ಪ್ರಧಾನಿ ಜಾರ್ಖಂಡ್, ಗುಜರಾತ್, ಒಡಿಶಾ ಭೇಟಿ ಸೆ.15 ರಿಂದ

Update: 2024-09-14 11:24 GMT

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 15 ರಿಂದ 17 ರವರೆಗೆ ಜಾರ್ಖಂಡ್, ಗುಜರಾತ್ ಮತ್ತು ಒಡಿಶಾಗೆ ಭೇಟಿ ನೀಡಲಿದ್ದು, 12,460 ಕೋಟಿ ರೂ. ಹೆಚ್ಚು ವೆಚ್ಚದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ ಎಂದು ಪಿಎಂಒ ಹೇಳಿದೆ.

ಸೆಪ್ಟೆಂಬರ್ 15 ರಂದು ಪ್ರಧಾನಿ ಮೋದಿ ಅವರು ಜಾರ್ಖಂಡ್‌ನ ಟಾಟಾ ನಗರ ಜಂಕ್ಷನ್ ರೈಲು ನಿಲ್ದಾಣದಲ್ಲಿ ಟಾಟಾನಗರ-ಪಾಟ್ನಾ ವಂದೇ ಭಾರತ್ ರೈಲಿಗೆ ಬೆಳಗ್ಗೆ 10 ಗಂಟೆ ಸುಮಾರಿಗೆ ಚಾಲನೆ ನೀಡಲಿದ್ದಾರೆ. ಆನಂತರ 660 ಕೋಟಿ ರೂ.ಗೂ ಹೆಚ್ಚು ವೆಚ್ಚದ ವಿವಿಧ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸುತ್ತಾರೆ. ಟಾಟಾನಗರದಲ್ಲಿ 20,000 ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (ಪಿಎಂಎವೈ- ಜಿ) ಫಲಾನುಭವಿಗಳಿಗೆ ಮಂಜೂರು ಪತ್ರ ವಿತರಿಸುತ್ತಾರೆ. 

ದಿಯೋಘರ್ ಜಿಲ್ಲೆಯ ಮಧುಪುರ್ ಬೈಪಾಸ್ ಮಾರ್ಗ ಮತ್ತು ಹಜಾರಿಬಾಗ್ ಜಿಲ್ಲೆಯ ಹಜಾರಿಬಾಗ್ ಟೌನ್ ಕೋಚಿಂಗ್ ಡಿಪೋಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಕುರ್ಕುರಾ-ಕನರೋನ್ ಡಬ್ಲಿಂಗ್ ನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದು ಬೊಂಡಾಮುಂಡ-ರಾಂಚಿ ಏಕ ಮಾರ್ಗ ಭಾಗ ಮತ್ತು ರಾಂಚಿ ಮುರಿ- ಚಂದ್ರಾಪುರ ನಿಲ್ದಾಣಗಳ ಮೂಲಕ ರೂರ್ಕೆಲಾ-ಗೋಮೊಹ್ ಮಾರ್ಗದ ಭಾಗವಾಗಿದೆ. ಜೊತೆಗೆ, ನಾಲ್ಕು ರಸ್ತೆ ಕೆಳಸೇತುವೆ (ಆರ್‌ಯುಬಿ)ಗಳನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ. 

ಪ್ರಧಾನಮಂತ್ರಿ ಆರು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಇವು ಟಾಟಾನಗರ-ಪಾಟ್ನಾ, ಭಾಗಲ್ಪುರ್-ದುಮ್ಕಾ-ಹೌರಾ, ಬ್ರಹ್ಮಪುರ-ಟಾಟಾನಗರ, ಗಯಾ-ಹೌರಾ, ದಿಯೋಘರ್-ವಾರಾಣಸಿ ಮತ್ತು ರೂರ್ಕೆಲಾ-ಹೌರಾ ಮಾರ್ಗಗಳಲ್ಲಿ ಸಂಚಾರವನ್ನು ಸುಧಾರಿಸುತ್ತವೆ.

16ರಂದು ಗುಜರಾತ್‌ : ಸೆಪ್ಟೆಂಬರ್ 16 ರಂದು ಬೆಳಗ್ಗೆ 9:45 ರ ಸುಮಾರಿಗೆ ಗಾಂಧಿನಗರದಲ್ಲಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ 4 ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಎಕ್ಸ್‌ಪೋ ಉದ್ಘಾಟಿಸಲಿದ್ದಾರೆ.

ಮಧ್ಯಾಹ್ನ 1:45 ಕೆ ಅಹಮದಾಬಾದ್ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿ, ಸೆಕ್ಷನ್ 1 ರಿಂದ ಗಿಫ್ಟ್ ಸಿಟಿ ನಿಲ್ದಾಣದವರೆಗೆ ಸಂಚರಿಸಲಿದ್ದಾರೆ.

ಮಧ್ಯಾಹ್ನ 3:30 ರ ಸುಮಾರಿಗೆ ಅಹಮದಾಬಾದ್‌ನಲ್ಲಿ 8,000 ಕೋಟಿ ರೂ.ಗೂ ಅಧಿಕ ವೆಚ್ಚದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 

ಸಮಖಿಯಾಲಿ-ಗಾಂಧಿಧಾಮ್ ಮತ್ತು ಗಾಂಧಿಧಾಮ್-ಆದಿಪುರ ರೈಲು ಮಾರ್ಗಗಳ ಚತುಷ್ಪಥ, ಅಹಮದಾಬಾದ್‌ನ ಎಎಂಸಿಯಲ್ಲಿ ರಸ್ತೆ ಅಭಿವೃದ್ಧಿ ಮತ್ತು ಬಕ್ರೋಲ್, ಹಥಿಜನ್ , ರಾಮೋಲ್ ಮೇಲೆ ಫ್ಲೈಓವರ್ ಸೇತುವೆಗಳ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 

30 ಮೆಗಾವ್ಯಾಟ್ ಸೌರ ವಿದ್ಯುತ್ ವ್ಯವಸ್ಥೆ, ಕಚ್ ಲಿಗ್ನೈಟ್ ಥರ್ಮಲ್ ಪವರ್ ಸ್ಟೇಷನ್‌ನಲ್ಲಿ 35 ಮೆಗಾವ್ಯಾಟ್ ಬಿಇಎಸ್ ಸೋಲಾರ್ ಪಿವಿ ಯೋಜನೆ ಮತ್ತು ಮೊರ್ಬಿ ಹಾಗೂ ರಾಜ್‌ಕೋಟ್‌ನಲ್ಲಿ 220 ಕಿಲೋವೋಲ್ಟ್ ಸಬ್‌ಸ್ಟೇಷನ್‌ಗಳನ್ನು ಉದ್ಘಾಟಿಸಲಿದ್ದಾರೆ. 

ಹಣಕಾಸು ಸೇವೆಗಳನ್ನು ಸುವ್ಯವಸ್ಥಿತಗೊಳಿಸಲು ಯೋಜಿಸಿದ ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳ ಪ್ರಾಧಿಕಾರದ ಏಕ ಗವಾಕ್ಷಿ ಐಟಿ ವ್ಯವಸ್ಥೆಯನ್ನು (SWITS) ಆರಂಭಿಸಲಿದ್ದಾರೆ. 

ಪ್ರಧಾನ ಮಂತ್ರಿ ಆವಾಸ್ ಯೋಜನೆ- ಗ್ರಾಮೀಣ ಅಡಿಯಲ್ಲಿ 30,000 ಕ್ಕೂ ಹೆಚ್ಚು ಮನೆ ನಿರ್ಮಾಣಕ್ಕೆ ಮೊದಲ ಕಂತು ಬಿಡುಗಡೆ ಮಾಡುತ್ತಾರೆ. ಯೋಜನೆಯಡಿ ಮನೆಗಳ ನಿರ್ಮಾಣ ಪ್ರಾರಂಭಿಸುತ್ತಾರೆ. 

