ಭಾರತೀಯ ವಿಮಾನಗಳಿಗೆ ಪಾಕ್‌ ವಾಯುಪ್ರದೇಶ ಬಂದ್‌; ಏರ್ ಇಂಡಿಯಾಗೆ 600 ಮಿಲಿಯನ್ ಡಾಲರ್‌ ಹೆಚ್ಚುವರಿ ವೆಚ್ಚ !

ಒಂದು ವರ್ಷದವರೆಗೆ ಪಾಕಿಸ್ತಾನ ವಾಯುಪ್ರದೇಶ ಬಂದ್‌ ಮಾಡುವುದರಿಂದ ಹೆಚ್ಚುವರಿ ವೆಚ್ಚ ಸುಮಾರು 600 ಮಿಲಿಯನ್ ಅಮೆರಿಕನ್‌ ಡಾಲರ್‌ ಆಗಬಹುದು ಎಂದು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.;

Update: 2025-05-02 07:07 GMT

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ (ಎಕ್ಸ್‌ ಖಾತೆಯಿಂದ)

ಪಹಲ್ಗಾಮ್‌ ಉಗ್ರರ ದಾಳಿ ನಂತರ ಪಾಕಿಸ್ತಾನ ಹಾಗೂ ಭಾರತದ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದೆ. ಪಾಕಿಸ್ತಾನದ ವಾಯುಪ್ರದೇಶ ಬಳಕೆ ನಿರ್ಬಂಧಿಸಿರುವುದರಿಂದ ಏರ್‌ ಇಂಡಿಯಾಗೆ ಒಂದು ವರ್ಷಕ್ಕೆ 600 ಮಿಲಿಯನ್‌ ಡಾಲರ್‌ ಹೆಚ್ಚುವರಿ ವೆಚ್ಚವಾಗಲಿದೆ. ಈ ಸವಾಲು ಇತ್ಯರ್ಥಕ್ಕೆ ಸಂಭವನೀಯ ಪರಿಹಾರಗಳನ್ನು ಹುಡುಕಲಾಗುತ್ತಿದೆ ಎಂದು ಏರ್‌ ಇಂಡಿಯಾ ಸಂಸ್ಥೆ, ನಾಗರಿಕ ವಿಮಾನಯಾನ ಸಚಿವಾಲಯದ ಮುಂದೆ ತನ್ನ ಆತಂಕ ಹೇಳಿಕೊಂಡಿದೆ. 

ಪಾಕಿಸ್ತಾನ ವಾಯುಪ್ರದೇಶ ಮುಚ್ಚುವುದರಿಂದ ಏರ್‌ ಇಂಡಿಯಾಗೆ ಹೆಚ್ಚುವರಿ ವೆಚ್ಚದ ಹೊರೆ ಬೀಳಲಿದೆ. ಒಂದು ವರ್ಷದವರೆಗೆ ಪಾಕ್‌ ವಾಯುಪ್ರದೇಶದಲ್ಲಿ ಹಾರಾಟ ಸ್ಥಗಿತಗೊಳಿಸಿದರೆ ಸುಮಾರು 600 ಮಿಲಿಯನ್ ಡಾಲರ್‌ ಹೆಚ್ಚುವರಿ ವೆಚ್ಚ ತಗಲಬಹುದು. ಈ ಪರಿಸ್ಥಿತಿ ನಿಭಾಯಿಸಲು ಆರ್ಥಿಕ ಸಹಾಯದ ಅಗತ್ಯವಿದೆ ಎಂದು ಸಚಿವಾಲಯಕ್ಕೆ ತಿಳಿಸಿದೆ.   

ಪಾಕಿಸ್ತಾನ ವಾಯುಪ್ರದೇಶದ ಬಳಕೆಗೆ ನಿರ್ಬಂಧ ಹೇರಿದ ಬಳಿಕ ಭಾರತ ಕೂಡ ತನ್ನ ವಾಯುಪ್ರದೇಶದಲ್ಲಿ ಪಾಕ್‌ ವಿಮಾನಗಳ ಹಾರಾಟಕ್ಕೆ ನಿರ್ಬಂಧ ಹೇರಿತ್ತು. ಆ ಬಳಿಕ ನಾಗರಿಕ ವಿಮಾನಯಾನ ಸಚಿವಾಲಯದ ಈ ಬಗ್ಗೆ ಚರ್ಚಿಸಲು ವಿವಿಧ ವಿಮಾನಯಾನ ಸಂಸ್ಥೆಗಳ ಸಭೆ ಕರೆದಿತ್ತು. ಸಭೆಯಲ್ಲಿ ವಾಯುಪ್ರದೇಶ ನಿಷೇಧ ಮತ್ತು ಅದರಿಂದಾಗುವ ಪರಿಣಾಮಗಳು ಹಾಗೂ ಪರಿಸ್ಥಿತಿ ನಿಭಾಯಿಸಲು ಅಗತ್ಯವಾದ ಮಾರ್ಗೋಪಾಯಗಳ ಕುರಿತು ವಿಮಾನಯಾನ ಸಂಸ್ಥೆಗಳಿಂದ ಸಲಹೆ ಪಡೆಯಲಾಗಿತ್ತು.  

