ಪ್ಯಾರಿಸ್ ಒಲಿಂಪಿಕ್ಸ್ 2024| ಅದ್ದೂರಿ ಆರಂಭಕ್ಕೆ ಸಜ್ಜು; ಎರಡಂಕಿ ಪದಕದ ಮೇಲೆ ಭಾರತ ಕಣ್ಣು

ಪ್ಯಾರಿಸ್ ಒಲಿಂಪಿಕ್ಸ್‌ ಶುಕ್ರವಾರ ಪ್ರಾರಂಭವಾಗಲಿದೆ.117 ಕ್ರೀಡಾಪಟುಗಳಿರುವ ಭಾರತೀಯ ತಂಡ‌ವು ಉತ್ತಮ ಸಾಧನೆಯ ನಿರೀಕ್ಷೆ ಇರಿಸಿಕೊಂಡಿದೆ. ದೇಶ ಈವರೆಗೆ ಒಲಿಂಪಿಕ್ಸ್‌ನಲ್ಲಿ 35 ಪದಕಗಳನ್ನು ಗೆದ್ದಿದೆ. ಶೂಟರ್ ಅಭಿನವ್ ಬಿಂದ್ರಾ (2008) ಮತ್ತು ನೀರಜ್ ಚೋಪ್ರಾ (2021) ಮಾತ್ರ ವೈಯಕ್ತಿಕ ಚಿನ್ನದ ಪದಕ ವಿಜೇತರಾಗಿದ್ದಾರೆ.

Update: 2024-07-25 11:28 GMT

117 ಕ್ರೀಡಾಪಟುಗಳಿರುವ ಭಾರತೀಯ ತಂಡವು ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ಉತ್ತಮ ಸಾಧನೆಯ ನಿರೀಕ್ಷೆ ಇರಿಸಿಕೊಂಡಿದೆ. ಒಲಿಂಪಿಕ್ಸ್‌ ಶುಕ್ರವಾರ ಪ್ರಾರಂಭವಾಗಲಿದ್ದು, ಕೆಲವರು ನಿರೀಕ್ಷೆಗಳ ದೊಡ್ಡ ಹೊರೆಯನ್ನು ಹೊತ್ತಿದ್ದಾರೆ; ಇನ್ನು ಕೆಲವರು ಆಶ್ಚರ್ಯಕರ ಫಲಿತಾಂಶ ನೀಡುವ ಉತ್ಸಾಹದಲ್ಲಿದ್ದಾರೆ ಮತ್ತು ಇನ್ನು ಕೆಲವರು ತಮ್ಮ ವೃತ್ತಿಜೀವನಕ್ಕೆ ಪರಿಪೂರ್ಣವಾದ ಅಂತ್ಯವನ್ನು ಎದುರು ನೋಡುತ್ತಿದ್ದಾರೆ. 

ಭಾರತ ಟೋಕಿಯೋದಿಂದ ಏಳು ಪದಕಗಳೊಂದಿಗೆ ವಾಪಸಾಗಿತ್ತು. ಪ್ಯಾರಿಸ್‌ನಲ್ಲಿ ಎರಡಂಕಿ ಸಾಧನೆಯವನ್ನು ನಿರೀಕ್ಷಿಸುತ್ತಿದೆ. ಕುಸ್ತಿಪಟು ಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲ ವಿಭಾಗಗಳಲ್ಲಿನ ಕ್ರೀಡಾಪಟುಗಳು ಉತ್ತಮ ಸಿದ್ಧತೆ ಮಾಡಿಕೊಂಡಿದ್ದಾರೆ. ವಿದೇಶದಲ್ಲಿ ತರಬೇತಿ ಆಗಿರಲಿ ಅಥವಾ ಕೌಶಲವನ್ನು ತೀಕ್ಷ್ಣಗೊಳಿಸಲು ಉತ್ತಮ ಸೌಲಭ್ಯವಿರಲಿ, ಎಲ್ಲದರಲ್ಲೂ ಯೋಜನೆಯೊಂದು ಇತ್ತು. ಆದರೆ, ಕಠಿಣ ಪರಿಶ್ರಮ, ತಂತ್ರಗಾರಿಕೆ ಮತ್ತು ಬೆಂಬಲಗಳು ಪದಕಗಳಾಗಿ ಪರಿವರ್ತನೆ ಆಗುತ್ತವೆಯೇ? 

