು ಸಿದ್ಧನಿದ್ದೇನೆ. ನನ್ನ ಮಗ ಸಿನಿಮಾ ನೋಡಲು ಕರೆದುಕೊಂಡು ಹೋಗುವಂತೆ ಹೇಳಿದ್ದ. ಆದ್ದರಿಂದ ನಾವು ಚಿತ್ರಮಂದಿರಕ್ಕೆ ಹೋದೆವು. ನನ್ನ ಪತ್ನಿ ಸಾವನ್ನಪ್ಪಿದ್ದಕ್ಕೂ ಅಲ್ಲು ಅರ್ಜುನ್ ಅವರಿಗೂ ಯಾವುದೇ ಸಂಬಂಧವಿಲ್ಲ" ಎಂದು ಭಾಸ್ಕರ್ ಸುದ್ದಿಗಾರರಿಗೆ ತಿಳಿಸಿದರು.