ಭುಜ್‌ನಿಂದ ಅಹಮದಾಬಾದ್‌ಗೆ ದೇಶದ ಮೊದಲ ವಂದೇ ಮೆಟ್ರೋ ಮತ್ತು ನಾಗ್‌ಪುರ-ಸಿಕಂದರಾಬಾದ್, ಕೊಲ್ಹಾಪುರ-ಪುಣೆ, ಆಗ್ರಾ ಕಂಟೋನ್ಮೆಂಟ್‌-ಬನಾರಸ್, ದುರ್ಗ್-ವಿಶಾಖಪಟ್ಟಣಂ ಮತ್ತು ಪುಣೆ-ಹುಬ್ಬಳ್ಳಿ ಮಾರ್ಗ ಸೇರಿದಂತೆ ಹಲವು ವಂದೇ ಭಾರತ್ ರೈಲುಗಳಿಗೆ, ಮೊದಲ 20 ಕೋಚ್‌ ಗಳ ವಾರಾಣಸಿಯಿಂದ ದೆಹಲಿಗೆ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಿದ್ದಾರೆ. 

17ರಂದು ಒಡಿಷಾ : 17 ರಂದು ಒಡಿಷಾಗೆ ಪ್ರಯಾಣ ಬೆಳೆಸಲಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. 

ಮಧ್ಯಾಹ್ನ ಭುವನೇಶ್ವರದಲ್ಲಿ 3,800 ಕೋಟಿ ರೂ.ಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 

ಒಡಿಶಾ ಸರ್ಕಾರದ ಪ್ರಮುಖ ಯೋಜನೆ 'ಸುಭದ್ರ'ವನ್ನು ಭುವನೇಶ್ವರದಲ್ಲಿ ಪ್ರಾರಂಭಿಸಲಿದ್ದಾರೆ. ಇದು ಅತಿ ದೊಡ್ಡ, ಏಕೈಕ ಮಹಿಳಾ ಕೇಂದ್ರಿತ ಯೋಜನೆಯಾಗಿದ್ದು, ಒಂದು ಕೋಟಿಗೂ ಹೆಚ್ಚು ಮಹಿಳೆಯರನ್ನು ಒಳಗೊಳ್ಳುವ ನಿರೀಕ್ಷೆ ಯಿದೆ. ಯೋಜನೆಯಡಿ 21-60 ವರ್ಷ ವಯಸ್ಸಿನ ಅರ್ಹ ಫಲಾನುಭವಿಗಳು 2024-25 ರಿಂದ 2028-29 ರ ಐದು ವರ್ಷಗಳಲ್ಲಿ 50,000 ರೂ. ಪಡೆಯಬಹುದು. ವಾರ್ಷಿಕ 10,000 ರೂ. ಮೊತ್ತವನ್ನು ಫಲಾನುಭವಿಯ ಆಧಾರ್-ಸಕ್ರಿಯಗೊಳಿಸಿದ ಮತ್ತು ಡಿಬಿಟಿ ಸಕ್ರಿಯಗೊಳಿಸಿದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. 

ಮೋದಿ ಅವರು 10 ಲಕ್ಷಕ್ಕೂ ಹೆಚ್ಚು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಗೆ ಚಾಲನೆ ನೀಡಲಿದ್ದಾರೆ. ಭುವನೇಶ್ವರದಲ್ಲಿ 2,800 ಕೋಟಿ ರೂ. ಹೆಚ್ಚು ವೆಚ್ಚದ ರಾಷ್ಟ್ರದ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಮಾಡಲಿದ್ದಾರೆ. 1000 ಕೋಟಿ ರೂ.ಗೂ ಅಧಿಕ ಮೊತ್ತದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 14 ರಾಜ್ಯಗಳ ಸುಮಾರು 13 ಲಕ್ಷ ಫಲಾನುಭವಿಗಳಿಗೆ ನೆರವಿನ ಮೊದಲ ಕಂತು ಬಿಡುಗಡೆ ಮಾಡುತ್ತಾರೆ. 

ದೇಶದಾದ್ಯಂತದ ಪಿಎಂಎವೈ (ಗ್ರಾಮೀಣ ಮತ್ತು ನಗರ) ಯೋಜನೆಯ 26 ಲಕ್ಷ ಫಲಾನುಭವಿಗಳ ಗೃಹಪ್ರವೇಶ ನಡೆಯಲಿದೆ. ಮನೆಗಳ ಕೀ ಲಿಕೈ ಹಸ್ತಾಂತರಿಸಲಿದ್ದಾರೆ. ಪಿಎಂಎವೈ-ಅರ್ಬನ್ 2.0 ರ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸುತ್ತಾರೆ.

Tags:    

Similar News