ಪಾಕಿಸ್ತಾನದ ʼಐಎಸ್‌ಐʼಗೆ ಸೇನಾ ರಹಸ್ಯ ಮಾಹಿತಿ ಸೋರಿಕೆ ಆರೋಪ; ಅಮೃತಸರದಲ್ಲಿ ಇಬ್ಬರ ಬಂಧನ

ಬಂಧಿತ ಆರೋಪಿಗಳ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ. ಯಾವೆಲ್ಲಾ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿವೆ ಎಂಬುದು ವಿಸ್ತೃತ ತನಿಖೆಯಿಂದ ತಿಳಿದುಬರಲಿದೆ ಎಂದು ಅಮೃತಸರದ ಡಿಜಿಪಿ ತಿಳಿಸಿದ್ದಾರೆ.;

Update: 2025-05-04 09:25 GMT

ಅಮೃತಸರದ ಸೇನಾ ಕಂಟೋನ್ಮೆಂಟ್ ಪ್ರದೇಶ ಹಾಗೂ ವಾಯುನೆಲೆಗಳ ಸೂಕ್ಷ್ಮ ಮಾಹಿತಿ, ಛಾಯಾಚಿತ್ರಗಳನ್ನು ಪಾಕಿಸ್ತಾನದ ಐಎಸ್ಐಗೆ ಸೋರಿಕೆ ಮಾಡಿದ ಆರೋಪದ ಮೇಲೆ ಪಂಜಾಬ್ ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಅಮೃತಸರದ ಗ್ರಾಮೀಣ ಪೊಲೀಸರು ಶನಿವಾರ ಸಂಜೆ ಪಾಲಕ್ ಶೇರ್ ಮಸಿಹ್ ಮತ್ತು ಸೂರಜ್ ಮಸಿಹ್ ಎಂಬುವರನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಭಾನುವಾರ ತಿಳಿಸಿದ್ದಾರೆ.

ಆರೋಪಿಗಳು ಅಮೃತಸರ ಕೇಂದ್ರ ಕಾರಾಗೃಹದಲ್ಲಿರುವ ಹರ್ಪ್ರೀತ್ ಸಿಂಗ್ ಅಲಿಯಾಸ್ ಪಿಟ್ಟು ಮೂಲಕ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಸೇನಾ ರಹಸ್ಯ ಮಾಹಿತಿ ಸೋರಿಕೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಯಾವೆಲ್ಲಾ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿವೆ ಎಂಬುದು ವಿಸ್ತೃತ ತನಿಖೆಯಿಂದ ತಿಳಿದುಬರಲಿದೆ ಎಂದು ಹೇಳಿದ್ದಾರೆ.

ಪಹಲ್ಗಾಮ್ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣವಾಗಿರುವ ಹೊತ್ತಿನಲ್ಲೇ ಸೇನಾ ರಹಸ್ಯ ಮಾಹಿತಿ ಸೋರಿಕೆಯಾಗಿರುವುದು ಆತಂಕ ಮೂಡಿಸಿದೆ.

2025 ಮಾ.18 ರಂದು ಉತ್ತರಪ್ರದೇಶದ ಕಾನ್ಪುರ ಶಸ್ತ್ರಾಸ್ತ್ರ ಕಾರ್ಖಾನೆಯ ಉದ್ಯೋಗಿಯನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ(ಯುಪಿ ಎಟಿಎಸ್) ಬಂಧಿಸಿತ್ತು. ಸಾಮಾಜಿಕ ಮಾಧ್ಯಮಗಳ ಮೂಲಕ ವರ್ಗೀಕೃತ ಮತ್ತು ಸೂಕ್ಷ್ಮ ರಕ್ಷಣಾ ಮಾಹಿತಿ ಹಂಚಿಕೊಂಡ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು.

2021ರಲ್ಲಿ ಪಾಕಿಸ್ತಾನದ ಐಎಸ್ಐಗೆ ಬೇಹುಗಾರಿಕೆ ಹಾಗೂ ಭದ್ರತೆಗೆ ಸಂಬಂಧಿಸಿದ ವರ್ಗೀಕೃತ ದಾಖಲೆ ಸೋರಿಕೆ ಮಾಡಿದ್ದ ಆರೋಪದ ಮೇಲೆ ಪಂಜಾಬ್ ನ ಜಲಾಂಧರ್ ಪೊಲೀಸರು ಇಬ್ಬರು ಸೇನಾ ಸಿಬ್ಬಂದಿಯನ್ನು ಬಂಧಿಸಿದ್ದರು.

Tags:    

Similar News