ಟಾಟಾ ಟ್ರಸ್ಟ್ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ
ರತನ್ ಟಾಟಾ ಉತ್ತರಾಧಿಕಾರಿ ಹಾಗೂ ಟಾಟಾ ಟ್ರಸ್ಟ್ ಅಧ್ಯಕ್ಷರ ನೇಮಕ ಕುರಿತಂತೆ ಶುಕ್ರವಾರ ಮುಂಬೈನಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನೋಯೆಲ್ ಟಾಟಾ ಅವರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.;
ಭಾರತೀಯ ಉದ್ಯಮರಂಗದ ದಂತಕಥೆ ರತನ್ ನಾವಲ್ ಟಾಟಾ ನಿಧನದ ಹಿನ್ನೆಲೆಯಲ್ಲಿ ಟಾಟಾ ಟ್ರಸ್ಟ್ ನೂತನ ಅಧ್ಯಕ್ಷರನ್ನಾಗಿ ನೋಯೆಲ್ ನವಲ್ ಟಾಟಾ ಅವರನ್ನು ಶುಕ್ರವಾರ ಆಯ್ಕೆ ಮಾಡಲಾಗಿದೆ.
ರತನ್ ಟಾಟಾ ಉತ್ತರಾಧಿಕಾರಿ ಹಾಗೂ ಟಾಟಾ ಟ್ರಸ್ಟ್ ಅಧ್ಯಕ್ಷರ ಆಯ್ಕೆ ಕುರಿತಂತೆ ಶುಕ್ರವಾರ ಮುಂಬೈನಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನೋಯೆಲ್ ಟಾಟಾ ಅವರನ್ನು ಸರ್ವಾನುಮತದಿಂದ ಟಾಟಾ ಟ್ರಸ್ಟ್ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. 67 ವರ್ಷದ ನೋಯೆಲ್ ಟಾಟಾ ಅವರು ಟಾಟಾ ಸಮೂಹದ ಹಲವು ಸಂಸ್ಥೆಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದರು. ಅಲ್ಲದೇ ಟಾಟಾ ಸಮೂಹದ ಸಾಗರೋತ್ತರ ವ್ಯವಹಾರಗಳನ್ನು ಅತ್ಯುತ್ತಮ ರೀತಿಯಲ್ಲಿ ಕೊಂಡೊಯ್ದಿದ್ದರು.
ನೋಯೆಲ್ ಟಾಟಾ ಯಾರು?
ಭಾರತ ಮೂಲದ ಐರಿಷ್ ಉದ್ಯಮಿ ನೋಯೆಲ್ ನಾವಲ್ ಟಾಟಾ ಅವರು ರತನ್ ಟಾಟಾ ಅವರ ಮಲ ಸಹೋದರ. ಟ್ರೆಂಟ್ ಮತ್ತು ಟಾಟಾ ಇನ್ವೆಸ್ಟ್ಮೆಂಟ್ ಕಾರ್ಪೊರೇಶನ್ ಹಾಲಿ ಅಧ್ಯಕ್ಷರು. ಟಾಟಾ ಇಂಟರ್ನ್ಯಾಷನಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಟೈಟಾನ್ ಕಂಪನಿ, ಟಾಟಾ ಸ್ಟೀಲ್ ಕಂಪನಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಟಾಟಾ ಇಂಟರ್‌ನ್ಯಾಷನಲ್‌ನಲ್ಲಿ ವೃತ್ತಿಜೀವನ ಆರಂಭಿಸಿದ ನೋಯೆಲ್ ಟಾಟಾ ಅವರು ವಿದೇಶದಲ್ಲಿ ಟಾಟಾ ಉತ್ಪನ್ನ ಹಾಗೂ ಸೇವೆಗಳಿಗೆ ಮಾರುಕಟ್ಟೆ ಒದಗಿಸಿದ ಖ್ಯಾತಿ ಹೊಂದಿದ್ದಾರೆ. ಟ್ರೆಂಟ್ ಕಂಪನಿ ಲಿಟಲ್‌ವುಡ್ಸ್ ಇಂಟರ್ನ್ಯಾಷನಲ್ ಡಿಪಾರ್ಟ್ಮೆಂಟ್ ಸ್ಟೋರ್ ಸ್ವಾಧೀನಪಡಿಸಿಕೊಂಡ ನಂತರ ಅದನ್ನು ವೆಸ್ಟ್‌ಸೈಡ್ ಎಂದು ಬದಲಾಯಿಸಿದೆ.
2010-2011 ರಲ್ಲಿ ಟಾಟಾ ಸಮೂಹ 70 ಬಿಲಿಯನ್ ಡಾಲರ್ ನಷ್ಟು ಸಾಗರೋತ್ತರ ವ್ಯವಹಾರ ನಡೆಸಿದೆ. 2011 ರಲ್ಲಿ ಅವರ ಸೋದರ ಮಾವ ಸೈರಸ್ ಮಿಸ್ತ್ರಿ ಅವರನ್ನು ರತನ್ ಟಾಟಾ ಉತ್ತರಾಧಿಕಾರಿ ಎಂದು ಘೋಷಿಸಲಾಗಿತ್ತು. ಆದರೆ, 2016 ಅಕ್ಟೋಬರ್ ತಿಂಗಳಲ್ಲಿ ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿತ್ತು. ರತನ್ ಟಾಟಾ ಅವರೇ ಫೆಬ್ರವರಿ 2017 ರವರೆಗೆ ನಾಲ್ಕು ತಿಂಗಳ ಕಾಲ ಸಮೂಹದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. 2019 ಫೆಬ್ರವರಿ ತಿಂಗಳಲ್ಲಿ ನೋಯೆಲ್ ಟಾಟಾ ಅವರನ್ನು ಟ್ರಸ್ಟ್ ಮಂಡಳಿಗೆ ಸೇರಿಸಿಕೊಳ್ಳಲಾಯಿತು. 2022 ಮಾರ್ಚ್ ತಿಂಗಳಲ್ಲಿ ಟಾಟಾ ಸ್ಟೀಲ್‌ನ ಉಪಾಧ್ಯಕ್ಷರಾಗಿ ನೇಮಕಗೊಂಡರು.
ಉತ್ತರಾಧಿಕಾರಿ ವಿವಾದಕ್ಕೆ ತೆರೆ
ರತನ್ ಟಾಟಾ ಅವರ ಉತ್ತರಾಧಿಕಾರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಉದ್ಯಮ ವಲಯದಲ್ಲಿ ಸಾಕಷ್ಟು ಹರಿದಾಡಿತ್ತು. ಟಾಟಾ ಸನ್ಸ್ ಹಾಗೂ ಟಾಟಾ ಗ್ರೂಪ್ ಅಧ್ಯಕ್ಷರಾದ ಎನ್ ಚಂದ್ರಶೇಖರ್ ಅವರೇ ರತನ್ ಟಾಟಾ ಉತ್ತರಾಧಿಕಾರಿ ಎಂಬ ಮಾತುಗಳು ಸಹ ಕೇಳಿ ಬರುತ್ತಿದ್ದವು. ಆದರೆ, ಟಾಟಾ ಟ್ರಸ್ಟ್ ನಿರ್ದೇಶಕರ ಮಂಡಳಿ ಅಳೆದು ತೂಗಿ ನೋಯೆಲ್ ಟಾಟಾ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ.