Farmers Protest | ಪ್ರತಿಭಟನೆಗೆ ಪೊಲೀಸರ ತಡೆ, ಇಂದು ರಾಜಧಾನಿ ದೆಹಲಿಯತ್ತ ರೈತರ ಕಾಲ್ನಡಿಗೆ ಜಾಥಾ

ಮಧ್ಯಾಹ್ನ 1 ಗಂಟೆಗೆ ಶಂಭು ಗಡಿಯಿಂದ ರೈತರು ಮೆರವಣಿಗೆ ಆರಂಭಿಸಲಿದ್ದಾರೆ. ಹರಿಯಾಣದ ಗಡಿಯಲ್ಲಿ ಕೇಂದ್ರ ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ. ಅದೇ ರೀತಿ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.;

Update: 2024-12-06 04:47 GMT

101 ರೈತರರನ್ನು ಒಳಗೊಂಡಿರುವ "ಜಾಥಾ"  ಶುಕ್ರವಾರ (ಡಿಸೆಂಬರ್ 6) ಮಧ್ಯಾಹ್ನ 1 ಗಂಟೆಗೆ ಶಂಭು ಗಡಿ ಪ್ರತಿಭಟನಾ ಸ್ಥಳದಿಂದ ದೆಹಲಿಗೆ ಕಾಲ್ನಡಿಗೆ ಮೂಲಕ ಸಾಗಲಿದೆ. ರೈತ ಮುಖಂಡ ಸರ್ವನ್ ಸಿಂಗ್ ಪಂಧೇರ್ ಈ ಕುರಿತು ಮಾಹಿತಿ ನೀಡಿದ್ದಾರೆ.


ಅಂಬಾಲಾ ಜಿಲ್ಲಾಡಳಿತವು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್) ಸೆಕ್ಷನ್ 163 ರ ಅಡಿಯಲ್ಲಿ ಆದೇಶ ಹೊರಡಿಸಿದೆ. ಜಿಲ್ಲೆಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಯಾವುದೇ ಕಾನೂನುಬಾಹಿರ ಸಭೆ ನಿರ್ಬಂಧಿಸಿದೆ. ಹೀಗಾಗಿ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ನಡೆಯುವ ಸಾಧ್ಯತೆಗಳನ್ನು ನಿರೀಕ್ಷಿಸಲಾಗಿದೆ.

ಜಿಲ್ಲಾಧಿಕಾರಿ ಹೊರಡಿಸಿದ ಆದೇಶದ ಪ್ರಕಾರ, ಮುಂದಿನ ಆದೇಶದವರೆಗೆ ಕಾಲ್ನಡಿಗೆ, ವಾಹನಗಳು ಅಥವಾ ಇತರ ವಿಧಾನಗಳಲ್ಲಿ ಯಾವುದೇ ಮೆರವಣಿಗೆ ನಡೆಸುವುದನ್ನು ನಿಷೇಧಿಸಲಾಗಿದೆ.


 



ಪ್ಯಾರಾ ಮಿಲಿಟರಿ ಪಡೆಗಳ ನಿಯೋಜನೆ

ದೆಹಲಿಗೆ ಮೆರವಣಿಗೆ ನಡೆಸುವ ರೈತರ ಯೋಜನೆಯ ವಿಫಲಗೊಳಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಭದ್ರತಾ ಪರಿಸ್ಥಿತಿ ನಿರ್ಣಯಿಸಲು ಹಿರಿಯ ಅಧಿಕಾರಿಗಳನ್ನು ಗಡಿಗೆ ಕಳುಹಿಲಾಗಿದೆ. ಹರಿಯಾಣ ಗಡಿ ಭಾಗದಲ್ಲಿ ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ.

ಪೊಲೀಸರು ಗಡಿಗಳಲ್ಲಿ ಭದ್ರತೆ ಬಿಗಿಗೊಳಿಸಿದ್ದಾರೆ. ನಗರದ ಗಡಿ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಸಿಂಘು ಗಡಿಯಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.

ದೆಹಲಿಯ ಕೇಂದ್ರ ಭಾಗದಲ್ಲಿ ಭದ್ರತಾ ವ್ಯವಸ್ಥೆಗಳಿಂದಾಗಿ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ಉತ್ತರ ಪ್ರದೇಶದ ಮತ್ತೊಂದು ರೈತರ ಗುಂಪು ಧರಣಿ ನಡೆಸುತ್ತಿರುವ ನೋಯ್ಡಾ ಗಡಿಯಲ್ಲಿನ ಬೆಳವಣಿಗೆಗಳ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ. .

