Pune bus rape: ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ ಮಹಿಳೆ ಮೇಲೆ ಅತ್ಯಾಚಾರ

Pune bus rape: ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಹಿಳೆಯು ಕಳೆದ ಮಂಗಳವಾರ ಸತಾರ ಜಿಲ್ಲೆಯ ಫುಲ್ತಾನ್ ಎಂಬ ಗ್ರಾಮಕ್ಕೆ ತೆರಳಲು ಬಸ್ ನಿಲ್ದಾಣಕ್ಕೆ ತೆರಳಿದ್ದರು.;

Update: 2025-02-27 06:55 GMT

ಮಹಾರಾಷ್ಟ್ರದ ಪುಣೆಯಲ್ಲಿ ಪೊಲೀಸ್ ಠಾಣೆ ಬಳಿಯೇ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿದೆ. ಪುಣೆಯ ಸ್ವಾರ್ ಗೇಟ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್ ನಲ್ಲಿಯೇ 26 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ. ಪೊಲೀಸ್ ಠಾಣೆಯಿಂದ ಕೇವಲ ನೂರು ಮೀಟರ್ ದೂರದಲ್ಲಿರುವ ಬಸ್ ನಿಲ್ದಾಣದಲ್ಲಿ ಅತ್ಯಾಚಾರ ನಡೆದಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಹಿಳೆಯು ಕಳೆದ ಮಂಗಳವಾರ ಸತಾರ ಜಿಲ್ಲೆಯ ಫುಲ್ತಾನ್ ಎಂಬ ಗ್ರಾಮಕ್ಕೆ ತೆರಳಲು ಬಸ್ ನಿಲ್ದಾಣಕ್ಕೆ ತೆರಳಿದ್ದರು. ಬೆಳಗಿನ ಜಾವ 5.30ರ ಸುಮಾರಿಗೆ ಬಸ್ ನಿಲ್ದಾಣದಲ್ಲಿದ್ದರು. ಇದೇ ವೇಳೆ ದುಷ್ಕರ್ಮಿಯೊಬ್ಬ ಮಹಿಳೆಯನ್ನು ಹೊತ್ತುಕೊಂಡು ಹೋಗಿ, ಬಸ್ ನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅತ್ಯಾಚಾರ ಎಸಗಿದ ಅರೋಪಿಯನ್ನು ದತ್ತಾತ್ರೇಯ ರಾಮದಾಸ್ ಗಾಡೆ ಎಂದು ಗುರುತಿಸಲಾಗಿದೆ. ಆದರೆ ಪೊಲೀಸರಿಗೆ ಇದುವರೆಗೆ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿಲ್ಲ. ಈತನ ಬಂಧನಕ್ಕಾಗಿ ಎಂಟು ತಂಡಗಳನ್ನು ಕೂಡ ರಚಿಸಲಾಗಿದೆ.

ಮಾಸ್ಕ್​ ಹಾಕಿಕೊಂಡು ಬಂದಿದ್ದ ಆರೋಪಿ

ಅತ್ಯಾಚಾರ ಎಸಗಿದ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿ ಅವನ ಭಾವಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈತ ಈ ಹಿಂದೆ ಕ್ರಿಮಿನಲ್ ಪ್ರಕರಣವೊಂದರಲ್ಲಿ ಜೈಲು ಸೇರಿ ಜಾಮೀನಿನ ಮೂಲಕ ಬಿಡುಗಡೆಯಾಗಿದ್ದ. ಅತ್ಯಾಚಾರವೆಸಗಿದ ಬಳಿಕ ರಾಮ್‌ದಾಸ್ ತನ್ನ ಗುರುತನ್ನು ಮರೆಮಾಚಲು ಮಾಸ್ಕ್ ಧರಿಸಿಕೊಂಡು ಹೋಗಿದ್ದ. ಆತನನ್ನು ಬಂಧಿಸಲು ಪುಣೆ ಅಪರಾಧ ವಿಭಾಗವು 13 ತಂಡಗಳನ್ನು ನಿಯೋಜಿಸಿದ್ದು, ಇವರಿಗೆ ಶ್ವಾನದಳವೂ ಸಾಥ್ ನೀಡಲಿದೆ.

