ಭಾರತದ ಮೇಲೆ ಪಾಕ್​ ಪ್ರಯೋಗಿಸಿದ್ದು ಟರ್ಕಿ ನಿರ್ಮಿತ ಡ್ರೋನ್

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಕರ್ನಲ್ ಸೋಫಿಯಾ ಕುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾಹಿತಿ ನೀಡಿದರು.;

Update: 2025-05-09 13:23 GMT

ಮೇ 8ರ ರಾತ್ರಿ ಭಾರತೀಯ ನಗರಗಳ ಮೇಲೆ ನಡೆದ ದಾಳಿ ಯತ್ನದಲ್ಲಿ ಪಾಕಿಸ್ತಾನದ ಸೇನೆಯು ಟರ್ಕಿಯಲ್ಲಿ ತಯಾರಾದ ಡ್ರೋನ್‌ಗಳನ್ನು ಬಳಸಿರುವ ಸಾಧ್ಯತೆ ಹೆಚ್ಚು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಈ ದಾಳಿ ಪ್ರಯತ್ನಗಳನ್ನು ಭಾರತೀಯ ಪಡೆಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದು, ಪ್ರತಿಯಾಗಿ ಪಾಕಿಸ್ತಾನದ ವಾಯು ರಕ್ಷಣಾ ನೆಲೆಗಳ ಮೇಲೆ ಭಾರತವು  ತಿರುಗೇಟು ನೀಡಿದೆ ಎಂಬುದಾಗಿಯೂ ತಿಳಿಸಿದೆ.

ಶುಕ್ರವಾರ ಸಂಜೆ ನಡೆದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಕರ್ನಲ್ ಸೋಫಿಯಾ ಕುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾಹಿತಿ ನೀಡಿದರು.

ಒಡೆದ ಡ್ರೋನ್‌ಗಳ ಅವಶೇಷಗಳ ಪ್ರಾಥಮಿಕ ವಿಶ್ಲೇಷಣೆಯು ಅವು ಟರ್ಕಿಯಲ್ಲಿ ತಯಾರಾದ "ಅಸಿಸ್‌ಗಾರ್ಡ್ ಸಾಂಗರ್" (Asisguard Songar) ಮಾದರಿಯ ಡ್ರೋನ್‌ಗಳಾಗಿವೆ ಎಂದು ಸೂಚಿಸುತ್ತದೆ. ಇವುಗಳನ್ನು ಸಾಮಾನ್ಯವಾಗಿ ಕಣ್ಗಾವಲು ಮತ್ತು ನಿಖರ ಗುರಿಗಳಿಗೆ ಬಳಸಲಾಗುತ್ತದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾಹಿತಿ ನೀಡಿದರು.

"ಮೇ 8-9, 2025ರ ಮಧ್ಯರಾತ್ರಿಯಲ್ಲಿ, ಪಾಕಿಸ್ತಾನದ ಸೇನೆಯು ಸಂಪೂರ್ಣ ಪಶ್ಚಿಮ ಗಡಿಯುದ್ದಕ್ಕೂ ಭಾರತೀಯ ವಾಯುಪ್ರದೇಶವನ್ನು ಹಲವು ಬಾರಿ ಉಲ್ಲಂಘಿಸಿ, ಸೇನಾ ಮೂಲಸೌಕರ್ಯವನ್ನು ಗುರಿಯಾಗಿಸಿತ್ತು," ಎಂದು ಅವರು ಹೇಳಿದರು. ಪಾಕಿಸ್ತಾನವು ಗಡಿರೇಖೆಯ ಉದ್ದಕ್ಕೂ ಭಾರೀ ಪ್ರಮಾಣದ ಶಸ್ರ್ತಾಸ್ತ್ರಗಳಿಂದ ಗುಂಡಿನ ದಾಳಿ ನಡೆಸಿದೆ ಎಂದು ಅವರು ವಿವರಿಸಿದರು.

