NEET-UG 2024| ಪರೀಕ್ಷೆ ರದ್ದು,ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಸಿಬಿಐ ತನಿಖೆಗೆ ಮನವಿ
ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ 20 ವಿದ್ಯಾರ್ಥಿಗಳು ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದ್ದಾರೆ;
ನವದೆಹಲಿ, ಜೂನ್ 15- ನೀಟ್-ಯುಜಿ 2024 ಪರೀಕ್ಷೆಯನ್ನು ರದ್ದುಗೊಳಿಸುವಂತೆ ಹಾಗೂ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಸಿಬಿಐ ಅಥವಾ ಬೇರಾವುದೇ ಸ್ವತಂತ್ರ ಸಂಸ್ಥೆಯಿಂದ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.
ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದ 20 ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಯಲ್ಲಿ ಪರೀಕ್ಷೆಯನ್ನು ಹೊಸದಾಗಿ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮತ್ತು ಇತರರಿಗೆ ನಿರ್ದೇಶನ ನೀಡಬೇಕೆಂದು ಕೋರಲಾಗಿದೆ.
ನೀಟ್-ಯುಜಿ 2024 ರ ಮೇಲಿನ ಪ್ರತ್ಯೇಕ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್, ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ)ದಿಂದ ತನಿಖೆ ನಡೆಸಬೇಕೆಂಬ ಮನವಿ ಕುರಿತು ಕೇಂದ್ರ ಸರ್ಕಾರ ಮತ್ತು ಎನ್‌ಟಿಎಯಿಂದ ಪ್ರತಿಕ್ರಿಯೆ ಕೇಳಿದೆ.
ʻಅಕ್ರಮಗಳು ಮತ್ತು ವಂಚನೆಯ ಹಿನ್ನೆಲೆಯಲ್ಲಿ ಮರುಪರೀಕ್ಷೆಯು ಅರ್ಹ ವಿದ್ಯಾರ್ಥಿಗಳಿಗೆ ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಸಹಾಯ ಮಾಡುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ʻಪ್ರಶ್ನೆಪತ್ರಿಕೆ ಸೋರಿಕೆ ದೃಢಪಟ್ಟಿರುವುದರಿಂದ, ಪರೀಕ್ಷೆಯ ಪಾವಿತ್ರ್ಯ ಪ್ರಶ್ನಾರ್ಹವಾಗಿದೆ. ಈ ಸಂಬಂಧ ಎಫ್‌ಐಆರ್‌ಗಳನ್ನು ದಾಖಲಿಸಲಾಗಿ ದೆ ಮತ್ತು ಮಾಧ್ಯಮ ವರದಿಗಳ ಪ್ರಕಾರ, ಹಲವರನ್ನು ಬಂಧಿಸಲಾಗಿದೆ,ʼ ಎಂದು ವಕೀಲ ಧೀರಜ್ ಸಿಂಗ್ ಹೇಳಿದರು.
ಎನ್‌ಟಿಎ ಪ್ರಕಟಿಸಿದ ಫಲಿತಾಂಶದ ಪ್ರಕಾರ, 67 ಅಭ್ಯರ್ಥಿಗಳು 720ಕ್ಕೆ 720 ಗರಿಷ್ಠ ಅಂಕ ಗಳಿಸಿದ್ದಾರೆ. ವಿಶ್ಲೇಷಣೆ ಪ್ರಕಾರ, 620-720 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಶೇ.400 ಕ್ಕಿಂತ ಹೆಚ್ಚು ಅಸಾಧಾರಣ ಹೆಚ್ಚಳ ಕಂಡುಬಂದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ʻಸುಪ್ರೀಂ ಮೇಲ್ವಿಚಾರಣೆಯಲ್ಲಿ ಸಿಬಿಐ ಅಥವಾ ಬೇರಾವುದೇ ಸ್ವತಂತ್ರ ಸಂಸ್ಥೆ ಅಥವಾ ಸಮಿತಿಯು ಮೇಲಿನ ಅಕ್ರಮಗಳನ್ನು ತನಿಖೆ ಮಾಡಬೇಕಿದೆ. ಇದರಿಂದ ವ್ಯವಸ್ಥೆಯ ವೈಫಲ್ಯದಿಂದ ತಮ್ಮ ಹಕ್ಕುಗಳನ್ನು ಕಳೆದುಕೊಂಡಿರುವ ಹೆಚ್ಚಿನ ಸಂಖ್ಯೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಲಿದೆ,ʼ ಎಂದು ಹೇಳಿದೆ.