ಆರೋಪಿ ರಾಮ್‌ದಾಸ್ ಬಗ್ಗೆ ಮಾಹಿತಿ ನೀಡುವವರಿಗೆ ಪೊಲೀಸರು 1 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ. ಕ್ರಿಮಿನಲ್ ಹಿನ್ನೆಲೆಯುಳ್ಳ ರಾಮ್‌ದಾಸ್ ಗಾಡೆ ವಿರುದ್ಧ ಶಿರೂರು, ಶಿಕ್ರಾಪುರ ಮತ್ತು ಸ್ವರ್ಗೇಟ್ ಪೊಲೀಸ್ ಠಾಣೆಗಳಲ್ಲಿ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಅಜಿತ್ ಪವಾರ್​ ತನಿಖೆಗೆ ಒತ್ತಾಯ

ಅತ್ಯಾಚಾರ ಘಟನೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಂತೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಪುಣೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

"ಸ್ವರ್ಗೇಟ್ ಬಸ್ ನಿಲ್ದಾಣದಲ್ಲಿ ನಡೆದ ಅತ್ಯಾಚಾರ ಘಟನೆಯು ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಇದೊಂದು ನಾಚಿಕೆಗೇಡಿನ ಸಂಗತಿ. ಆರೋಪಿಯದ್ದು ಕ್ಷಮಿಸಲಾಗದ ಅಪರಾಧ. ಅವನಿಗೆ ಮರಣದಂಡನೆ ವಿಧಿಸುವುದೇ ಸೂಕ್ತ" ಎಂದು ಪವಾರ್ ಹೇಳಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೂಡ ಈ ಘಟನೆ ಬಗ್ಗೆ ಪರಿಶೀಲಿಸುತ್ತಿದ್ದು, ಪೊಲೀಸರಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ ಎಂದು ಪವಾರ್ ಹೇಳಿದ್ದಾರೆ.

ಏನಿದು ಘಟನೆ?

ಮಂಗಳವಾರ ಬೆಳಗ್ಗೆ 5.45ರ ಸುಮಾರಿಗೆ ಸತಾರಾ ಜಿಲ್ಲೆಯ ಫಲ್ತಾನ್‌ಗೆ ತೆರಳಲು ನಾನು ಬಸ್ ಗಾಗಿ ಕಾಯುತ್ತಿದ್ದೆ. ಅಲ್ಲಿಗೆ ಬಂದ ಆರೋಪಿಯು, ನನ್ನನ್ನು ಸಮೀಪಿಸಿ 'ದೀದಿ' (ಸಹೋದರಿ) ಎಂದು ಕರೆಯುತ್ತಾ ಮಾತು ಆರಂಭಿಸಿದ. ಸತಾರಾಗೆ ಹೋಗುವ ಬಸ್ ಮತ್ತೊಂದು ಪ್ಲಾಟ್ ಫಾರ್ಮ್ ಗೆ ಬಂದಿದೆ ಎಂದು ಹೇಳಿದ. ನಾನು ನಂಬಿ ಆತನನ್ನು ಹಿಂಬಾಲಿಸಿದೆ. ಡಿಪೋದಲ್ಲಿ ನಿಂತಿದ್ದ 'ಶಿವ್ ಶಾಹಿ' ಎಂಬ ಎಸಿ ಬಸ್ ನೊಳಕ್ಕೆ ಬರುವಂತೆ ಹೇಳಿದ. ಆದರೆ ಬಸ್ಸಿನೊಳಗೆ ಲೈಟ್ ಗಳು ಉರಿಯುತ್ತಿರಲಿಲ್ಲ. ಹೀಗಾಗಿ ಒಳಗೆ ಹೋಗಲು ನಾನು ಹಿಂದೇಟು ಹಾಕಿದೆ. ಆದರೆ ಆ ವ್ಯಕ್ತಿ, “ಹೆದರಬೇಕಾಗಿಲ್ಲ, ಇದುವೇ ಸತಾರಾಗೆ ಹೋಗುವ ಬಸ್ಸು” ಎಂದು ಹೇಳಿ ಹತ್ತಿಸಿಕೊಂಡ. ಒಳಗೆ ಪ್ರವೇಶಿಸುತ್ತಲೇ ಆತ ನನ್ನ ಮೇಲೆ ಅತ್ಯಾಚಾರವೆಸಗಿದ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.

Tags:    

Similar News