ದೆಹಲಿ ಪೊಲೀಸರಿಂದ ಅನುಮತಿ ಪಡೆದ ನಂತರವೇ ತಮ್ಮ ಮೆರವಣಿಗೆ ನಡೆಸುವಂತೆ ಮತ್ತು ಯಾವುದೇ ಕ್ರಮದ ಬಗ್ಗೆ ಯೋಚಿಸುವಂತೆ ಅಂಬಾಲಾ ಜಿಲ್ಲಾಡಳಿತ ಬುಧವಾರ ರೈತರಿಗೆ ಮನವಿ ಮಾಡಿದೆ.

ಮಧ್ಯಾಹ್ನ 1 ಗಂಟೆಗೆ ಶಂಭು ಗಡಿಯಿಂದ ಮೆರವಣಿಗೆ ಆರಂಭ

ಶಂಭು ಗಡಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಂಧೇರ್, "ಜಾಥಾವು (ಶುಕ್ರವಾರ) ದೆಹಲಿಯತ್ತ ಸಾಗಲಿದೆ.  ನಾವು ಮಧ್ಯಾಹ್ನ 1 ಗಂಟೆಗೆ ಶಂಭು ಗಡಿಯಿಂದ ದೆಹಲಿಯತ್ತ ನಮ್ಮ ಮೆರವಣಿಗೆ ಪ್ರಾರಂಭಿಸುತ್ತೇವೆ" ಎಂದು ಹೇಳಿದ್ದಾರೆ.

ಮೆರವಣಿಗೆಯನ್ನು ನಡೆಸದಂತೆ ಸರ್ಕಾರ ತಡೆದರೆ ಅದು ರೈತರಿಗೆ "ನೈತಿಕ ಗೆಲುವು" ಎಂದು ಅವರು ಹೇಳಿದ್ದಾರೆ.

ರೈತರು ಟ್ರಾಕ್ಟರ್-ಟ್ರಾಲಿಗಳನ್ನು ತರದಿದ್ದರೆ ಆಕ್ಷೇಪ ಇಲ್ಲ ಎಂದು ಕೇಂದ್ರ ಮತ್ತು ರಾಜ್ಯಗಳಲ್ಲಿನ ನಾಯಕರು ಹೇಳುತ್ತಿದ್ದರು. ಆದ್ದರಿಂದ, ನಾವು ಕಾಲ್ನಡಿಗೆಯಲ್ಲಿ ದೆಹಲಿಗೆ ಹೋಗುತ್ತೇವೆ. ಈ ಬಾರಿ ತಡೆಯಲು ಕಾರಣವೇ ಇಲ್ಲ" ಎಂದು ಅವರು ಹೇಳಿದ್ದಾರೆ.

ರೈತರ ಬೇಡಿಕೆಗಳು

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ಜಮಾಯಿಸಿದ ರೈತರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡುವಂತೆ ಒತ್ತಾಯಿಸಿ ರಾಷ್ಟ್ರ ರಾಜಧಾನಿಗೆ ಕಾಲ್ನಡಿಗೆ ಜಾಥಾ ಘೋಷಿಸಲಾಗಿದೆ. 

ದೆಹಲಿಗೆ ತೆರಳುತ್ತಿದ್ದ ಮೆರವಣಿಗೆಯನ್ನು ಭದ್ರತಾ ಪಡೆಗಳು ತಡೆದ ನಂತರ ಅವರು ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖನೌರಿ ಗಡಿ ಸ್ಥಳಗಳಲ್ಲಿ ಠಿಕಾಣಿ ಹೂಡಿದ್ದಾರೆ. .


 



ನಿಷೇಧಾಜ್ಞೆ ಜಾರಿ

ಬಿಎನ್ಎಸ್ಎಸ್ನ ಸೆಕ್ಷನ್ 163 ಅನ್ನು ಅನ್ವಯಿಸಿ, ಅಂಬಾಲಾ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್, ಐದು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಕಾನೂನುಬಾಹಿರವಾಗಿ ಒಟ್ಟುಗೂಡಿಸುವುದನ್ನು ಮತ್ತು ಕಾಲ್ನಡಿಗೆ, ವಾಹನಗಳು ಅಥವಾ ಇತರ ಯಾವುದೇ ವಿಧಾನದ ಮೂಲಕ ಯಾವುದೇ ಮೆರವಣಿಗೆ ನಡೆಸುವುದನ್ನು ನಿಷೇಧಿಸಿದ್ದಾರೆ.