ಏರ್ ಇಂಡಿಯಾ, ಇಂಡಿಗೋ ಮತ್ತು ಸ್ಪೈಸ್‌ಜೆಟ್ ಸೇರಿದಂತೆ ವಿವಿಧ ವಿಮಾನಯಾನ ಸಂಸ್ಥೆಗಳು ತಮ್ಮ ಸಲಹೆಗಳನ್ನು ವಿಮಾನಯಾನ ಸಚಿವಾಲಯದ ಅಧಿಕಾರಿಗಳಿಗೆ ನೀಡಿದ್ದವು.

ಅಂತಾರಾಷ್ಟ್ರೀಯ ಕಾರ್ಯಾಚರಣೆಗೆ ಸಮಸ್ಯೆ

ಪರ್ಯಾಯ ಮಾರ್ಗ ಸೇರಿದಂತೆ ವಿವಿಧ ವೆಚ್ಚಗಳನ್ನು ತಗ್ಗಿಸುವ ಕ್ರಮಗಳನ್ನು ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಪರಿಶೀಲಿಸುತ್ತಿದೆ. ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೋ, ಸ್ಪೈಸ್‌ಜೆಟ್ ಮತ್ತು ಆಕಾಶ ಏರ್ ವಿಮಾನಯಾನ ಸಂಸ್ಥೆಗಳು ಅಂತರರಾಷ್ಟ್ರೀಯ ಕಾರ್ಯಾಚರಣೆ ಹೊಂದಿವೆ. ಪಾಕಿಸ್ತಾನ ವಾಯುಮಾರ್ಗ ಮುಚ್ಚಿರುವುದರಿಂದ ಆಗುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.  

ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಮಾತನಾಡಿ, ಸಚಿವಾಲಯವು ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ಪಾಕಿಸ್ತಾನದ ವಾಯುಪ್ರದೇಶದಲ್ಲಿ ಭಾರತೀಯ ವಿಮಾನಗಳ ಹಾರಾಟ ನಿರ್ಬಂಧಿಸಿರುವುದರಿಂದ ಈ ಸಮಸ್ಯೆ ಉದ್ಭವಿಸಿದೆ. ಇದಕ್ಕೆ ಪರಿಹಾರ ಹುಡುಕಲು ವಿಮಾನಯಾನ ಸಂಸ್ಥೆಗಳೊಂದಿಗೆ ಸಚಿವಾಲಯ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ವಾರಕ್ಕೆ 77ಕೋಟಿ ರೂ. ವೆಚ್ಚ

ವಾಯುಪ್ರದೇಶ ನಿರ್ಬಂಧದಿಂದ ಉತ್ತರ ಭಾರತದ ನಗರಗಳಿಂದ ಕಾರ್ಯನಿರ್ವಹಿಸುವ ವಿಮಾನಯಾನ ಸಂಸ್ಥೆಗಳಿಗೆ ಇಂಧನ ಬಳಕೆ ಮತ್ತು ಹಾರಾಟದ ಅವಧಿ ಹೆಚ್ಚಳವಾಗಲಿದೆ. ಅಂತರರಾಷ್ಟ್ರೀಯ ವಿಮಾನಗಳಿಗೆ ವಾರಕ್ಕೆ ಹೆಚ್ಚುವರಿ 77 ಕೋಟಿ ರೂ. ವೆಚ್ಚವಾಗುವ ಸಾಧ್ಯತೆಯಿದೆ. 

ವೆಚ್ಚ ಹೆಚ್ಚಳದ ಆಧಾರದ ಮೇಲೆ ವಿದೇಶಿ ವಿಮಾನಗಳ ಸಂಖ್ಯೆ ಮತ್ತು ಲೆಕ್ಕಾಚಾರಗಳ ವಿಶ್ಲೇಷಣೆಯನ್ನು ಅಂದಾಜು ಮಾಡಲಾಗುತ್ತಿದೆ. ಹೆಚ್ಚುವರಿ ಮಾಸಿಕ ಕಾರ್ಯಾಚರಣೆ ವೆಚ್ಚ ಮತ್ತು ಹಾರಾಟದ ಸಮಯದಿಂದಾಗಿ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸುಮಾರು 306 ಕೋಟಿ ರೂ.ಗಳಿಗಿಂತ ಹೆಚ್ಚು ವೆಚ್ಚವಾಗಬಹುದು ಎಂದು ಹೇಳಲಾಗಿದೆ. 

ಏ.24 ರಂದು ಪಾಕಿಸ್ತಾನವು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶ ಬಳಕೆಗೆ ನಿರ್ಬಂಧ ವಿಧಿಸಿತ್ತು. ಇದರ ಬೆನ್ನಲ್ಲೇ ಏ.30 ರಂದು ಭಾರತ ಕೂಡ ಪಾಕಿಸ್ತಾನದ ವಿಮಾನಗಳಿಗೆ ತನ್ನ ವಾಯುಪ್ರದೇಶ ಬಳಸುವುದನ್ನು ನಿಷೇಧಿಸಿತ್ತು.

ಪಹಲ್ಗಾಮ್‌ನಲ್ಲಿ ಏ.22 ರಂದು ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ 26 ಜನರನ್ನು ಬಲಿ ತೆಗೆದುಕೊಂಡ ನಂತರ ಭಾರತ ಮತ್ತು ಪಾಕಿಸ್ತಾನದ ರಾಜತಾಂತ್ರಿಕ ಸಂಬಂಧಗಳು ಹಾಳಾಗಿರುವ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಉದ್ಭವಿಸಿದೆ. 

Tags:    

Similar News