ನಕ್ಸಲರ ಅಬೇಧ್ಯ ಕೋಟೆಯನ್ನು ಪುಡಿಗಟ್ಟಿದ ‘ಆಪರೇಷನ್ ಕರೇಗುಟ್ಟ’
ಛತ್ತೀಸಗಢದ ಅಬುಜಾಮದ್ ನಲ್ಲಿ ಭದ್ರತಾ ಪಡೆ ಮತ್ತು ನಕ್ಸಲ್ ಪಡೆ ನಡುವೆ ನಡೆದಿದ್ದು ಅಕ್ಷರಶಃ ತೀವ್ರ ಕಾಳಗ. ದಡ್ಡವಾದ ಅರಣ್ಯದಲ್ಲಿ ನಾಲ್ಕು ದಿನಗಳ ಕಾಲ ಸತತ ಚೇಸ್ ಮಾಡುವ ಕಾರ್ಯ. ಕೊನೆಗೂ ಧರಾಶಾಹಿಯಾಗಿದ್ದು ಕಟ್ಟಾ ನಕ್ಸಲ್ ನಾಯಕ ಬಸವರಾಜನ ಕಿಲ್ಲರ್ ಟೀಮ್. ಇಲ್ಲಿದೆ ‘ಅಪರೇಷನ್ ಕರೆಗುಟ್ಟ’ದ ಇಂಚಿಂಚೂ ವಿವರ.;
ಇಂತಹುದೊಂದು ಚಕ್ರವ್ಯೂಹವನ್ನು ಏಕಾಏಕಿ ರೂಪಿಸಲಾಯಿತೇ? ಇವೆಲ್ಲವೂ ಒಂದೇ ದಿನದಲ್ಲಿ ನಡೆದ ಬೆಳವಣಿಗೆಯೇ?
ನಿಶ್ಚಿತವಾಗಿ ಅಲ್ಲ. ಒಂದೊಂದೇ ಇಟ್ಟಿಗೆಯನ್ನು ಜತನದಿಂದ ಕಟ್ಟಿ ನಿರ್ಮಿಸಿದ ಕೋಟೆಯಿದು. ಅದರೊಳಗೆ ಭದ್ರತಾ ಪಡೆಯ ಸಿಬ್ಬಂದಿ ಒಂದಾದ ಮೇಲೆ ಇನ್ನೊಂದರಂತೆ ಹೆಜ್ಜೆ ಇಡುತ್ತ ಬಂದರು. ಅಲ್ಲಿಗೆ ಬೇಕಾದ ಆಪರೇಷನ್ ಸೌಕರ್ಯಗಳನ್ನು ಜೋಡಿಸಿಟ್ಟರು. ಹೆಜ್ಜೆ ಹೆಜ್ಜೆಗೆ ಕೋಟೆಯನ್ನು ಬಲಪಡಿಸುತ್ತ ಹೋದರು. ಕೊನೆಗೊಂದು ದಿನ ಹೊಂಚು ಹಾಕಿ ದಾಳಿ ನಡೆಸಿದರು.
ಇದು ನಕ್ಸಲ್ ನಿಗ್ರಹ ಪಡೆ ರೂಪಿಸಿದ ‘ಆಪರೇಷನ್ ಕರೇಗುಟ್ಟ’ದ ರೂಪುರೇಷೆ. ಹಾಗೆ ಮೈಯೆಲ್ಲ ಎಚ್ಚರಿಕೆಯಿಂದ ಬುಧವಾರ ಮೇ 21ರಂದು ನಡೆದ ಕಾರ್ಯಾಚರಣೆಯಲ್ಲಿ ಕಟ್ಟಾ ನಕ್ಸಲ್ ಪಡೆಯನ್ನು ಸದೆಬಡಿಯಲಾಗಿದೆ.
ಛತ್ತೀಸಗಢದಲ್ಲಿ ಮಾವೋವಾದಿ ನಕ್ಸಲರದ್ದು ಅಬೇಧ್ಯ ಕೋಟೆ. ಅವರು ಬರೆದಿದ್ದು ರಕ್ತಸಿಕ್ತ ಇತಿಹಾಸ. ಸೂರ್ಯನ ಬೆಳಕೂ ಬೀಳದ ದಟ್ಟಡವಿಯಲ್ಲಿ ಅವರದ್ದೇ ಪಾರಮ್ಯ. ಅವರ ಭದ್ರಕೋಟೆಯನ್ನು ಕುಟ್ಟಿ ಪುಡಿಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಅದನ್ನು ಆಗುಮಾಡಿದ್ದು ನಕ್ಸಲ್ ನಿಗ್ರಹಪಡೆಯ ಆಪರೇಷನ್ ಕರೇಗುಟ್ಟ ಕಾರ್ಯಾಚರಣೆ.