ನೀರಜ್‌ ಚೋಪ್ರಾ: ಹಾಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಹೊರತುಪಡಿಸಿ, ಹೆಚ್ಚಿನವರು ತಮ್ಮ ವಿಭಾಗಗಳಲ್ಲಿ ಅಗ್ರ ಸ್ಪರ್ಧಿಗಳಲ್ಲ. ಹೀಗಾಗಿ, ಟೋಕಿಯೋದ ಏಳು ಪದಕಗಳನ್ನು ಸರಿಗಟ್ಟುವುದು ಕಷ್ಟದ ಕೆಲಸ.

117 ಸದಸ್ಯರ ತಂಡದಲ್ಲಿ ಅರ್ಧಕ್ಕಿಂತ ಹೆಚ್ಚು ಮೂರು ಕ್ರೀಡೆಗಳಲ್ಲಿ ಇದ್ದಾರೆ; ಅಥ್ಲೆಟಿಕ್ಸ್ (29 ), ಶೂಟಿಂಗ್ (21) ಮತ್ತು ಹಾಕಿ (19). ಈ 69 ಕ್ರೀಡಾಪಟುಗಳಲ್ಲಿ 40 ಮಂದಿ ಇದೇ ಮೊದಲ ಒಲಿಂಪಿಕ್ಸ್‌. 

ಇತರ ಕ್ರೀಡೆಗಳಲ್ಲೂ, ಟೆನಿಸ್ ಆಟಗಾರ ಎನ್. ಶ್ರೀರಾಮ್ ಬಾಲಾಜಿ ಮತ್ತು ಕುಸ್ತಿಪಟು ರೀತಿಕಾ ಹೂಡಾ ಅವರಂತಹ ಚೊಚ್ಚಲ ಆಟಗಾರ ರಿದ್ದಾರೆ. ಅವರು ಅನನುಭವಿಗಳಲ್ಲ; ಆದರೆ, ಭಾರತದ ಅಭಿಯಾನವನ್ನು ಅಥ್ಲೀಟ್‌ಗಳು ಮುನ್ನಡೆಸುತ್ತಾರೆ. ಅವರು ಮೊದಲ ಬಾರಿಗೆ ಈ ಜಾಗತಿಕ ವೇದಿಕೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. 

ಅನುಭವಿ ಆಟಗಾರರು ತಮ್ಮ ಆಟವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಎರಡು ಬಾರಿ ಪದಕ ವಿಜೇತೆ ಶಟ್ಲರ್ ಪಿ.ವಿ. ಸಿಂಧು, ಟೆನಿಸ್ ಆಟಗಾರ ರೋಹನ್ ಬೋಪಣ್ಣ, ದಂತಕತೆ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಮತ್ತು ಹಾಕಿ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಅವರು ತಮ್ಮ ಕೊನೆಯ ಒಲಿಂಪಿಕ್ಸ್ ಆಡುತ್ತಿದ್ದಾರೆ.  

ಹಾಕಿ ತಂಡದ ಸಾಧನೆ ಅಷ್ಟೇನು ಉತ್ತಮವಾಗಿಲ್ಲ; ಬಾಕ್ಸರ್‌ಗಳು ಮತ್ತು ಕುಸ್ತಿಪಟುಗಳು ನೈಜ ಸ್ಪರ್ಧೆಯ ಕೊರತೆ ಹೊಂದಿದ್ದಾರೆ. ಶೂಟರ್‌ಗಳು ಒಲಿಂಪಿಕ್ಸ್‌ನಲ್ಲಿ ಮಿಶ್ರ ಫಲಿತಾಂಶ ಕಂಡಿದ್ದಾರೆ.

ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್‌ಗಳು, ವಿಶೇಷವಾಗಿ ಅವಿನಾಶ್ ಸೇಬಲ್, ಉತ್ತಮ ಸಾಧನೆ ಮಾಡಿದ್ದಾರೆ. ಆದರೆ ಅವರ ಜಾಗತಿಕ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ, ಅವರ ಪ್ರದರ್ಶನ ಪದಕದ ಭರವಸೆ ನೀಡುವುದಿಲ್ಲ. ಉದಾಹರಣೆಗೆ,‌ ಸೇಬಲ್ ಸ್ಟೀಪಲ್‌ಚೇಸ್‌ ನಲ್ಲಿ ಸ್ವಂತ ರಾಷ್ಟ್ರೀಯ ದಾಖಲೆಯನ್ನು ಉತ್ತಮಗೊಳಿಸಿದ್ದಾರೆ. ಅವರ ಅತ್ಯುತ್ತಮ ಸಮಯ 8 ನಿಮಿಷ 09.94 ಸೆಕೆಂಡ್. ಆದರೆ‌, ಈ ವಿಭಾಗದಲ್ಲಿಇದಕ್ಕಿಂತ ಉತ್ತಮ ಸಮಯ ಸಾಧಿಸಿದ ಏಳು ಅಂತಾರಾಷ್ಟ್ರೀಯ ಓಟಗಾರರು ಇದ್ದಾರೆ. ಇದನ್ನು ಗಮನಿಸಿದರೆ, ಫೈನಲ್‌ಗೆ ಪ್ರವೇಶಿಸುವುದು ದೊಡ್ಡ ಸಾಧನೆ ಎಂದು ಪರಿಗಣಿಸಲಾಗುತ್ತದೆ.

ಅತ್ಯುತ್ತಮ ಅವಕಾಶ: ಭಾರತ ನೀರಜ್‌ ಅವರನ್ನು ಅವಲಂಬಿಸಿದೆ. ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಣಕಿ ರೆಡ್ಡಿ ಅವರ ಬ್ಯಾಡ್ಮಿಂಟನ್ ಜೋಡಿ ಉತ್ತಮ ಫಾರ್ಮ್‌ನಲ್ಲಿದೆ. ನೀರಜ್ ಅವರು 90 ಮೀ ಗುರಿಯನ್ನು ದಾಟಿಲ್ಲ. ಆದರೆ, ಅವರು ಜಾಗತಿಕ ಸ್ಪರ್ಧೆಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ನೀರಜ್ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಎಲ್ಲವೂ ಕೂಡಿಬಂದರೆ, ಪಾಣಿಪತ್‌ನ ಜಾವೆಲಿನ್ ಎಸೆತಗಾರ ದೇಶದ ಕ್ರೀಡಾ ಇತಿಹಾಸದಲ್ಲಿ ಸತತವಾಗಿ ಒಲಿಂಪಿಕ್ ಪದಕಗಳನ್ನು ಗೆದ್ದ ಮೂರನೇ ಅಥ್ಲೀಟ್ ಆಗುವ ಅವಕಾಶ ಹೊಂದಿದ್ದಾರೆ.

ಸಿಂಧು (2016 ರಿಯೊ ಮತ್ತು 2012 ಟೋಕಿಯೊ) ಮತ್ತು ಕುಸ್ತಿಪಟು ಸುಶೀಲ್ ಕುಮಾರ್ (2008 ಬೀಜಿಂಗ್, 2012 ಲಂಡನ್) ಮಾತ್ರ ಸತತ ಎರಡು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 

ರಣಕಿರೆಡ್ಡಿ ಮತ್ತು ಚಿರಾಗ್ ಅವರು ದೇಶದ ಅಸಾಧಾರಣ ಪುರುಷರ ಡಬಲ್ಸ್ ತಂಡವಾಗಿ ಬೆಳೆದಿದ್ದಾರೆ; ಅವರನ್ನು ಪದಕ ವಿಜೇತರು ಎಂದು ನೋಡಲಾಗುತ್ತಿದೆ. 