"ಪಂಜಾಬ್ ಮತ್ತು ಹರಿಯಾಣದಿಂದ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಬಂದು ದೆಹಲಿಯ ಕಡೆಗೆ ಹೋಗಲು ಶಂಭು ಗಡಿಯಲ್ಲಿ ಒಟ್ಟುಗೂಡುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಆದ್ದರಿಂದ, ಪೂರ್ವಾನುಮತಿಯಿಲ್ಲದೆ ಅಂತಹ ಯಾವುದೇ ವ್ಯಕ್ತಿಯ ಚಲನೆಗೆ ಅವಕಾಶ ನೀಡದಂತೆ ಬಿಎನ್ಎಸ್ಎಸ್ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸುವುದು ಸೇರಿದಂತೆ ಗಡಿ ಸ್ಥಳಗಳಲ್ಲಿ ಮತ್ತು ಜಿಲ್ಲೆಯೊಳಗೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಂಸತ್​ಗೆ ಘೇರಾವ್ ಭೀತಿ

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಕರ್ತವ್ಯದಲ್ಲಿರುವ ಪೊಲೀಸರು ಮತ್ತು ಇತರ ಸಾರ್ವಜನಿಕ ಸೇವಕರಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಅದು ಹೇಳಿದೆ.

ಈ ಆದೇಶವು 30.11.2024 ರಿಂದ ಜಾರಿಗೆ ಬರಲಿದೆ ಮತ್ತು ಮುಂದಿನ ಆದೇಶದವರೆಗೆ ಮುಂದುವರಿಯುತ್ತದೆ. "ಪ್ರತಿಭಟನಾಕಾರರು ಸಂಸತ್ತಿಗೆ ಘೇರಾವ್ ಹಾಕಬಹುದು ಅಥವಾ ರಾಷ್ಟ್ರ ರಾಜಧಾನಿ ಪ್ರದೇಶಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶಾಶ್ವತವಾಗಿ ಕ್ಯಾಂಪ್ ಮಾಡಬಹುದು ಎಂಬ ಮಾಹಿತಿಗಳಿವೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ, ಪ್ರತಿಭಟನಾಕಾರರು ಹರಿಯಾಣ ಪೊಲೀಸ್ ಕಾಯ್ದೆಯ ಸೆಕ್ಷನ್ 69 ರ ಅಡಿಯಲ್ಲಿ ಯಾವುದೇ ಅನುಮತಿಯನ್ನು ಪಡೆದಿಲ್ಲ.

ರೈತರಿಗೆ ಪೊಲೀಸರ ಮನವಿ

ಅಂಬಾಲಾದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಸುರಿಂದರ್ ಸಿಂಗ್ ಭೋರಿಯಾ, ಶಾಂತಿ ಕಾಪಾಡುವಂತೆ ಮತ್ತು ದೆಹಲಿಗೆ ಮೆರವಣಿಗೆ ನಡೆಸಲು ಅನುಮತಿ ಪಡೆಯುವಂತೆ ಎಲ್ಲಾ ರೈತರಿಗೆ ಮನವಿ ಮಾಡಿದ್ದಾರೆ.

101 ಮಂದಿ ಶಾಂತಿಯುತ ರೀತಿಯಲ್ಲಿ ದೆಹಲಿಗೆ ಮೆರವಣಿಗೆ ನಡೆಸಲಿದ್ದಾರೆ ಎಂದು ರೈತ ಮುಖಂಡರು ಹೇಳಿದ್ದಾರೆ ಎಂದು ಹೇಳಿದಾಗ, ಭೋರಿಯಾ, "ನಾನು ನಿಮಗೆ ಹೇಳಿದಂತೆ, ಕಾನೂನನ್ನು ಅನುಸರಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿ. ಕಾನೂನಿನ ನಿಬಂಧನೆಗಳು ಏನೇ ಇರಲಿ, ಅವುಗಳನ್ನು ಅನುಸರಿಸಬೇಕು ಎಂದು ಹೇಳಿದರು.