ʻಶೈಕ್ಷಣಿಕ ಹಿನ್ನೆಲೆಯ ಪರಿಶೀಲನೆ, ಫೋರೆನ್ಸಿಕ್ ವಿಶ್ಲೇಷಣೆ ಸೇರಿದಂತೆ ಪರೀಕ್ಷೆಯ ನಂತರದ ವಿಶ್ಲೇಷಣೆ ಮತ್ತು 620 ಮತ್ತು ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಎಲ್ಲಾ ಅಭ್ಯರ್ಥಿಗಳನ್ನುತನಿಖೆಗೊಳಪಡಿಸಲು ನ್ಯಾಯಾಲಯ ನೇಮಿಸಿದ ಸಮಿತಿ ಅಥವಾ ಇತರ ಸ್ವತಂತ್ರ ಸಂಸ್ಥೆಗೆ ನಿರ್ದೇಶನ ನೀಡಬೇಕುʼ ಎಂದು ಮನವಿಯಲ್ಲಿ ಕೋರಲಾಗಿದೆ.
ಪರೀಕ್ಷೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ನೀಟ್-ಯುಜಿ ಪರೀಕ್ಷೆಯಲ್ಲಿ ವಂಚನೆ, ಪ್ರಶ್ನೆಪತ್ರಿಕೆಗಳ ಸೋರಿಕೆ ಇತ್ಯಾದಿಯನ್ನು ಪರಿಹರಿಸಲು ಎನ್‌ಟಿಎ ಮತ್ತು ಇತರರಿಗೆ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ನೀಡಲಾದ ಕೃಪಾಂಕಗಳನ್ನು ರದ್ದುಗೊಳಿಸಲಾಗಿದೆ. ಮರುಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡುವುದಾಗಿ ಕೇಂದ್ರ ಮತ್ತು ಎನ್‌ಟಿಎ ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿವೆ.
ಮೇ 5 ರಂದು 4,750 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆದಿದ್ದು, ಸುಮಾರು 24 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಜೂನ್ 14 ರಂದು ಫಲಿತಾಂಶ ಪ್ರಕಟವಾಗಬೇಕಿತ್ತು. ಆದರೆ, ಜೂನ್ 4 ರಂದು ಫಲಿತಾಂಶ ಪ್ರಕಟಿಸಲಾಯಿತು. ಬಿಹಾರದಂತಹ ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಇತರ ಅಕ್ರಮಗಳು ನಡೆದಿವೆ ಎಂದು ಆರೋಪವಿದೆ. 67 ವಿದ್ಯಾರ್ಥಿಗಳು 720ಕ್ಕೆ 720 ಅಂಕ ಗಳಿಸಿದ್ದಾರೆ. ಇದು ಎನ್‌ಟಿಎ ಇತಿಹಾಸದಲ್ಲೇ ಮೊದಲು. ಹರಿಯಾಣದ ಫರೀದಾಬಾದ್‌ನ ಕೇಂದ್ರ ವೊಂದರ ಆರು ಮಂದಿ ಅಗ್ರ ಶ್ರೇಣಿಯ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. 67 ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಹಲವು ನಗರಗಳಲ್ಲಿ ಪ್ರತಿಭಟನೆ ನಡೆದಿದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಅಕ್ರಮಗಳ ಕುರಿತು ತನಿಖೆ ನಡೆಸುವಂತೆ ಕೋರಿ ಜೂನ್ 10 ರಂದು ದೆಹಲಿಯಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.