ಪಿ.ವಿ. ಸಿಂಧು ಉತ್ತಮ ಫಾರ್ಮ್‌ನಲ್ಲಿಲ್ಲ ಮತ್ತು ಕಠಿಣ ಗುಂಪಿನಲ್ಲಿದ್ದಾರೆ. ಆದರೆ, ಅವರು ಆರಂಭಿಕ ಸುತ್ತುಗಳಲ್ಲಿ ಜಯಶಾಲಿಯಾದರೆ, , ಅವರ ಅಪಾರ ಅನುಭವ ಪದಕದ ಸುತ್ತಿಗೆ ಸಹಾಯ ಮಾಡುತ್ತದೆ.

ಹಾಕಿ: ಪುರುಷರ ಹಾಕಿ ತಂಡ ಇತ್ತೀಚೆಗೆ ಆಸ್ಟ್ರೇಲಿಯದಲ್ಲಿ ಎಲ್ಲಾ ಐದು ಪಂದ್ಯಗಳಲ್ಲಿ ಸೋತಿತು. ತಂಡವು ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಭಾರತ ತಂಡ ಕಠಿಣ ಗುಂಪು- ಆಸ್ಟ್ರೇಲಿಯ, ಬೆಲ್ಜಿಯಂ, ಅರ್ಜೆಂಟೀನಾ, ನ್ಯೂಜಿಲೆಂಡ್ ಮತ್ತು ಐರ್ಲೆಂಡ್‌, ಜೊತೆ ಇರಿಸಲಾಗಿದೆ.

ಶೂಟಿಂಗ್: ಲಂಡನ್ ಮತ್ತು ಟೋಕಿಯೊಗೆ ಹೋಲಿಸಿದರೆ 21 ಸದಸ್ಯರ ಶೂಟಿಂಗ್ ತಂಡವಿದೆ. ಮನು ಭಾಕರ್ ಮತ್ತು ಸೌರಭ್ ಚೌಧರಿ ಯಂತಹ ತಾರೆಯರು ಅಸಾಧಾರಣ ಪ್ರದರ್ಶನದಿಂದ ಪದಕದ ನಿರೀಕ್ಷೆಯನ್ನು ಹೆಚ್ಚಿಸಿದ್ದರು. ದಿವ್ಯಾಂಶ್ ಪನ್ವಾರ್ ಮತ್ತು ಎಲವೆನಿಲ್ ವಲರಿವನ್ ಅವರನ್ನು ಭವಿಷ್ಯದ ಸೂಪರ್‌ಸ್ಟಾರ್‌ಗಳು ಎಂದು ಪ್ರಶಂಸಿಸಲಾಗಿತ್ತು. ಆದರೆ, ಎಲ್ಲರೂ ನಿರೀಕ್ಷೆ ಹುಸಿಗೊಳಿಸಿದರು.

ಶೂಟರ್‌ಗಳಾದ ಸಿಫ್ಟ್ ಕೌರ್ ಸಮ್ರಾ (50 ಮೀ ), ಸಂದೀಪ್ ಸಿಂಗ್ (10 ಮೀ ಏರ್ ರೈಫಲ್) ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ (ಪುರುಷರ 50 ಮೀ ರೈಫಲ್) ಪದಕಕ್ಕಾಗಿ ತಮ್ಮ 12 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಬೇಕಿದೆ.

ಈಗ ದೇಶದ ಚೆಫ್ ಡಿ ಮಿಷನ್ ಆಗಿರುವ ಗಗನ್ ನಾರಂಗ್ ಅವರು 2012 ರ ಲಂಡನ್ ಗೇಮ್ಸ್‌ನಲ್ಲಿ 10 ಮೀಟರ್ ಏರ್ ರೈಫಲ್ ಕಂಚು ಗೆದ್ದು, ವೇದಿಕೆಯನ್ನು ಏರಿದ ಕೊನೆಯ ಭಾರತೀಯ ಶೂಟರ್ ಆಗಿದ್ದರು.