"ಅಂತರರಾಷ್ಟ್ರೀಯ ಗಡಿಯಂತೆ ಕಾಣುತ್ತಿದೆ"

ಸುದ್ದಿಗಾರರೊಂದಿಗೆ ಮಾತನಾಡಿದ ಪಂಧೇರ್, "ಇದು ಪಂಜಾಬ್- ಹರಿಯಾಣ ಗಡಿಯಂತೆ ಕಾಣುತ್ತಿಲ್ಲ, ಅಂತರರಾಷ್ಟ್ರೀಯ ಪ್ರದೇಶದಂತೆ ಕಾಣುತ್ತದೆ. ಅಧಿಕಾರಿಗಳು ಒಂದು ಕೀಟವನ್ನೂ ಗಡಿ ದಾಟಲು ಬಿಡುತ್ತಿಲ್ಲ. ಅವರು ನಮ್ಮನ್ನು ಬೇರೆ ದೇಶದ ಶತ್ರುಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ನಮ್ಮ ಬೇಡಿಕೆಗಳನ್ನು ಒತ್ತಾಯಿಸಲು ರಾಷ್ಟ್ರ ರಾಜಧಾನಿಗೆ ಶಾಂತಿಯುತವಾಗಿ ಮೆರವಣಿಗೆ ನಡೆಸಲು ಬಯಸುತ್ತೇವೆ" ಎಂದು ಅವರು ಹೇಳಿದರು.

ದೆಹಲಿಗೆ ಮತ್ತಷ್ಟು ಜಾಥಾಗಳು

ರೈತರ ನಿಯೋಗ ಮತ್ತು ಅಂಬಾಲಾ ಎಸ್ಪಿ ನಡುವಿನ ಇತ್ತೀಚಿನ ಸಭೆಯನ್ನು ಉಲ್ಲೇಖಿಸಿದ ಪಂಧೇರ್, "ಸರ್ಕಾರದ ಕಡೆಯಿಂದ ಮಾತುಕತೆಯ ಪ್ರಸ್ತಾಪ ಬಂದಿದೆ, ಇದಕ್ಕೆ ಕೇಂದ್ರ ಅಥವಾ ಹರಿಯಾಣ ಅಥವಾ ಪಂಜಾಬ್​ನ ಮುಖ್ಯಮಂತ್ರಿ ಕಚೇರಿಯಿಂದ ಪ್ರಸ್ತಾಪ ಬಂದರೆ ಮಾತ್ರ ರೈತರು ಮಾತುಕತೆಗೆ ಸಿದ್ಧ ಎಂದು ನಾವು ಹೇಳಿದ್ದೇವೆ" ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಂಧೇರ್, ಈ ಜಾಥಾದ ನಂತರ ಮುಂದಿನ ದಿನಗಳಲ್ಲಿ ಇತರ ಜಾಥಾಗಳು ಸಹ ರಾಷ್ಟ್ರ ರಾಜಧಾನಿಯತ್ತ ಚಲಿಸಲಿವೆ ಎಂದು ಹೇಳಿದರು.

ಆದಿತ್ಯನಾಥ್ ವಿರುದ್ಧ ಎಸ್ಕೆಎಂ ವಾಗ್ದಾಳಿ

ರೈತರ ಹೋರಾಟವನ್ನು "ಅರಾಜಕತೆ" ಎಂದು ಕರೆದಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷಮೆಯಾಚಿಸಬೇಕು ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಗುರುವಾರ ಒತ್ತಾಯಿಸಿದೆ. ನ್ಯಾಯಾಂಗ ಮತ್ತು ರಾಜಕೀಯ ಪಕ್ಷಗಳು ಮಧ್ಯಪ್ರವೇಶಿಸಬೇಕು ಎಂದು ಕರೆ ನೀಡಿದೆ.

"ರೈತರ ಹೋರಾಟವನ್ನು ಅರಾಜಕತೆ ಎಂದು ಕರೆದಿದ್ದಕ್ಕಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಷಮೆಯಾಚಿಸಬೇಕು. ಪ್ರತಿಭಟಿಸುವುದು ಭಾರತದ ಎಲ್ಲಾ ನಾಗರಿಕರ ಸಾಂವಿಧಾನಿಕ ಹಕ್ಕು. ಉತ್ತರ ಪ್ರದೇಶದ ಮುಖ್ಯಮಂತ್ರಿ ಸಾಂವಿಧಾನಿಕ ಸ್ಥಾನ ಹೊಂದಿರುವ ವ್ಯಕ್ತಿ. ರೈತರ ಪ್ರತಿಭಟನೆಯನ್ನು ಅರಾಜಕತೆ ಎಂದು ಅವಮಾನಿಸುವುದು ಅನಿರೀಕ್ಷಿತ " ಎಂದು 2020-21 ರೈತರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘಟನೆಗಳ ಒಕ್ಕೂಟ ಹೇಳಿದೆ.

Tags:    

Similar News