ಬುಧವಾರ ನಡೆದ ಈ ಕಾರ್ಯಾಚರಣೆಯಲ್ಲಿ ಹತನಾಗಿದ್ದು ಮಾವೋವಾದಿ ನಕ್ಸಲ್ ಪಡೆಯ ಮಹಾನಾಯಕ ನಂಬಳ ಕೇಶವರಾವ್ ಅಲಿಯಾಸ್ ಬಸವರಾಜು. ಆತನ ಸುತ್ತ ಎರಡು ಡಜನ್ ಅಂಗರಕ್ಷಕರಂತೆ ಕಾದಿದ್ದವರು ನಕ್ಸಲ್ ಪಡೆ. ಅವರೆಲ್ಲರೂ ಈ ಆಪರೇಷನ್ ನಲ್ಲಿ ಜೀವತೆತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಛತ್ತೀಸಗಢ ಮತ್ತು ತೆಲಂಗಾಣ ರಾಜ್ಯದ ಗಡಿಗಳಲ್ಲಿ ಇರುವುದೇ ಕರೇಗುಟ್ಟ ಬೆಟ್ಟ ಸಾಲುಗಳು. ಇಲ್ಲಿರುವ ದಂಡಕಾರಣ್ಯವನ್ನೇ ನಕ್ಸಲರು ತಮ್ಮ ಕಾರಸ್ಥಾನವನ್ನಾಗಿ ಮಾಡಿಕೊಂಡಿದ್ದರು. ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಮತ್ತು ಛತ್ತೀಸಗಢ ಪೊಲೀಸರು ಈ ಪರ್ವತ ಶ್ರೇಣಿಗಳ ಕಡೆಗೆ ಒಂದು ಕಣ್ಣಿಟ್ಟಿದ್ದರು.
ಕರೇಗುಟ್ಟದ ಸುತ್ತ ಕಾರ್ಯಾಚರಣೆ ಶುರುವಾಗಿದ್ದು ಏಪ್ರಿಲ್ 21ರಿಂದ ಮೇ 11ರ ನಡುವೆ. ಅದು ತೀವ್ರ ಸ್ವರೂಪ ಪಡೆದಿದ್ದು ಕಳೆದವಾರ. ಅಂತಿಮವಾಗಿ ಅತಿ ಭಯಂಕರವಾದ ಕಟ್ಟಾ ನಕ್ಸಲ್ ಕೋಟೆಯನ್ನು ಅವರು ಸುತ್ತುವರಿದಿದ್ದರು. ತೀವ್ರಗಾಮಿಗಳು ಎಚ್ಚೆತ್ತುಕೊಳ್ಳುವುದರೊಳಗೆ ದಾಳಿ ನಡೆದುಹೋಗಿದೆ. ಮಾವೋವಾದಿಗಳ ಭದ್ರಕೋಟೆಗೇ ನುಗ್ಗಿ ಪುಡಿಗಟ್ಟಲಾಗಿದೆ. ಮಾವೋವಾದಿಗಳಿಗೆ ಆಗಿರುವ ಹಾನಿ ಬಹುದೊಡ್ಡದು ಎನ್ನುತ್ತಾರೆ ಕಾರ್ಯಾಚರಣೆ ಹಮ್ಮಿಕೊಂಡ ಅಧಿಕಾರಿಗಳು.
ಈ ಕರೆಗುಟ್ಟ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ಒಟ್ಟು 21 ಎನ್-ಕೌಂಟರ್ ಗಳು ನಡೆದಿವೆ. ಹತರಾದ ನಕ್ಸಲ್ ಉಗ್ರರು 31 ಮಂದಿ. ಅವರೆಲ್ಲರೂ ನಕ್ಸಲ್ ಪಡೆಯ ಒಂದನೇ ಬೆಟಾಲಿಯನ್ ಗೆ ಸೇರಿದವರು. ಅದನ್ನು ಸಿಪಿಐ (ಮಾವೋವಾದಿ)ನ ಜನವಿಮೋಚನಾ ಗೆರಿಲ್ಲಾ ಯುದ್ಧಪಡೆಯ ಅತ್ಯಂತ ಬಲಿಷ್ಠ ಟೀಮ್ ಎಂದೇ ಪರಿಗಣಿಸಲಾಗಿದೆ.
ಯಾವತ್ತು ಕರೆಗುಟ್ಟ ಆಪರೇಷನ್ ಆರಂಭವಾಯಿತೋ ಅದರ ಸುಳಿವು ಪಡೆದ ಮಾವೋವಾದಿಗಳು ಎಚ್ಚೆತ್ತುಕೊಂಡರು. 300ರಿಂದ 400ರಷ್ಟಿದ್ದ ನಕ್ಸಲರ ಸೇನೆಯನ್ನು ವಿಘಟಿಸಲಾಯಿತು. ಅವರನ್ನು 20-30 ಜನರ ಟೀಮ್ ಆಗಿ ಮಾಡಲಾಯಿತು. ಅವರು ದಟ್ಟಡವಿಯಲ್ಲಿ ಭಿನ್ನ ಭಿನ್ನ ತಂಡವಾಗಿ ಚದುರಿಕೊಂಡರು ಎನ್ನುತ್ತಾರೆ ಈ ಆಪರೇಷನ್ ಯೋಜನೆ ರೂಪಿಸುವಲ್ಲಿ ಮುಂಚೂಣಿಯಲ್ಲಿದ್ದ ಅಧಿಕಾರಿಗಳು.