ಕುಸ್ತಿ: ಕಳೆದ ನಾಲ್ಕು ಒಲಿಂಪಿಕ್ಸ್‌ ಗಳಲ್ಲಿ ಈ ಕ್ರೀಡೆ ಭಾರತಕ್ಕೆ ಪದಕ ತಂದುಕೊಟ್ಟಿದೆ. ಪ್ಯಾರಿಸ್ ಕ್ರೀಡಾಕೂಟದಲ್ಲಿ ನಾಲ್ಕರಿಂದ ಐದು ಪದಕ ಗೆಲ್ಲುವ ಸಾಧ್ಯತೆ ಇದ್ದಿತ್ತು. ಆದರೆ, ಭಾರತೀಯ ಕುಸ್ತಿ ಫೆಡರೇಶನ್ ವಿರುದ್ಧದ ಪ್ರತಿಭಟನೆಯಿಂದ ಕ್ರೀಡೆ ಸ್ಥಗಿತಗೊಂಡಿತು. ರಾಷ್ಟ್ರೀಯ ಶಿಬಿರ ಗಳು ನಡೆದಿಲ್ಲ ಮತ್ತು ದೀರ್ಘಕಾಲದಿಂದ ಕ್ರೀಡಾಕೂಟಗಳು ಇರಲಿಲ್ಲ. ಆದರೆ, ಕುಸ್ತಿಪಟುಗಳು ಭಾರತ ಮತ್ತು ವಿದೇಶಗಳಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಅಂಶು ಮಲಿಕ್, ಆಂಟಿಮ್ ಪಂಗಲ್ ಮತ್ತು ಅಮನ್ ಸೆಹ್ರಾವತ್ ಅವರಿಂದ ಪದಕದ ನಿರೀಕ್ಷೆ ಇದೆ. 23 ವರ್ಷದೊಳಗಿನವರ ವಿಶ್ವ ಚಾಂಪಿಯನ್ ಆಗಿರುವ ರೀತಿಕಾ ಹೂಡಾ ಕೂಡ ಪದಕ ಗೆಲ್ಲಬಹುದು.

ಇನ್ನಿತರ ಕ್ರೀಡೆಗಳು: ಬಿಲ್ಲುಗಾರರು ಮತ್ತು ಟೇಬಲ್‌ ಟೆನಿಸ್‌ ಆಟಗಾರರು ಶ್ರೇಯಾಂಕಗಳ ಆಧಾರದ ಮೇಲೆ ಅರ್ಹತೆ ಪಡೆದಿದ್ದಾರೆ. ಟಿಟಿ ಆಟಗಾರರಿಗೆ ಇದು ದೊಡ್ಡ ಸಾಧನೆ. ಆದರೆ, ಬಿಲ್ಲುಗಾರರ ಬಗ್ಗೆ ಹೀಗೆ ಹೇಳಲಾಗುವುದಿಲ್ಲ.

ಟೋಕಿಯೊ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತೆಯಾದ ವೇಟ್‌ಲಿಫ್ಟರ್ ಮೀರಾಬಾಯಿ ಚಾನು, ತಮ್ಮ ಯಶಸ್ಸನ್ನು ಪುನರಾವರ್ತಿಸಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆಯಿದೆ.

ಅನುಭವಿ ಬಾಕ್ಸರ್ ನಿಖತ್ ಜರೀನ್ ಮತ್ತು ನಿಶಾಂತ್ ದೇವ್ ಅವರ ಇತ್ತೀಚಿನ ಫಲಿತಾಂಶ ಉತ್ತೇಜಕವಾಗಿದ್ದು, ಅವರನ್ನು ಸೂಕ್ಷ್ಮವಾಗಿ ಗಮನಿಲಾಗುತ್ತದೆ.

ಈವರೆಗೆ ಭಾರತ ಒಲಿಂಪಿಕ್ಸ್‌ನಲ್ಲಿ 35 ಪದಕಗಳನ್ನು ಗೆದ್ದಿದೆ. ಶೂಟರ್ ಅಭಿನವ್ ಬಿಂದ್ರಾ (2008) ಮತ್ತು ನೀರಜ್ ಚೋಪ್ರಾ (2021) ಮಾತ್ರ ವೈಯಕ್ತಿಕ ಚಿನ್ನದ ಪದಕ ವಿಜೇತರಾಗಿದ್ದಾರೆ. 

Tags:    

Similar News