ಅಂತರರಾಷ್ಟ್ರೀಯ ಗಡಿ ಮತ್ತು ಗಡಿರೇಖೆಯುದ್ದಕ್ಕೂ, ಲೇಹ್‌ನಿಂದ ಸರ್ ಕ್ರೀಕ್‌ವರೆಗೆ 36 ಸ್ಥಳಗಳಲ್ಲಿ ಸುಮಾರು 300 ರಿಂದ 400 ಡ್ರೋನ್‌ಗಳು ಮತ್ತು ಇತರ ಹಾರುವ ಸಾಧನಗಳ ಮೂಲಕ ಒಳನುಗ್ಗಲು ಪ್ರಯತ್ನಿಸಲಾಯಿತು. ಈ ಬೃಹತ್ ಪ್ರಮಾಣದ ದಾಳಿಯ ಸಂಭಾವ್ಯ ಉದ್ದೇಶವು, ಭಾರತದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಪರೀಕ್ಷಿಸುವುದು ಮತ್ತು ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವುದು" ಆಗಿತ್ತು ಎಂದು ಸರ್ಕಾರ ತಿಳಿಸಿದೆ.

"ಪಾಕಿಸ್ತಾನದ ಸಶಸ್ತ್ರ ಡ್ರೋನ್‌ ಒಂದು ಬಠಿಂಡಾ ಸೇನಾ ನೆಲೆಯ ಮೇಲೆ ದಾಳಿಗೆ ಯತ್ನಿಸಿತು, ಆದರೆ ಇದನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಲಾಯಿತು," ಎಂದು ಸರ್ಕಾರ ದೃಢಪಡಿಸಿದೆ.

ಭಾರತದ ಶಕ್ತಿಯುತ ತಿರುಗೇಟು

"ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ನಾಲ್ಕು ವಾಯು ರಕ್ಷಣಾ ತಾಣಗಳ ಮೇಲೆ ಸಶಸ್ತ್ರ ಡ್ರೋನ್‌ಗಳನ್ನು ಉಡಾಯಿಸಲಾಗಿದೆ. ಒಂದು ಡ್ರೋನ್ ಪಾಕಿಸ್ತಾನದ ವಾಯು ರಕ್ಷಣಾ ರೇಡಾರ್ ವ್ಯವಸ್ಥೆಯನ್ನು ಧ್ವಂಸಗೊಳಿಸಿದೆ,," ಎಂದು ಭಾರತ ಸರ್ಕಾರ ತಿಳಿಸಿದೆ.

ಗಡಿರೇಖೆಯುದ್ದಕ್ಕೂ ದಾಳಿ

ಡ್ರೋನ್ ದಾಳಿಗಳ ಜೊತೆಗೆ, ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಸುಂದರ್, ಉರಿ, ಪೂಂಚ್, ಮೆಂಧರ್, ರಜೌರಿ, ಅಖ್ನೂರ್ ಮತ್ತು ಉಧಂಪುರ್ ಪ್ರದೇಶಗಳಲ್ಲಿ ಕ್ಯಾಲಿಬರ್ ಬಂದೂಕುಗಳು ಮತ್ತು ಸಶಸ್ತ್ರ ಡ್ರೋನ್‌ಗಳನ್ನು ಬಳಸಿ ಗಡಿರೇಖೆಯುದ್ದಕ್ಕೂ ಫಿರಂಗಿ ದಾಳಿ ನಡೆಸಿತು. ಇದರಿಂದ ಭಾರತೀಯ ಸೇನೆಯ ಸಿಬ್ಬಂದಿಗೆ ಹಾನಿ ಮತ್ತು ಗಾಯಗಳು ಸಂಭವಿಸಿವೆ. ಭಾರತದ ಪ್ರತ್ಯುತ್ತರದ ಗುಂಡಿನ ದಾಳಿಯಿಂದ ಪಾಕಿಸ್ತಾನದ ಸೇನೆಯೂ ಗಣನೀಯ ನಷ್ಟವನ್ನು ಅನುಭವಿಸಿದೆ," ಎಂದು ಹೇಳಿದರು.

Tags:    

Similar News