ಇಂತಹುದೊಂದು ಟೀಮ್ ಜೊತೆ ಠಳಾಯಿಸುತ್ತಿದ್ದವನೇ ಬಸವರಾಜು. ಅದರ ಸುಳಿವು ಛತ್ತೀಸಗಢದ ಸ್ಥಳೀಯ ಪೊಲೀಸರಿಗೆ ಸಿಕ್ಕಿತ್ತು. ತಕ್ಷಣ ಕಾರ್ಯಪ್ರವೃತ್ತವಾದ ಜಿಲ್ಲಾ ರಿಸರ್ವ್ ಗಾರ್ಡ್ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡಿದೆ. ನಾಲ್ಕು ದಿನಗಳ ಕಾಲ ನಕ್ಸಲ್ ದಂಡನ್ನು ನಿರಂತರವಾಗಿ ಚೇಸ್ ಮಾಡಿದೆ. ಎರಡು ಕಡೆ ಸಂಘರ್ಷ ನಡೆದಿದೆ. ಅದರಲ್ಲಿ ನಕ್ಸಲರು ಪಾರಾಗಿದ್ದರು. ಅಂತಿಮವಾಗಿ ಮುಖಾಮುಖಿಯಾಗಿದ್ದು ಅಬುಜಾಮದ್ ನಲ್ಲಿ. ಅಲ್ಲಿ ತೀವ್ರ ಗುಂಡಿನ ಚಕಮಕಿ ನಡೆದಿದೆ. ಅದರಲ್ಲಿ ಬಸವರಾಜು ಮತ್ತವನ ತಂಡವನ್ನು ಹೊಡೆದುರುಳಿಸಲಾಗಿದೆ.
ಸ್ಪಷ್ಟ ಸಂದೇಶ
ಕಾನೂನುಬಾಹಿರವಾಗಿ ಯಾರೇ ಕಾರ್ಯಾಚರಣೆ ಮಾಡುತ್ತಿರಲಿ, ಮಾವೋವಾದಿಗಳು ಎಷ್ಟೇ ಅಬೇಧ್ಯ ಕೋಟೆಯನ್ನು ಕಟ್ಟಿಕೊಂಡಿರಲಿ ಅದನ್ನು ಸುಲಭವಾಗಿ ಕುಟ್ಟಿ ಪುಡಿಮಾಡುವ ತಾಕತ್ತು ಭದ್ರತಾಪಡೆಗಿದೆ ಎಂಬ ಸಂದೇಶವನ್ನು ಈ ಕರೇಗುಟ್ಟ ಆಪರೇಷನ್ ಸ್ಥಳೀಯರಿಗೆ ನೀಡಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
“ಇದು ಮಾವೋವಾದಿಗಳ ಹಾವಳಿಗೆ ಒಳಗಾಗಿ ಭಯದಲ್ಲಿ ಬದುಕುತ್ತಿರುವ ಸ್ಥಳೀಯರಿಗೆ ನೀಡಿದ ಸಂದೇಶ ಮಾತ್ರವಲ್ಲ, ನಕ್ಸಲರ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿರುವ ಭದ್ರತಾ ಪಡೆಯ ನೈತಿಕ ಸ್ಥೈರ್ಯವನ್ನು ಎತ್ತಿಹಿಡಿಯುವ ಕೆಲಸವೂ ಹೌದು. ಎಂತಹ ಭದ್ರಕೋಟೆಯಿದ್ದರೂ ಅದನ್ನು ನಾವು ಬೇಧಿಸಬಲ್ಲೆವು ಮತ್ತು ನಕ್ಸಲರು ಕಾಲ್ಕೀಳುವಂತೆ ಮಾಡಬಲ್ಲೆವು ಎಂಬುದನ್ನು ಈ ಕಾರ್ಯಾಚರಣೆ ಸಾಬೀತುಮಾಡಿದೆ” ಎಂದು ಅವರು ಹೇಳುತ್ತಾರೆ.
ಇದು ಮಾವೋವಾದಿ ನಕ್ಸಲರ ಅಂತ್ಯಕ್ಕೆ ಹಾಕಿದ ಮುನ್ನುಡಿ. ಕರೇಗುಟ್ಟ ಕಾರ್ಯಾಚರಣೆಯಿಂದ ಇದು ಸಾಧ್ಯವಾಗುತ್ತಿದೆ ಎಂದು ಛತ್ತೀಸಗಢದಲ್ಲಿ ಮೊಕ್ಕಾಂ ಹೂಡಿರುವ ಸಿಆರ್.ಪಿ.ಎಫ್. ಮುಖ್ಯಸ್ಥ ಜಿ.ಪಿ.ಸಿಂಗ್ ತಿಳಿಸಿದ್ದಾರೆ.