ಮಣಿಪುರಕ್ಕೆ ಪ್ರಧಾನಿ ಭೇಟಿ ಯಾವಾಗ?: ಕಾಂಗ್ರೆಸ್

Update: 2024-09-14 12:19 GMT

ನವದೆಹಲಿ: ಪ್ರಧಾನಿ ಅವರು ದೇಶದ ಇತರ ಭಾಗಗಳು ಮತ್ತು ವಿದೇಶಗಳಿಗೆ ಪ್ರಯಾಣ ಯೋಜನೆಗಳನ್ನು ಮುಂದುವರಿಸಿದ್ದಾರೆ. ಆದರೆ, ʻಅತ್ಯಂತ ಹೆಚ್ಚು ತೊಂದರೆಗೊಳಗಾದ ರಾಜ್ಯʼದ ಭೇಟಿಯನ್ನು ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಟೀಕಿಸಿದೆ. 

ಮಣಿಪುರದ ಪರಿಸ್ಥಿತಿ ಬಗ್ಗೆ ಪ್ರಧಾನಿ ಅವರನ್ನು ಕಾಂಗ್ರೆಸ್‌ ಶನಿವಾರ ತರಾಟೆಗೆ ತೆಗೆದುಕೊಂಡಿದ್ದು, 2023ರ ಮೇ 3ರಂದು ಮಣಿಪುರ ಹೊತ್ತಿಕೊಂಡಿತು. 2023ರ ಜೂನ್ 4ರಂದು ಹಿಂಸಾಚಾರ ಮತ್ತು ಗಲಭೆಗಳ ಕಾರಣ ಹಾಗೂ ವ್ಯಾಪಿಸುವಿಕೆ ಕುರಿತು ತನಿಖೆ ನಡೆಸಲು ಮೂವರು ಸದಸ್ಯರ ತನಿಖಾ ಆಯೋಗವನ್ನು ರಚಿಸಲಾಯಿತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್ ಹೇಳಿದ್ದಾರೆ.

ʻಸಮಿತಿಗೆ ವರದಿ ಸಲ್ಲಿಸಲು ಆರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಇದುವರೆಗೆ ವರದಿ ಸಲ್ಲಿಸಿಲ್ಲ. ಆನಂತರ, 2024ರ ನವೆಂಬರ್ 24ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ,ʼ ಎಂದು ಹೇಳಿದರು.

ʻಈ ಮಧ್ಯೆ ಮಣಿಪುರದ ಜನರ ಸಂಕಟ ಅಡೆತಡೆಯಿಲ್ಲದೆ ಮುಂದುವರಿದಿದೆ. ಅಜೈವಿಕ ಪ್ರಧಾನಿ ಅತ್ಯಂತ ತೊಂದರೆಗೀಡಾದ ಈ ರಾಜ್ಯಕ್ಕೆ ಭೇಟಿ ನೀಡುವುದನ್ನು ತಪ್ಪಿಸಿ, ದೇಶ ಮತ್ತು ವಿದೇಶ ಪ್ರಯಾಣ ಮುಂದುವರಿಸಿದ್ದಾರೆ,ʼ ಎಂದು ಎಕ್ಸ್‌ ನ ಪೋಸ್ಟ್‌ ನಲ್ಲಿ ಬರೆದಿದ್ದಾರೆ.

ಸಮಿತಿ ಅವಧಿ ವಿಸ್ತರಣೆ: ಕೇಂದ್ರ ಸರ್ಕಾರವು ವಿಚಾರಣೆ ಆಯೋಗವೊಂದಕ್ಕೆ ವರದಿ ನೀಡಲು ನವೆಂಬರ್ 20 ರವರೆಗೆ ಸಮಯ ನೀಡಿದ ಒಂದು ದಿನದ ನಂತರ ಕಾಂಗ್ರೆಸ್‌ ಹೇಳಿಕೆ ಬಂದಿದೆ.

ಗೌಹಾಟಿ ಹೈಕೋರ್ಟ್‌ನ ಮಾಜಿ ಮು.ನ್ಯಾ.ಅಜಯ್ ಲಂಬಾ ನೇತೃತ್ವದ, ನಿವೃತ್ತ ಐಎಎಸ್ ಅಧಿಕಾರಿ ಹಿಮಾಂಶು ಶೇಖರ್ ದಾಸ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಅಲೋಕ ಪ್ರಭಾಕರ್ ಅವರನ್ನೊಳಗೊಂಡ ಸಮಿತಿಯನ್ನು ಜೂನ್ 4, 2023 ರಂದು ರಚಿಸಲಾಯಿತು. ಮೇ 3 ರಿಂದ ಮಣಿಪುರದಲ್ಲಿ ನಡೆದ ಹಿಂಸಾಚಾರ ಮತ್ತು ಗಲಭೆಗೆ ಕಾರಣ ಕುರಿತು ವಿಚಾರಣೆ ನಡೆಸಲು ಹೇಳಲಾಗಿತ್ತು..

ಇಂಫಾಲ್ ಕಣಿವೆ ಮೂಲದ ಮೈಟಿ ಮತ್ತು ಪರ್ವತ ಪ್ರದೇಶಗಳ ಕುಕಿ-ಜೋ ಗುಂಪುಗಳ ನಡುವಿನ ಹಿಂಸಾಚಾರದಲ್ಲಿ 220 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ.

Tags:    

Similar News